Asianet Suvarna News Asianet Suvarna News

ಬಾಲ್ಯದ ಕಾಲುದಾರಿ: ಸಂಧ್ಯಾಕಾಲದಲ್ಲಿ ನಿಂತು ಸಾಗಿದ ಬಂದ ಬದುಕಿನ ಹಾದಿ

ನಗುಮುಖದ ಅಜಾತಶತ್ರು ಮಲ್ಲೇಪುರಂನ ವೆಂಕಟೇಶ್ ಸಂಧ್ಯಾಕಾಲದಲ್ಲಿ ನಿಂತು ಸಾಗಿದ ಬಂದ ಬದುಕಿನ ಹಾದಿಯತ್ತ ಕಣ್ಣು ಹಾಯಿಸಿದ್ದಾರೆ. ಅವರ ಆತ್ಮಕಥನ ದಿಟದ ದೀವಟಿಗೆಯಲ್ಲಿ ಬಾಲ್ಯದ ಹಳ್ಳಿ ಬದುಕಿನ ಏಳುಬೀಳುಗಳಿಂದ ಹಿಡಿದು ಬದುಕು ಹೊಸ ದಾರಿಯತ್ತ ಹೊರಳಿದ ಘಳಿಗೆಗಳ ವರೆಗೆ ಅನೇಕ ಸಂಗತಿಗಳಿವೆ. ಯಾವ ವೈಭವೀಕರಣ ಇಲ್ಲದೆ ಸವೆಸಿದ ದಿನಮಾನಗಳ ಬಗ್ಗೆ ನಿರ್ಲಿಪ್ತತೆಯಿಂದ ಧ್ಯಾನಿಸಿ ಬರೆದಿದ್ದಾರೆ. ಅವರ ಬಾಲ್ಯದ ದಿನಗಳ ಇಣುಕು ಇಲ್ಲಿದೆ. 

Article about childhood memories by Mallepuram Venkatesh Vin
Author
First Published Nov 26, 2023, 12:57 PM IST

ನನ್ನ ಬಾಲ್ಯದ ಕೆಲವು ಘಟನೆಗಳು ಮತ್ತು ಮಾಧ್ಯಮಿಕ ಹಾಗೂ ಪ್ರೌಢಶಾಲೆಯ ವರ್ಷಗಳಲ್ಲಿ ನಡೆದ ಕೆಲವು ಪ್ರಸಂಗಗಳನ್ನು ಹೇಳಬೇಕು. ಇವು ಕೆಲವೊಮ್ಮೆ ವಿನೋದವಾಗಿ ಇರಬಹುದು; ಮಗದೊಮ್ಮೆ ಭವಿಷ್ಯದ ಬೆಳಕಿಂಡಿಗೆ ಸಾಧನವಾಗಿಯೂ ಇರಬಹುದು. ಅಂಥ ಕೆಲವೊಂದು ಪ್ರಸಂಗಗಳು ಹೀಗಿವೆ:

ಹೇಲ್ಗುಂಡಿಗೆ ಬಿದ್ದದ್ದು
ನಾನು ಹೆಬ್ಬಗೋಡಿಯಲ್ಲಿ ಮೊದಲನೆಯ ತರಗತಿಗೆ ಸೇರಿದ್ದೆ. ಬೇಸಗೆ ರಜೆಗಾಗಿ ನಮ್ಮ ಅಮ್ಮ ನೆಲಮಂಗಲದ ಊರಿಗೆ ಕರೆತಂದಿದ್ದಳು. ಒಂದು ದಿನ ಸಂಜೆ ಸುಮಾರಿಗೆ ಊಟ ಮಾಡಿ ಮಲಗಿದ್ದವನು ಮಲವಿಸರ್ಜನೆಗೆ ಮನೆಗೆ ಹೊಂದಿಕೊಂಡಂತೆ ಇದ್ದ ತಿಪ್ಪೆಗುಂಡಿಯ ಬಳಿ ಹೋದೆ. ಸಣ್ಣವರಾದ ನಾವು ಕಲ್ಲಿನ ಅಂಚಿನಲ್ಲಿ ಕುಳಿತು ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದುದು ವಾಡಿಕೆ. ದೊಡ್ಡವರು ಗೋಡೆಯಿಂದ ಮರೆಮಾಡಿದ್ದ ಹೇಲ್ಗುಂಡಿಗೆ ಹೋಗುತ್ತಿದ್ದರು. ಆ ದಿನ ಯಾವ ಕಾರಣದಿಂದಲೊ ದೊಡ್ಡವರು ಹೋಗುತ್ತಿದ್ದ ಹೇಲ್ಗುಂಡಿಗೆ ಹೋಗಿ ಚಪ್ಪಡಿಗಳನ್ನು ಹಾಸಿದ್ದ ಕಲ್ಲು ಚಪ್ಪಡಿಯ ಮೇಲೆ ಎರಡು ಕಾಲುಗಳನ್ನು ಅಡ್ಡಡ್ಡ ಇಟ್ಟು ಕುಳಿತೆ. ಮಲವಿಸರ್ಜನೆ ಮಾಡಲು ಹಾಕಿದ್ದ ಚಪ್ಪಡಿಗಳು ಅಗಲವಾಗಿದ್ದವು. ಕಾಲೊಂದು ಆಯತಪ್ಪಿತು. ಕೂಡಲೆ ಗುಂಡಿಗೆ ಬಿದ್ದೆ. ಆಗ ಕಾಲು ಮಲದ ಹೊಂಡಕ್ಕೆ ಸಿಕ್ಕಿಕೊಂಡಿತು. ನಾನು ಜೋರಾಗಿ ಅಳಲು ಪ್ರಾರಂಭಿಸಿದೆ. ಮಲದ ವಾಸನೆ, ಸೊಳ್ಳೆಗಳ ಹಾರಾಟದಿಂದ ಕಣ್ಣಲ್ಲಿ ನೀರು ಬಂತು. ನಮ್ಮ ಅಮ್ಮ ಇಷ್ಟೊತ್ತಾದರೂ ಬರಲಿಲ್ಲವಲ್ಲ ಎಂದು ಹುಡುಕಿಕೊಂಡು ಬಂದಳು.

