Asianet Suvarna News Asianet Suvarna News

ತೆರೆದ ಮನಸ್ಸಿನ ವಿವೇಕ

ಬುದ್ಧ, ಬಸವ, ಅಲ್ಲಮ, ಅಕ್ಕ, ಪಂಪ, ಕುಮಾರವ್ಯಾಸ, ನಾರಣಪ್ಪ....ಮತ್ತಿತರ ಅಸಾಧಾರಣ ಸಾಧಕರ ತಿಳಿವಿನ ಜೊತೆಗೆ ನನ್ನ ಹದಿಹರೆಯದ ದಿನಗಳಲ್ಲಿಯೇ ಕುವೆಂಪು, ಲೋಹಿಯಾ, ಅಂಬೇಡ್ಕರ್ ಅವರಂತಹ ಅಪ್ರತಿಮ ಮೇಧಾವಿಗಳ ಚಿಂತನೆಯ ಅಸಾಧಾರಣ ಒಳನೋಟಗಳ ಬದುಕಿನ ಮಹತ್ವದ ಸಂಪರ್ಕ ದೊರೆತದ್ದು ನನ್ನ ವಿಶೇಷ ಸೌಭಾಗ್ಯ. ಈ ಬಗೆಯ ಸೊಗಸುಗಳು ನನಗೆ ದಕ್ಕಿರುವ ಕಾರಣದಿಂದಾಗಿ ನಾನು ಸದಾಕಾಲವೂ ಹೊಣೆಗಾರಿಕೆ ಮತ್ತು ಆನಂದದಿಂದಲೇ ಪ್ರತಿಕ್ಷಣವನ್ನೂ ಕಳೆಯುತ್ತಿದ್ದೇನೆ.

Tereda Manassina Viveka, Article by Kalegowda Nagavara Vin
Author
First Published Nov 12, 2023, 12:30 PM IST

- ಕಾಳೇಗೌಡ ನಾಗವಾರ

ಬುದ್ಧ, ಬಸವ, ಅಲ್ಲಮ, ಅಕ್ಕ, ಪಂಪ, ಕುಮಾರವ್ಯಾಸ, ನಾರಣಪ್ಪ....ಮತ್ತಿತರ ಅಸಾಧಾರಣ ಸಾಧಕರ ತಿಳಿವಿನ ಜೊತೆಗೆ ನನ್ನ ಹದಿಹರೆಯದ ದಿನಗಳಲ್ಲಿಯೇ ಕುವೆಂಪು, ಲೋಹಿಯಾ, ಅಂಬೇಡ್ಕರ್ ಅವರಂತಹ ಅಪ್ರತಿಮ ಮೇಧಾವಿಗಳ ಚಿಂತನೆಯ ಅಸಾಧಾರಣ ಒಳನೋಟಗಳ ಬದುಕಿನ ಮಹತ್ವದ ಸಂಪರ್ಕ ದೊರೆತದ್ದು ನನ್ನ ವಿಶೇಷ ಸೌಭಾಗ್ಯ. ಈ ಬಗೆಯ ಸೊಗಸುಗಳು ನನಗೆ ದಕ್ಕಿರುವ ಕಾರಣದಿಂದಾಗಿ ನಾನು ಸದಾಕಾಲವೂ ಹೊಣೆಗಾರಿಕೆ ಮತ್ತು ಆನಂದದಿಂದಲೇ ಪ್ರತಿಕ್ಷಣವನ್ನೂ ಕಳೆಯುತ್ತಿದ್ದೇನೆ.

