ಕನಸಿಗೊಂದು ಕಣ್ಣು ನನ್ನ ಕನಸುಗಳೇ ಹೀಗೆ...
ಕಳೆದ ಹದಿನಾರು ವರ್ಷಗಳಲ್ಲಿ ‘ಶೂದ್ರ’ ನಾನಾ ಪಾಠಗಳನ್ನು ಕಲಿಸಿದೆ. ಆ ಪಾಠಗಳು ಪ್ರಿಯವೂ ಹೌದು ಅಪ್ರಿಯವೂ ಹೌದು. ಆದರೆ ಗಾಂಧೀಜಿ ಅರ್ಥಮಾಡಿಸಿದಂತೆ ; ಮನುಷ್ಯನ ಸಣ್ಣತನಗಳ ನಡುವೆ ನುಗ್ಗುವಾಗ ಸಿಗುವ ಅನುಭವ ಅವನ ಒಳ್ಳೆಯತನಗಳಿಂದ ಅಲ್ಲ. ಇದರರ್ಥ ಎಲ್ಲರೂ ಸಿನಿಕರಾಗಿರಲಿ ಎಂದು ಆಶಿಸುತ್ತಿಲ್ಲ. -- ಶೂದ್ರ ಶ್ರೀನಿವಾಸ್ ಬರೆದ ಲೇಖನ ಇಲ್ಲಿದೆ.
- ಶೂದ್ರ ಶ್ರೀನಿವಾಸ್
ನನ್ನ ಕನಸುಗಳೇ ಹೀಗೆ ಎಂದು ಹೇಗೆ ಬರೆಯಲು ಪ್ರಾರಂಭಿಸಲಿ ಎಂದು ಕಳೆದ ನಾಲ್ಕೆ ದು ದಿನಗಳಿಂದ ತಲೆಕೆಡಿಸಿಕೊಂಡಿದ್ದೇನೆ. ಮನುಷ್ಯನ ಸಣ್ಣತನ ಅದರ ಸುತ್ತಲೂ ನಡೆಯುವ ಕ್ರಿಯೆಯು ಬಗ್ಗೆ ಯೋಚಿಸಿ ಶಬ್ದಗಳಲ್ಲಿ ಹಿಡಿದಿಡಲು ಆಗದೆ ನರಳಿದ್ದೇನೆ. ಆದರೂ ಬಹಳ ದಿನಗಳ ನಂತರ ಒಂದಷ್ಟು ಹುಚ್ಚುತನದಿಂದ ಬರೆಯುವ ಕ್ಷಣದಲ್ಲಿ ಬಂದದ್ದನ್ನೆಲ್ಲ ದಾಖಲು ಮಾಡುವ ಹಂಬಲದಿಂದ ಬರೆಯುತ್ತಿದ್ದೇನೆ.
ಕಳೆದ ಹದಿನಾರು ವರ್ಷಗಳಲ್ಲಿ ‘ಶೂದ್ರ’ ನಾನಾ ಪಾಠಗಳನ್ನು ಕಲಿಸಿದೆ. ಆ ಪಾಠಗಳು ಪ್ರಿಯವೂ ಹೌದು ಅಪ್ರಿಯವೂ ಹೌದು. ಆದರೆ ಗಾಂಧೀಜಿ ಅರ್ಥಮಾಡಿಸಿದಂತೆ; ಮನುಷ್ಯನ ಸಣ್ಣತನಗಳ ನಡುವೆ ನುಗ್ಗುವಾಗ ಸಿಗುವ ಅನುಭವ ಅವನ ಒಳ್ಳೆಯತನಗಳಿಂದ ಅಲ್ಲ. ಇದರರ್ಥ ಎಲ್ಲರೂ ಸಿನಿಕರಾಗಿರಲಿ ಎಂದು ಆಶಿಸುತ್ತಿಲ್ಲ. ನಾವು ಆಶಿಸಲಿ ಅಥವಾ ಆಶಿಸದಿರಲಿ ಅದರ ಗುಣಾತ್ಮಕತೆ ನಿಯತವಾಗಿಯೇ ಇರುತ್ತದೆ. ಸಾವು ಬದುಕಿನ ನಡುವೆ ಇರುವ ಮನಸ್ಸು ಘರ್ಷಿಸುವಂತೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಚಿಸಿದರೆ ‘ನಾನೂ’ ಸಿನಿಕನಿರಬಹುದು. ಹಾಗೆ ಆದಾಗಲೆಲ್ಲ ಒಂಟಿಯಾಗಿ ಕೂತು ಅತ್ತಿದ್ದೇನೆ. ಪಾಪ ಪ್ರಜ್ಞೆಯನ್ನು ನಿಜವಾಗಿಯೂ ಎದುರಿಸುವುದು