ಯಶವಂತ ಚಿತ್ತಾಲರು ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು. ಇವರು ವೆಂಕಟೇಶ ಮೂರ್ತಿಯವರಿಗೆ ಪತ್ರ ಬರೆದಿದ್ದರು. ಅವರ ‘ಎಷ್ಟೊಂದು ಮುಗಿಲು’ ಕವನ ಸಂಕಲನದ ಪ್ರತಿಯನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಯಶವಂತ ಚಿತ್ತಾಲರು ಬರೆದ ಪತ್ರದ ಮಾಹಿತಿ ಇಲ್ಲಿದೆ.
- ಹೆಚ್‌ಎಸ್‌ವಿ
ಕಾಳಿದಾಸನ ಕೃತಿಗಳಲ್ಲಿ ‘ರಘುವಂಶ’ ನನಗೆ ತುಂಬಾ ಪ್ರಿಯವಾದ ಕೃತಿಯಾಗಿತ್ತು. ಡಿಪ್ಲೊಮಾ ಮುಗಿಸಿ ನಾನು ಚಿತ್ರದುರ್ಗದಲ್ಲಿ ‘ಮಾಡರ್ನ್ ಕಾರ್ಪೆಂಟ್ರಿ ಅಂಡ್ ಸ್ಮಿತಿ ಸೆಂಟರ್’ ಎಂಬ ಸಂಸ್ಥೆಯಲ್ಲಿ ಡೇಲಿ ವೇಜಸ್ ಮೇಲೆ ಕೆಲಸ ಮಾಡುತ್ತಿದ್ದಾಗ (ಆಗ ನನಗೆ ಇಪ್ಪತ್ತು-ಇಪ್ಪತ್ತೊಂದು ವಯಸ್ಸು) ಕನ್ನಡ ‘ಪಂಡಿತ’ ಪರೀಕ್ಷೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದೆ. ಆಗ ‘ರಘುವಂಶ’ದ ಕೆಲವು ಸರ್ಗಗಳನ್ನು ನಾನು ಪಠ್ಯವಾಗಿ ಅಭ್ಯಾಸ ಮಾಡಬೇಕಾಗಿತ್ತು. ಒಬ್ಬರು ಸಂಸ ಪಂಡಿತರ ಬಳಿ ‘ರಘುವಂಶ’ವನ್ನು ಪಾಠ ಹೇಳಿಸಿಕೊಳ್ಳುತ್ತಿದ್ದೆ. ಮೂವತ್ತು ವರ್ಷಗಳ ನಂತರ ‘ರಘುವಂಶ’ವನ್ನು ಕನ್ನಡಕ್ಕೆ ಅನುವಾದಿಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಅದನ್ನು ಮತ್ತೆ ಅಭ್ಯಾಸ ಮಾಡಲು ತೊಡಗಿದೆ. ನನ್ನ ಪ್ರಿಯಮಿತ್ರರಾದ ಶ್ರೀರಾಮ ಭಟ್ಟರು ನನ್ನ ಆಸರೆಗೆ ಬಂದರು.