ಕುವೆಂಪು ಅವರ ವಿದ್ವತ್ತು ಮತ್ತು ವಿಚಾರಧಾರೆಯಿಂದ ಪ್ರಭಾವಿತರಾದ ಜಿ. ಎಸ್.ಶಿವರುದ್ರಪ್ಪ, ಪ್ರಭುಶಂಕರ ಮತ್ತು ಸುಜನಾ ಅವರ ಪಾಠಪ್ರವಚನ ಹಾಗೂ ನಡವಳಿಕೆಗಳು ನನಗೆ ತುಂಬ ಇಷ್ಟವಾದವುಗಳು. ನಾನು ಎಂ.ಎ. ಮುಗಿಸಿ ಭೂರಮೆಯ ಸುಂದರ ನೆಲೆಬೀಡಾದ ಕೊಡಗಿನ ಕಾವೇರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸಿದೆ. ಆ ಪರಿಸರದ ಅಪರೂಪದ ಬೆಡಗು ನನ್ನ ನಡೆದು ನೋಡುವ ಸಡಗರವನ್ನು ನೂರ್ಮಡಿ ಮಾಡಿರುವಾಗಲೇ... ಆಕಸ್ಮಿಕವಾಗಿ ಬೆಂಗಳೂರಿನಿಂದ ನನಗೊಂದು ಟೆಲಿಗ್ರಾಂ ಬಂತು. ಅದನ್ನು ಕಳಿಸಿದ್ದವರು ಶಾಸಕ ಕೋಣಂದೂರು ಲಿಂಗಪ್ಪ; ಹಾಗೆಯೇ ಅವರ ಬೆನ್ನಿಗಿದ್ದವರು ಸಮಾಜವಾದಿ ಚಿಂತಕ, ಚಿತ್ರನಿರ್ದೇಶಕ ಕೆ. ಎಂ. ಶಂಕರಪ್ಪ. ಆ ತಂತಿಯಲ್ಲಿದ್ದ ಸಂಕ್ಷಿಪ್ತ ವಿಷಯ ಇಷ್ಟು: ‘ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಜಿ ಎಸ್ ಶಿವರುದ್ರಪ್ಪ ಅವರೊಡನೆ ಚರ್ಚಿಸಿ, ಒಪ್ಪಿಸಿದ್ದೇವೆ. ಕೂಡಲೇ ಅವರನ್ನು ಕಾಣಿ’. ಮರುದಿನವೇ ಕಾಲೇಜಿಗೆ ರಜೆ ಸಲ್ಲಿಸಿ ಬೆಂಗಳೂರಿಗೆ ಬಂದೆ. ಜಿಎಸ್‌ಎಸ್ ನನಗೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಗುರುಗಳು, ತುಂಬ ಪರಿಚಿತರು. ನನ್ನನ್ನು ಕಂಡ ಕೂಡಲೇ, ‘ನಿಮಗೆ ಗೊತ್ತಿದೆ. ಇದು ಹೊಸ ವಿಶ್ವವಿದ್ಯಾಲಯ, ನಿಮ್ಮಂತಹ ಜಾತ್ಯತೀತ ಹಿನ್ನೆಲೆಯ ವೈಚಾರಿಕ ಚಿಂತಕರು ಇಲ್ಲಿ ಅತ್ಯವಶ್ಯ. ಸದ್ಯದಲ್ಲೇ ಹೊಸ ಕ್ಯಾಂಪಸ್‌ಗೆ ನಾವು ಹೋಗುತ್ತೇವೆ. ಆಗ ತಪ್ಪದೇ ನೀವೂ ಸಹ ಬನ್ನಿ; ಇದನ್ನು ಕುಲಪತಿ ಎಚ್.ಎನ್ ಸಹ ಒಪ್ಪಿದ್ದಾರೆ’ ಎಂದು ಹೇಳಿ ಆಹ್ವಾನಿಸಿದರು. ನನಗೆ ಅತೀವ ಆನಂದವಾಯಿತು.

ಕೂಡಲೇ ನಾನು ಕಾವೇರಿ ಕಾಲೇಜಿನ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಬೆಂಗಳೂರು ಬಳಿಯ ಕನಕಪುರ ರೂರಲ್ ಕಾಲೇಜು ಸೇರಿದೆ. ಗ್ರಾಮಾಂತರ ಗಾಂಧಿ ಎಸ್. ಕರಿಯಪ್ಪನವರಂತಹ ಅರ್ಪಣಾ ಮನೋಭಾವದ ಮಹನೀಯರ ಶಿಕ್ಷಣ ಸಂಸ್ಥೆಯಲ್ಲಿ ಕೆಲಕಾಲ ದುಡಿಯಬೇಕೆನ್ನುವುದು ನನ್ನ ಮಹದಾಸೆಯಾಗಿತ್ತು. ಅದಕ್ಕೆ ಕರಿಯಪ್ಪನವರು ಹೃದಯ ತುಂಬಿ ಸ್ವಾಗತಿಸಿದರು.

