ಈ ಅನುಭವ ನಮಗೆಲ್ಲರಿಗೂ ಒಂದಲ್ಲಾ ಒಂದು ಸಮಯದಲ್ಲಿ ಆಗೇ ಇರುತ್ತದೆ. ಏನೋ ಹೇಳ್ತಾ ಹೇಳ್ತಾ ಅರ್ಧದಲ್ಲಿ ಬ್ಲ್ಯಾಂಕ್ ಆಗುವುದು, ಬೇಕಾದ ಪದ ಸಿಕ್ಕದೆ ಮೆದುಳು ಸ್ಟ್ರಕ್ ಆದಂತಾಗುವುದು, ಈಗ ತಾನೇ ಇಟ್ಟ ಕೀ ಎಲ್ಲಿ ಎಂದು ಮರೆತು ಹೋಗುವುದು.... ಒಟ್ಟಿನಲ್ಲಿ ಒಂದೆರಡು ಕ್ಷಣಗಳ ಕಾಲ ಮೆದುಳು ಯೋಚನೆ ಮಾಡಲಾಗದೆ ನಿಂತಂತಾಗುತ್ತದೆ.

ಇದನ್ನೇ ಬ್ರೇನ್ ಫಾಗ್, ಬ್ರೇನ್ ಫೇಟಿಗ್, ಓವರ್‌ವರ್ಕ್ಡ್ ಬ್ರೈನ್, ಬ್ರೇನ್ ಡ್ರೈನ್, ಬ್ರೇನ್ ಫ್ರೀಜ್, ರೈಟರ್ಸ್ ಬ್ಲಾಕ್ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.  ಯಾಕೆ ಹೀಗಾಗುತ್ತೆ?

ಯಾವಾಗ್ಲೂ ಸುಸ್ತೆನಿಸುತ್ತದೆಯೇ?ನಿಮ್ಮ ದೇಹಕ್ಕಿದೆ ಇವುಗಳ ಕೊರತೆ

ಕೆಲವೊಮ್ಮೆ ಮೆದುಳು ಇದುವರೆಗೂ ಮಾಡದ ಕಾರ್ಯ ಮಾಡುವಾಗ, ಹೊಸದಾಗಿ ಯೋಚಿಸಬೇಕಾದ ಅದಕ್ಕೊಪ್ಪದೆ ಮೆದುಳು ಬ್ಲ್ಯಾಂಕ್ ಆಗುತ್ತದೆ. ಇಲ್ಲವೇ ಆತಂಕವಿದ್ದಾಗ, ಸಾರ್ವಜನಿಕವಾಗಿ ಮಾತಾಡಬೇಕಾಗಿ ಬಂದಾಗ, ಒತ್ತಡ ಹೆಚ್ಚಾದಾಗ ಅಥವಾ ಯಾವುದಾದರೂ ಔಷಧಿಯ ಪರಿಣಾಮವಾಗಿ, ನಿದ್ದೆ ಸರಿಯಾಗದಾದಾಗ, ಅತಿಯಾದ ಆಶ್ಚರ್ಯವಾದಾಗ, ಸುಸ್ತಾದಾಗ, ರಕ್ತದೊತ್ತಡ ಏರುಪೇರಾದಾಗ, ಖಿನ್ನತೆ, ಅನೀಮಿಯಾ, ಆರ್ತ್ರೈಟಿಸ್, ಮರೆವಿನ ಕಾಯಿಲೆ ಮುಂತಾದ ಆರೋಗ್ಯ ಸಮಸ್ಯೆಗಳಿದ್ದಾಗ ಬ್ಲ್ಯಾಂಕ್ ಮೈಂಡ್ ಆಗಬಹುದು. ನಿಮಗೆ ಈ ಸಮಸ್ಯೆ ಪದೇ ಪದೆ ಕಾಡ್ತಾ ಇದ್ರೆ ಈ ಬ್ಲ್ಯಾಂಕ್ ಬ್ರೇನ್ ಸಮಸ್ಯೆಯಿಂದ ಹೊರಬರೋಕೆ ಏನು ಮಾಡ್ಬೇಕು ಗೊತ್ತಾ?

1. ಮೆದುಳನ್ನು ಅರ್ಥ ಮಾಡಿಕೊಳ್ಳಿ

ಮೆದುಳಿಗೆ ಓವರ್‌ಲೋಡ್ ಆದಾಗ ಅದು ಕೆಲವೊಮ್ಮೆ ಬ್ರೇಕ್ ಕೇಳಬಹುದು. ಮೂರ್ನಾಲ್ಕು ಟಾಸ್ಕ್‌ಗಳನ್ನು ಒಟ್ಟಿಗೇ ಮಾಡಲು ಹೊರಟಾಗ ಕಂಪ್ಯೂಟರ್ ಕೂಡಾ ಹ್ಯಾಂಗ್ ಆಗುವುದಿಲ್ಲವೇ? ಹಾಗೆಯೇ ಇದು. ಮೆದುಳಿಗೆ ನೀವು ಕಲ್ಪನೆ ಮಾಡದಷ್ಟು ಸಂಗತಿಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರಬಹುದು. ಆದರೆ, ತಕ್ಷಣಕ್ಕೆ ಹಾಗೆ ಮಾಡೆಂದರೆ ಅದು ಮಾಡಲಾರದು. ನಿಧಾನವಾಗಿ ಒಂದೊಂದಾಗಿ ಅದನ್ನು ಕೆಲಸಕ್ಕೆ ಹಚ್ಚಬೇಕು. ಅದಕ್ಕೆ ಸಾಕಷ್ಟು ರೆಸ್ಟ್ ನೀಡಬೇಕು. 

Dehydration - ಆದ್ರೆ ಹಿಂಗಿಂಗೆಲ್ಲ ಆಗುತ್ತೆ ನೋಡ್ರಣ್ಣ...

2. ನಿಮ್ಮನ್ನು ಬಹಳ ಗಂಭೀರವಾಗಿ ಪರಿಗಣಿಸಬೇಡಿ

ಕೆಲವೊಮ್ಮೆ ಜನರ ಮಧ್ಯೆ ಬ್ಲ್ಯಾಂಕ್ ಆದಾಗ ನೀವೇ ಮೊದಲು ನಕ್ಕುಬಿಡಿ. ಏನು ಹೇಳಬೇಕೆಂದು ಮರೆತುಬಿಡಿ. ಅದರ ಬಗ್ಗೆ ಜೋಕ್ ಮಾಡಿಕೊಂಡು ಮುಂದೆ ಹೋಗಿ. ಹೀಗೆಯೇ ಹೇಳಬೇಕು, ಹೀಗೆಯೇ ಕೆಲಸ ಆಗಬೇಕು ಎಂಬ ಅತಿಯಾದ ನಿರೀಕ್ಷೆಗಳು ಬೇಡ. ಕೆಲವೊಮ್ಮೆ ಘಟಿಸಿ ಹೋದುದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಮುಂದೆ ಹಾಗಾಗದಂತೆ ಗಮನ ವಹಿಸಿ. ನಿಮ್ಮ ಉತ್ತಮ ಪರ್ಫಾಮೆನ್ಸ್ ಅಥವಾ ಪ್ರೆಸೆಂಟೇಶನ್‌ನ ಹಳೆಯ ವಿಡಿಯೋ ನೋಡಿ ಇಲ್ಲವೇ ಫೈಲ್ ನೋಡಿ. ಎಷ್ಟು ಪ್ರಾಡಕ್ಟಿವ್ ಸಾಮರ್ಥ್ಯ ನಿಮ್ಮದಿದೆ, ಅದನ್ನು ಮತ್ತೆ ಗಳಿಸಬಲ್ಲೆ ಎಂಬ ಆತ್ಮವಿಶ್ವಾಸ ಹೊಂದಿ. 

