Chikkamagaluru: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದೇ 1ವರ್ಷ!
- ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದೇ 1ವರ್ಷ
- ಜನಪ್ರತಿನಿಧಿಗಳ ಮಂಡಳಿ ಇಲ್ಲದ ಕಾರಣ ಅಧಿಕಾರಿಗಳಿಗೆ ಜವಾಬ್ದಾರಿ
- ತಾಲೂಕು ಮತ್ತು ಜಿಲ್ಲಾಪಂಚಾಯಿತಿ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಒತ್ತಾಯ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಆ.24) : ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಜನಪ್ರತಿನಿಧಿಗಳ ಮಂಡಳಿ ವಿಸರ್ಜನೆಯಾಗಿ ವರ್ಷವೇ ಕಳೆದಿದೆ. ಚುನಾವಣೆ ಯಾವಾಗ ನಡೆಯುತ್ತದೆ ಎಂದು ಚುನಾವಣಾ ಸ್ಪರ್ಧಾ ಆಕಾಂಕ್ಷಿಗಳು ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ ಚುನಾವಣೆ ಭಾಗ್ಯ ದೊರೆಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಇದರ ನಡುವೆ ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳಗೊಂಡಿದ್ದು, ತಾಲೂಕು ಪಂಚಾಯಿತಿ ಕ್ಷೇತ್ರಗಳು ಕಡಿತಗೊಂಡಿವೆ.
Chikkamagaluru; ಕಾಡಾನೆಯಿಂದ ಶಾಶ್ವತ ಪರಿಹಾರಕ್ಕಾಗಿ ಕಾಫಿ ಬೆಳೆಗಾರನಿಂದ ಪ್ರತಿಭಟನೆ
ತಾ.ಪಂ ಕ್ಷೇತ್ರ ಕಡಿತ , ಜಿ.ಪಂ ಕ್ಷೇತ್ರ ಹೆಚ್ಚಳ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಹಿಂದೆ ತಾಲೂಕು ಪಂಚಾಯಿತಿ ಕ್ಷೇತ್ರಗಳು 108 ಇದ್ದು, ಕ್ಷೇತ್ರಗಳ ಸಂಖ್ಯೆ ಕುಸಿದಿದ್ದು, 100ಕ್ಕೆ ಕಡಿತವಾಗಿದ್ದರೆ, ಜಿಲ್ಲಾಪಂಚಾಯಿತಿ 34 ಕ್ಷೇತ್ರಗಳನ್ನು ಹೊಂದಿತ್ತು. ಸದ್ಯ ಈ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳು ಏರಿಳಿತ ಕಂಡಿವೆ. ಕಳಸ(Kalasa) ತಾಲೂಕಿನಲ್ಲಿ 11 ತಾ.ಪಂ. ಕ್ಷೇತ್ರ ಮತ್ತು 2 ಜಿ.ಪಂ. ಕ್ಷೇತ್ರ ಹೊಂದಿತ್ತು. ಅದೇ ರೀತಿ ಶೃಂಗೇರಿ(Shringeri) 11ತಾ.ಪಂ. ಕ್ಷೇತ್ರ 2 ಜಿ.ಪಂ. ಕ್ಷೇತ್ರ, ನರಸಿಂಹರಾಜಪುರ(N.R.Pura) ತಾಲೂಕು 11 ತಾ.ಪಂ. 2ಜಿ.ಪಂ., ಅಜ್ಜಂಪುರ(Ajjampura) 11ತಾ.ಪಂ., 3 ಜಿ.ಪಂ. ಕ್ಷೇತ್ರಗಳನ್ನು ಹೊಂದಿತ್ತು.ಕೊಪ್ಪ(Koppa) 11 ತಾಲೂಕು ಪಂಚಾಯಿತಿ ಕ್ಷೇತ್ರ 3ಜಿ.ಪಂ. ಕ್ಷೇತ್ರ, ಮೂಡಿಗೆರೆ(Mudigere) 11 ತಾ.ಪಂ., 3ಜಿ.ಪಂ., ತರೀಕೆರೆ(Terikere) 9ತಾ.ಪಂ., 4ಜಿ.ಪಂ. ಕ್ಷೇತ್ರ, ಚಿಕ್ಕಮಗಳೂರು(Chikkamagaluru) 15ತಾ.ಪಂ., 7ಜಿ.ಪಂ., ಕಡೂರು(Kaduru) ತಾಲ್ಲೂಕು 14 ತಾ.ಪಂ. ಕ್ಷೇತ್ರ 8 ಜಿ.ಪಂ. ಕ್ಷೇತ್ರ ಒಳಗೊಂಡಿತ್ತು.
