ವಾಟ್ಸ್‌ಆ್ಯಪ್ ಫಾರ್ವರ್ಡೆಡ್ ಮೆಸೇಜ್ ಹಾವಳಿ ಶೇ. 70 % ಇಳಿಕೆ..!
ಫಾರ್ವರ್ಡೆಡ್ ಮೆಸೇಜ್ ಹಾವಳಿ ತಡೆಯುವ ನಿಟ್ಟಿನಲ್ಲಿ ವಾಟ್ಸ್‌ಆ್ಯಪ್ ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಕೊರೋನಾ ವೈರಸ್‌ನಿಂದಾಗಿ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡುವ ಸಾಧ್ಯತೆಗಳಿದ್ದವು. ಆದರೆ ವಾಟ್ಸ್‌ಆ್ಯಪ್ ತೆಗೆದುಕೊಂಡ ಆ ಒಂದು ದಿಟ್ಟ ನಿರ್ಧಾರ ಬೇಕಾಬಿಟ್ಟಿ ಸಂದೇಶ ಕಳಿಸುವವರಿಗೆ ಅಂಕುಶ ಹಾಕಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.28): ಸುಳ್ಳು ಸುದ್ದಿಗಳ ಹಾವಳಿ ನಿಯಂತ್ರಣಕ್ಕಾಗಿ ಫಾರ್ವರ್ಡೆಡ್ ಮೆಸೇಜ್‌ಗಳನ್ನು ಒಮ್ಮೆಗೆ ಒಬ್ಬರಿಗೆ ಮಾತ್ರ ಕಳುಹಿಸಬಹುದು ಎಂಬ ಮಿತಿಯನ್ನು ಹೇರಿದ್ದ ಪರಿಣಾಮ ಜಾಗತಿಕವಾಗಿ ಫಾರ್ವರ್ಡೆಡ್ ಸಂದೇಶಗಳ ಹಾವಳಿ ಶೇ.70ರಷ್ಟು ಕಡಿಮೆಯಾಗಿದೆ ಎಂದು ವಾಟ್ಸ್‌ಆ್ಯಪ್ ತಿಳಿಸಿದೆ.
ಹೊಸ ಫೀಚರ್‌ನಿಂದಾಗಿ ಕೊರೋನಾ ವೈರಸ್ ಬಗೆಗಿನ ಸುಳ್ಳು ಸುದ್ದಿಗಳನ್ನು ಹರಡುವುದು ಕಡಿಮೆಯಾಗಿದೆ. ವೈಯಕ್ತಿಕ ಮತ್ತು ಖಾಸಗಿ ಸಂವಹನಕ್ಕೆ ವಾಟ್ಸ್‌ಆ್ಯಪ್ ಬಳಕೆಯಾಗಲು ಈ ಬದಲಾವಣೆ ನೆರವಾಗುತ್ತದೆ ಎಂದು ಪ್ರಕಟಣೆಯಲ್ಲಿ ಕಂಪನಿ ಹೇಳಿದೆ. ಫಾರ್ವರ್ಡೆಡ್ ಸಂದೇಶವನ್ನು ಏಕಕಾಲದಲ್ಲಿ ಒಬ್ಬರಿಗೆ ಕಳಿಸುವಂತೆ ನಿಯಂತ್ರಿಸಿದ್ದರ ಪರಿಣಾಮ ಜಾಗತಿಕ ಮಟ್ಟದಲ್ಲಿ ಶೇ.70% ಸಂದೇಶ ಕಳಿಸುವ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದೆ.
ಇತ್ತೀಚೆಗೆ ಕೊರೋನಾ ಕುರಿತ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಫಾರ್ವರ್ಡೆಡ್ ಸಂದೇಶಗಳನ್ನು ಒಮ್ಮೆಲೆ ಒಬ್ಬರಿಗೆ ಮಾತ್ರ ರವಾನಿಸುವ ಫೀಚರ್ ಅನ್ನು ಸೇರ್ಪಡೆ ಮಾಡಿತ್ತು. ಅದಕ್ಕೂ ಮೊದಲು ಫಾರ್ವರ್ಡೆಡ್ ಸಂದೇಶಗಳ ಪತ್ತೆಗೆ ‘ಫಾರ್ವರ್ಡೆಡ್’ ಎಂಬ ಲೇಬಲ್ ಅನ್ನು ವಾಟ್ಸ್‌ಆ್ಯಪ್ ಪರಿಚಯಿಸಿತ್ತು.
ಫೇಸ್ಬುಕ್ ಹೇಳ್ಬಿಟ್ಟಿದೆ ನಿಮ್ಮ ವಾಟ್ಸಪ್ ಸ್ಟೇಟಸ್‌ಗೆ ಆ್ಯಡ್ ಫಿಕ್ಸು..!
ವಾಟ್ಸ್‌ಆ್ಯಪ್ 2018ರಲ್ಲಿ ಏಕಕಾಲದಲ್ಲಿ 5 ಮಂದಿಗೆ ಮಾತ್ರ ಫಾರ್ವರ್ಡೆಡ್ ಸಂದೇಶ ಕಳಿಸಲು ಅವಕಾಶ ನೀಡಿತ್ತು. ಈ ಮೂಲಕ ವೈರಲ್ ಸುದ್ದಿಗಳನ್ನು ಹರಡದಂತೆ ತಡೆಯುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಯನ್ನಿಟ್ಟಿತ್ತು. ಹಳ್ಳಿಯಿಂದ ದಿಲ್ಲಿಯವರೆಗೆ ಸ್ಮಾರ್ಟ್ ಫೋನ್ ಹೊಂದಿರುವ ಎಲ್ಲರೂ ಸಂದೇಶ ರವಾನಿಸುವುದಕ್ಕಾಗಿ ವಾಟ್ಸ್‌ಆ್ಯಪ್ ಅವಲಂಬಿಸಿದ್ದಾರೆ. ಕಾಲಕಾಲಕ್ಕೆ ತನ್ನ ಫೀಚರ್ ಬದಲಿಸುವ ವಾಟ್ಸ್‌ಆ್ಯಪ್ ಬಳಕೆದಾರರ ಸ್ನೇಹಿಯಾಗಿ ಗುರುತಿಸಿಕೊಂಡಿದೆ.