ನಿಮ್ಮ ಮಗು ಊಟ ಇಷ್ಟ ಪಡಬೇಕಂದ್ರೆ ಹೀಗ್ ಮಾಡಿ!
ಪುಟ್ಟ ಮಕ್ಕಳಿರುವ ಮನೆಗಳಲ್ಲಿ ಊಟದ ಸಮಯ ಬಂದರೆ ಅಳು, ಜಗಳ, ಕೋಪ, ಗಲಾಟೆ, ತಿಂದಿದ್ದೆಲ್ಲ ವಾಂತಿ ಮಾಡುವ ಮಕ್ಕಳು... ಇಂಥ ದೃಶ್ಯಗಳು ಕಾಮನ್. ಕೊಟ್ಟಿದ್ದು ಬೇಡ, ಕೇಳೋದು ಕೊಡಬಾರದಂಥದ್ದೇ ಎಂಬುದು ಪೋಷಕರ ಅಳಲು. ಈ ಮಕ್ಕಳು ಆಹಾರವನ್ನು ಪ್ರೀತಿಸೋ ಹಾಗೆ ಮಾಡೋಕೆ ದಾರಿಗಳೇ ಇಲ್ವಾ?
ಅಯ್ಯೋ ಊಟದ ಟೈಂ ಬಂತಂದ್ರೆ ತಲೆನೋವು ಶುರುವಾಗತ್ತೆ. ನಮ್ಮ ಮಗುಗೆ ತಿನಿಸೋಕೆ ಎರಡು ಗಂಟೆನಾದ್ರೂ ಬೇಕು... ಮತ್ತೆಲ್ಲ ಓಕೆ, ತಿನ್ನೋದೊಂದು ಕೇಳ್ಬೇಡ ಅಂತಾನೆ.. ಹಾಗೂ ಹೀಗೂ ಒದ್ದಾಡಿ ತಿನ್ನಿಸೋಕೆ ಗೊಂಬೆಗಳನ್ನು ಹಿಡಿದುಕೊಂಡು ಕುಣಿಯೋದ್ರಿಂದ ಹಿಡಿದು ಕಾರ್ಟೂನ್ ತೋರಿಸೋವರೆಗೆ ಸರ್ಕಸ್ ಮಾಡ್ಬೇಕು. ಅಷ್ಟಾದ್ರೂ ಇಷ್ಟಪಟ್ಟು ಏನೂ ತಿನ್ನೋದೇ ಇಲ್ಲ, ಕಷ್ಟ ಪಟ್ಟು ತಿಂತಾನೆ... ಇಂಥ ಗೋಳು ಮಕ್ಕಳಿರುವ ಪ್ರತೀ ನಾಲ್ಕರಲ್ಲಿ ಎರಡು ಮನೆಯಲ್ಲಿ ಕೇಳಿಬರುತ್ತಲೇ ಇರುತ್ತೆ.
ಮಗುವಿನ ಊಟದಲ್ಲಿ ಈ 5 ಅಂಶ ಮಿಸ್ ಆಗದಿರಲಿ!
ಮಕ್ಕಳ ತಜ್ಞರೇನೋ ದಿನಕ್ಕೆ ನಾಲ್ಕೈದು ಬಾರಿ ತರಕಾರಿಯನ್ನೊಳಗೊಂಡ ಪೋಷಕಾಂಶಯುಕ್ತ ಆಹಾರ ಕೊಡಿ ಎಂದು ಸಲೀಸಾಗಿ ಹೇಳ್ತಾರೆ. ಕನಿಷ್ಠ ಪಕ್ಷ ಒಂದು ಹೊತ್ತಾದರೂ ಅಷ್ಟು ಪೋಷಕಾಂಶ ತುಂಬಿಸೋಣ ಎಂದರೆ ಸಾಧ್ಯವಾಗುತ್ತಿಲ್ಲ, ಬದಲಿಗೆ ಜಂಕ್ ಫುಡ್ ಕೊಟ್ರೆ ಎಷ್ಟಾದರೂ ತಿಂತಾನೆ ಎನ್ನೋದು ಪೋಷಕರ ಯೂನಿವರ್ಸಲ್ ರಾಗ.
ಮೊದಲೇ ಸಮಯ ಸಾಲದೆ ಒದ್ದಾಡುವ ಇಂದಿನ ಪೋಷಕರಿಗೆ ಈ ಊಟದ ಸಮಯ ದೊಡ್ಡ ಟಾರ್ಚರ್. ಹಾಗಾದ್ರೆ ಈ ಮಕ್ಕಳು ಖುಷಿಯಿಂದ ಊಟ ಮಾಡೋ ಹಾಗೆ ಮಾಡೋಕೆ ಯಾವ ದಾರೀನೂ ಇಲ್ವಾ? ಖಂಡಿತಾ ಇದೆ, ಎಲ್ಲ ಮಕ್ಕಳಿಗಲ್ಲದಿದ್ರೂ ಬಹುತೇಕ ಮಕ್ಕಳಿಗೆ ಕೆಲಸ ಮಾಡುವಂಥ ದಾರಿಗಳು. ಇವುಗಳಲ್ಲಿ ಸೋತ ಪೋಷಕರು ತಮ್ಮ ಮಕ್ಕಳಿಗೆ ಯಾವ ವಿಧಾನವಿದೆ ಎಂದು ದಿನೇ ದಿನೇ ಪ್ರಯೋಗ ಮಾಡಿ ನೋಡಿಯೇ ತಿಳಿಯಬೇಕು.
ಬೇವಿನಕಡ್ಡಿ, ಹರಳುಪ್ಪಿನ ಬದಲು ಪೇಸ್ಟ್ ಬಂತು, ಮಕ್ಕಳ ಹಲ್ಲು ಗಟ್ಟಿ ಅಯ್ತಾ?
1. ತಿನ್ನುವ ಅನುಭವವನ್ನು ಸಾಧ್ಯವಾದಷ್ಟು ಬೇಗ ಶುರು ಮಾಡಿ
ಮಗುವಿಗೆ ಮೊದಲ ವರ್ಷದೊಳಗೆ ಹಲವಾರು ರುಚಿಯ ಆಹಾರ ಹಾಗೂ ವೈವಿಧ್ಯತೆಯನ್ನು ನೀಡದಿರುವುದರಿಂದ ಅವು ನಂತರದಲ್ಲಿ ಕೆಲವೊಂದನ್ನು ಮಾತ್ರ ಆಯ್ದು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುವ ಸಂಭವ ಹೆಚ್ಚು. ಸಾಮಾನ್ಯವಾಗಿ ಮಗುವಿಗೆ ಪ್ಯೂರಿ ಕೊಡಲಾಗುತ್ತದೆ. ಇದನ್ನೇ ಹೆಚ್ಚು ಕಾಲ ಕೊಟ್ಟರೆ ಅವು ಕೇವಲ ಅದೊಂದು ಆಹಾರ ಟೆಕ್ಸ್ಚರ್ ಹಾಗೂ ರುಚಿಗೆ ಹೊಂದಿಕೊಂಡುಬಿಡುತ್ತವೆ. ಬದಲಿಗೆ ಮಗುವಿಗೆ ಸಣ್ಣದಾಗಿ ಹೆಚ್ಚಿದ, ಸೌಟಿನಲ್ಲಿ ನುರಿದ, ಬಾಯಿಯಲ್ಲಿಟ್ಟರೆ ಕರಗುವ, ಮೃದುವಾದ ಆಹಾರ, ಕರಂಕುರಂ ಆಹಾರ, ಒಂದೇ ಆಹಾರದಲ್ಲಿ ಬೇರೆ ಬೇರೆ ಟೆಕ್ಸ್ಚರ್ ಇರುವಂಥದ್ದು- ಹೀಗೆ ವಿವಿಧ ವೆರೈಟಿಗಳನ್ನು ಅಭ್ಯಾಸ ಮಾಡಿಸಿ. ಜೊತೆಗೆ ರುಚಿಯಲ್ಲಿ ಕೂಡಾ ಸಿಹಿ, ಕಹಿ, ಉಪ್ಪು, ಖಾರ, ಹುಳಿ, ಕ್ರೀಮೀ ಎಲ್ಲವೂ ಆಗಾಗ ನಾಲಿಗೆಗೆ ಮುಟ್ಟುತ್ತಿರಲಿ. ಒಂದು ವರ್ಷದೊಳಗೇ ಇವೆಲ್ಲವೂ ಅಭ್ಯಾಸವಾದರೆ, ಅವನ್ನು ಅಗಿಯುವ, ನುಂಗುವ, ಜೀರ್ಣಿಸಿಕೊಳ್ಳುವ ಸಾಮರ್ಥ್ಯವೂ ಹೆಚ್ಚುತ್ತದೆ. ಜೊತೆಗೆ, ಮಕ್ಕಳು ಬಹುತೇಕ ಆಹಾರವನ್ನು ಇಷ್ಟ ಪಡಲಾರಂಭಿಸುತ್ತಾರೆ.
2. ಪರಿಮಳದ ವೈವಿಧ್ಯತೆ ತೋರಿಸಿ
ದೊಡ್ಡವರಂತೆ ಮಕ್ಕಳಿಗೆ ಕೂಡಾ ಆಹಾರದ ಪರಿಮಳ, ಟೆಕ್ಸ್ಚರ್, ಸ್ವಾದಕ್ಕನುಗುಣವಾಗಿ ಇಷ್ಟಕಷ್ಟಗಳಿರುತ್ತವೆ. ಆಹಾರದ ಪರಿಮಳವು ಅದರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿಗೆ ಕೆಲ ಆಹಾರದ ಪರಿಮಳ ಇಷ್ಟವಾದರೆ ಅದು ಆ ಆಹಾರವನ್ನು ಖುಷಿಯಿಂದ ತಿನ್ನಬಲ್ಲದು. ಹೀಗಾಗಿ, ಸಣ್ಣ ಮಕ್ಕಳಿಗೆ ಬೇರೆ ಬೇರೆ ಆಹಾರದ, ಮಸಾಲೆಯ, ಹಣ್ಣುಗಳ, ತರಕಾರಿಗಳ ಪರಿಮಳ ತೋರಿಸುವ ಆಟವಾಡಿ. ಅವು ಯಾವ ಪರಿಮಳ ಇಷ್ಟ ಪಡುತ್ತವೆ, ಯಾವುದು ಇಷ್ಟವಾಗುತ್ತಿಲ್ಲ ಎಂದು ಗಮನಿಸಿ. ಬಹಳ ಬೇಗ ಆಹಾರದ ಪರಿಮಳ ಗುರುತಿಸುವುದರಿಂದ ಅವು ಅದನ್ನು ಒಪ್ಪಿಕೊಳ್ಳುವ ಸಾಧ್ಯತೆಯೂ ಹೆಚ್ಚು.
ಅಪ್ಪುಗೆಯಲ್ಲಿದೆ ಬೆಚ್ಚಗಿನ ಸುಖ, ಸಂಬಂಧ ಬೆಸೆದರೆ ಇಲ್ಲ ದುಃಖ!
3. ಅಪರಿಚಿತ ಆಹಾರದ ಕುರಿತ ಮಕ್ಕಳ ಆತಂಕ ನಿವಾರಿಸಿ
ನಿಮ್ಮ ಮಗು 2ರಿಂದ 4 ವರ್ಷದ್ದಾಗಿದ್ದರೆ, ಆಹಾರದ ವಿಷಯದಲ್ಲಿ ಮಕ್ಕಳಿಗೆ ಸರ್ಪ್ರೈಸ್ ಇಷ್ಟವಾಗುವುದಿಲ್ಲ ಎಂಬುದು ನಿಮ್ಮ ಅನುಭವಕ್ಕೆ ಈಗಾಗಲೇ ಬಂದಿರಬಹುದು. ಹೊಸ ಆಹಾರವೊಂದನ್ನು ಬೇಡ ಎನ್ನುತ್ತಿವೆ ಎಂದ ಮಾತ್ರಕ್ಕೆ ಅದು ಮಕ್ಕಳಿಗೆ ಇಷ್ಟವಾಗಿಲ್ಲ ಎಂದು ತೀರ್ಮಾನಿಸುವುದಕ್ಕಿಂತ ಹೊಸ ಆಹಾರದ ಅಪರಿಚಿತತೆಯ ಬಗ್ಗೆ ಮಕ್ಕಳಲ್ಲಿ ಆತಂಕ ಇರುತ್ತದೆ ಎಂಬುದನ್ನು ಅರಿಯಿರಿ. ಮಗುವಿಗೆ ಅದರ ರುಚಿ ನೋಡಲು ಹೇಳುವ ಮುನ್ನ ಅದರ ಟೆಕ್ಚ್ಸರ್, ರುಚಿಯ ಕುರಿತು ವಿವರಣೆ ನೀಡಿ. ಪರಿಚಯವಿದ್ದರೆ ಆಹಾರದ ಕುರಿತ ಭಯ ಹೋಗುತ್ತದೆ.