ಕಷ್ಟ.. ಯಾಕೆಂದರೆ ಎಷ್ಟೋ ಬಾರಿ ನಮ್ಮ ಖುಷಿಗಾಗಿ ಸಿನಿಕರಾಗುವುದು ಜಾಸ್ತಿ, ಮೂಲಭೂತಗುಣದಿಂದಲ್ಲ. ಇಂಥ ಸಂದರ್ಭದಲ್ಲಿಯೇ ಬೇರೆಯವರನ್ನು ಛೇಡಿಸಿ ನಕ್ಕು ಆನಂದಪಟ್ಟಾಗ; ಅದರ ಪಕ್ಕದಲ್ಲಿಯೇ ದುಃಖ, ವ್ಯಥೆ ಮತ್ತು ವಿಷಾದ ಕಾದಿರುತ್ತದೆ ಎಂದು ಮಾನಸಿಕವಾಗಿ ಬೇರೂರಿರುವುದರಿಂದ. ಯಾಕೆಂದರೆ, ಚಿಕ್ಕಂದಿನಲ್ಲಿ ದೊಡ್ಡಪ್ಪ ‘ತುಂಬ ನಗಬೇಡೋ’ ಎಂದು ಹೇಳಿದ ಮಾತು ಈಗಲೂ ಹಚ್ಚಹಸಿರಾಗಿದೆ.
ನಮ್ಮೆಲ್ಲ ಸಿನಿಕತನಗಳು ಬರುವುದು ನಮ್ಮಲ್ಲಿ ಯ ದೌರ್ಬಲ್ಯತೆಯಿಂದ, ಎಲ್ಲವನ್ನು ‘ಗೆಲ್ಲಬಲ್ಲೆ’, ಎಲ್ಲರ ಹತ್ತಿರ ‘ಸಂವಾದ’ ಇಟ್ಟುಕೊಳ್ಳಬಲ್ಲೆ ಎಂಬ ದಾರ್ಢ್ಯತೆ ಬರುವುದು ನಮ್ಮ ಅಂತಃಶಕ್ತಿಯಿಂದ. ಅಂಥ ವ್ಯಕ್ತಿತ್ವದ ಪರಾಕಾಷ್ಠತೆ ನನಗೆ ಗೋಚರಿಸುವುದು ಗಾಂಧೀಜಿಯವರ ಬದುಕಿನಲ್ಲಿ. ಆದ್ದರಿಂದಲೇ ನಾನು ಸೋತಾಗಲೆಲ್ಲ ಗಾಂಧೀಜಿಯ ಮುಂದೆ ನಿಲ್ಲುತ್ತೇನೆ. ಯಾಕೆಂದರೆ, ನಮ್ಮಂಥ ನಾಸ್ತಿಕ ವ್ಯಕ್ತಿತ್ವಕ್ಕೆ ಗಾಂಧೀಜಿ ದೇವರಾಗಿರುತ್ತಾನೆ. ಈ ಅರ್ಥದಲ್ಲಿಯೇ ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೆ ನಮಗೊಬ್ಬ ಬೇಕು. ಆಣೆ-ಪ್ರಮಾಣಗಳು ಬಂದಿದ್ದು ಕೂಡ ತಾತ್ಕಾಲಿಕ ಅಸ್ತಿತ್ವವನ್ನು ಗಟ್ಟಿಮಾಡಿಕೊಳ್ಳಲು. ಇಲ್ಲದಿದ್ದರೆ ಮನುಷ್ಯ ಯಾವುದನ್ನು ಹಿಡಿದುಕೊಂಡು ನೇತಾಡಬೇಕು? ಅವನ ಬದುಕು ಹೊಟ್ಟೆ-ಬಟ್ಟೆ, ಮನೆ-ಮಠ ಮತ್ತು ಮೋಜುಗಳ ಚೌಕಟ್ಟಿನಲ್ಲಿಯೇ ಸುತ್ತಿರುವುದಿಲ್ಲ. ಅದನ್ನು ಮಾರಿಯೇ ಎಲ್ಲಾ ಸಂಬಂಧಗಳು ತೆಕ್ಕೆಗೊಂಡಿರುತ್ತವೆ. ಹಾಗಾದರೆ ನಾವು ಯಾರನ್ನು ಕೇಳಿ ಬದುಕಬೇಕು? ಯಾರನ್ನು ಮೆಚ್ಚಿಸಲು ಬದುಕಬೇಕು? ಈ ಎಲ್ಲ ಪ್ರಶ್ನೆಗಳ ನಡುವೆಯೂ ಒಂದು ಮೆಚ್ಚುವಂಥದ್ದು ಇರುತ್ತದೆ ಅಲ್ಲವೆ? ಅದೇ ಅಲ್ಲವೇ ನಮ್ಮನ್ನು ಪುಳಕಿತಗೊಳಿಸುವುದು?
ಎಂಬ ಆತ್ಮೀಯ ಪ್ರಶ್ನೆ ನನ್ನ ಮುಂದೆ ಸದಾ ಇದೆ. ಈ ಪ್ರಶ್ನೆ ಜೀವಂತವಾಗಿರುವುದು ನಾನು ಕಂಡುಕೊಂಡ ವ್ಯಕ್ತಿತ್ವಗಳಿಂದ. ನನಗೆ ಲೋಹಿಯಾ ಸಿಗದಿದ್ದರೆ ವಾಸ್ತವವಾಗಿ ಗಾಂಧೀಜಿ ಅರ್ಥವಾಗುತ್ತಿರಲಿಲ್ಲ. ಯಾಕೆಂದರೆ ಗಾಂಧೀಜಿಯವರನ್ನು ಗ್ರಹಿಸುವುದು ಹಾಗಲ್ಲ-ಹೀಗೆ ಎಂದು ತಿಳಿಸಿದವರು. ಈ ಪರಿಧಿಯಲ್ಲೇ ಯಾರನ್ನೇ ಆಗಲಿ ನಾನು ಓದುವುದು; ಅವರನ್ನು ಒಂದು ಬರವಣಿಗೆಯಲ್ಲಿ ಉಲ್ಲೇಖಿಸಲು ಅಥವಾ ಬರೆಯಲು ಅಲ್ಲ, ನಾನು ಬೆಳೆಯಬೇಕಾಗಿದೆ. ಅಷ್ಟರಮಟ್ಟಿಗೆ ನಾನು ಸ್ವಾರ್ಥಿ.
ಕೃತಕ ಬರಹಗಾರ; ಕಂಪ್ಯೂಟರ್ ಕೈ ಬರೆಯುತ್ತದೆ
ಎಷ್ಟೋ ವರ್ಷಗಳ ಹಿಂದೆ ಜೆ. ಕೃಷ್ಣಮೂರ್ತಿಯವರು ಲಾಲ್‌ಬಾಗಿನ ಶತಮಾನೋತ್ಸವ ಭವನದ ಕಿಕ್ಕಿರಿದ ಜನರ ನಡುವೆ ಭಾಷಣದಲ್ಲಿ ಒಂದು ಮಾತು ಹೇಳಿದರು: ಮನುಷ್ಯರ ಎಲ್ಲಾ ಸಣ್ಣತನಗಳ ಮಧ್ಯೆ ಬದುಕುವುದನ್ನು ಕಲಿಸು ಎಂದು. ಇಂಥ ಪ್ರಶ್ನೆಯನ್ನು ನಾವೆಲ್ಲ ಕೇಳಿಕೊಂಡಾಗ ಸಂವಾದ ಹುಟ್ಟುತ್ತದೆ. ಭಿನ್ನಾಭಿಪ್ರಾಯ ಎಂದಿಗೂ ಮನಸ್ತಾಪವಾಗಿ ಬೆಳೆಯುವುದಿಲ್ಲ, ಮನಸ್ಸು ಜಿಗುಟಾಗುವುದಿಲ್ಲ. ಯಾಕೆಂದರೆ ನಾವೆಲ್ಲ ಪರ್ಫೆಕ್ಟ್ ಎಂದು ತಿಳಿದಾಗಲೆಲ್ಲ ಸತ್ತಿರುತ್ತೇವೆ. ಈ ಪರ್ಫೆಕ್ಟನ್ನು ಮುಂದುವರೆಸುವುದೇ ಸಿನಿಕತನ ಅಂದುಕೊಂಡಿದ್ದೇನೆ.
