ಸ್ಮಾರ್ಟ್‌ಫೋನ್‌ನಲ್ಲಿ ಇರೋ ಆಕ್ಸಿಮೀಟರ್ ಆಪ್ ನಂಬಬಹುದಾ?
ಇತ್ತೀಚೆಗೆ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬಲ್ಲ ಆಕ್ಸಿಮೀಟರ್ ಆಪ್‌ಗಳು ಜನಪ್ರಿಯವಾಗುತ್ತಿವೆ. ಇವುಗಳು ಎಷ್ಟು ನಂಬಲರ್ಹ?
ಈಗ ಎಲ್ಲರೂ ಮನೆಗೊಂದು ಆಕ್ಸಿಮೀಟರ್ ಇರಲಿ, ಆಪತ್ಕಾಲಕ್ಕೆ ಆಗುತ್ತೆ ಅಂತ ಅಂದುಕೊಳ್ಳುತ್ತಾರೆ. ಒಂದು ವೇಳೆ ಕೋವಿಡ್ ಪೀಡಿತರು ಮನೆಯಲ್ಲಿ ಇದ್ದರೆ ಆಗಾಗ ಬ್ಲಡ್ ಆಕ್ಸಿಜೆನ್ ಲೆವೆಲ್ ಚೆಕ್ ಮಾಡಿಕೊಳ್ಳುವುದಕ್ಕೆ ಆಕ್ಸಿಮೀಟರ್ ಬೇಕೇ ಬೇಕು. ಆದರೆ ಇದ್ದಕ್ಕಿದ್ದಂತೆ ಆನ್‌ಲೈನ್‌ನಲ್ಲಿ ಕೆಲವು ಆಕ್ಸಿಮೀಟರ್ ಆಪ್‌ಗಳು ಸೃಷ್ಟಿಯಾಗಿವೆ. ಇವುಗಳನ್ನು ನೀವು ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡರೆ ಸಾಕು, ಆಕ್ಸಿಮೀಟರ್ ಬದಲು ಸ್ಮಾರ್ಟ್‌ಫೋನನ್ನೇ ಆಕ್ಸಿಮೀಟರ್ ಥರ ಬಳಸಬಹುದು ಎಂದು ಅವು ಹೇಳುತ್ತಿವೆ . ಇದು ನಿಜವಾ?
ವೈದ್ಯರು, ತಜ್ಞರು, ಇಂಥ ಆ್ಯಪ್‌ಗಳ ಬಗ್ಗೆ ಎಚ್ಚರಿಸಿದ್ದಾರೆ. ಇವು ಯಾವುದೇ ರೀತಿಯಲ್ಲೂ ನಿಜವಾದ ಆಕ್ಸಿಮೀಟರ್‌ಗೆ ಪರ್ಯಾಯವೇ ಅಲ್ಲ. ಆಕ್ಸಿಮೀಟರ್ ಕೆಲಸ ಮಾಡುವ ರೀತಿಗೂ ಸ್ಮಾರ್ಟ್‌ಫೋನ್ ಆಪ್ ಕೆಲಸ ಮಾಡುವ ರೀತಿಗೂ ತಾಳಮೇಳವಿಲ್ಲ. ಇವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಇದರಲ್ಲಿ ಕಾಣಿಸುವ ರೀಡಿಂಗ್ ನೋಡಿಕೊಂಡಿರುವುದು ಅಪಾಯಕಾರಿ. ಯಾಕೆಂದರೆ ನಿಮ್ಮ ಆಕ್ಸಿಜೆನ್ ಲೆವೆಲ್ ನಿಜಕ್ಕೂ 94ಕ್ಕಿಂತ ಕೆಳಗೆ ಕುಸಿದಿದ್ದಾಗ, ಇವು 98 ಎಂದು ತೋರಿಸಬಹುದು. ಅಥವಾ ಆಕ್ಸಿಜನ್ ಮಟ್ಟ 896 ಇದ್ದಾಗ ಅದು 87ಕ್ಕೆ ಕುಸಿದಿದೆ ಎಂದು ತೋರಿಸಿ ಗಾಬರಿ ಹುಟ್ಟಿಸಬಹುದು. ಎರಡೂ ಅಪಾಯಕಾರಿಯೇ.