‘ರಘುವಂಶ’ವನ್ನು ನಾನು ಭಟ್ಟರ ಸಹಾಯದಿಂದ ಅಭ್ಯಾಸ ಮಾಡುತ್ತಿರುವ ವಿಷಯ ಗೆಳೆಯರಾದ ಹಿರಿಯ ಕವಿಯೊಬ್ಬರಿಗೆ ತಿಳಿಯಿತು. ಅವರು ಶ್ರೀರಾಮ ಭಟ್ಟರಿಗೆ, ‘ನೋಡಿ, ನೀವು ಎಚ್ಎಸ್ವಿಗೆ ‘ರಘುವಂಶ’ ಪಾಠ ಮಾಡುತ್ತಿದ್ದೀರಿ. ಅವರು ಅದನ್ನು ಅನುವಾದ ಮಾಡಿ ಅವಾರ್ಡು ತೆಗೆದುಕೊಳ್ಳುತ್ತಾರೆ. ಅದರಿಂದ ನಿಮಗೇನು ಲಾಭ? ಸುಮ್ಮನೆ ಅವರನ್ನು ದೂರದಲ್ಲೇ ಇಡಿ’ ಎಂದು ಹಿತೋಪದೇಶ ಮಾಡಿದರಂತೆ. ಭಟ್ಟರು ನನ್ನ ಬಳಿ ಬಂದು ‘ಅವರು ನಿಮ್ಮ ಸ್ನೇಹಿತರು. ಹೀಗೇಕೆ ಮಾತಾಡಿದರು? ನನ್ನ ನಿಮ್ಮ ಸಂಬಂಧ ಅವರಿಗೆ ಸರಿಯಾಗಿ ತಿಳಿದಿಲ್ಲ. ನನ್ನ ಬಳಿ ಹೀಗೆ ಮಾತಾಡಿದರೆ ನಾನು ನಿಮಗೆ ತಿಳಿಸಬಹುದು ಎಂದು ಅವರು ಯೋಚಿಸಿಲ್ಲ. ಆಶ್ಚರ್ಯ ಅಲ್ಲವೇ?’ ಎಂದರು. ಆಶ್ಚರ್ಯಕ್ಕಿಂತ ಹೆಚ್ಚಾಗಿ ನನಗೆ ಆದದ್ದು ಆಘಾತ. ಮನುಷ್ಯ ಸಂಬಂಧಗಳು ಎಷ್ಟೊಂದು ಜಟಿಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ‘ನೀವು ಮನಸ್ಸು ಸಣ್ಣದು ಮಾಡಿಕೊಳ್ಳಬೇಡಿ. ನಿಮ್ಮ ಪಾಡಿಗೆ ನೀವು ನಿಮ್ಮ ಕೆಲಸ ಮಾಡಿಕೊಂಡು ಹೋಗಿ’ ಎಂದು ನರಹಳ್ಳಿ ನನ್ನನ್ನು ಸಮಾಧಾನಪಡಿಸಿದರು.
ಆದರೆ ಈ ಘಟನೆಯಿಂದ ಒಂದು ಅನುಕೂಲವಾಯಿತು. ನಾನು ಶ್ರೀರಾಮ ಭಟ್ಟರಿಗಾಗಿ ಏನಾದರೂ ಮಾಡಬೇಕು ಎಂದು ನಿಶ್ಚಯಿಸಿದೆ. ಅಡಿಗರ ಕಾವ್ಯದಲ್ಲಿ ಅನೇಕ ಸಂಸ್ಕೃತ ಉಕ್ತಿಗಳು ಮತ್ತು ಪ್ರಯೋಗಗಳು ಉದ್ದಕ್ಕೂ ಬರುತ್ತವೆ. ಕ್ಲಾಸಿನಲ್ಲಿ ಅಡಿಗರನ್ನು ಪಾಠ ಮಾಡುವಾಗ ನಾನೇ ಮತ್ತೆ ಮತ್ತೆ ಸಂಸ್ಕೃತ ಚೆನ್ನಾಗಿ ಬಲ್ಲವರನ್ನು ಸಂಪರ್ಕಿಸಿ ವಿವರಣೆ ಪಡೆಯುತ್ತಿದ್ದೆ. ಸಂಸ್ಕೃತ ಬಲ್ಲವರು ಇಲ್ಲದ ಕಡೆ ಕನ್ನಡ ಅಧ್ಯಾಪಕರಿಗೆ ಅಡಿಗರನ್ನು ಪಾಠ ಮಾಡುವಾಗ ಅಲ್ಲಲ್ಲಿ ತೊಡಕಾಗಬಹುದು. ಸಾಹಿತ್ಯ ವಿದ್ಯಾರ್ಥಿಗಳೂ ಈ ಬಿಕ್ಕಟ್ಟನ್ನು ಎದುರಿಸಿಯೇ ಎದುರಿಸುತ್ತಾರೆ. ಆದುದರಿಂದ ಅಡಿಗರ ಕವಿತೆಗಳಲ್ಲಿ ಬರುವ ಸಂಸ್ಕೃತ ಉಕ್ತಿಗಳನ್ನು, ಪೌರಾಣಿಕ ಪ್ರಸಕ್ತಿಗಳನ್ನು ಪಟ್ಟಿಮಾಡಿ ಅವೆಲ್ಲವನ್ನೂ ವಿವರಿಸುವಂಥ ಒಂದು ಅರ್ಥಕೋಶವನ್ನು ಶ್ರೀರಾಮ ಭಟ್ಟರು ತಯಾರಿಸಿದರೆ ಚೆನ್ನಾಗಿರುತ್ತದೆ ಎನ್ನಿಸಿತು. ಅವರಿಗೆ ಈ ವಿಷಯವನ್ನು ತಿಳಿಸಿ, ‘ಇಂಥ ಶಬ್ದಕೋಶವೊಂದನ್ನು ನೀವು ಮಾಡಿ. ನಾನು ಅದನ್ನು ಪ್ರಕಟಿಸುತ್ತೇನೆ’ ಎಂದೆ. ಭಟ್ಟರು ಶ್ರದ್ಧೆಯಿಂದ ಆ ಕೆಲಸ ಮಾಡಿದರು. ‘ಶಬ್ದಮಾರ್ಗ’ ಎನ್ನುವ ಹೆಸರಿನಲ್ಲಿ ಆ ಶಬ್ದಕೋಶವನ್ನು ಪ್ರಕಟಿಸಿದೆ. ಅನಂತಮೂರ್ತಿಯವರು ಆ ಕೃತಿಗೆ ಹಿನ್ನುಡಿ ಬರೆದರು. ಕೃತಿಯಿಂದ ಭಟ್ಟರಿಗೆ ಒಳ್ಳೆಯ ಹೆಸರು ಬಂತು. ಅಡಿಗರೂ ಸಂತೋಷಪಟ್ಟರು. ನನ್ನ ಮನಸ್ಸಿಗೆ ತುಂಬ ಸಮಾಧಾನವಾಯಿತು. ಮುಂದೆ ಭಟ್ಟರು ನನ್ನ ಬಳಿ ಡಾಕ್ಟರೇಟ್ ಕೂಡಾ ಮಾಡಿದರು.
ಪದವಿಲ್ಲದ ಪದ್ಯಕ್ಕೆ ಕದವಿಲ್ಲದ ಕವಿತೆ! ಕವಿ, ಕಾವ್ಯಗಳ ಬಗ್ಗೆ ಜೋಗಿ ವಿಮರ್ಶೆ
‘ರಘುವಂಶ’ದ ಅಭ್ಯಾಸ ಮುಗಿದ ಮೇಲೆ ಅತ್ಯಂತ ಶ್ರದ್ಧೆಯಿಂದ ಅನುವಾದ ಕಾರ್ಯ ಪ್ರಾರಂಭಿಸಿದೆ. ವೈಎನ್ಕೆ ಒಮ್ಮೆ ಸಿಕ್ಕಾಗ ಅವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದೆ. ‘ನೀವು ಅನುವಾದ ಮಾಡಿ ನನಗೆ ಕೊಡಿ. ಅದನ್ನು ‘ಕನ್ನಡಪ್ರಭ’ದಲ್ಲಿ ಧಾರಾವಾಹಿಯಾಗಿ ಪ್ರಕಟಿಸೋಣ’ ಎಂದು ಅವರು ಹೇಳಿದರು. ಕಾವ್ಯವೊಂದು ಧಾರಾವಾಹಿಯಾಗಿ ಪತ್ರಿಕೆಯಲ್ಲಿ ಪ್ರಕಟವಾಗತೊಡಗಿದ್ದು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಅದೇ ಮೊದಲು ಎಂದುಕೊಂಡಿದ್ದೇನೆ. ‘ಕನ್ನಡಪ್ರಭ’ದಲ್ಲಿ ‘ರಘುವಂಶ’ದ ಅನುವಾದವನ್ನು ಓದಿ, ‘ಬೇಗ ಅನುವಾದ ಕಾರ್ಯ ಮುಗಿಸಿ’ ಎಂದು ಕೆಲವು ಸ್ನೇಹಿತರು ಒತ್ತಾಸೆ ನೀಡಿದರು. ಸುಬ್ರಾಯ ಚೊಕ್ಕಾಡಿ, ಎಸ್ ದಿವಾಕರ್, ವೈದೇಹಿ ಮೊದಲಾದವರ ಮೆಚ್ಚುಗೆಯ ಪತ್ರಗಳು ನನಗೆ ಹೊಸ ಹುಮ್ಮಸ್ಸನ್ನು ನೀಡಿದವು. ಆ ದಿನಗಳಲ್ಲಿ ಒಮ್ಮೆ ಕೆ ನರಸಿಂಹಮೂರ್ತಿಯವರು ಸಿಕ್ಕಿ ‘ನಿನ್ನ ‘ರಘುವಂಶ’ ಓದ್ತಾ ಇದ್ದೇನಪ್ಪಾ. ಚೆನ್ನಾಗಿ ಬರ್ತಾ ಇದೆ. ಸಾಂಗತ್ಯದ ಲಯ ಕೂಡಾ ಚೆನ್ನಾಗಿದೆ’ ಎಂದರು. ‘ಸರ್, ಅದು ಸಾಂಗತ್ಯದ ಲಯ ಅಲ್ಲ. ಐದು ಮಾತ್ರೆಗಳ ಘಟಕದ ಮಾತ್ರಾಗಣದ ಚೌಪದಿ. ಅಡಿಗರು ‘ಕೂಪಮಂಡೂಕ’ ಇತ್ಯಾದಿಗಳಲ್ಲಿ ಬಳಸಿದ್ದಾರಲ್ಲ, ಆ ಬಗೆಯದು’ ಎಂದೆ. ‘ಹೌದಾ? ನಾನು ಸಾಂಗತ್ಯ ಅಂತ ಅಂದ್ಕೊಂಡೆ’ ಎಂದು ನರಸಿಂಹಮೂರ್ತಿಯವರು ಉದ್ಘರಿಸಿದರು. ಸರಿ ಸುಮಾರು ಆ ದಿನಗಳಲ್ಲೇ ಕೆ ನರಸಿಂಹಮೂರ್ತಿಯವರು ‘ಋತುವಿಲಾಸ’ವನ್ನು ರಿವ್ಯೂ ಮಾಡಿದ್ದು. ಅವರು ‘ಋತುವಿಲಾಸ’ವನ್ನು ಒಬ್ಬ ಸಂಸ್ಕೃತ ಪಂಡಿತರಾಗಿ ಓದಿದ್ದರು