ಅಳು ಬರುತ್ತಿದ್ದ ಕಡೆ ಬಂದು ನೋಡಿದವಳೇ ಗಾಬರಿಗೊಂಡಳು. ನನ್ನ ಚಿಕ್ಕಣ್ಣ ಗಂಗಾಧರಣ್ಣನನ್ನು ಕೂಗಿ ಕರೆದಳು. ನಮ್ಮಣ್ಣ ಬಂದ. ಅವನು ಎರಡು ತೋಳುಗಳನ್ನು ಹಿಡಿದು ಹೇಲ್ಗುಂಡಿಯಿಂದ ಮೇಲಕ್ಕೆತ್ತಿದ. ನಮ್ಮ ಅಮ್ಮ ಬಕೆಟಿನಲ್ಲಿ ನೀರು ತಂದು ಮೈಗೆ ನೀರು ಹೊಯ್ದಳು. ನಾನು ಮೈಮೇಲಿದ್ದ ಮಲವನ್ನು ತೊಳೆದುಕೊಂಡೆ. ಆನಂತರ ಮನೆಯ ಮುಂದಿದ್ದ ಬಾವಿಯ ಬಳಿ ನನ್ನನ್ನು ಕರೆತಂದು ಬಾವಿಯಿಂದ ನೀರನ್ನು ಸೇದಿ ಎರಡು-ಮೂರು ಕೊಡ ತಲೆಯ ಮೇಲೆ ಹೊಯ್ದಳು. ಮೈಸೋಪನ್ನು ಹಚ್ಚಿ ಕೈಕಾಲು ಹೊಟ್ಟೆ ತೊಳೆದು ಮರಳಿ ತಲೆಯ ಮೇಲೆ ನೀರನ್ನು ಸುರಿದಳು. ಆನಂತರ ಹಿತ್ತಾಳೆ ಬಕೆಟ್‌ಗೆ ಗೋಮಯ ಗಂಜಲ, ಹಾಲು, ಜೇನುತುಪ್ಪ ಬೆರೆಸಿ ಚೊಂಬಿನಿಂದ ನೀರನ್ನು ಎರೆದಳು. ಆನಂತರ ಮೈ ಒರೆಸಿ ಹಣೆಗೆ ವಿಭೂತಿ ಹಚ್ಚಿದಳು. ಮನೆಯೊಳಕ್ಕೆ ಕರೆದುಕೊಂಡು ಹೋಗಿ ಮನೆದೇವರಿಗೆ ನನ್ನಿಂದ ದೀಪವನ್ನು ಬೆಳಗಿಸಿದಳು. ಆನಂತರ ನಮ್ಮ ಅಪ್ಪನಿಗೂ ಅಕ್ಕಂದಿರಿಗೂ ವಿಷಯ ತಿಳಿದು ಮೊದಲು ನಕ್ಕರು. ಅನಂತರ ಎಲ್ಲರೂ ನನಗೆ ಸಾಂತ್ವನ ಹೇಳಿದರು. ಆದರೆ, ಒಂದೆರಡು ದಿನ ನನ್ನ ಮನಸ್ಸಿನಿಂದ ಈ ಪ್ರಸಂಗ ಮರೆಯಾಗಲಿಲ್ಲ. ನಾನು ಕಾಲಕ್ರಮೇಣ ಆ ಸಂಗತಿಯನ್ನು ಮರೆತೆ!