ಹೋರಾಟದ ಕಥಾಪ್ರಸಂಗ; 'ಅಂಗುಲಿಮಾಲಾ' ಕೃತಿಯ ಎರಡು ಅಧ್ಯಾಯ

ಹೀಗಾಗಿ 1974ರ ಶಿಕ್ಷಣ ವರ್ಷದ ಆರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ನನಗೆ ಸಹಜವಾಗಿಯೇ ದೊರೆಯಿತು. ಜಿಎಸ್‌ಎಸ್ ಮತ್ತು ಎಚ್‌ಎನ್ ನನಗೆ ನೀಡಿದ ಅಕ್ಕರೆ, ವಿಶ್ವಾಸ, ನೆರವು ಆಶ್ಚರ್ಯಕಾರಕ. ಅಲ್ಲಿ ಕೂಡಲೇ ಪವಾಡಗಳ ರಹಸ್ಯ ಬಯಲು ಮಾಡುವ ವಿಶ್ವವಿದ್ಯಾಲಯದ ಅಧಿಕೃತ ಸಮಿತಿಯ ಸದಸ್ಯನಾದೆ. ಅನುಪಮಾ ನಿರಂಜನ ಸೇರಿದಂತೆ ಹಲವಾರು ವಿಜ್ಞಾನಿ, ಮನಃಶ್ಶಾಸ್ತ್ರಜ್ಞರು, ಸಾಹಿತಿ- ವಿಚಾರವಂತರ ಜವಾಬ್ದಾರಿಯುತ ಕೂಟ ಅದಾಗಿತ್ತು. ಬದುಕನ್ನು ಹಸನುಗೊಳಿಸುವ ಅತ್ಯುತ್ತಮ ವೈಚಾರಿಕ ಚಿಂತನೆಯ ಪಠ್ಯಗಳನ್ನು ಸಿದ್ಧಪಡಿಸುವ ಹೊಣೆಗಾರಿಕೆ ಸಹ ನನ್ನ ಹೆಗಲಿಗೆ ಬಿತ್ತು.

ಕೆ. ಮರುಳಸಿದ್ದಪ್ಪ, ಕಿ.ರಂ. ನಾಗರಾಜ ಮತ್ತು ಕೆ.ವಿ. ನಾರಾಯಣ ಅವರಂತಹ ಹೃದಯವಂತ ಸಮಾಜಪರ ಸಹೋದ್ಯೋಗಿಗಳ ಒಡನಾಟ ದೊರೆಯಿತು. ಆಳವಾದ ಅಧ್ಯಯನ ಮತ್ತು ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳ ಬಗೆಗೆ ಇನ್ನಿಲ್ಲದ ಕುತೂಹಲಿಯಾಗಿದ್ದ ಕಿರಂ ಮತ್ತು ಸದಾ ಮೌನವ್ರತಧಾರಿಯಾಗಿದ್ದುಕೊಂಡೇ ಆರೋಗ್ಯಕರ ಮನಸ್ಸಿನ ಅಧ್ಯಾಪಕರಾಗಿದ್ದ ಮರುಳಸಿದ್ದಪ್ಪನವರು ನಿಜಕ್ಕೂ ತೆರೆದ ಮನಸ್ಸಿನ ಆದರ್ಶ ಜೀವಿಗಳಾಗಿದ್ದರು.

