ದಾವಣಗೆರೆ (ಫೆ.22): ಮಹಿಳೆಯೊಬ್ಬಳನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿ, ಶವವನ್ನು ಭದ್ರಾ ಕಾಲುವೆಗೆ ಹಾಕಿದ್ದ ಪ್ರಕರಣ ಬೇಧಿಸಿರುವ ಹದಡಿ ಪೊಲೀಸರು ಮೃತಳ ಪತಿ, ಪುತ್ರ ಹಾಗೂ ಇಬ್ಬರು ಮಾವಂದಿರನ್ನು ಬಂಧಿಸಿದ್ದಾರೆ.

ತಾಲೂಕಿನ ಹಳೆ ಬಿಸಲೇರಿ ಬಳಿ ಭದ್ರಾ ಕಾಲುವೆಯಲ್ಲಿ ಫೆ.17ರಂದು ತೇಲಿ ಬಂದಿದ್ದ ಸುಮಾರು 30-35 ವರ್ಷ ವಯಸ್ಸಿನ ಮಹಿಳೆಯ ಮೃತದೇಹದ ತಲೆ, ಮುಖದ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿ, ಭದ್ರಾ ಕಾಲುವೆಗೆ ಎಸೆದಿರುವುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಪಿ ಹನುಮಂತರಾಯ ಅವರು ಸಿಪಿಐ ಬಿ.ಮಂಜುನಾಥ, ಹದಡಿ ಠಾಣೆ ಎಸ್‌ಐ ಪಿ.ಪ್ರಸಾದ್‌, ಎಎಸ್‌ಐ ಚನ್ನವೀರಪ್ಪ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಿದ್ದರು.

ದೃಶ್ಯಂ ಸಿನಿಮಾ ತರಹದ್ದೇ ರಿಯಲ್ ಸ್ಟೋರಿ.. ಹತ್ಯೆ ಮಾಡಿದ್ದವ ಸಿಕ್ಕಿಬಿದ್ದಿದ್ದೆ ರೋಚಕ ...

ತನಿಖಾಧಿಕಾರಿಗಳ ತಂಡ ಭದ್ರಾ ಕಾಲುವೆಯಲ್ಲಿ ಪತ್ತೆಯಾದ ಶವ ಕಬ್ಬೂರು ಗ್ರಾಮದ ಸಿದ್ದಮ್ಮನದ್ದು ಎಂದು ಗುರುತಿಸಿತ್ತು. ನಂತರ ತನಿಖೆ ಕೈಗೊಂಡಾಗ ಮೃತಳ ಪತಿ, ಅತ್ತಿಗೆರೆ ಗ್ರಾಮ ಸೇವಕ ಕಬ್ಬೂರಿನ ಟಿ.ಕೆಂಚವೀರಪ್ಪ, ಪುತ್ರ ಬಿಎಸ್ಸಿ ಓದುತ್ತಿರುವವ ಕೆ.ವಿಕಾಸ್‌, ಮಾವಂದಿರಾದ ಶೇಖರಪ್ಪ, ರಾಜಪ್ಪ ಅಲಿಯಾಸ್‌ ನಾಗರಾಜಪ್ಪ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ.

ಮೃತ ಸಿದ್ದಮ್ಮ ಹಾಗೂ ಆರೋಪಿಗಳ ಮಧ್ಯೆ ಆಸ್ತಿ, ಹಣದ ವಿಚಾರದಲ್ಲಿ ವೈಮನಸ್ಸು ಇತ್ತು. ಮೃತ ಸಿದ್ದಮ್ಮಳ ಪತಿ ಕೆಂಚವೀರಪ್ಪ ತನ್ನ ಪುತ್ರ ವಿಕಾಸ ಹಾಗೂ ಮಾವಂದಿರಾದ ರಾಜಪ್ಪ, ಶೇಖರಪ್ಪ ಅವರ ಸಹಾಯದಿಂದ ಮೃತ ಸಿದ್ದಮ್ಮಳನ್ನು ಕಬ್ಬೂರು ಕಾಲುವೆ ಬಳಿ ಕರೆಸಿಕೊಂಡು, ಕಲ್ಲಿನಿಂದ ಹಲ್ಲೆ ನಡೆಸಿ, ಸಾಯಿಸಿದ್ದ. ನಂತರ ಮೃತಳ ಶವವನ್ನು ಭದ್ರಾ ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿಗೆ ಎಸಿದಿದ್ದ ಎಂಬುದನ್ನು ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

ಮಹಿಳೆ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ, ಸಿಬ್ಬಂದಿಗೆ ಎಸ್ಪಿ ನಗದು ಬಹುಮಾನ ಘೋಷಿಸಿದ್ದಾರೆ.