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ಸ್ವಯಂ ಉದ್ಯೋಗ
ನಾನು ಹೈಸ್ಕೂಲಿಗೆ ಹೋಗುವ ವೇಳೆಗೆ ಮನೆಯಲ್ಲಿ ಆರ್ಥಿಕ ತಾಪತ್ರಯ ಪ್ರಾರಂಭವಾಗಿತ್ತು. ನಮ್ಮಪ್ಪನಿಗೆ ಆಗ ನಲವತ್ತು ರೂಪಾಯಿ ಪೆನ್‌ಶನ್ ಬರುತ್ತಿತ್ತು. ಕೂಡಿಟ್ಟಿದ್ದ ಹಣ ಬಾವಿ ತೆಗೆಸಲು, ಜಮೀನು ಮಟ್ಟ ಮಾಡಲು ಖರ್ಚಾಗಿದ್ದವು. 1964ರಲ್ಲಿ ಬರಗಾಲ ಬಂದು ಬದುಕು ಮೂರಾಬಟ್ಟೆಯಾಗಿತ್ತು! ಹಾಗಾಗಿ, ನಮ್ಮ ಮನೆಯಲ್ಲೂ ಆರ್ಥಿಕ ಸಂಕಷ್ಟವಿತ್ತು. ಒಂದೆರಡು ವರ್ಷ ಬೇಸಗೆಯಲ್ಲಿ ನಾನು ಸಗಣಿ ಆಯ್ದು ತಂದು ತಿಪ್ಪೆ ಗೊಬ್ಬರ ಮಾಡಿದೆ. ಅದರ ಜೊತೆಗೆ ಹೊಂಗೆಬೀಜ, ಹಿಪ್ಪೆಬೀಜ ಮತ್ತು ಹುಣಸೆಬೀಜಗಳನ್ನು ಆಯ್ದುಕೊಂಡು ಬಂದು ಅದರ ಹೊರಭಾಗದ ಸಿಪ್ಪೆ ತೆಗೆದು ಬೀಜಗಳನ್ನು ಒಣಗಿಸುತ್ತಿದ್ದೆ. ಆಮೇಲೆ ಬೀಜಗಳನ್ನು ಗೋಣಿಚೀಲದಲ್ಲಿ ತುಂಬಿ ಇಡುತ್ತಿದ್ದೆ. ಬಿಸಿಲು ಬಂದಾಗ ಕಲ್ಲಿನ ಮೇಲೆ ಹರಡುತ್ತಿದ್ದೆ. ಬೇಸಗೆ ಇನ್ನೇನು ಮುಗಿಯುತ್ತದೆ ಎಂದಾಗ ಅದನ್ನು ಕೊಳ್ಳುತ್ತಿದ್ದ ಇಸ್ಲಾಂಪುರದ ಸಾಬರಿಗೆ ಮಾರುತ್ತಿದ್ದೆ. ಹೀಗೆ ಬಂದ ಹಣವನ್ನು ನಮ್ಮ ಅಮ್ಮನ ಕೈಗೆ ಕೊಟ್ಟು ಇರಿಸುತ್ತಿದ್ದೆ. ಹೀಗೆ ನಾನು ಸಂಗ್ರಹಿಸಿದ ತಿಪ್ಪೆ ಗೊಬ್ಬರವನ್ನು ಮಾರಿ ಅದರಿಂದ ಬಂದ ಹಣವನ್ನೂ ನಮ್ಮಮ್ಮನಿಗೇ ಕೊಡುತ್ತಿದ್ದೆ. ಶಾಲೆ ಪ್ರಾರಂಭ ಆಗುವ ಮೊದಲೆ ನನ್ನ ದುಡ್ಡಿಂದಲೇ ಪುಸ್ತಕ-ಪೆನ್ನು-ಪೆನ್ಸಿಲ್ಲು, ಜ್ಯಾಮಿಟ್ರಿ ಬಾಕ್ಸ್ ಮುಂತಾದವುಗಳನ್ನು ಕೊಂಡು ರಟ್ಟು ಹಾಕಿ ಇಟ್ಟುಕೊಳ್ಳುತ್ತಿದ್ದೆ. ನಮ್ಮಮ್ಮ ಹಾಗೂ ಅಕ್ಕ ಇದಕ್ಕಾಗಿ ಶಭಾಷ್‌ಗಿರಿ ಕೊಟ್ಟದ್ದುಂಟು!