ಕಡಿಮೆ ಅವಧಿಯಲ್ಲಿಯೇ ಪ್ರೊ. ಶಿವರುದ್ರಪ್ಪನವರು ಕಿ.ರಂ. ನಾಗರಾಜ, ಕಂಬಾರ ಮತ್ತು ಕೆ.ವಿ. ನಾರಾಯಣ ಅವರನ್ನು ಇಲಾಖೆಗೆ ಆಯ್ಕೆ ಮಾಡಿಕೊಂಡಿದ್ದರು. ಮುಂದೆ ನಾನು, ಬರಗೂರು, ಸಿದ್ಧಲಿಂಗಯ್ಯ, ಡಿ.ಆರ್. ನಾಗರಾಜ ಸಹ ಕ್ರಮವಾಗಿ ಸೇರ್ಪಡೆಯಾದೆವು. ಅಷ್ಟರಲ್ಲಾಗಲೇ ಮರುಳಸಿದ್ದಪ್ಪನವರು ಶಿವರುದ್ರಪ್ಪನವರ ಅಳಿಯ ಸಹ ಆಗಿದ್ದುದೊಂದು ಆಕಸ್ಮಿಕ. ಪಕ್ಕದ ಇಂಗ್ಲಿಷ್ ವಿಭಾಗದಲ್ಲಿದ್ದರೂ ಸದಾ ನಮ್ಮೆಲ್ಲರ ಜೊತೆಯೇ ನಕ್ಕುನಲಿಯುತ್ತಾ ಹೊಸ ಸಮಾಜದ ಕನಸುಗಳೊಡನೆ, ತಮ್ಮ ಎಂದಿನ ಚಿಕಿತ್ಸಕ ಗುಣದ ಅಗ್ಗಳಿಕೆ, ತುಂಟತನ ಮತ್ತು ಚೇಷ್ಟೆಗಳ ಮೂಲಕ ಕ್ರಿಯಾಶಾಲಿಯಾಗಿದ್ದವರು.

ಮಹಾಕಾಲನ ಭಸ್ಮಲೋಕ; ಉಜ್ಜಯಿನಿಯ ಮಹಾಕಾಲೇಶ್ವರನ ದರ್ಶನಕ್ಕಾಗಿ ಪಯಣ

ಪಿ. ಲಂಕೇಶ್.
ವಿದ್ಯಾರ್ಥಿಯಾಗಿದ್ದಾಗಲೇ ಅಪ್ರತಿಮ ಮೇಧಾವಿಯೂ ಕ್ರಿಯಾಶಾಲಿಯೂ ಆಗಿದ್ದ ಡಿ ಆರ್ ನಾಗರಾಜ ಇಲಾಖೆ ಸೇರಬೇಕೆಂಬುದು ನಮ್ಮೆಲ್ಲರ ಆಸೆಯಾಗಿತ್ತು. ಇದನ್ನು ಮುಂದಾಗಿಯೇ ಗ್ರಹಿಸಿದ ಜಿ ಎಸ್‌ ಎಸ್‌ ಆ ದಿಕ್ಕಿನಲ್ಲಿ ಮುನ್ನಡೆದರು. ಜಾತ್ಯತೀತವೂ ಜ್ಞಾನಾಕಾಂಕ್ಷಿಯೂ ಆದ ಮಾದರಿ ವಿಶ್ವವಿದ್ಯಾಲಯದ ಕನಸು ಅವರದಾಗಿತ್ತು. ಅದಕ್ಕೆ ಅನುಗುಣವಾಗಿಯೇ ಒಡನಾಡಿಗಳನ್ನು ನೇಮಕ ಮಾಡಿದರು. ತನ್ನ ಜಾತಿಯವರು ಅನ್ನುವ ಕಾರಣಕ್ಕಾಗಿ ಕುವೆಂಪು ಅವರ ಪ್ರೀತಿಯ ಶಿಷ್ಯರಾದ ಇವರು ಎಂದೂ ಯಾರನ್ನೂ ಆಯ್ಕೆ ಮಾಡಲಿಲ್ಲ. ಮರುಳಸಿದ್ದಪ್ಪ ಅವರು ವಾಸ್ತವವಾಗಿ ಇವರಿಗಿಂತ ಮೊದಲೇ ಕನ್ನಡ ವಿಭಾಗದಲ್ಲಿದ್ದರು. ಈ ಸಂಗತಿ ಹೆಚ್ಚಿನವರಿಗೆ ಬಹುಶಃ ಗೊತ್ತಿಲ್ಲ.