3. ಆತಂಕ ನಿವಾರಿಸೋ ಮಂತ್ರ

ಧೀರ್ಘ ಉಸಿರಾಟ ತೆಗೆದುಕೊಂಡು ಮನಸ್ಸನ್ನು ಶಾಂತಗೊಳಿಸೋ ಅಭ್ಯಾಸ ಮಾಡಿಕೊಳ್ಳಿ. ಪ್ರಾಣಾಯಾಮ, ಧ್ಯಾನ ಕೂಡಾ ಮೆದುಳನ್ನು ಹೆಚ್ಚು ಅಲರ್ಟ್ ಆಗಿಡುತ್ತದೆ. ಇದು ಒಳಗಿನಿಂದ ನಿಮ್ಮನ್ನು ಶಾಂತವಾಗಿರಿಸುತ್ತದೆ. ಆತಂಕ ಆವರಿಸಿಕೊಳ್ಳುತ್ತದೆ ಎಂದಾಗೆಲ್ಲ ಈ ಟೆಕ್ನಿಕ್ ಮೊರೆ ಹೋಗಿ ಸಮಾಧಾನ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಧಾನವಾಗಿ ಎಲ್ಲ ಯೋಚನೆಗಳನ್ನು ಒಗ್ಗೂಡಿಸಿ ಗಡಿಬಿಡಿ ಇಲ್ಲದೆ ಎಕ್ಸ್‌ಪ್ರೆಸ್ ಮಾಡಿ. ಯಾವುದೇ ಮಾಹಿತಿಯನ್ನು ಗಮನ ಇನ್ನೆಲ್ಲೋ ಇಟ್ಟುಕೊಂಡು ತೆಗೆದುಕೊಳ್ಳಬೇಡಿ. ನಿಮ್ಮ ಮೆದುಳು ಸಂಗ್ರಹಿಸಿಟ್ಟುಕೊಳ್ಳಬೇಕೆಂಬ ಮಾಹಿತಿಗಳನ್ನು ಪಡೆಯುವಾಗ ಹೆಚ್ಚಿನ ಗಮನ ನೀಡಿ. ಇದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಂಬಂಧಿಸಿದ ಬೇರೆ ಬೇರೆ ವಸ್ತುಗಳು, ಅದೇ ರೀತಿಯ ಇತರೆ ಪದಗಳೊಂದಿಗೆ ಹೋಲಿಸಿ ನೋಡಿ ಸಂಚು ರೂಪಿಸಿ. ಮಾಹಿತಿಗಳನ್ನಿಟ್ಟುಕೊಂಡು ಹೊಸ ಐಡಿಯಾ ಮಾಡುವ ಕೌಶಲ್ಯ ಬೆಳೆಸಿಕೊಳ್ಳಿ. ಮುಖ್ಯವಾದ ಪ್ರೆಸೆಂಟೇಶನ್ ಸಂದರ್ಭದಲ್ಲಿ ಸಣ್ಣದೊಂದು ಚೀಟಿಯಲ್ಲಿ ಪಾಯಿಂಟ್‌ಗಳನ್ನು ಮಾಡಿಟ್ಟುಕೊಳ್ಳಿ. ಪದ ನೋಡಿದ ಕೂಡಲೇ ಇಡೀ ಐಡಿಯಾ ನೆನಪಾಗುವ ಹಾಗೆ ತಯಾರಾಗಿ. 

ಮಕ್ಕಳ ಮೇಲಿನ ಕಾಳಜಿ ಅತಿಯಾದರೆ ಕಾಡಬಹುದು ಎಮ್ಟೀ ನೆಸ್ಟ್‌ ಸಿಂಡ್ರೋಮ್!