4. ನೀವು ಹೇಗೆ ಆಹಾರ ತಿನ್ನುತ್ತೀರಿ ಎಂಬುದನ್ನೂ ಗಮನಿಸಿ
ಮಕ್ಕಳ ಮುಂದೆ ಆಹಾರದ ವಿಷಯದಲ್ಲಿ ನೀವು ಹೇಗಿರುತ್ತೀರಿ, ಎಂಥ ಆಹಾರ ತಿನ್ನುತ್ತೀರಿ, ಅವುಗಳಿಗೆ ಪ್ರತಿಕ್ರಿಯೆ ಹೇಗೆ ನೀಡುತ್ತೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ನೀವು ಆಹಾರವನ್ನು ಎಂಜಾಯ್ ಮಾಡಿಕೊಂಡು ತಿನ್ನುವುದನ್ನು ಮಕ್ಕಳು ಗಮನಿಸುವಂತೆ ಮಾಡಿ. ಇದರೊಂದಿಗೆ ಇನ್ನೂ ಪುಟ್ಟ ಮಗುವಾಗಿದ್ದರೆ ತಾಯಿಯು ಖುಷಿಖುಷಿಯಾಗಿ ಆಟ ಆಡಿಸಿಕೊಂಡು ಮಗುವಿಗೆ ಊಟ ಮಾಡಿಸಿದರೆ ಅದೇ ಮೂಡ್ ಮಗುವಿನಲ್ಲೂ ಪ್ರತಿಫಲಿಸುತ್ತದೆ. ತಂದೆ ತಾಯಿಯು ಸಿಟ್ಟು ಮಾಡುತ್ತಾ ಖಿನ್ನತೆಯಲ್ಲಿದ್ದಂತಿದ್ದರೆ ಮಗುವೂ ದುಃಖದಿಂದ ಏನೂ ಬೇಡ ಎಂಬಂತಿರುತ್ತದೆ. ಯಾವ ಆಹಾರವನ್ನೂ ಇಷ್ಟ ಪಡಲಾರದು.
5. ಜಂಕ್ ಫುಡ್ ಪರಿಚಯಿಸಬೇಡಿ
ಮಕ್ಕಳಿಗೆ ಪದೇ ಪದೆ ಚಿಪ್ಸ್, ಪೆಪ್ಸಿ, ಕೋಲಾ, ಪಾಪ್‌ಕಾರ್ನ್ ಇತರೆ ಪ್ಯಾಕೇಡ್ಜ್ ಆಹಾರ ನೀಡುತ್ತಿದ್ದರೆ ಅವು ಮನೆಯಲ್ಲಿ ತಯಾರಿಸಿದ ಊಟ ತಿನ್ನುವ ಸಂಭವ ತೀರಾ ಕಡಿಮೆ. ಹೊಟ್ಟೆಯೂ ತುಂಬಿರುತ್ತದೆ ಜೊತೆಗೆ ಮನೆಯ ಆಹಾರ ಜಂಕ್ ಆಹಾರಕ್ಕಿಂತಾ ಹೆಚ್ಚು ರುಚಿಸಲು ಸಾಧ್ಯವಿಲ್ಲ. ಇದರ ಬದಲಿಗೆ ಮಕ್ಕಳಿಗೆ ಆಗಾಗ ಹಣ್ಣುಗಳು, ತರಕಾರಿಗಳು, ಪ್ರೋಟೀನ್ ಮುಂತಾದವನ್ನೇ ನೀಡಿ. ತರಕಾರಿಗಳನ್ನು ಹೆಚ್ಚಾಗಿ ನೀಡಿದಷ್ಟೂ ಮಕ್ಕಳು ಅದನ್ನು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚು. ಜೊತೆಗೆ ಊಟದೊಂದಿಗೆ ನೀರನ್ನೇ ನೀಡಿ. ಜ್ಯೂಸ್ ಕೊಟ್ಟು ಅಭ್ಯಾಸ ಮಾಡಿಸಬೇಡಿ.