Asianet Suvarna News Asianet Suvarna News

Karwar: ವೆನಿಲ್ಲಾಗೆ ಮತ್ತೆ ಭಾರೀ ಬೇಡಿಕೆ, ಬೆಳೆಯಿಲ್ಲದೇ ರೈತರ ಗೋಳು

ವೆನಿಲ್ಲಾ (Venilla) ಬೆಳೆಗೆ ಪ್ರಸ್ತುತ ಚಿನ್ನದ ಬೆಲೆಯಿದೆ. ಆದರೆ, ಉತ್ತಮ‌ ಬೆಲೆ‌‌ ಇದ್ರೂ ರೈತರು ಮಾತ್ರ ಬಳ್ಳಿ ಬೆಳೆಸಲು ಕೂಡಾ ಹರಸಾಹಸ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಉತ್ತರಕನ್ನಡ (Uttara Kannada) ಜಿಲ್ಲೆಯಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದ್ದ ವೆನಿಲ್ಲಾ ಬೆಳೆ, ಕೆಲವು ವರ್ಷದಿಂದ ಹೇಳ ಹೆಸರಿಲ್ಲದಂತಾಗಿದೆ.

Uttara Kannada High Demand For Vanilla But Plant Disease Leaves Farmers Helpless hls
Author
Bengaluru, First Published Jan 8, 2022, 4:39 PM IST

ಕಾರವಾರ (ಜ. 08):  ವೆನಿಲ್ಲಾ (Venilla) ಬೆಳೆಗೆ ಪ್ರಸ್ತುತ ಚಿನ್ನದ ಬೆಲೆಯಿದೆ. ಆದರೆ, ಉತ್ತಮ‌ ಬೆಲೆ‌‌ ಇದ್ರೂ ರೈತರು ಮಾತ್ರ ಬಳ್ಳಿ ಬೆಳೆಸಲು ಕೂಡಾ ಹರಸಾಹಸ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಉತ್ತರಕನ್ನಡ (Uttara Kannada) ಜಿಲ್ಲೆಯಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದ್ದ ವೆನಿಲ್ಲಾ ಬೆಳೆ, ಕೆಲವು ವರ್ಷದಿಂದ ಹೇಳ ಹೆಸರಿಲ್ಲದಂತಾಗಿದೆ. ಬೆಳೆ ಇದ್ದಾಗ ದರ ಇರಲ್ಲ, ದರ ಇದ್ದಾಗ ಬೆಳೆಯಿರಲ್ಲ ಎಂಬಂತಾಗಿದೆ ರೈತರ ಗೋಳು. ಮಹಾ ಮಾರಿ ಸೊರಗು ರೋಗಕ್ಕೆ ತುತ್ತಾದ ವೆನಿಲ್ಲಾ ಮತ್ತೆ ಮೆಲೇಳದೆ ರೈತರನ್ನು ನಷ್ಟಕ್ಕೆ ದೂಡಿದೆ.

"

ಮೊದಲು ಮಲೇಶಿಯಾ, ಇಂಡೋನೇಶಿಯಾ, ಮಡಗಾಸ್ಕರ್ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆದ ವೆನಿಲ್ಲಾ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಯಲ್ಲಿ ಬಹು ಮುಖ್ಯ ವಾಣಿಜ್ಯ ಬೆಳೆಯಾಗಿ ಬೆಳೆದಿತ್ತು. ಆದರೆ, ದಶಕಗಳ ಕಾಲ ಬೆಳೆಗಾರರ ಕೈ ಹಿಡಿದಿದ್ದ ವೆನಿಲ್ಲಾಕ್ಕೆ ಇದ್ದಕ್ಕಿದ್ದಂತೆ ಸೊರಗುರೋಗ, ಕೊಳೆ ರೋಗ ಬಾಧಿಸಿದ್ದು, ಹೆಚ್ಚಿನ ಪೋಷಣೆ ಇಲ್ಲದೆ ಬೆಳೆಯುತ್ತಿದ್ದ ಬಳ್ಳಿಗಳು ಸೊರಗಿದ್ದವು. ಒಂದೆಡೆ ಈಗ ಹುಡುಕಿದರೂ ವೆನಿಲ್ಲಾ ಬಳ್ಳಿ ಸಿಗುತ್ತಿಲ್ಲ, ಇನ್ನೊಂದೆಡೆ ಗಿಡ ನಾಟಿ ಮಾಡಿದರೂ ಅದು ಮೇಲೇಳುತ್ತಿಲ್ಲ. 