ನನಗೆ ‘ಕನಸಿಗೊಂದು ಕಣ್ಣು’ ಕಾಲಂ ಯಾಕೆ ಬೇಕಾಯಿತು ಎಂಬುದನ್ನು ವಿವರಿಸುವುದು ಕಷ್ಟ. ಆದರೆ ಅದು ನನಗೆ ಬೇಕಾಗಿತ್ತು. ನನ್ನೆಲ್ಲ ಹುಚ್ಚು ಮನಸ್ಸನ್ನು ಒಂದು ಚೌಕಟ್ಟಿನಲ್ಲಿ ಹಿಡಿದಿಡಬೇಕಾಗಿತ್ತು. ಬದುಕು ಯಾರ ಸ್ವತ್ತೂ ಅಲ್ಲ. ಅವನ ಪಾಡಿಗೆ ಅವನು ಬದುಕಬೇಕು. ಆದರೆ ಎಲ್ಲರ ಬದುಕೂ ಸಜೆಸ್ಟಿವ್ ಆಗಬೇಕೆ ವಿನಹ ಆರ್ಡರ್ ಆಗಬಾರದು ಎಂಬುದೇ ನನ್ನ ಮೂಲಭೂತ ಧೋರಣೆ. ವ್ಯಕ್ತಿಗತ ಸಂಬಂಧದ ದೃಷ್ಟಿಯಿಂದ ಸ್ವಲ್ಪ ಹೆಚ್ಚಾಗಿ ಆತ್ಮರತಿ ಅನ್ನಿಸಿದರೂ ಇದನ್ನು ಗೌರವಿಸುತ್ತೇನೆ. ಆದರೆ ಇದೇ ಆತ್ಮರತಿ ಘೋಷಣೆಯಾದರೆ ಕೊಳಕಾಗಿರುತ್ತದೆ. ಕನ್ನಡಿಯಲ್ಲಿ ನೋಡಿಕೊಳ್ಳಲು ಸಾಧ್ಯವಾಗದಷ್ಟು. ನಮ್ಮನ್ನು ಅನುಸರಿಸುವ ನಾಯಿಯೂ ಸಹ ಆತ್ಮೀಯತೆಯನ್ನು ಬಯಸುತ್ತದೆ ವಿನಹ ಆಜ್ಞೆಯನ್ನಲ್ಲ. ಮೊನ್ನೆ ರಸ್ತೆಯಲ್ಲಿ ಒಂದು ದೃಶ್ಯವನ್ನು ಕಂಡೆ; ಮಗುವೊಂದು ಮಣ್ಣಲ್ಲಿ ಆಡುತ್ತಿತ್ತು. ಹುಚ್ಚೆ ಹೊಯ್ದು ಮಣ್ಣು ಕಲಸುತ್ತಿತ್ತು. ದಾರಿಹೋಕನೊಬ್ಬ, ‘ಥೂ ಕತ್ತೆ, ಬುದ್ಧಿಯಿಲ್ಲವಾ, ಹಾಕ್ತಿನಿ ನೋಡು’ ಎಂದು ಕೊನೆಯ ಶಬ್ದ ಮುಗಿಯುವ ಮುನ್ನವೇ ಆ ಮಗು ತಾನು ಕಲಸುತ್ತಿದ್ದ ಮಣ್ಣಿನಿಂದಲೇ ಅವನ ಮುಖಕ್ಕೆ ರಪ್ಪನೆ ರಾಚಿತ್ತು. ಆಗ ನಾನಂದುಕೊಂಡೆ; ಒಂದುವೇಳೆ ಆ ಮಗುವಿಗೆ ಆ ರೀತಿ ಹೇಳುವ ಬದಲು, ‘ನೋಡು ಮರಿ, ಆ ರೀತಿ ಆಡಬಾರದು’ ಎಂದು ತಲೆ ನೇವರಿಸಿ ಹೇಳಿದ್ದರೆ ಅದು ಕೈಹಿಡಿದು ಒಂದಷ್ಟು ದೂರ ಬಂದು ಟಾಟಾ.... ಹೇಳುತ್ತಿತ್ತು ಅನ್ನಿಸಿತು. ಇಲ್ಲಿ ನಮ್ಮನ್ನು ಅನುಸರಿಸುವ ನಾಯಿ ಬೇರೆ ಅಲ್ಲ ಮಗು ಬೇರೆ ಅಲ್ಲ. ಇದೆಲ್ಲ ಬರೆಯುವುದಕ್ಕೆ ‘ಕನಸಿಗೊಂದು ಕಣ್ಣು’ ಬೇಕಾಯಿತು. ಹಿಂದೆ ಕಾಲಂ ಇಲ್ಲದಿದ್ದಾಗ, ಶೂದ್ರದ ಪ್ರಾರಂಭದ ದಿನಗಳಲ್ಲಿ ಕೊರಮ, ಖದೀಮ, ಪಾಪಿ, ಪರದೇಶಿ ಮುಂತಾದ ಹೆಸರುಗಳಲ್ಲಿ ಬರೆಯುವಾಗ ನಾನೊಬ್ಬ ಪರಕೀಯ ಅನ್ನಿಸುತ್ತಿತ್ತು. ನೇರವಾಗಿ ಬರೆದಾಗಲೇ ನಿಜವಾಗಿಯೂ ಖುಷಿ ಇರುವುದು. ಇತ್ತೀಚಿನ ದಿನಗಳಲ್ಲಿ ಕಾವ್ಯನಾಮಗಳೆಲ್ಲ ನಾಪತ್ತೆಯಾಗುತ್ತಿರುವುದು ಈ ರೀತಿಯ ಕಂಡುಕೊಳ್ಳುವಿಕೆಗೆ ಇರಬಹುದು. ಕಾವ್ಯನಾಮದ ಜಾಗದಲ್ಲಿ ತಮ್ಮ ಹಳ್ಳಿಗಳ, ತಮ್ಮ ಮನೆತನಗಳ ಹೆಸರು ಸೇರಿಕೊಳ್ಳುತ್ತಿದೆ. ಇದಕ್ಕೆಲ್ಲ ಅವರವರದೇ ಆದ ಕನಸುಗಳಿರುತ್ತವೆ. ಕೊನೆಗೂ ಅದನ್ನು ಬಿಡಿಸಿ ಹೇಳಬೇಕಾದವನು ನಾನಲ್ಲ.
ಹೌದು ‘ಕನಸಿಗೊಂದು ಕಣ್ಣು’ ಮುಕ್ತವಾಗಿ ಬರೆಯುವುದನ್ನು ಕಲಿಸಿತು. ಅದೊಂದು ನನ್ನ ದಿನಚರಿಯಾಯಿತು. ಈ ದೃಷ್ಟಿಯಿಂದ ಕನಸಿಗೊಂದು ಕಣ್ಣು ಒಂದು ಕಾಲಂ ಅಲ್ಲ. ಅಂಕಣ ಬರಹ ಅಲ್ಲ. ಈ ಶೀರ್ಷಿಕೆಗಾಗಿ ತಲೆಕೆಡಿಸಿಕೊಂಡ ದಿನಗಳೇ ಜಾಸ್ತಿ. ಶೂದ್ರದ ಓದುಗರು ಅಭಿಮಾನದಿಂದ ಸ್ವೀಕರಿಸಿದಾಗ ಪುಳಕಿತನಾದೆ. ಈ ಪುಳಕಿತತೆಯಲ್ಲಿ ಅಲ್ಲಿ ಸಂಭವಿಸಿದ ದೋಷಗಳನ್ನು ತಿದ್ದಿಕೊಳ್ಳಲಾಗಲಿಲ್ಲ. ಹೀಗೆ ತಿದ್ದಿಕೊಳ್ಳದ್ದಕ್ಕೆ ಮತ್ತೊಂದು ಕಾರಣವೆಂದರೆ ಸಂಯಮದಿಂದ ಬರೆದವುಗಳಲ್ಲ. ಕಾಲದ ಅಭಾವದಿಂದ ಬರೆದವುಗಳು. ಒಮ್ಮೆಯೂ ನನ್ನ ಬರವಣಿಗೆಯನ್ನು ಹಿಂದಿರುಗಿ ಓದಿ ಕೊಂಡವನಲ್ಲ. ಯಾಕೆಂದರೆ ದೋಷಗಳ ಬಗ್ಗೆ ಸೆನ್ಸಿಟಿವ್ ಆಗುತ್ತೇನೆ ಎಂಬ ಗಾಬರಿ ಸದಾ ಇದ್ದುದರಿಂದ. ಬಹಳಷ್ಟು ಬಾರಿ ನಮ್ಮ ಸಣ್ಣಪುಟ್ಟ ದೋಷಗಳು ನಮ್ಮನ್ನು ಅರ್ಥಮಾಡಿಕೊಳ್ಳಲು ಗುಣಾತ್ಮಕವಾಗಿಯೇ ಇರುತ್ತದೆ.