ಇಂತಹ ಅತ್ಯುತ್ತಮ ವಾತಾವರಣದಲ್ಲಿ ನಾನು ಜ್ಞಾನಭಾರತಿಯಲ್ಲಿ ಕಳೆದ ಹನ್ನೊಂದು ವರ್ಷಗಳು ನನ್ನ ಪಾಲಿನ ಹೊಚ್ಚ ಹೊಸ ತಾಜಾತನದ ಕೇವಲ ಹನ್ನೊಂದು ದಿನಗಳಾಗಿದ್ದವು! ಅಲ್ಲಿ ನನ್ನೆದುರಿಗೆ ಎಳೆಯ ಗೆಳೆಯರಾಗಿದ್ದು, ಕೊನೆಗೆ ಅಲ್ಲೇ ನನ್ನ ಸಹೋದ್ಯೋಗಿಗಳಾಗಿ ಬೆಳೆದ ಡಿ ಆರ್ ನಾಗರಾಜ ಮತ್ತು ಸಿದ್ಧಲಿಂಗಯ್ಯ ನನ್ನೆರಡು ಕಣ್ಣುಗಳಂತೆ ಇದ್ದರು. ಜೊತೆಗೆ ಅಗ್ರಹಾರ ಕೃಷ್ಣಮೂರ್ತಿ, ಮೋಟಮ್ಮ, ನಾಗರತ್ನಕುಮಾರಿಯೇ ಮುಂತಾದ ಸಂವೇದನಾಶೀಲರೆಲ್ಲರ ಕೂಡೆ ಸಾಮೂಹಿಕ ಚರ್ಚೆ, ಹೊಸಬದುಕಿನ ಮುನ್ನೋಟದ ಕ್ರಮಗಳ ಬಗ್ಗೆ ಸತತ ಪರಿಶೀಲನೆಯಲ್ಲಿ ಮುಳುಗಿದ್ದೆವು. ರಾಷ್ಟ್ರದ

ತುರ್ತು ಪರಿಸ್ಥಿತಿಯ ಕರಾಳ ಮುಖಗಳ ಅಸಹ್ಯ ಚಟುವಟಿಕೆಗಳನ್ನು ನೇರವಾಗಿ ವಿರೋಧಿಸಿದೆವು. ಇದಕ್ಕೆಲ್ಲ ತುಂಬು ಮನಸ್ಸಿನ ಒತ್ತಾಸೆ ಜಿಎಸ್‌ಎಸ್, ಕಿರಂ ಮತ್ತು ಮರುಳಸಿದ್ದಪ್ಪ ಅವರಿಂದ ಸದಾ ನಮ್ಮ ಪಾಲಿಗಿತ್ತು.

ಎಲ್ಲ ಕಾಲಕ್ಕೂ ಇದ್ದೂ ಇಲ್ಲದಂತೆ ಯಾವುದೇ ಅಬ್ಬರ, ಪ್ರಚಾರಗಳ ಹಂಗಿಲ್ಲದೆ ಸದಭಿರುಚಿ ಮತ್ತು ವಿನಯದ ತುಂಬಿದ ಕೊಡವಾಗಿಯೇ ಬದುಕಿದ ಕೆ ಎಂ ಎಸ್ ನಮ್ಮೆಲ್ಲ ಚಟುವಟಿಕೆಗಳಿಗೆ ಪೂರಕವಾಗಿದ್ದರು. ಮಿತಭಾಷಿಯೂ ತಾಳ್ಮೆಯ ಮೂರ್ತಿಯೂ ಆಗಿದ್ದ ಇವರು ಜಾತ್ಯತೀತ ಚಿಂತನೆಯ ಆರೋಗ್ಯಕರ ಮನಸ್ಥಿತಿಯಲ್ಲೇ ಇರುತ್ತಿದ್ದುದರಿಂದ ನಮಗೆಲ್ಲ ಖುಷಿಯಾಗುತ್ತಿತ್ತು. ಆಗಾಗ್ಗೆ ಭೋಜನಕೂಟಗಳಲ್ಲಿ ಸಹ ಬೆರೆತು ಚರ್ಚಿಸುತ್ತಿದ್ದೆವು.