ಅಕ್ಷರ ಪ್ರಕಾಶನದಿಂದ ನನ್ನ ಒಂದು ಪುಸ್ತಕ ಬರಬೇಕೆನ್ನುವುದು ಬಹುದಿನದ ಅಪೇಕ್ಷೆಯಾಗಿತ್ತು. ಹಸ್ತಪ್ರತಿ ತಲುಪಿದ ಕೂಡಲೇ ಸುಬ್ಬಣ್ಣ ಬರೆದರು . ‘ನಿಮ್ಮ ಹಸ್ತಪ್ರತಿ, ಕಾಗದ ಬಂತು. ಥ್ಯಾಂಕ್ಸ್. ಸಾನೆಟ್ಟುಗಳು ತುಂಬ ಬಿಗಿಯಾಗಿ, ಬಹಳ ಚೆನ್ನಾಗಿವೆ. ಅಕ್ಷರನೂ ಓದಿದ. ಅಭಿನಂದನೆ’. ‘ಎಷ್ಟೊಂದು ಮುಗಿಲು’ ಸಾನೆಟ್ಟುಗಳ ಸಂಗ್ರಹವಾದ್ದರಿಂದ ಸಾನೆಟ್ ರಚನೆಯಲ್ಲಿ ಮಹತ್ವದ ಸಾಧನೆ ಮಾಡಿರುವ ಕವಿ ಚನ್ನವೀರ ಕಣವಿ ಅವರಿಗೆ ಬ್ಲರ್ಬ್ ಬರೆದುಕೊಡಲು ಕೇಳಿಕೊಂಡೆ. ಕಣವಿಯವರ ಬ್ಲರ್ಬ್‌ನೊಂದಿಗೆ ‘ಎಷ್ಟೊಂದು ಮುಗಿಲು’ ಕವಿತಾ ಸಂಗ್ರಹ ಅಚ್ಚುಕಟ್ಟಾಗಿ ಹೊರಬಂದಿತು. ಈ ಪುಸ್ತಕ ಹೊರಬರುವುದನ್ನೇ ಕಾದಿದ್ದವರಂತೆ ಪಿ ಲಂಕೇಶ್ ತಕ್ಷಣ ತಮ್ಮ ಲಂಕೇಶ್ ಪತ್ರಿಕೆಯಲ್ಲಿ ಸ್ವತಃ ತಾವೇ ರಿವ್ಯೂ ಬರೆದರು. ‘ಕೆ ಎಸ್ ನ ಮಾತನ್ನು ಬಳಸುವ ರೀತಿ, ಜಿಎಸ್ಎಸ್ ಸಾಮಾನ್ಯ ವಸ್ತುವನ್ನು ಕುರಿತು ಬರೆಯುತ್ತಲೇ ತತ್ವವೊಂದನ್ನು ಹೊಮ್ಮಿಸಲು ಯತ್ನಿಸುವ ರೀತಿ ಎರಡನ್ನೂ ಸೇರಿಸಿದರೆ ವೆಂಕಟೇಶಮೂರ್ತಿಯವರ ಕವನವಾಗುತ್ತದೆ’ ಎಂಬ ಹೊಸ ಪ್ರಮೇಯವನ್ನು ಲಂಕೇಶ್ ಮಂಡಿಸಿದ್ದರು. ಇದು ಬ್ಲರ್ಬ್ ಬರೆದ ಕಣವಿಯವರಿಗೆ ಅರ್ಥವಾಗಿಲ್ಲವೆಂದು ಅವರನ್ನು ಲೇವಡಿ ಕೂಡಾ ಮಾಡಿದ್ದರು. ಅವರ ಕೊನೆಯ ಶರಾ - ‘ಇದು ಅನುಕರಣೆಯ ಮತ್ತು ತಾಟಸ್ಥ್ಯದ ಕಾವ್ಯವಾದರೂ ವೆಂಕಟೇಶಮೂರ್ತಿ ತಮ್ಮ ಕೆಲವು ಪದ್ಯಗಳಲ್ಲಿ ಮನಮುಟ್ಟುವ ಚಿತ್ರ ನಿರ್ಮಿಸಬಲ್ಲವರಾಗಿದ್ದಾರೆ’. ಕೇವಲ ಅನುಕರಣೆಯ ಕವಿಯಾದ ನನಗೆ ಈ ಮನಮುಟ್ಟುವ ಚಿತ್ರ ನಿರ್ಮಿಸುವ ಶಕ್ತಿ ಎಲ್ಲಿಂದ ಬಂದಿತು ಎನ್ನುವುದನ್ನು ಲಂಕೇಶರೇ ವಿವರಿಸಬೇಕು.
ಬೆಂಗಳೂರು ಟು ಸಿಕ್ಕಿಂ ಕನ್ನಡಿಗರ ಬೈಕ್ ರೈಡ್, ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುವ ಉದ್ದೇಶ
ಎಷ್ಟೊಂದು ಮುಗಿಲು ಬಗ್ಗೆ ಒಂದು ಪತ್ರ ತೀರಾ ಅನಿರೀಕ್ಷಿತವಾಗಿತ್ತು. ನಾನು ನನ್ನ ಸಾಹಿತ್ಯ ಜೀವಿತದಲ್ಲಿ ಪಡೆದ ಬಹುಮುಖ್ಯ ಸ್ಪಂದನಗಳಲ್ಲಿ ಅದೂ ಒಂದು. ನಾನು ಜತನವಾಗಿ ಕಾಯ್ದಿರಿಸಿಕೊಳ್ಳಲು ಬಯಸುವಂಥದ್ದು. ಅದು ಯಶವಂತ ಚಿತ್ತಾಲರು ಬರೆದ ಪತ್ರ.
15-09-1992
ಪ್ರೀತಿಯ ವೆಂಕಟೇಶಮೂರ್ತಿಯವರೇ,
‘ಎಷ್ಟೊಂದು ಮುಗಿಲು’ ಪ್ರತಿಯೊಂದನ್ನು ನನಗೆ ಕಳುಹಿಸಿದ್ದಕ್ಕೆ ಕೃತಜ್ಞತೆಗಳು. ಕೆಲವು ತಿಂಗಳ ಹಿಂದೆಯೇ ಜಯಂತರ ಮನೆಯಲ್ಲಿ ಕಣ್ಣು ಹಾಯಿಸಿದ ಕವನಗಳಿಂದಲೇ ಮುಗ್ಧನಾಗಿ ಅವರ ಬಳಿಯಿದ್ದ ಪ್ರತಿಯನ್ನು ಮನೆಗೂ ತಂದು ಓದಿ ಸಂತೋಷಪಟ್ಟೆ. ಅವರಿಗೂ ಫೋನ್ ಮಾಡಿ ನನ್ನ ಸಂತೋಷ ತಿಳಿಸಿದೆ. ಆಗಲೇ ನಿಮಗೆ ಪತ್ರ ಬರೆಯುವವನಿದ್ದೆ. ಸಾಧ್ಯವಾಗಲಿಲ್ಲ. ಕಾವ್ಯಕ್ಕೆ ನನ್ನ ಪ್ರತಿಕ್ರಿಯೆ ತುಂಬ ನಿಧಾನ. ಪ್ರತಿಕ್ರಿಯೆಯನ್ನು ಸ್ವತಃ ಕವಿಗೇ ತಿಳಿಸುವುದಕ್ಕೆ ಎಲ್ಲಿಲ್ಲದ ಅಳುಕು. ಕಾವ್ಯದ ವಿಮರ್ಶೆ ನನ್ನ ಜಾಯಮಾನಕ್ಕೆ ಸುಲಭವಾಗಿ ಒಗ್ಗಿದ್ದಲ್ಲ. ನೀವೇ ನನ್ನ ಕಣ್ಣೆದುರಿಗಿದ್ದಾಗ ಖುಷಿಯನ್ನು ವ್ಯಕ್ತಪಡಿಸುವ ರೀತಿಗೂ, ಹೀಗೆ ಪತ್ರದ ಮೂಲಕ ತಿಳಿಸುವುದಕ್ಕೂ ಅಂತರವಿದೆಯಲ್ಲವೇ! ನಾನು ಇತ್ತೀಚೆಗೆ ಯಾವ ಕವನಸಂಗ್ರಹವನ್ನೂ - ನಿಮ್ಮ ಸಂಗ್ರಹವನ್ನು ಓದಿದ ಹಾಗೆ - ಒಂದೂ ಕವನವನ್ನೂ ಬಿಡದೇ ಓದಿದ್ದಿಲ್ಲ. ಓದಿ ಇಷ್ಟೊಂದು ಖುಷಿಪಟ್ಟಿದ್ದಿಲ್ಲ. ಖುಷಿಗೆ ಕಾರಣವಾದದ್ದು ಒಂದು ಸಿದ್ಧ, ಪ್ರಸಿದ್ಧ ಚೌಕಟ್ಟಿನ ಒಳಗೆ ಅನುಭವವನ್ನು ಕಾವ್ಯವಾಗಿಸುವ ಆ ಮೂಲಕ ಅರ್ಥ ಹುಟ್ಟಿಸುವ ನಿಮ್ಮ ಪ್ರಯತ್ನ. Form and Content ಇದರ ಅರ್ಥ ಕಳಕೊಳ್ಳುವ ಮಟ್ಟಿಗೆ ಚರ್ಚೆಗೆ ಒಳಪಟ್ಟ ವಿಷಯವಾಗಿದೆ. ಆದರೂ ನಿಮ್ಮ ಈ ಕವನಗಳ ಸಂದರ್ಭದಲ್ಲಿ ಈ ಪ್ರಶ್ನೆ ಎತ್ತುವುದು ಅಪ್ರಸ್ತುತವಾಗಲಾರದು. ಅನಿವಾರ್ಯವೂ ಏನೋ! ಯಾಕೆಂದರೆ ನಿಮ್ಮ ಈ ಕವನಗಳಲ್ಲಿ ಆಕೃತಿ ಹಾಗೂ ವಸ್ತು ಒಂದನ್ನೊಂದು ಪ್ರಭಾವಿಸುವ, ಅರ್ಥಪೂರ್ಣಗೊಳಿಸುವ ಅನನ್ಯ ಪರಿಯೇ ನನ್ನ ಕೌತುಕಕ್ಕೆ ಕಾರಣವಾಗಿದೆ. ಭೌತಿಕ ವಿಜ್ಞಾನದಲ್ಲಿ ವಿಶ್ವದ ಆಕೃತಿಯನ್ನು ಕುರಿತು ಎರಡು ಸಿದ್ದಾಂತಗಳಿವೆ. ಯಾವುದು ನಿಜವಾದದ್ದು ಎಂದು ನಿಷ್ಕರ್ಷೆಯಾಗಿಲ್ಲ. ಸಾಹಿತ್ಯಕ್ಷೇತ್ರದಲ್ಲಿ ಆಕೃತಿ-ವಸ್ತುಗಳ ಚರ್ಚೆ ನಡೆದಾಗೆಲ್ಲ ಈ ಸಿದ್ಧಾಂತಗಳು ನನ್ನಲ್ಲಿ ಹುಟ್ಟಿಸುವ ಪ್ರತಿಮೆಗಳು ನೆನಪಿಗೆ ಬರುತ್ತವೆ. ಒಂದರ ಪ್ರಕಾರ Universe is bounded but infinite.
ಇನ್ನೊಂದರ ಪ್ರಕಾರ Universe in unbounded but finite. ಇವು ಹೇಳಹೊರಟಿದ್ದನ್ನು ಪ್ರತಿಮೆಗಳಾಗಿ ಕಲ್ಪಿಸಿಕೊಳ್ಳಲು ಯತ್ನಿಸಿ. ಮೈ ಜುಂ ಎನ್ನಿಸುವುದಿಲ್ಲವೇ? ವಿಜ್ಞಾನದಂಥ ವಿಜ್ಞಾನದಲ್ಲಿ ಕೂಡಾ ‘ಗಡಿ’ ಹಾಗೂ ‘ಒಳಗು’ಗಳ ಸಂಬಂಧ ನಿಗೂಢವಾದದ್ದು
ಇತಿ ಪ್ರೀತಿಯಿಂದ,
ನಿಮ್ಮ
ಯಶವಂತ ಚಿತ್ತಾಲ