ಇಷ್ಟೆಲ್ಲ ಬರೆಯುತ್ತಿರುವುದು ಒಂದು ಮುಖ್ಯ ಕಾರಣಕ್ಕಾಗಿ. ‘ಜಾಗೃತಿ ಸಾಹಿತ್ಯ ಸಮಾವೇಶ’ಕ್ಕಾಗಿ ತಲೆಕೆಡಿಸಿಕೊಂಡಾಗ ವಿಚಿತ್ರ ಅನುಭವಗಳು. ಶೂದ್ರದ ಈ ಹದಿನಾರು ವರ್ಷಗಳ ಚರಿತ್ರೆಯಲ್ಲಿ ಒಕ್ಕೂಟ, ಬೂಸಾ ಪ್ರಕರಣ, ತುರ್ತು ಪರಿಸ್ಥಿತಿ, ಸಮಕಾಲೀನ ವಿಚಾರ ವೇದಿಕೆ ಮತ್ತು ಬಂಡಾಯ ಚಳುವಳಿ, ಗೋಕಾಕ್ ಚಳವಳಿ ಕೆಲವು ಪಾಠಗಳನ್ನು ಕಲಿಸಿದವು. ಅಥವಾ ನೆನಪುಗಳನ್ನು ಬೆಳೆಸಿದವು. ‘ನಿಮ್ಮ ಧೋರಣೆ ನಮಗೆ ಇಷ್ಟವಾಗಲಿಲ್ಲ ಎಂದು ಹೇಳದೆ; ಶೂದ್ರವನ್ನು ಇನ್ನು ಮುಂದೆ ಕಳಿಸಬೇಡಿ’ ಎಂದು ಬರೆದಾಗ ಪೆಚ್ಚಾಗುತ್ತಿದ್ದೆ. ಈಗಲೂ ಪೆಚ್ಚಾಗುತ್ತೇನೆ. ಚರ್ಚೆಗೆ ಬರದೆ ಹಿಂದಿನ ಬಾಗಿಲಿನಿಂದ ಅಭಿಪ್ರಾಯಗಳಿಗೆ ಮನಸ್ತಾಪದ ಕುಮ್ಮಕ್ಕು ಕೊಡುವುದರಿಂದ. ಪ್ರತಿಯೊಂದು ಹೋರಾಟದ ಸಮಯದಲ್ಲೂ ಆರೋಗ್ಯಪೂರ್ಣವಾಗಿ ಪ್ರತಿಕ್ರಿಯಿಸದಿದ್ದಾಗ ಹಿಂಸೆಯಾಗುತ್ತದೆ. ಅದರಲ್ಲೂ ವ್ಯಕ್ತಿಗತವಾಗಿ ಅಥವಾ ಜಾತೀಯತೆಯ ದೃಷ್ಟಿಯಿಂದ ಸ್ವೀಕರಿಸಿದಾಗ ಭಯವಾಗುತ್ತದೆ. ಇಂದಿಗೂ ನಾವು ನಮ್ಮ ನಮ್ಮ ಜಾತಿಯವರ ಪರವಾಗಿ ಮಾತಾಡುವುದು ಅಪರಾಧ ಎಂದು ತಿಳಿಯುವುದಿಲ್ಲ. ಹೀಗಾದರೆ ನಾವು ಯಾವ ರೀತಿಯ ಜಾತ್ಯಾತೀತರು. ಯಾವುದೇ ಚೌಕಾಸಿಯ ಮೂಲಕ ಹಿರೇಮಠರನ್ನಾಗಲಿ, ಹಾ.ಮ. ನಾಯಕರನ್ನಾಗಲಿ ಸ್ವೀಕರಿಸಬೇಕಾಗಿಲ್ಲ. ಹಿರೇಮಠರವರು ಕೆ.ಎಸ್. ನರಸಿಂಹಾಸ್ವಾಮಿ ಮತ್ತು ಬಿ.ಸಿ. ರಾಮಚಂದ್ರಶರ್ಮರಿಗಿಂತ ಒಳ್ಳೆಯ ಕವಿ ಎಂದಾಗ ಗೇಲಿಯಾಗುತ್ತದೆಯೇ ವಿನಹ ಸಂವಾದವಾಗುವುದಿಲ್ಲ. ನಂತರ ‘ಕನಸಿಗೊಂದು ಕಣ್ಣು’ವಿಗೆ 1985ರ ‘ಸಂಕೀರ್ಣ’ ವಿಭಾಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಬಂದಿದ್ದಕ್ಕೆ ಅದನ್ನು ನಾಯಕರ ‘ಸಂಪ್ರತಿ’ಗೆ ಹೋಲಿಸಿ ಮಾತಾಡಿದಾಗ, ಹೇಳಿಕೆ ಕೊಟ್ಟಾಗ ಷಾಕ್ ಆಯಿತು. ಅದರ ಜೊತೆಗೆ ‘ಕನಸಿಗೊಂದು ಕಣ್ಣು’ ಕೃತಿಯಲ್ಲಿ ಏನಿದೆ? ಅಲ್ಲಿ ಇಲ್ಲಿ ಸಾರಾಯಿ ಕುಡಿದಿರುವುದು ಇದೆ ಎಂದು ಬರೆದ ಗೆಳೆಯರೂ ಇದ್ದಾರೆ. ಆದರೆ ನನಗೆ ಪ್ರಶಸ್ತಿ ಬರುವುದಕ್ಕೆ ಎಂದೂ ರಾಜಕೀಯ ಮಾಡಿದವನಲ್ಲ. ಅದರಲ್ಲೂ ಹತ್ತಾರು ಕೃತಿಗಳ ನಡುವೆ ಬೇರೆ ಬೇರೆ ಪ್ರಕಾರಗಳಲ್ಲಿ ಬಂದ ಪ್ರಶಸ್ತಿ ಮಾತ್ರ ಅದು. ಮತ್ತೊಂದು ಮುಖ್ಯ ವಿಷಯವೆಂದರೆ ಸಾರಾಯಿಯ ಬಗ್ಗೆ ಒಂದು ಮಾತು. ಸಾರಾಯಿಯ ಮೂಲಕ ಕಾಳಿಂಗ ರಾವ್ ರೀತಿಯ ಕಲಾವಿದರು ಪರಿಚಯವಾದರು. ಅದು ಒಂದು ಜೀವನಾನುಭವ ಮಾತ್ರ, ಅದೇ ಅಂತಿಮವಲ್ಲ. ನಮ್ಮ ಪಾಡಿಗೆ ನಾವು ಬದುಕುವುದು ಮುಖ್ಯ. ಯಾರಾರನ್ನೋ ಮೆಚ್ಚಿಸುವುದಕ್ಕೆ ನಮ್ಮ ಅನುಭವವನ್ನು ಮುಚ್ಚಿಟ್ಟು ನಾವ್ಯಾಕೆ ಬರೆಯಬೇಕು? ನಮ್ಮ ಸುತ್ತಲೂ ಇರುವ ನಾನಾ ವೈವಿಧ್ಯತೆಗಳನ್ನೆಲ್ಲ ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. ಒಬ್ಬ ಸಂಗೀತಗಾರನನ್ನು ಕಂಡಾಗ, ನಟನನ್ನು ಕಂಡಾಗ, ಆಟಗಾರನನ್ನು ಕಂಡಾಗ, ಉತ್ತಮ ರಾಜಕಾರಣಿಯನ್ನು ಕಂಡಾಗ ಅವರಲ್ಲಿ ನಮ್ಮನ್ನು ಗುರ್ತಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆಗ ಸಾಮಾನ್ಯ ಕುಡುಕ ನಮ್ಮ ಗೆಳೆಯನಾದರೆ ತಪ್ಪೇನು? ನಮ್ಮ ಮಧ್ಯಮ ವರ್ಗದ ಜನ ನಮ್ಮ ಸುತ್ತಲೂ ನಾನಾ ಲೋಕಗಳಿವೆ ಎಂಬುದನ್ನು ಪರಿಭಾವಿಸುವುದೇ ಇಲ್ಲ. ಅದೇ ಥಳಕು- ಬಳುಕಿನ ಗೆಳೆಯರು. ಎಂದಿಗೂ ಮತ್ತೊಬ್ಬನನ್ನು ಒಳಗೆ ಬಿಟ್ಟುಕೊಳ್ಳುವುದೇ ಇಲ್ಲ. ಹೊಸಬರು ಹತ್ತಿರ ಬಂದಾಗಲೆಲ್ಲ ನಮ್ಮ ಮಧ್ಯಮ ವರ್ಗದ ಆಸ್ತಿಯನ್ನು ದೋಚಿಕೊಂಡು ಹೋಗುವರೆಂಬ ಭೀತಿಯಿಂದ ನರಳುತ್ತಿರುತ್ತೇವೆ. ಆದ್ದರಿಂದಲೇ ಶ್ರೇಷ್ಠವಾದದ್ದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವುದಿಲ್ಲ. ಅದರ ವಿರುದ್ಧ ಗುಂಪು ಕಟ್ಟುತ್ತಾರೆ. ತಮ್ಮ ಕುತ್ತಿಗೆಗೆ ತಮ್ಮ ದುಡ್ಡಿನಿಂದಲೇ ಹಾರ ತರಿಸಿ ಸನ್ಮಾನ ಮಾಡಿಸಿಕೊಳ್ಳುತ್ತಾರೆ.