4. ನೀವು ಹೇಳಬೇಕಾಗಿರುವ ವಿಷಯ ಆಳವಾಗಿ ತಿಳಿದಿರಲಿ

ನೀವು ಮಾತನಾಡಬೇಕಾಗಿರುವ ಯಾವುದೇ ಟಾಪಿಕ್‌ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿ. ಅಗತ್ಯಕ್ಕಿಂತ ಹೆಚ್ಚು ವಿಷಯಗಳು ತಿಳಿದಿದ್ದಾಗ, ಒಂದು ಮರೆತರೂ ಮತ್ತೊಂದು ವಿಷಯದಿಂದ ಮೇಕಪ್ ಮಾಡುವುದು ಸುಲಭವಾಗುತ್ತದೆ. ಅಲ್ಲದೆ, ಈ ಕುರಿತ ಸಂಶೋಧನೆ ಹೆಚ್ಚಿದ್ದಾಗ ಮೆದುಳು ಬ್ಲ್ಯಾಂಕ್ ಆಗುವುದು ಕೂಡಾ ಅಪರೂಪ. 

5. ಹೆಚ್ಚು ಜನರೊಂದಿಗೆ ಬೆರೆಯಿರಿ.

ಮನೆಯಲ್ಲೇ ಕುಳಿತು ವಿಷಯ ಸಂಗ್ರಹಿಸಿ ನಿಮ್ಮ ಪಾಡಿಗೆ ನೀವು ಯೋಚಿಸುವುದರಿಂದ ತಾಜಾ ಐಡಿಯಾಗಳು ಬರುವುದು ಸಾಧ್ಯವಿಲ್ಲ. ಪ್ರತಿ ದಿನ ಹೊಸ ಹೊಸ ಜನರೊಂದಿಗೆ ಬೆರೆಯಬೇಕು. ಅವರು ಹೇಳುವ ವಿಷಯಗಳತ್ತ ಗಮನ ಹರಿಸಬೇಕು. ಅದರಲ್ಲಿ ಆಸಕ್ತಿಕರವಾದುದೇನಾದರೂ ಇದ್ದರೆ ಅದರ ಕುರಿತು ಹೆಚ್ಚಾಗಿ ಚಿಂತನೆ ನಡೆಸಬೇಕು. ಆಗ ಫ್ರೆಶ್ ಐಡಿಯಾಗಳು ಹೊಳೆಯುತ್ತವೆ. ನಿಮಗೆ ಆಸಕ್ತಿ ಇಲ್ಲದ ವಿಷಯಗಳಿಂದಲೂ ಸಾಧ್ಯವಾದಷ್ಟನ್ನು ಕಲಿಯಲು ಪ್ರಯತ್ನಿಸಿ. ಅದರಿಂದ ಅನಿರೀಕ್ಷಿತವಾದುದೇನಾದರೂ ಸಿಗಬಹುದು. 

6. ನಿಮ್ಮ ಬಗ್ಗೆ ಅರಿವಿರಲಿ

ನಿಮ್ಮ ವೈಯಕ್ತಿಕ ವಿಚಾರಗಳು, ನೋವುಗಳು, ಒತ್ತಡದ ಮಟ್ಟ, ಪರಿಹಾರ ಕಾಣದ ಅಪಘಾತಗಳು, ನಿಮ್ಮ ಸಾಮರ್ಥ್ಯ ಮಟ್ಟ- ಎಲ್ಲದರ ಕುರಿತು ನಿಮಗೆ ಪಕ್ಕಾ ಅರಿವಿರಲಿ. ಸ್ವಯಂ ಕಾಳಜಿ, ಆತ್ಮವಿಮರ್ಶೆ, ನಿರಂತರ ಬೆಂಬಲ, ಬ್ರೇಕ್ ತೆಗೆದುಕೊಳ್ಳುವುದು, ನಿದ್ರೆ, ಆರೋಗ್ಯ ಎಲ್ಲವೂ ಉತ್ಪಾದಕತೆ ಹಾಗೂ ಪರ್ಫಾರ್ಮೆನ್ಸ್ ಹೆಚ್ಚಿಸುತ್ತವೆ.