ಲಂಕೇಶರ ದಿಟ್ಟತನದ ಬದ್ಧತೆ, ಪ್ರತಿಯೊಂದನ್ನೂ ನಿರ್ದಾಕ್ಷಿಣ್ಯವಾಗಿ ಕಾಣುವ ತಾಜಾತನ ಮತ್ತು ಸಮಾಜದ ಬಗೆಗಿನ ಅಪರೂಪದ ಕಾಳಜಿಗಳು ನಮ್ಮನ್ನೆಲ್ಲ ಬೆರಗುಗೊಳಿಸುತ್ತಿದ್ದವು. ಬೇರೆ ಬೇರೆ ಹಿನ್ನೆಲೆಯ, ವಯೋಮಾನದ, ಸಾಮಾನ್ಯ ಮತ್ತು ಸರಳ ವ್ಯಕ್ತಿತ್ವದವರೊಡನೆ ಬಿಡುಬೀಸಾಗಿ ಬೆರೆತು ಮನಸಾರೆ ನಕ್ಕು ಹಗುರಾಗುತ್ತಿದ್ದ ಅವರು ಸುತ್ತಲಿನವರನ್ನು ಜಾಗರೂಕರಾಗಿರುವಂತೆ ಪ್ರಚೋದಿಸುತ್ತಿದ್ದರು. ಅವರ ‘ಮುಸ್ಸಂಜೆಯ ಕಥಾಪ್ರಸಂಗ’ ಕಾದಂಬರಿಯ ಮಿಷನ್ ಭರಮಪ್ಪ ಪಾತ್ರವು ವಾಸ್ತವವಾಗಿ ಲಂಕೇಶರ ಖಾಸಾ ಚಿಕ್ಕಪ್ಪನದೇ ಆಗಿತ್ತು. ಭರಮಪ್ಪ ಮೂಲತಃ ಹಾಲುಮತದವನಾಗಿದ್ದ ಪ್ರಸಂಗದ ಬೆನ್ನು ಹತ್ತಿದ ನಾನು, ಒಮ್ಮೆ ‘ಸರಿ, ಸರಿ. ಹಾಗಾದರೆ ನೀವು ಮಾಜಿ ಕುರುಬರೇ ಆದಿರಿ’ ಎಂದೆ. ‘ಹೌದ್ರಿ, ಈ ನೊಣಬ ಲಿಂಗಾಯತರು ವೀರಶೈವ ಜನಾಂಗದಲ್ಲಿನ ದಲಿತರ ಸ್ಥಿತಿಯಲ್ಲಿದ್ದಾರೆ’ ಎಂದು ನಕ್ಕರು. ಮರುಳಸಿದ್ದಪ್ಪ ಸಹ ಇದನ್ನೆಲ್ಲ ಚೆನ್ನಾಗಿ ಬಲ್ಲರು.

ನಮ್ಮ ಸುತ್ತಲ ಜಾತಿಪದ್ಧತಿಯ ಹಿನ್ನೆಲೆಯನ್ನು ವೈಜ್ಞಾನಿಕವಾಗಿ ಅರಿತವರು (ಅದರಲ್ಲೂ ಕರ್ನಾಟಕದ ಸಂದರ್ಭದಲ್ಲಿ ಬ್ರಾಹ್ಮಣ, ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳ ಸಂವೇದನಾಶೀಲರು) ಇಲ್ಲಿನ ದಲಿತರು, ತಬ್ಬಲಿ ಜಾತಿಗಳ ನಿಸ್ಸಹಾಯಕರ ಹಾಗೂ ಎಲ್ಲ ಮಹಿಳೆಯರ ಬಗ್ಗೆ ವಿಶೇಷ ಕಾಳಜಿಯಿಂದ ಹೃದಯಪೂರ್ವಕವಾಗಿ ಸದಾ ಸ್ಪಂದಿಸುತ್ತಿರಬೇಕೆನ್ನುವ ಅಲಿಖಿತ ನಿಲುವಿನಲ್ಲಿ ನಾವಿದ್ದೆವು. ಶಿವರುದ್ರಪ್ಪ, ಲಂಕೇಶ್, ಮರುಳಸಿದ್ದಪ್ಪ, ಕಿರಂ ಮತ್ತು ನಾನು ಈ ಬಗೆಯ ಅಕ್ಕರೆ ತುಂಬಿದ ಬಳಗವೆಂದು ನನ್ನ ಕಿರಿಯ ಮಿತ್ರರನೇಕರು ತೀರ ಸೂಕ್ಷ್ಮ ಸಂಗತಿಗಳ ವಿಶ್ಲೇಷಣೆಯ ನಡುವೆ ನನ್ನೊಡನೆ ಆತ್ಮೀಯವಾಗಿ ಆಗಾಗ ಚರ್ಚಿಸಿದ್ದಾರೆ.