ಮರುವಿಂಗಡಣೆ ನಂತರ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಳ:
2022ರ ಸೀಮಾ ನಿರ್ಣಾಯ ಆಯೋಗದ ಕ್ಷೇತ್ರ ಮರುವಿಂಗಡಣೆಯಾಗಿದ್ದು, ಕಳಸ ತಾಲ್ಲೂಕಿನಲ್ಲಿ 11 ತಾ.ಪಂ. ಕ್ಷೇತ್ರವನ್ನು ಕಡಿತಗೊಳಿಸಿ 7ಕ್ಕೆ ಇಳಿಸಲಾಗಿದೆ. ಜಿ.ಪಂ. 2 ಕ್ಷೇತ್ರಗಳನ್ನು ಹಾಗೆಯೇ ಉಳಿಸಲಾಗಿದೆ. ಶೃಂಗೇರಿ ತಾ.ಪಂ.11 ಇದ್ದ ಕ್ಷೇತ್ರಗಳನ್ನು 7ಕ್ಕೆ ಇಳಿಸಲಾಗಿದೆ. 2 ಜಿಲ್ಲಾಪಂಚಾಯಿತಿ ಕ್ಷೇತ್ರಗಳು ಉಳಿಸಿಕೊಳ್ಳಲಾಗಿದೆ. ಚಿಕ್ಕಮಗಳೂರು 15 ಇದ್ದ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು 19ಕ್ಕೆ ಹೆಚ್ಚಳಗೊಂಡಿದೆ. 7ಇದ್ದ ಜಿ.ಪಂ. ಕ್ಷೇತ್ರಗಳನ್ನು 9ಕ್ಕೆ ಏರಿಕೆ ಮಾಡಲಾಗಿದೆ. ಕಡೂರು ತಾಲ್ಲೂಕಿನಲ್ಲಿ 18 ಇದ್ದ ತಾ.ಪಂ. ಕ್ಷೇತ್ರಗಳನ್ನು 20ಕ್ಕೆ ಏರಿಕೆ ಮಾಡಲಾಗಿದೆ. 8 ಜಿ.ಪಂ. ಕ್ಷೇತ್ರಗಳನ್ನು 9ಕ್ಕೆ ಇಳಿಸಲಾಗಿದೆ. ನರಸಿಂಹರಾಜಪುರ 11 ತಾ.ಪಂ. ಕ್ಷೇತ್ರಗಳಲ್ಲಿ 9ಕ್ಕೆ ಕಡಿತಗೊಳಿಸಲಾಗಿದೆ. 2 ಇದ್ದ ಜಿ.ಪಂ.ವನ್ನು 1 ಕ್ಷೇತ್ರ ಹೆಚ್ಚಿಸಿ 3ಜಿ.ಪಂ. ಕ್ಷೇತ್ರಗಳನ್ನು ಮಾಡಲಾಗಿದೆ. ಅಜ್ಜಂಪುರ 11 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು 9ಕ್ಕೆ ಕಡಿತಗೊಳಿಸಿ 3ಇದ್ದ ಜಿ.ಪಂ. ಕ್ಷೇತ್ರವನ್ನು 2ಕ್ಕೆ ಸೀಮಿತಗೊಳಿಸಲಾಗಿದೆ. ಕೊಪ್ಪ 11ತಾ.ಪಂ.ಕ್ಷೇತ್ರಗಳಲ್ಲಿ 9ಕ್ಕೆ ಇಳಿಸಲಾಗಿದೆ. 3ಇದ್ದ ಜಿ.ಪಂ.ಕ್ಷೇತ್ರಗಳನ್ನು 4ಕ್ಕೆ ಏರಿಕೆ ಮಾಡಲಾಗಿದೆ. ಮೂಡಿಗೆರೆ 11 ಇದ್ದ ತಾ.ಪಂ. ಕ್ಷೇತ್ರಗಳನ್ನು 9ಕ್ಕೆ ಇಳಿಸಲಾಗಿದೆ. 3ಇದ್ದ ಜಿ.