ಚಿತ್ರ ವಿಮರ್ಶೆ: ಮದುವೆ ಮಾಡ್ರಿ ಸರಿಹೋಗ್ತಾನೆ
ಈ ಚಿತ್ರದ ಹೆಸರಿಗೆ ಮತ್ತು ತೆರೆ ಮೇಲೆ ತೋರಿಸುವ ಕತೆಗೂ ಯಾವುದೇ ಸಂಬಂಧವಿಲ್ಲ. ಪ್ರೀತಿಸುವ ಹುಡುಗಿಯ ಮಾತುಗಳಿಂದ ಸ್ಫೂರ್ತಿಗೊಂಡು ಸಾಧನೆ ಮಾಡುವ ಪ್ರಿಯಕರನ ಕತೆಯನ್ನು ಒಳಗೊಂಡಿರುವ ಚಿತ್ರ ‘ಮದುವೆ ಮಾಡ್ರಿ ಸರಿಹೋಗ್ತಾನೆ’.
ಆರ್. ಕೇಶವಮೂರ್ತಿ
ಹಾಸ್ಯದ ಹೆಸರಿನಲ್ಲಿ ಒಂದಿಷ್ಟುಕಳಪೆ ಸಂಭಾಷಣೆಗಳು, ಪೇಲವ ಎನಿಸುವ ತಾಂತ್ರಿಕತೆ, ಕತೆಗೆ ಅಗತ್ಯವಿಲ್ಲದೆ ಬರುವ ದೃಶ್ಯಗಳು, ಅಭಿನಯ ಅಂದರೆ ಕ್ಯಾಮೆರಾ ಮುಂದೆ ಬಂದು ಹೋಗುವುದು ಎಂದುಕೊಂಡಿರುವ ಪಾತ್ರಧಾರಿಗಳು ಇದಿಷ್ಟನ್ನು ಒಂದು ತಕ್ಕಡಿಯಲ್ಲಿ ಹಾಕುವ ಸಾಹಸ ಮಾಡಿದ್ದಾರೆ ನಿರ್ದೇಶಕ ಗೋಪಿಕೆರೂರ್. ಯಾವ ತಯಾರಿಗಳೂ ಇಲ್ಲದೆ ಸಿನಿಮಾ ಮಾಡಿಬಿಡಬಹುದು ಎಂಬುದನ್ನು ಹೇಳುವುದಕ್ಕಾಗಿಯೇ ಈ ಚಿತ್ರ ಮಾಡಿದಂತಿದೆ!
ಬಹುತೇಕ ಸಿನಿಮಾ ಉತ್ತರ ಕರ್ನಾಟಕದ ಭಾಗದಲ್ಲೇ ನಡೆದಿದೆ. ಆದರೆ, ಚಿತ್ರದ ನಾಯಕ ಮತ್ತು ನಾಯಕಿ ಪಾತ್ರಧಾರಿಗಳ ಮೂಲ ಆ ಭಾಗವಲ್ಲ. ಹೀಗಾಗಿ ಅವರು ಅಲ್ಲಿನ ಭಾಷೆ ಮಾತನಾಡಲು ತುಂಬಾ ಕಷ್ಟಪಟ್ಟಿರುವುದು ಚಿತ್ರದ ಪ್ರತಿ ದೃಶ್ಯದಲ್ಲೂ ಕಾಣುತ್ತದೆ. ಅಪ್ಪನಿಲ್ಲದೆ ಅಮ್ಮ ಹಾರೈಕೆಯಲ್ಲಿ ಬೆಳದ ಹುಡುಗನ. ಊರಿನಲ್ಲಿ ಭಜನೆ ಮಾಡಿಕೊಂಡು ಇರುತ್ತಾನೆ. ಇಂಥವನು ಊರಾ ಗೌಡನ ಹೆಂಡತಿ ಜತೆ ಮಾತನಾಡಿದ ಅನ್ನುವ ಕಾರಣಕ್ಕೆ ಅವನಿಗೆ ಮದುವೆ ಮಾಡಲು ಊರ ಜನ ನಿರ್ಧರಿಸುತ್ತಾರೆ. ತಮ್ಮ ಮಗನಿಗೆ ಮದುವೆ ಮಾಡದೆ ಹೋದರೆ ಊರು ಬಿಟ್ಟು ಹೋಗಬೇಕಾಗುತ್ತದೆ ಎನ್ನುವ ಚಿಂತೆಯಲ್ಲಿರುವ ನಾಯಕನ ತಾಯಿ. ಮುಂದೆ ಆ ಊರಿನ ಶಾಲಾ ಶಿಕ್ಷಕಿಯಾಗಿ ಬರುವ ನಾಯಕಿ ಜತೆ ನಾಯಕನ ಸ್ನೇಹ- ಪ್ರೀತಿ ಸಾಗುತ್ತದೆ. ಆದರೆ, ಆಕೆ ನಾಯಕನ ಪ್ರೀತಿ ಸ್ವೀಕರಿಸುವ ಬದಲು ಸ್ಫೂರ್ತಿದಾಯಕ ಪಾಠ ಮಾಡುತ್ತಾಳೆ. ಪ್ರಿಯತಮೆಯ ಪಾಠದಿಂದ ಉತ್ಸಾಹಗೊಂಡು ನಾಯಕ ಬೆಂಗಳೂರಿಗೆ ಬಂದು ಏನು ಮಾಡುತ್ತಾನೆ, ಆತ ಇಲ್ಲಿ ದೊಡ್ಡ ಗಾಯಕನಾಗುವುದು ಹೇಗೆ, ಮುಂದೆ ಊರಿಗೆ ಹೋದರೆ ಏನಾಗಿರುತ್ತದೆ ಎಂಬುದು ಚಿತ್ರದ ಅಂಶಗಳು.