ಸಿನಿಮಾ ಹುಚ್ಚು
ನಾನು ಹೈಸ್ಕೂಲಿಗೆ ಬಂದಾಗ ಅದೇನೊ ಸಿನಿಮಾ ನೋಡುವ ಹುಚ್ಚು ಬೆಳೆಯಿತು. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳನ್ನು ನೆಲಮಂಗಲದ ಬಸ್‌ಸ್ಟಾಂಡ್‌ ಪಕ್ಕದಲ್ಲಿದ್ದ ದೊಡ್ಡ ಬಯಲಿನಲ್ಲಿ ‘ಟೂರಿಂಗ್ ಟಾಕೀಸ್’ನಲ್ಲಿ ಹಾಕುತ್ತಿದ್ದರು. ಟೂರಿಂಗ್ ಟಾಕೀಸ್ ಮ್ಯಾನೇಜರ್ ಮುನಿಸಿಪಾಲ್ಟಿಯಿಂದ ಅನುಮತಿ ಪಡೆದು, ಮೂರು ತಿಂಗಳು ಲೈಸೆನ್ಸ್ ತೆಗೆದುಕೊಳ್ಳುತ್ತಿದ್ದರು. ಪ್ರತಿನಿತ್ಯ ಎರಡು ಬಾರಿ ಚಿತ್ರ ಪ್ರದರ್ಶನ ಇರುತ್ತಿತ್ತು. ನಾನು ಸ್ಕೂಲ್ ಮುಗಿಸಿಕೊಂಡು ಮನೆಗೆ ಹೋಗುವಾಗ ಟೂರಿಂಗ್ ಟಾಕೀಸ್ ಬಳಿ ಬಂದು ಅಲ್ಲಿ ಬಿದ್ದಿರುತ್ತಿದ್ದ ಸಿನಿಮಾ ರೀಲುಗಳನ್ನು ಕೈಯಲ್ಲಿ ಹಿಡಿದು ನೋಡುತ್ತಿದ್ದೆ. ಗೆಳೆಯರ ಜೊತೆ ಅವುಗಳ ಬಗೆಗೆ ಚರ್ಚೆ ನಡೆಸಿದ್ದುಂಟು!

