ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ತಮ್ಮ ಬಂಗಾರದಂತ ನಡೆಯ ಮೂಲಕ ಮತ್ತೊಮ್ಮೆ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪ್ಯಾರಿಸ್‌: ಭಾರತದ ದಿಗ್ಗಜ ಹಾಕಿ ಪಟು ಪಿ.ಆರ್‌.ಶ್ರೀಜೇಶ್‌ ಆ.11ರಂದು ನಡೆಯಲಿರುವ ಪ್ಯಾರಿಸ್‌ ಒಲಿಂಪಿಕ್ಸ್‌ ಸಮಾರೋಪ ಸಮಾರಂಭಕ್ಕೆ ಭಾರತದ ಧ್ಜಜಧಾರಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ)ಯು, 2 ಕಂಚಿನ ಪದಕ ವಿಜೇತ ಶೂಟರ್‌ ಮನು ಭಾಕರ್‌ ಅವರನ್ನು ಭಾರತದ ಧ್ವಜಧಾರಿಯಾಗಿ ಆಯ್ಕೆ ಮಾಡಿತ್ತು. ಮನು ಜೊತೆ ಶ್ರೀಜೇಶ್‌ ಕೂಡಾ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಐಒಎ ಮುಖ್ಯಸ್ಥೆ ಪಿ.ಟಿ.ಉಷಾ ಶುಕ್ರವಾರ ಮಾಹಿತಿ ನೀಡಿದ್ದಾರೆ. 

ಇನ್ನು ಶ್ರೀಜೇಶ್ ಅವರನ್ನು ಧ್ವಜಧಾರಿಯನ್ನಾಗಿ ಘೋಷಿಸುವ ಮುನ್ನ ಬೆಳ್ಳಿ ಪದಕ ವಿಜೇತ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ ಅವರ ಬಳಿ ಶ್ರೀಜೇಶ್ ಅವರನ್ನು ಸಮಾರೋಮ ಸಮಾರಂಭದ ಧ್ವಜಧಾರಿಯನ್ನಾಗಿ ಮಾಡಬೇಕೆಂದಿದ್ದೇವೆ ಎಂದು ಐಒಎ ಮುಖ್ಯಸ್ಥೆ ಪಿ.ಟಿ. ಉಷಾ ಕೇಳಿದ್ದಾಗಿ ತಿಳಿಸಿದ್ದಾರೆ. ಅದಕ್ಕೆ ನೀರಜ್ ಹೃದಯ ಗೆಲ್ಲುವಂತ ಮಾತನ್ನಾಡಿದ್ದಾರೆ. "ಮೇಡಂ ನೀವು ಇದನ್ನು ನನ್ನನ್ನು ಕೇಳದೆಯೇ ಹೋಗಿದ್ದರೂ, ನಾನೇ ಶ್ರೀಜೇಶ್ ಅಣ್ಣನನ್ನು ಧ್ವಜಧಾರಿಯನ್ನಾಗಿ ಮಾಡಿ ಎನ್ನುತ್ತಿದ್ದೆ. ಯಾಕೆಂದರೆ ಭಾರತದ ಕ್ರೀಡೆಗೆ ಅವರ ಕೊಡುಗೆ ಅಪಾರ ಎಂದು ಹೇಳಿದರು" ಎಂದು ಪಿ.ಟಿ ಉಷಾ ಹೇಳಿದ್ದಾರೆ. ಇನ್ನು ನೀರಜ್ ಚೋಪ್ರಾ ಚಿನ್ನದಂತ ಮನಸ್ಸಿಗೆ ನೆಟ್ಟಿಗರು ಫಿದಾ ಆಗಿದ್ದು, ಆಟಗಾರನಾಗಿ ಮಾತ್ರವಲ್ಲ, ಮನುಷ್ಯತ್ವದಲ್ಲೂ ನೀರಜ್ ಅಪ್ಪಟ ಬಂಗಾರ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

Scroll to load tweet…

ವಿನೇಶ್ ಪೋಗಟ್‌ಗೆ ಒಲಿಂಪಿಕ್ ಬೆಳ್ಳಿ ನಿರೀಕ್ಷೆ, ಇಂದೇ ಕೋರ್ಟ್ ಆರ್ಡರ್!

‘ಶ್ರೀಜೇಶ್‌ ಭಾರತ ಹಾಕಿ ತಂಡವನ್ನು 2 ದಶಕಗಳ ಕಾಲ ಪ್ರತಿನಿಧಿಸಿ, ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ’ ಎಂದು ಉಷಾ ಶ್ಲಾಘಿಸಿದ್ದಾರೆ. ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ ಸಮಾರೋಪ ಸಮಾರಂಭದಲ್ಲೂ ಭಾರತದ ಧ್ವಜಧಾರಿಯಾಗಿದ್ದ ಶ್ರೀಜೇಶ್‌, ಗುರುವಾರ ಭಾರತದ ಪರ ಕೊನೆ ಪಂದ್ಯ ಆಡಿದ್ದಾರೆ.

ಪಿ ಆರ್ ಶ್ರೀಜೇಶ್ 2006ರಲ್ಲಿ ಭಾರತ ಹಾಕಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ 18 ವರ್ಷಗಳ ಕಾಲ ಭಾರತ ಹಾಕಿ ತಂಡದ ಗೋಲ್ ಕೀಪರ್ ಆಗಿ ತಂಡಕ್ಕೆ ಆಸರೆಯಾಗಿದ್ದರು. ಶ್ರೀಜೇಶ್ ಭಾರತ ತಂಡ ದಿಗ್ಗಜ ಹಾಕಿ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದು, ಸುಮಾರು 335 ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳನ್ನಾಡಿದ್ದಾರೆ. ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಭಾರತ ಹಾಕಿ ತಂಡವು ಕಂಚಿನ ಪದಕ ಜಯಿಸಿತ್ತು. ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ ಟೂರ್ನಿ ಆರಂಭಕ್ಕೂ ಮುನ್ನವೇ ಪ್ಯಾರಿಸ್ ಒಲಿಂಪಿಕ್ಸ್‌ ಮುಗಿಯುತ್ತಿದ್ದಂತೆಯೇ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಭಾರತ ಹಾಕಿ ತಂಡವು ಕಂಚಿನ ಪದಕ ಜಯಿಸಿದೆ. ಈ ಮೂಲಕ ಪಿ ಆರ್ ಶ್ರೀಜೇಶ್‌ಗೆ ಭಾರತ ಹಾಕಿ ತಂಡವು ಗೆಲುವಿನ ವಿದಾಯ ನೀಡಿದೆ.