ಪಂ. ಕ್ಷೇತ್ರಗಳನ್ನು 5ಕ್ಕೆ ಹೆಚ್ಚಿಸಲಾಗಿದೆ. ತರೀಕೆರೆಯಲ್ಲಇದ್ದ 9 ತಾ.ಪಂ.ಕ್ಷೇತ್ರಗಳನ್ನು 11ಕ್ಕೆ ಏರಿಕೆ ಮಾಡಲಾಗಿದೆ. 4 ಇದ್ದ ಜಿ.ಪಂ.ಕ್ಷೇತ್ರಗಳನ್ನು 3ಕ್ಕೆ ಕಡಿತಗೊಳಿಲಾಗಿದೆ.
ಜನಪ್ರತಿನಿಧಿಗಳು ಇಲ್ಲದೇ ಒಂದು ವರ್ಷ:
ಜಿಲ್ಲಾಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದೇ 1ವರ್ಷ ಕಳೆದುಹೋಗಿದೆ. ಜನಪ್ರತಿನಿಧಿಗಳ ಮಂಡಳಿ ಇಲ್ಲದ ಕಾರಣ ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೇ ಜವಾಬ್ದಾರಿ ಹೊತ್ತಿದ್ದರೆ, ತಾಲೂಕು ಪಂಚಾಯಿತಿಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಇದರಿಂದ ಜನರ ಗೋಳು ಕೇಳುವವರು ಇಲ್ಲದಂತಾಗಿದೆ.ಜಿಲ್ಲೆ ಮಲೆನಾಡು ಮತ್ತು ಬಯಲುಸೀಮೆ ಪ್ರದೇಶವನ್ನು ಹೊಂದಿದ್ದು, ಮಲೆನಾಡು ಭಾಗದಲ್ಲಿ ಅತ್ಯಂತ ಕುಗ್ರಾಮಗಳನ್ನು ಹೊಂದಿದೆ. ಇಲ್ಲಿನ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಕ್ಕಾಗಿ ತಮ್ಮ ಅಳಲನ್ನು ಯಾರ ಬಳಿ ಹೇಳಿ ಕೊಳ್ಳಬೇಕೆಂದೇ ತೋಚುತ್ತಿಲ್ಲ.
Chikkamagaluru: ಶಿಕ್ಷಕರೇ ಇಲ್ಲದ ಜಾಂಬಳೆ ಶಾಲೆ: ಬೀಗ ಹಾಕಲು ಗ್ರಾಮಸ್ಥರ ನಿರ್ಧಾರ
ಜನಪ್ರತಿನಿಧಿಗಳ ಆಡಳಿತ ಮಂಡಳಿ ಇದ್ದಿದ್ದರೆ ಕುಗ್ರಾಮಗಳ ಸಮಸ್ಯೆ ಗಳನ್ನು ಸರ್ಕಾರದ ಗಮನ ಸೆಳೆಯುತ್ತಿದ್ದರು. ಅದೀಗ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಶೀಘ್ರವೇ ತಾಲೂಕು ಮತ್ತು ಜಿಲ್ಲಾಪಂಚಾಯಿತಿ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಲಾಗಿದೆ.