ಮಧುಸೂದನ ಹೆಗಡೆ

ಮಳೆ, ಮೋಡ, ಮಂಜಿನಾಟ. ದಟ್ಟಕಾಡಿನಲ್ಲಿ ನಡಿಗೆ, ಜಾರುವ ದಾರಿ, ಮೈಗೇರುವ ಜಿಗಣೆ, ಪೊದೆಯಿಂದ ಛಂಗನೆ ನೆಗೆದು ಓಡುವ ಮೊಲ, ಮರದ ಮೇಲೆ ಕೆಂಜಳಿಲು, ಧುತ್ತನೆ ಎದುರಾಗುವ ಬೋಳುಗುಡ್ಡ, ಕತ್ತಿ ಅಲುಗಿನಂಥ ಬಂಡೆ.. ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗ ಚಾರಣದಲ್ಲಿ ಇನ್ನೂ ಏನೇನೋ ಇದೆ. ಸುರಿವ ಮಳೆಗೆ ಜೈ ಅಂದು ನಡೆದುಬಿಡಿ.

ನನಗ್ಯಾಕೋ ಈ ಟ್ರಕಿಂಗ್‌ ಎನ್ನುವ ಆಂಗ್ಲ ಪದವೇ ಹಿಡಿಸಲ್ಲ. ನಾನು ಚಾರಣ ಎನ್ನುವ ಕನ್ನಡ ಪದವನ್ನೇ ಇಷ್ಟಪಡುತ್ತೇನೆ. ಅದನ್ನೇ ಬಳಸುತ್ತೇನೆ. ಜೂನ್‌ ತಿಂಗಳು ಆವರಿಸಿಕೊಂಡಂತೆ ನಿಸರ್ಗವೂ ಮೈದಳೆಯುತ್ತದೆ. ಹಸಿರನ್ನು ಹೊದ್ದುಕೊಳ್ಳುವ ಬೆಟ್ಟಗಳನ್ನು ಕಣ್ಣು ತುಂಬಿಕೊಳ್ಳುವುದೇ ಮಹದಾನಂದ. ಮಲೆನಾಡಿನಲ್ಲಿ ಹುಟ್ಟಿಬೆಳೆದ ನನಗೆ ಈ ಬೆಟ್ಟ-ಗುಡ್ಡ, ಪ್ರಾಣಿ-ಪಕ್ಷಿಗಳು ಹೊಸದೇನಲ್ಲ. ಮಹಾನಗರದ ಅನಿವಾರ್ಯ ವಾಸದ ನಂತರ ಒಂದಿಷ್ಟುರಜಾದಿನ ಬುಟ್ಟಿಗೆ ಬಿದ್ದರೆ ರೌಂಡ್ಸ್‌ ಹಾಕಿಬರುವ ಖಯಾಲಿ ಇದೆ.

ನಿಸರ್ಗಪ್ರೇಮ ಮೊದಲ ಆಯ್ಕೆ: ‘ ಈ ಬಾರಿಯ ನಮ್ಮ ಪ್ರಯಾಣ ಹೊರಟಿದ್ದು ಚಿಕ್ಕಮಗಳೂರು ಜಿಲ್ಲೆಯ ಬಲ್ಲಾಳರಾಯನ ದುರ್ಗದ ಕಡೆಗೆ. ಮೊದಲೆ ಹೇಳಿಬಿಡುತ್ತೇನೆ, ಈ ಚಾರಣ ಎನ್ನುವುದು ಎಂಜಾಯ್‌ಮೆಂಟ್‌ ಅಂಥ ಮಾತ್ರ ತಲೆಯಲ್ಲಿ ಇಟ್ಟುಕೊಳ್ಳಬಾರದು. ಒಂದಿಷ್ಟು ಸವಾಲುಗಳನ್ನು ಎದುರಿಸಲು ಮನಸ್ಸು ಸನ್ನದ್ಧವಾಗಿರಬೇಕು. ಜಿಗಣೆಗಳ ಕಾಟ, ರಭಸದ ಮಳೆ, ಜಾರುವ ದಾರಿ, ಕಾಡು ಪ್ರಾಣಿಗಳು ಎದುರಾದರೆ ಏನು ಮಾಡಬೇಕು, ಯಾವ ಆಹಾರ ತೆಗೆದುಕೊಂಡು ಹೋಗಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನಿಸರ್ಗದಲ್ಲಿ ಮಾನವಜನ್ಯ ವಸ್ತುಗಳನ್ನು ಅದರಲ್ಲಿಯೂ ಪ್ಲಾಸ್ಟಿಕ್‌ ಎಂಬ ಪಿಶಾಚಿಯನ್ನು ಎಸೆಯಬಾರದು ಎಂಬುದು ಮೊದಲು ನಮ್ಮ ತಲೆಯಲ್ಲಿರಬೇಕು.

ನಮ್ಗಿಂತ ಮೊದಲೇ ಸಾಯೋ ಈ ಸ್ಥಳವನ್ನ ಈಗಲೇ ನೋಡೋದು ಒಳ್ಳೇದು..

ನಮ್ಮದು 18 ಜನರ ತಂಡ:  ಎಲ್ಲರೂ ನೆಂಟರಿಷ್ಟರೇ-ಸಂಬಂಧಿಕರೆ. ಹಾಸನ ಮಾರ್ಗವಾಗಿ ತೆರಳುವ ನಮಗೆ ಪ್ರಕೃತಿ ನಿಧಾನವಾಗಿ ತೆರೆದುಕೊಳ್ಳುತ್ತಾ ಬರಮಾಡಿಕೊಳ್ಳುತ್ತದೆ. ರಾತ್ರಿ ಬೆಂಗಳೂರನ್ನು ತೊರೆದರೆ ಬೆಳಗಿನ ಜಾವ ಕೊಟ್ಟಿಗೆಹಾರ ತಲುಪಿ ಅಲ್ಲಿ ಬಿಸಿ ಚಾ- ನೀರು ದೋಸೆ ಸವಿಯಬಹುದು. ಬಲ್ಲಾಳರಾನದುರ್ಗದ ಸಮೀಪದಲ್ಲಿರುವ ಹೋಂ ಸ್ಟೇ ಮೊದಲೇ ಆನ್‌ ಲೈನ್‌ ನಲ್ಲಿ ಬುಕ್‌ ಮಾಡಿಕೊಂಡಿದ್ದರೆ ಸೀದಾ ತೆರಳಿ ಒಂದಿಷ್ಟುನಿದ್ರೆ ಮಾಡಿ ಬೆಟ್ಟಏರಲು ಅಣಿಯಾಗಬಹುದು.

ಸುಂದರ ತಾಣ: ನಾಲ್ಕಾರು ಕಿಮೀ ಏರಲು ದೇಹ ಮತ್ತು ಮನಸ್ಸು ಸಜ್ಜಾಗಿರಬೇಕು. ಕೊಟ್ಟಿಗೆಹಾರ ಮತ್ತು ಕಳಸದ ನಡುವೆ ಸುಂದರ ತಾಣ ತಲೆಯೆತ್ತಿ ನಿಮ್ಮನ್ನು ಒಳಕರೆದುಕೊಳ್ಳುತ್ತದೆ. ಹೆಜ್ಜೆ ಹಾಕುತ್ತ ರಮಣೀಯತೆ ಅನುಭವಿಸಲು ಸಾಧ್ಯ. 8-10 ಜನರ ತಂಡ ತೆರಳುವುದು ಉತ್ತಮ. ಮೋಡಗಳು ಒಮ್ಮೊಮ್ಮೆ ಕಣ್ಣಿಗೆ ಕಟ್ಟಿನಿಮ್ಮ ದಾರಿಯನ್ನು ಮಸುಕಾಗಿಸಬಹುದು.

ಕಡಿಮೆ ಅಂತರ ಕಾಯ್ದುಕೊಂಡರೆ ಒಳಿತು: ಕಾಡಿನ ಹಾದಿಯನ್ನು ಸವೆಸಿದ ನಂತರ ಹಸಿರಿನ ಹೊದಿಕೆ ಹೊದ್ದ ಬೋಳು ಬೆಟ್ಟ. ಬದುಕಿನ ಎಲ್ಲ ಜಂಜಾಟಗಳಿಗೆ ಇಲ್ಲಿಯೆ ಮುಕ್ತಿ ಎಂಬಂತೆ ಭಾಸವಾದರೆ ಅಚ್ಚರಿ ಏನಿಲ್ಲ. ಅಲ್ಲಲ್ಲಿ ಪೋಟೋ ಶೂಟ್‌ಗಳು ನಡೆಯುತ್ತಲೇ ಇರುತ್ತವೆ ಬಿಡಿ. ಹೊಯ್ಸಳ ರಾಜ ಒಂದನೆಯ ವೀರ ಬಲ್ಲಾಳ ಕಟ್ಟಿಸಿದ ಕೋಟೆ ಈ ಪರ್ವತ ಶ್ರೇಣಿಗೆ ಹೆಸರು ತಂದುಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆಯಿಂದಲೂ ಚಾರಣ ಮಾರ್ಗವಿದೆ. ಕೊಟ್ಟಿಗೆಹಾರ-ಕಳಸದ ಮಧ್ಯದ ಸುಂಕಸಾಲೆಯಿಂದ ನಾವು ಬೆಟ್ಟಏರಿದ್ದು.

ವೀವ್‌ ಪಾಯಿಂಟ್ಸ್‌: ಮೂರು ವೀವ್‌ ಪಾಯಿಂಟ್ಸ್‌ ನಮಗೆ ಲಭ್ಯ. ಮೋಡಗಳು ಕಡಿಮೆ ಇದ್ದರೆ ಅದು ಸಾಧ್ಯ. ನಮಗೆ ಕಾಣ ಸಿಕ್ಕಿದ್ದು ಎರಡೇ ವೀವ್‌ ಪಾಯಿಂಟ್‌. ಮೋಡಗಳು ನಮಗೆ ಇನ್ನೊಂದು ದೃಶ್ಯ ವೈಭವ ಸವಿಯಲು ಆಸ್ಪದ ಮಾಡಿಕೊಡಲಿಲ್ಲ. ಕಡಿದಾದ ಬೆಟ್ಟದ ಸಾಲು ಒಂದು ಕಡೆ ಇರುವುದರಿಂದ, ‘ಎಚ್ಚರಿಕೆ..ಡೀಮ್ಡ್ ಪ್ರದೇಶ’ ಎಂಬ ಹಣೆಪಟ್ಟಿಯೂ ಇರುವುದರಿಂದ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಹೆಜ್ಜೆ ಹಾಕುವುದು ಒಳ್ಳೆಯದು.

ರೈನ್ ರೈಡ್; ಮಳೆ ಹಾದಿಯ ಜಾಡು ಹಿಡಿದು...

ಮಳೆ ಅನುಭವಿಸಿ: ಬೆಳಗ್ಗೆ ಬೆಟ್ಟಏರ ಹೊರಟವರಿಗೆ ಎದುರಾಗಿದ್ದು ಜಿಟಿ-ಜಿಟಿ ಮಳೆ. ನಾವು ಮಳೆಗೆ ಹಿಡಿಶಾಪ ಹಾಕಲೇ ಇಲ್ಲ.. ಮಳೆಯನ್ನು ಸಂಭ್ರಮಿಸಿದೆವು.. ಆಸ್ವಾದಿಸಿದೆವು. ಏರುತ್ತಾ ಮಧ್ಯದಲ್ಲಿ ಒಂದಿಷ್ಟುದಟ್ಟಅರಣ್ಯ ಪ್ರದೇಶ.. ಇಲ್ಲಿಯೇ ಜಿಗಣೆಗಳು ಕಾಲಿಗಂಟುವುದು. ಎಚ್ಚರಿಕೆಯ ಹೆಜ್ಜೆ ಹಾಕಲೇಬೇಕು. ಇದಾಗಿ ಇನ್ನೂ ಮೇಲಕ್ಕೆ ಏರಿದಾಗ ನಿಸರ್ಗದ ಮುಂದೆ ನಾವೆಷ್ಟು ಕುಬ್ಜ ಎನ್ನುವ ವಾಕ್ಯದ ಅರ್ಥವಾಗುತ್ತದೆ.

ಎರಡು ಗಂಟೆಗಳ ಕಾಲ ಬೆಟ್ಟವನ್ನು ಸುತ್ತಾಡಬಹುದು. ಮೊಲ, ಕೆಂದಳಿಲು, ಉಡ ಇತ್ಯಾದಿ ಸಣ್ಣಪುಟ್ಟಪ್ರಾಣಿಗಳು, ಹಕ್ಕಿಗಳು ಕಣ್ಣಿಗೆ ಬೀಳುತ್ತವೆ. ಕುರುಚಲು ಗಿಡಗಳು ಜಾಸ್ತಿ ಇರುವುದರಿಂದ ವಿವಿಧ ಜಾತಿಯ ಹಾವುಗಳು ಹೇರಳವಾಗಿವೆ. ಬೇಸಿಗೆಯಲ್ಲಾದರೆ ಸೂರ್ಯಾಸ್ತ ಸವಿಯಬಹುದು. ಚಾರ್ಮಾಡಿ ಬೆಟ್ಟಗಳ ಸಾಲು ನಿಮ್ಮ ಕಾಲಬುಡದಲ್ಲಿ ಇರುತ್ತದೆ. ಒಂದು ದಿನವನ್ನು ನಿಸರ್ಗದ ಮಡಿಲಲ್ಲಿ ಕಳೆಯಲು ಬಲ್ಲಾಳರಾಯನದುರ್ಗ ಹೇಳಿ ಮಾಡಿಸಿದ ಜಾಗ.

ಒಂಚೂರು ಮಾಹಿತಿ: ಚಿಕ್ಕಮಗಳೂರಿನ ಕೊಟ್ಟಿಗೆಹಾರಕ್ಕೆ ಬೆಂಗಳೂರು, ಮಂಗಳೂರು ಮೊದಲಾದೆಡೆಗಳಿಂದ ಬಸ್‌ಗಳಿವೆ. ಕೊಟ್ಟಿಗೆ ಹಾರದಿಂದ ಕಳಸಕ್ಕೆ ಹೋಗುವ ಮಾರ್ಗದಲ್ಲಿ ಸುಂಕಸಾಲೆ ಎಂಬ ಊರು ಸಿಗುತ್ತೆ. ಇದು ಚಾರಣದ ಸ್ಟಾರ್ಟಿಂಗ್‌ ಪಾಯಿಂಟ್‌.