ಆದರೆ, ಇಷ್ಟೆಲ್ಲ ಆದರ್ಶಗಳ ಹಿನ್ನೆಲೆಯ ಆರೋಗ್ಯಕರ ಚಿಂತನೆಯ ಬೆಳಕಿನಲ್ಲಿ ರೂಪುಗೊಂಡ ಜ್ಞಾನಭಾರತಿ ಕನ್ನಡ ಅಧ್ಯಯನ ಕೇಂದ್ರವು ಕಾಲಚಕ್ರದ ಉರುಳಿನಲ್ಲಿ ತೀರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತ.... ಕ್ರಮೇಣ ಅಭಿರುಚಿಹೀನ ಕುಬ್ಜರ ಖಾಸಗಿ ಆಸಕ್ತಿಯ ಕೊಳಕು ಹುನ್ನಾರಗಳಿಗನುಣವಾಗಿ ಹೌದಪ್ಪಗಳ ಬಾಲಬಡುಕತನಕ್ಕೆ ಮಾತ್ರ ಮಣೆ ಹಾಕುವ ನಗೆಪಾಟಲುಸ್ಥಿತಿಗೆ ತಲುಪಿದ ಬಗ್ಗೆ ಒಮ್ಮೆ ಲೇಖಕ ಅನಂತಮೂರ್ತಿ ಆಳವಾಗಿ ವಿಮರ್ಶಿಸುತ್ತ, ಸೂಕ್ಷ್ಮವಾಗಿಯೇ ಕನಿಕರಿಸಿದ್ದರು.

ಇದ್ದೂ ಇಲ್ಲದಂತೆ ಬದುಕಿ ಅಬ್ಬರ, ಆಡಂಬರ, ಗತ್ತು, ಬೂಟಾಟಿಕೆಗಳ ಹಂಗಿಲ್ಲದೆ ಸಮಾಧಾನಚಿತ್ತದಿಂದಲೇ ದಶಕಗಳಗಟ್ಟಲೆ ತಮ್ಮ ಸುತ್ತಲ ಆಪ್ತೇಷ್ಟರಿಗೆ ಮರುಳಸಿದ್ದಪ್ಪನವರು ಅಚ್ಚುಮೆಚ್ಚಿನ ಹಿರಿಯ ಮತ್ತು ಮಾದರಿಯ, ನಿಷ್ಕಲ್ಮಶ ಮನಸ್ಸಿನ ನಾಗರಿಕರಾಗಿರುವುದು ನಿಜಕ್ಕೂ ಆನಂದದ ಸಂಗತಿಯಾಗಿದೆ. ಈ ಬಗೆಯ ಸರಳ ವ್ಯಕ್ತಿತ್ವಗಳು ಸುತ್ತಲ ಸಾಂಸ್ಕೃತಿಕ ಮಹತ್ವದ ಹೆಮ್ಮೆಯ ಸಮಾಜಕ್ಕೆ ಅತ್ಯವಶ್ಯವೆಂಬುದನ್ನು ನಾವೆಲ್ಲ ಮನಗಾಣುವುದು ಸೂಕ್ತವಾಗಿದೆ.

Follow Us:
Download App:
  • android
  • ios