ಹೌದು ನನ್ನ ಕನಸುಗಳೇ ಹೀಗೆ. ನಮ್ಮ ನಾಜೂಕಿನ ಮನುಷ್ಯರಿಗಿಂತ ಹುಚ್ಚರೇ ಪ್ರಿಯ. ಅವರಲ್ಲಿ ಜೀವನವಿರುತ್ತದೆ. ಪ್ರತಿಕ್ಷಣವೂ ನಮ್ಮ ಮುಂದೆ ಸಂಘರ್ಷವನ್ನಿಟ್ಟಿರುತ್ತಾರೆ. ನಮ್ಮ ಬದುಕು ಮತ್ತು ಒರವಣಿಗೆ ಹುಟ್ಟುವುದು ಇಲ್ಲಿ. ಹಾಗೆಯೇ ಯಾರೋ ಪುಢಾರಿಗಳು ಜಾತಿವಾದಿಗಳಾದಾಗ ಹುಟ್ಟುವುದು ಪ್ರತಿಭಟನೆ. ಆದರೆ ನಮ್ಮ ನಡುವಿನ ಗೆಳೆಯರೇ ಜಾತಿವಾದಿಗಳಾದಾಗ ಹುಟ್ಟುವುದು ನೋವು ಮತ್ತು ವಿಷಾದ ಮಾತ್ರ. ‘ಜಾಗೃತ ಸಾಹಿತ್ಯ ಸಮಾವೇಶ’ಕ್ಕೆ ಕೆಲಸ ಮಾಡಿದಂತೆಲ್ಲ ಕೆಲವರು ನಮ್ಮನ್ನು ಅಡಿಗರು ಕೊಂಡುಕೊಂಡಿದ್ದಾರೆ. ಲಂಕೇಶ್‌ರವರು ಕೊಂಡುಕೊಂಡಿದ್ದಾರೆ, ಅನಂತಮೂರ್ತಿಯವರು ಕೊಂಡುಕೊಂಡಿದ್ದಾರೆ ಎಂದು ಮೂದಲಿಸಿದ್ದಾರೆ. ಆದರೆ ಒಂದು ನೆಮ್ಮದಿಯ ಸಂಗತಿಯೆಂದರೆ: ಯಾವನೋ ಅಬಕಾರಿ ಕಂಟ್ರಾಕ್ಟರ್ ಮತ್ತು ಪಿ.ಡಬ್ಲ್ಯೂ.ಡಿ. ಕಂಟ್ರಾಕ್ಟರ್ ಕೊಂಡುಕೊಂಡಿದ್ದಾರೆ ಎಂದು ಹೇಳಿಲ್ಲವಲ್ಲ. ಮತ್ತೊಬ್ಬ ಗೆಳೆಯರು ಆಜ್ಞೆ ಮಾಡಿದರು: ನೀವು ಸಾಹಿತ್ಯ ಪರಿಷತ್ತಿನ ಸದಸ್ಯರಲ್ಲ ನಿಮಗೆ ಅದರ ವಿರುದ್ಧ ಮಾತಾಡುವುದಕ್ಕೆ ಏನು ಅಧಿಕಾರವಿದೆ ಎಂದು. ಇಂಥ ಹಾರಿಕೆ ಮಾತುಗಳು ಯಾರನ್ನೂ ಸಂವಾದಕ್ಕೆ ಬರಮಾಡಿಕೊಳ್ಳುವುದಿಲ್ಲ. ಮನಸ್ಸಿನ ಸುತ್ತ ಕತ್ತಲು ಕವಿಸುತ್ತಾರೆ.