ಸಿನಿಮಾಕ್ಕೆ ಹೋಗಬೇಕೆಂಬ ಅಪೇಕ್ಷೆ ಉಂಟಾಗುತ್ತಿತ್ತು. ಆದರೆ, ಕೈಯಲ್ಲಿ ಕಾಸು ಇರುತ್ತಿರಲಿಲ್ಲ. ಒಮ್ಮೊಮ್ಮೆ ಏಳು ಗಂಟೆಗೆ ಬಂದು ಸುತ್ತಲೂ ಕಟ್ಟಿರುತ್ತಿದ್ದ ತಟಿಕೆ ತೂರಿ ಒಳಕ್ಕೆ ಹೋಗಲು ಸಂದುಗಳಿವೆಯೇನೊ ಎಂದು ನೋಡುತ್ತಿದ್ದೆ. ಸಿನಿಮಾದ ಮಧ್ಯಂತರದವರೆಗೂ ಜನರ ಸುಳಿವು ಇದ್ದೇ ಇರುತ್ತಿತ್ತು. ಆನಂತರ ಸ್ವಲ್ಪ ಕಡಿಮೆಯಾಗುತ್ತಿತ್ತು. ಆಗ ನಾನು ತಡಿಕೆ ಹಾರಿ ಒಳಹೋಗುವ ಸಾಹಸ ಮಾಡಿದ್ದುಂಟು. ಮತ್ತೂ ಕೆಲವೊಮ್ಮೆ ಹರಿದ ಟಿಕೆಟ್‌ಗಳನ್ನು ಸಂಗ್ರಹಿಸಿ, ಒಂದಕ್ಕೊಂದು ಸೂಕ್ಷ್ಮವಾಗಿ ಅಂಟಿನಿಂದ ಟಿಕೆಟ್‌ಗಳನ್ನು ಜೋಡಿಸಿ ಸರದಿಯಲ್ಲಿ ಹೋಗಿ-ಗುಂಪಿನಲ್ಲಿ ಗೋವಿಂದ ಹೇಳಿದ್ದುಂಟು. ಕೆಲವೊಮ್ಮೆ ಸಿನಿಮಾ ಗೇಟ್‌ಕೀಪರ್‌ಗೆ ಗೊತ್ತಾಗಿ, ಹಿಡಿಯುವ ಪ್ರಯತ್ನ ಮಾಡಿದಾಗ ತಪ್ಪಿಸಿಕೊಂಡು ಹೋದದ್ದುಂಟು.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ನಾನು ಮನೆಯ ವಪ್ಪಾರದಲ್ಲಿ ಹಾಸಿಗೆ ಹಾಸಿ ಮಲಗಿಕೊಳ್ಳುತ್ತಿದ್ದೆ. ಒಂದು ರಾತ್ರಿ ಸಿನಿಮಾ ನೋಡಬೇಕೆಂಬ ಒತ್ತಡ ಉಂಟಾಯಿತು. ದಿಂಬನ್ನು ಉದ್ದುದ್ದ ಇಟ್ಟು ಅದರ ಮೇಲೆ ಕಂಬಳಿ ಹೊದಿಸಿ ಹೋಗಿದ್ದೆ. ಆಗ ನನ್ನ ಕೈಯಲ್ಲಿ ನಾಲ್ಕಾಣೆ ಕಾಸಿತ್ತು. ನಾನು ಜಬರದಸ್ತಾಗಿ ಟಿಕೆಟ್ ಕೊಂಡು ಸಿನಿಮಾ ನೋಡಿ-ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಮನೆಗೆ ಬಂದೆ. ಮನೆಯ ಮುಂದೆ ಝೀರೋ ಬಲ್ಬು ಉರಿಯುತ್ತಿತ್ತು. ನಮ್ಮಪ್ಪ ಹೊರಗಡೆ ಬೆತ್ತದ ಕುರ್ಚಿಯಲ್ಲಿ ಕುಳಿತಿದ್ದ. ನಾನು ಮನೆಯ ಹಿಂದಿನ ಕಾಂಪೌಂಡ್ ಹಾರಿ ಬಂದು ಹಾಸುಗೆಯಲ್ಲಿ ಬಿದ್ದುಕೊಂಡೆ. ಆದರೆ, ನಮ್ಮ ಮನೆಯ ನಾಯಿ ನನ್ನ ಬಳಿ ಬಂದು ಕುಂಯ್ ಗುಡಲು ಆರಂಭಿಸಿತು. ಕೂತಿದ್ದ ನಮ್ಮಪ್ಪನಿಗೆ ಅನುಮಾನ ಬಂತು. ಅವರು ನನ್ನ ಬಳಿ ಬಂದವರೇ ಕೈಯಲ್ಲಿದ್ದ ಬೆತ್ತದ ಬಿದಿರಿನಿಂದ ಔಡುಕಟ್ಟಿ ಬಾರಿಸಿದರು. ನಾನು ಬಾಯಿ ಬಾಯಿ ಬಡಿದುಕೊಂಡು ಮನೆಯ ಸುತ್ತ ಓಡಾಡಿದೆ. ನಮ್ಮ ಅಮ್ಮನಿಗೆ ಪರಿಸ್ಥಿತಿ ತಿಳಿಯಿತು. ಅಪ್ಪನ ಉಗ್ರಕೋಪ ನಮ್ಮಮ್ಮನಿಗೆ ತಿಳಿದದ್ದೇ. ನನ್ನ ರಕ್ಷಣೆಗೆ ನಮ್ಮಣ್ಣಂದಿರು ಯಾರೂ ಬರಲಿಲ್ಲ. ಕೊನೆಗೆ ನಾನು ನಮ್ಮ ಅಮ್ಮನ ಸೆರಗಿನಲ್ಲಿ ತೂರಿಕೊಂಡೆ! ಅಪ್ಪ ಔಡುಕಚ್ಚಿ ಬೈಯುತ್ತ ಒಳಕ್ಕೆ ಹೋದರು. ಆಮೇಲೆ ನನ್ನಮ್ಮ ಬಾಸುಂಡೆ ಬಂದಕಡೆ ಎಣ್ಣೆ ಹಚ್ಚಿದಳು. ಅವಳು ನನ್ನನ್ನು ಬೈಯುತ್ತಾ ಕಣ್ಣೀರು ಸುರಿಸಿದ್ದನ್ನು ಜೀವನವಿಡೀ ಮರೆಯಲಾರೆ. ನಮ್ಮ ಅಪ್ಪನ ಬಳಿ ಏಟು ತಿಂದದ್ದು ಅದೇ ಕೊನೆ!

ಕಳ್ಳತನ
ನಾನು ಏಳನೆಯ ತರಗತಿಯಲ್ಲಿದ್ದಾಗ ನಮ್ಮ ಅಜ್ಜಿಯ ಪ್ರೀತಿಯ ಮೊಮ್ಮಗನಾಗಿದ್ದೆ. ಆಕೆ ಧಡೂತಿ ಹೆಂಗಸು. ಸುಮಾರು ತೊಂಬತ್ತು ಕೆಜಿ ತೂಗುತ್ತಿದ್ದ ಮುದುಕಿ. ಆಕೆಗೆ ಪ್ರತಿನಿತ್ಯ ಹೆಂಡ ಕುಡಿಯುವ ಅಭ್ಯಾಸ. ಕೆಲವೊಮ್ಮೆ ಕನಿಷ್ಟ ವಾರಕ್ಕೆ ಒಂದೆರಡು ಬಾರಿಯಾದರೂ ಹೆಂಡ ಕುಡಿಯದೆ ಸಮಾಧಾನ ಇರುತ್ತಿರಲಿಲ್ಲ! ನಮ್ಮ ಅಪ್ಪ ಕೆಲಸದಿಂದ ಮನೆಗೆ ಬಂದಾಗ, ನಮ್ಮ ಅಜ್ಜಿಗೆ ಹೆಂಡಕ್ಕೂ, ಎಲೆಯಡಿಕೆಗೂ ಕಾಸು ಕೊಡುತ್ತಿದ್ದ. ಆದರೆ, ನಮ್ಮ ಅಪ್ಪ ಕೊಡುವ ಕಾಸು ಎಲೆಯಡಿಕೆಗೆ ಸಾಕಾಗುತ್ತಿರಲಿಲ್ಲ. ಆದ್ದರಿಂದ ರಾತ್ರಿ ಹೊತ್ತು ಹಗೇವಿನಿಂದ ದವಸ-ಧಾನ್ಯಗಳನ್ನು ಕದಿಯಲು ನನ್ನನ್ನು ಪ್ರಚೋದಿಸುತ್ತಿದ್ದಳು. ಮಧ್ಯರಾತ್ರಿ ದನಗಳನ್ನು ಕಟ್ಟಿರುತ್ತಿದ್ದ ಮನೆಯಲ್ಲಿ ರಾಗಿ ತುಂಬಿದ ಹಗೇವು ಇರುತ್ತಿತ್ತು. ನಾನು ಹಗೇವಿಗೆ ಇಳಿದು ಗೋಣಿಚೀಲದಲ್ಲಿ ರಾಶಿ ತುಂಬಿ ಮನೆಯ ಹಿಂದೆ ಅವುಚಿ ಇಟ್ಟಿರುತ್ತಿದ್ದೆ. ಆನಂತರ ನಮ್ಮಜ್ಜಿ ಅದನ್ನು ಮಾರುತ್ತಿದ್ದಳು. ಅದರಿಂದ ಬಂದ ಕಾಸನ್ನು ಹೆಂಡ ಕುಡಿಯಲು ಬಳಸುತ್ತಿದ್ದಳು. ಒಮ್ಮೊಮ್ಮೆ ನನ್ನನ್ನು ಊರಿನ ಹೊರಭಾಗದಲ್ಲಿದ್ದ ಹೆಂಡದ ಅಂಗಡಿಗೆ ಕರೆದುಕೊಂಡು ಹೋಗುತ್ತಿದ್ದಳು. ಅಲ್ಲಿ ನನಗೂ ಹೆಂಡದ ರುಚಿ ತೋರಿಸಿ ಹುರಿದ ಬಾಡಿನಿಂದ ಮಾಡಿದ ಚಾಕ್ನವನ್ನು ಎಲೆಗೆ ಹಾಕಿಕೊಂಡು ನಂಜಿಕೊಳ್ಳಲು ನಮ್ಮಜ್ಜಿ ಕೊಡುತ್ತಿದ್ದಳು. ಕಾಲಕ್ರಮೇಣ ಈ ವಿಷಯ ಬಯಲಾಯಿತು ಎನ್ನಿ. ಆಮೇಲೆ ದನ ಕಟ್ಟುವ ಕೊಠಡಿಗಳಿಗೆ ಬೀಗಮುದ್ರೆ ಬಿತ್ತು.

ಸಿನಿಮಾ ಸೇರುವ ಹುಚ್ಚು
ನಾನು ಎಸ್ ಎಸ್ ಎಲ್ ಸಿಯಲ್ಲಿ ಅನುತ್ತೀರ್ಣನಾಗಿದ್ದೆ. ನಮ್ಮ ಅಪ್ಪ ನನ್ನನ್ನು ವ್ಯವಸಾಯ ಮಾಡಲು ಹಾಕಿಕೊಂಡರು. ಬೆಳಿಗ್ಗೆ ಐದು ಗಂಟೆಗೆ ಶುರುವಾದರೆ, ಸಂಜೆ ಏಳರವರೆಗೆ ಬಿಡುವಿಲ್ಲದೆ ದುಡಿಸುತ್ತಿದ್ದರು. ನನಗೆ ಸಿನಿಮಾ ಸೇರಬೇಕೆಂಬ ಹುಚ್ಚು ಮೊದಲೆ ಬೆಳೆದಿತ್ತು. ನಾನು ಆಗತಾನೆ ಬೆಂಗಳೂರಿನಲ್ಲಿ ಆರಂಭವಾಗಿದ್ದ ‘ಆದರ್ಶ ಫಿಲಂ ಇನ್‌ಸ್ಟಿಟ್ಯೂಟಿ’ಗೆ ಪತ್ರ ಬರೆದು ಅರ್ಜಿಯನ್ನು ತರಿಸಿಕೊಂಡಿದ್ದೆ. ನಾನು ಅರ್ಜಿಯನ್ನು ಭರ್ತಿಮಾಡಿ ಕಳಿಸಬೇಕಾಗಿತ್ತು. ನಾನು ಇದಕ್ಕಾಗಿ ದೊಣ್ಣೆ ವರಸೆ, ಕುಸ್ತಿ ಮುಂತಾದ ದೈಹಿಕ ಪಟುತ್ವಕ್ಕೆ ಸಾಧನವಾದ ವಿದ್ಯೆಗಳಲ್ಲಿ ಪರಿಣತನಾಗಲು ಶ್ರಮ ವಹಿಸುತ್ತಿದ್ದೆ. ಅದಕ್ಕಾಗಿ ಗೆಳೆಯರ ಗುಂಪಿತ್ತು. ನಮ್ಮ ಹೊಲದ ಮರಳೋಣಿಯಲ್ಲಿ ನಾವು ಅಭ್ಯಾಸ ಮಾಡುತ್ತಿದ್ದೆವು. ನಾನು ದೊಣ್ಣೆ ವರಸೆಯಲ್ಲಿ ಸಾಕಷ್ಟು ಪ್ರಭುತ್ವಗಳಿಸಿದ್ದೆ. ನಾನು ಕಳಿಸಿದ ಅರ್ಜಿ ಸ್ವೀಕೃತವಾಗಿ ಫೀಸು ಮತ್ತು ಉಳಿದುಕೊಳ್ಳುವ ವ್ಯವಸ್ಥೆಗಾಗಿ ಇಂತಿಷ್ಟು ಹಣ ಕಟ್ಟಬೇಕೆಂಬ ಸೂಚನಾ ಪತ್ರ ಬಂತು. ಈ ವಿಷಯ ನಮ್ಮ ಅಮ್ಮನಿಗೆ ಗೊತ್ತಾಯಿತು. ಅವಳು ಒಂದು ದಿನ ಸಂಜೆ ನನ್ನ ಕೈಹಿಡಿದುಕೊಂಡು ‘ನೀನು ಚೆನ್ನಾಗಿ ಓದು. ಎಲ್ಲರಂತಿರು. ಇದೆಲ್ಲಾ ನಮಗಲ್ಲ’ ಎಂದು ಕಣ್ಣೀರುಗರೆದು ಅಲವತ್ತುಕೊಂಡಳು. ನಾನು ಅವಳ ಕಣ್ಣೀರಿಗೆ ಕರಗಿಹೋದೆ ಎಂಬುದು ಸುಳ್ಳಲ್ಲ! ಅನಂತರ ಫೇಲ್ ಆದ ವಿಷಯಗಳನ್ನು ಕಟ್ಟಿಕೊಂಡು ಅಭ್ಯಾಸಕ್ಕೆ ತೊಡಗಿದೆ.

ಬೆಂಗಳೂರು ಕಂಡಿದ್ದು
ಹೈಸ್ಕೂಲಿನಲ್ಲಿದ್ದಾಗ ಒಂದು ದಿನ ನನ್ನ ಗೆಳೆಯರಿಗೆ ಸೋರೆಕಾಯಿ, ರಾಗಿತೆನೆ ಇವುಗಳನ್ನು ಯಾರಿಗೂ ಗೊತ್ತಾಗದಂತೆ ಕೊಟ್ಟೆ. ಆದರೆ, ಇದು ನಮ್ಮ ದೊಡ್ಡಪ್ಪನಿಗೆ ಹೇಗೋ ತಿಳಿಯಿತು. ಅವನು ನಮ್ಮಪ್ಪನಿಗೆ ತಿಳಿಸಿದ. ಅದೇನಾಗಿತ್ತೊ ನಮ್ಮಪ್ಪ ರುದ್ರಾವತಾರ ತಾಳಿದ. ಇದನ್ನು ನಮ್ಮ ಅಕ್ಕ ತಿಳಿಸಿದಳು. ಇನ್ನು ನಮ್ಮಪ್ಪನ ಬೆತ್ತದ ಏಟು ತಿನ್ನಬೇಕಲ್ಲಾ ಎಂದು ಊರಿನ ನರಸಿಂಹದೇವರ ಗುಡಿಯಲ್ಲಿ ಕತ್ತಲಾಗುವವರೆಗೂ ಅವಿತುಕೊಂಡಿದ್ದೆ. ಹೃದಯದ ಬಡಿತ ಒಂದೇ ಸಮನೆ ಏರತೊಡಗಿತು. ಆಗ ಬೆಂಗಳೂರಿನಲ್ಲಿದ್ದ ದೊಡ್ಡಕ್ಕನ ನೆನಪಾಯಿತು. ಪ್ರತಿ ರಾತ್ರಿ ಹತ್ತುಗಂಟೆ ಸುಮಾರಿಗೆ ತರಕಾರಿ, ದವಸ-ಧಾನ್ಯಗಳನ್ನು ತುಂಬಿದ್ದ ಎತ್ತಿನ ಬಂಡಿಗಳು ಹೋಗುತ್ತಿದ್ದುದ್ದು ನನಗೆ ತಿಳಿದಿತ್ತು. ನಾನು ಬೆಂಗಳೂರಿಗೆ ಹೋಗುವ ಮುಖ್ಯರಸ್ತೆಗೆ ಬಂದು ನಿಂತೆ. ಒಂದೆರಡು ಗಾಡಿಗಳು ಬಂದುವು. ಗಾಡಿಯ ಕೆಳಗೆ ಸೀಮೆಎಣ್ಣೆ ತುಂಬಿದ ಲ್ಯಾಂಟಿನ್‌ಗಳು ಬೆಳಕನ್ನು ರಾಚುತ್ತಿದ್ದವು. ನಾನು ಗಾಡಿಯ ಹಿಂದೆ ನಡೆಯಲಾರಂಭಿಸಿದೆ. ಗಾಡಿ ಹೊಡೆಯುತ್ತಿದ್ದವನಿಗೆ ನಾನು ಹಿಂದೆ ಹಿಂದೆ ಬರುತ್ತಿದ್ದದ್ದು ತಿಳಿಯಿತು. ನಾನು ಬೆಂಗಳೂರಿನ ಅಕ್ಕನ ಮನೆಗೆ ಹೋಗುತ್ತಿರುವೆನೆಂದು ತಿಳಿಸಿದೆ. ಅವನು ಗಾಡಿಯಲ್ಲಿ ಕೂರಿಸಿಕೊಂಡು ಬೆಂಗಳೂರಿನ ಕಲಾಸಿಪಾಳ್ಯದ ಬಳಿ ನನ್ನನ್ನು ಬಿಟ್ಟ. ನಾನು ಅಲ್ಲಿಯೇ ಇದ್ದ ಆ ಬೀದಿನಲ್ಲಿಯಲ್ಲಿ ಮುಖ ತೊಳೆದು ಅಶೋಕಪಿಲ್ಲರ್ ಗುರುತು ಕೇಳುತ್ತ ನಮ್ಮಕ್ಕನ ಮನೆಗೆ ಬಂದೆ. ಅವಳಿಗೆ ಆಶ್ಚರ್ಯವಾಯಿತು. ಆದರೆ, ನಮ್ಮಕ್ಕ ತಮ್ಮ ಬಂದ ಎಂದು ಸಂಭ್ರಮಿಸಿದಳು. ಅವಳು ಬಿಸಿಬಿಸಿ ಮುದ್ದೆ-ಮಾಂಸದ ಸಾರನ್ನು ಹಾಕಿಕೊಟ್ಟಳು. ನಾನು ತಿಂದು ಮಲಗಿದೆ! ನಾನು ನಿಜ ವಿಷಯವನ್ನು ಅಕ್ಕನಿಗೆ ತಿಳಿಸಲಿಲ್ಲ. ಊರಿನಲ್ಲಿ ನಾನು ಹೊರಟ ಮರುದಿನ ಎಲ್ಲೆಲ್ಲು ಹುಡುಕಿದರೂ ಸಿಗಲಿಲ್ಲ. ನನ್ನ ಅಮ್ಮ ಗೊಳೋ ಎಂದು ಅತ್ತು ಕರೆದಳಂತೆ. ನನ್ನ ಅಣ್ಣ ಬೆಂಗಳೂರಿನ ಅಕ್ಕನ ಮನೆಗೆ ಬಂದು ನನ್ನನ್ನು ಕಂಡು ನಿಟ್ಟುಸಿರುಬಿಟ್ಟ! ಅಕ್ಕನಿಗೆ ವಿಷಯ ತಿಳಿಸಿ, ಮರಳಿ ಅಣ್ಣನ ಆಶ್ರಯದಲ್ಲಿ ಮನೆಗೆ ಬಂದೆಯೆನ್ನಿ!

***

ಎಂಟು ವರ್ಷದಿಂದ ಹದಿನೆಂಟರ ತನಕ ಇಂಥ ಹಲವು ಘಟನೆಗಳು ನನ್ನ ಬದುಕಿನಲ್ಲಿ ನಡೆದುವು. ನಾನು ಪ್ರೌಢಶಾಲೆಯಲ್ಲಿ ಇದ್ದಾಗ ಜೀವನದ ಗುರಿಯೇನು ಎಂಬುದೇ ತಿಳಿದಿರಲಿಲ್ಲ. ಆದರೆ, ಹನ್ನೊಂದನೆಯ ತರಗತಿಯಲ್ಲಿ ಇದ್ದಾಗ, ನಾನು ಮೇಷ್ಟ್ರು ಆಗುವುದೇ ನಿಶ್ಚಿತವೆಂದು ತಿಳಿದುಕೊಂಡೆ. ಆ ದಾರಿಯೇ ನನ್ನ ಅಭ್ಯುದಯಕ್ಕೆ ಕಾರಣವೆಂದು ಮನವರಿಕೆ ಆಯಿತು. ಗುರು-ದೈವಗಳ ಕಾರುಣ್ಯ ಇತ್ತೆನ್ನಿ!

Follow Us:
Download App:
  • android
  • ios