ಯಾಕೆ ಈ ಆಪ್‌ಗಳನ್ನು ನಂಬಬಾರದು ಎಂಬುದನ್ನು ತಿಳಿಯೋಕೆ, ನಿಜವಾದ ಆಕ್ಸಿಮೀಟರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮೊದಲು ತಿಳಿಯಬೇಕು.
ಆಮ್ಲಜನಕ ಮಟ್ಟ ಹೆಚ್ಚಿಸಲು ಮನೆಯಲ್ಲಿಯೇ ಮಾಡಿ ಈ ಪ್ರಯೋಗ, ಹೇಳಿದ್ದು ಅರೋಗ್ಯ ಸಚಿವಾಲಯ ...
ಪಲ್ಸ್ ಆಕ್ಸಿಮೀಟರ್‌ಗಳಲ್ಲಿ ನಿಮ್ಮ ತೋರು ಬೆರಳನ್ನು ಆ ಯಂತ್ರದ ನಡುವೆ ಸಿಕ್ಕಿಸಿ ಇಡಲಾಗುತ್ತದೆ. ಆಗ ಆಕ್ಸಿಮೀಟರ್‌ನ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಇರುವ ಬಯೋ ಸೆನ್ಸರ್‌ಗಳು ಬೆರಳಿನ ಮೂಲಕ ಕೆಂಪು ಮತ್ತು ಅತಿಗೆಂಪು ಕಿರಣ (ರೆಡ್ ಹಾಗೂ ಇನ್‌ಫ್ರಾರೆಡ್) ಗಳನ್ನು ಹಾಯಿಸುತ್ತವೆ. ರಕ್ತದಲ್ಲಿ ಎರಡು ಬಗೆಯ ಹಿಮೋಗ್ಲೋಬಿನ್ ಕಣಗಳು ಇವೆ- ಎಚ್‌ಬಿ ಮತ್ತು ಎಚ್‌ಬಿಒ2. ಇವುಳೆರಡೂ ಈ ಕಿರಣಗಳನ್ನು ಬೇರೆ ಬೇರೆ ರೀತಿಯಲ್ಲೇ ಪ್ರತಿಫಲಿಸುತ್ತವೆ. ಬೆಳಕಿನ ಏಳು ಕಿರಣಗಳು ಬೇರೆ ಬೇರೆ ರೀತಿಯಲ್ಲಿ ಚದುರುತ್ತವೆ. ಅದನ್ನನುಸರಿಸಿ ಆಕ್ಸಿಜನ್ ಮಟ್ಟವನ್ನು ಲೆಕ್ಕ ಹಾಕಲಾಗುತ್ತದೆ.
ಆದರೆ ಸ್ಮಾರ್ಸ್‌ಫೋನ್‌ನಲ್ಲಿ ಈ ಸೌಲಬ್ಯವಿಲ್ಲ. ಅದು ರೆಡ್ ಮತ್ತು ಇನ್‌ಫ್ರಾರೆಡ್ ಕಿರಣಗಳನ್ನು ಹೊರಸೂಸುವುದಿಲ್ಲ. ಈ ಆಪ್‌ಗಳು ಹೆಚ್ಚಾಗಿ ಹಿಂಬದಿಯ ಕ್ಯಾಮೆರಾ ಲೆನ್ಸ್‌ನ ಮೇಲೆ ನಿಮ್ಮ ಬೆರಳನ್ನು ಇಡಲು ಸೂಚಿಸುತ್ತವೆ. ಆ ಕ್ಯಾಮೆರಾದಲ್ಲಿ ಅಳವಡಿಸಲಾದ ತಂತ್ರಜ್ಞಾನದಿಂದ ಅದು ಆಪ್ ಜೊತೆಗೆ ಸಂಪರ್ಕ ಸಾಧಿಸಿ ಆಮ್ಲಜನದ ಮಟ್ಟವನ್ನು ಸೂಚಿಸುತ್ತದೆ. ಆದರೆ ಇದು ಯಾವುದೇ ರೀತಿಯಲ್ಲೂ ಆಕ್ಸಿಮೀಟರ್‌ನಲ್ಲಿ ಇರುವ ತಂತ್ರಜ್ಞಾನಕ್ಕೆ ಸಮನಾದುದಲ್ಲ. ಮೊಬೈಲ್ ಕ್ಯಾಮೆರಾ ಮೂಲಕ ಆಕ್ಸಿಜನ್ ಸ್ಯಾಚುರೇಶನ್ ಅಳೆಯುವ ಯಾವ ತಂತ್ರಜ್ಞಾನವೂ ಇದುವರೆಗೆ ಸೃಷ್ಟಿಯಾಗಿಲ್ಲ. ಆದ್ದರಿಂದ ಇದು ನಂಬಲರ್ಹವೇ ಅಲ್ಲ. ಪೊಲೀಸರು ಕೂಡ ಇಂಥ ಆಪ್‌ಗಳ ಮೊರೆ ಹೋಗಬೇಡಿ ಎಂದು ಸೂಚಿಸಿದ್ದಾರೆ. ವೈದ್ಯರು ಕೂಡ ಎಚ್ಚರಿಸಿದ್ದಾರೆ. ಇತ್ತೀಚೆಗೆ ಇಂಥ ಕೆಲವು ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗಿದೆ ಕೂಡ.
ಮತ್ತೊಂದು ವಾರ್ನಿಂಗ್; ಟ್ವಿಟರ್, ಫೇಸ್ ಬುಕ್‌ಗೆ ಕೊನೆ ಮೊಳೆ? ...
ಇಲ್ಲಿ ಇನ್ನೂ ಒಂದು ಅಪಾಯವಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಅದೇನೆಂದರೆ ಈ ಆಪ್‌ಗಳು ಆಕ್ಸಿಜನ್ ರೀಡಿಂಗ್ ಪಡೆಯಲು ನಿಮ್ಮ ತೋರುಬೆರಳನ್ನು ಕ್ಯಾಮೆರಾ ಲೆನ್ಸ್ ಮೇಲೆ ಇಡಲು ಹೇಳುತ್ತವೆ. ಇದರಿಂದ ನಿಮ್ಮ ಕೈಬೆರಳ ಅಚ್ಚು ಸುಲಭವಾಗಿ ಈ ಆಪ್ ನಿರ್ವಾಹಕರಿಗೆ ಸಿಗುತ್ತದೆ. ಇದು ಹ್ಯಾಕರ್‌ಗಳಿಗೂ ಸಿಗಬಹುದು. ಇಂಥ ಬಯೋಮೆಟ್ರಿಕ್ ವಿವರಗಳು ಹ್ಯಾಕರ್‌ಗಳ ಕೈಗೆ ಸಿಗುವುದು ತುಂಬಾ ಅಪಾಯಕಾರಿ. ಇದನ್ನು ಅವರು ನಿಮ್ಮ ವಿರುದ್ಧವಾಗಿ ಅಥವಾ ನಿಮ್ಮ ಬ್ಯಾಂಕ್‌ನಿಂದ ಹಣ ಕದಿಯಲು ಬಳಸಿಕೊಳ್ಳಬಹುದು. ಈ ಬಗ್ಗೆ ಸದಾ ಎಚ್ಚರವಾಗಿರಿ.
ಹಾಗಿದ್ರೆ ಏನು ಮಾಡಬೇಕು? ಸರಿಯಾದ ಪಲ್ಸ್ ಆಕ್ಸಿಮೀಟರ್ ಅನ್ನೇ ಖರೀದಿಸಿ ಹಾಗೂ ಅದರಲ್ಲಿ ರೀಡಿಂಗ್ ಚೆಕ್ ಮಾಡ್ಕೊಳಿ.
ಹೊಸ ಡಿಜಿಟಲ್ ನಿಯಮಗಳಿಂದ ನಿಮ್ಮ ಖಾಸಗಿ ಹಕ್ಕಿಗೆ ಭಂಗ ಬರುತ್ತಾ? ...