ಚಿತ್ರ ವಿಮರ್ಶೆ: ಪಾಪ್‌ಕಾರ್ನ್ ಮಂಕಿ ಟೈಗರ್
ಚಿತ್ರದ ಹೆಸರಿಗೆ ತಕ್ಕಂತೆ ಮದುವೆ ತಾಪತ್ರಯಗಳು ಇಲ್ಲಿ ಕಾಣಲ್ಲ. ಇಡೀ ಸಿನಿಮಾ ಅತ್ಯಂತ ಸಪ್ಪೆಯಾಗಿ ಸಾಗುತ್ತದೆ. ಸೆಂಟಿಮೆಂಟ್ ದೃಶ್ಯಗಳು ಚೆನ್ನಾಗಿದ್ದರೂ ಅದನ್ನು ನಿಭಾಯಿಸುವುದರಲ್ಲಿ ನಾಯಕ ಸೋತಿದ್ದಾನೆ. ಒಂದು ಹಾಡು ಮಾತ್ರ ನಾಯಕನ ಪಾತ್ರದ ಇರುವಿಕೆಯನ್ನು ನೆನಪಿಸುತ್ತದೆ. ನಾಯಕಿಗೆ ಒಳ್ಳೆಯ ಪಾತ್ರ ಇದ್ದರೂ ಅವರು ಅದಕ್ಕೆ ಸೂಕ್ತ ನ್ಯಾಯ ಸಲ್ಲಿಸಿಲ್ಲ. ರಮೇಶ್ ಭಟ್ ಹಾಗೂ ಅರುಣ ಬಾಲರಾಜ್ ಅವರಿಂದ ಚಿತ್ರಕ್ಕೆ ಕೊಂಚ ಉಸಿರು ಪ್ರಾಪ್ತಿ ಆಗಿದೆ. ಹಳ್ಳಿಗೆ ಬರುವ ಶಿಕ್ಷಕಿ, ಆಕೆಯನ್ನು ಪ್ರೀತಿಸುವ ಹಾಡುಗಾರ, ಮದುವೆಯ ಚಿಂತೆ, ನಗರಕ್ಕೆ ಬಂದು ದೊಡ್ಡ ಗಾಯಕನಾಗುವುದು ಹೀಗೆ ಕತೆಯನ್ನು ಒಂದು ಸಾಲಿನಲ್ಲಿ ಕೇಳಿದರೆ ಚೆನ್ನಾಗಿದೆಯಲ್ಲ ಅನಿಸುತ್ತದೆ. ಅದನ್ನು ದೃಶ್ಯಗಳಿಗೆ ಅಳವಡಿಸಿಕೊಳ್ಳುವ ಹೊತ್ತಿಗೆ ನಿರ್ದೇಶಕರ ಗೈರು ಹಾಜರಿ ಎದ್ದು ಕಾಣುತ್ತದೆ. ಎರಡು ಹಾಡು ಕೇಳುವುದಕ್ಕೆ ಚೆನ್ನಾಗಿವೆ ಎಂಬುದು ಈ ಚಿತ್ರದ ಹೈಲೈಟ್. ಛಾಯಾಗ್ರಾಹಣವಂತೂ ಕೇಳುವುದೇ ಬೇಡ.