ಇದಕ್ಕೆ ವಾತಾವರಣದಲ್ಲಿನ ವ್ಯತ್ಯಯವೋ ಅಥವಾ ರೋಗಬಾಧೆ ಕಾರಣವೋ ಅನ್ನೋದು ಮತ್ತೊಂದೆಡೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ವೆನಿಲ್ಲಾ ಮುಖ್ಯವಾಗಿ ಸಿಹಿ ತಿನಿಸು, ಐಸ್ ಕ್ರೀಂ ಸೇರಿದಂತೆ ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ಪ್ರಸ್ತುತ ಚಿನ್ನದ ದರವಿದೆ. 2010ರಲ್ಲಿ ಹಸಿ ಬೀನ್ಸ್ ಕಿಲೋಗೆ 150 ರೂಪಾಯಿ ಹೊಂದಿತ್ತು ಇತ್ತು. ಆದರೆ, ಇಂದು 1000ರಿಂದ 2000ರೂ. ಬೆಲೆ ಪಡೆದಿದೆ. ಒಣಗಿದ ಬೀನ್ಸ್‌ಗೆ ಅಂತೂ ಇಂದು ಮಾರುಕಟ್ಟೆಯಲ್ಲಿ 10,000 ರೂ. ಬೆಲೆ ಹೊಂದಿದೆ. ಬೀನ್ಸ್ ನ ಗುಣಮಟ್ಟದ ಆಧಾರದ ಮೇಲೆ ದರ ವ್ಯತ್ಯಾಸ ಆಗುತ್ತಿರುತ್ತದೆ. 

Kolar: ಜಿಲ್ಲೆಯಲ್ಲಿ ಚಿನ್ನಕ್ಕಿಂತ ರೇಷ್ಮೆಯೇ ದುಬಾರಿ, ರೈತರ ಮುಖದಲ್ಲಿ ಮಂದಹಾಸ

 ಬೆಳೆ ಇದ್ದಾಗ ದರ ಇರಲ್ಲ, ದರ ಇದ್ದಾಗ ಬೆಳೆಯಿರಲ್ಲ. ಇದು ರೈತರ ಗೋಳು. ರೈತರು ಎದುರಿಸುತ್ತಿರುವ ಸಮಸ್ಯೆಯಿಂದಾಗಿ ಜಿಲ್ಲೆಯಲ್ಲಿ ಕನಿಷ್ಟ 1 ಟನ್ ವೆನಿಲ್ಲಾ ಉತ್ಪಾದನೆ ಆಗುತ್ತಿಲ್ಲ. ಕಳೆದ ಹತ್ತು ವರ್ಷದ ಹಿಂದೆ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಲ್ಲಿ 1000 ಟನ್ ಗೂ ಹೆಚ್ಚು ವೆನಿಲ್ಲಾ ಬೆಳೆದ ದಾಖಲೆ ಇದೆ. ಆದರೆ, ಇಂದು ಪ್ರತಿ ದಿನ ಒಂದು ಕೆ.ಜಿ ವೆನಿಲ್ಲಾ ಸಂಗ್ರಹಣೆಯೂ ಕಷ್ಟವಾಗಿದೆ. ಶಿರಸಿ ನಗರದಲ್ಲಿ ಕೃಷಿ ವಿಜ್ಞಾನ ಕೇಂದ್ರವಿದ್ದು, ಹಲವು ವಿಜ್ಞಾನಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಅವರು ಕೂಡಾ ಹೊಣೆ ಹೊಂದಿದ್ದಾರೆ. ಆದರೆ, ವೆನಿಲ್ಲಾ ಬೆಳೆಗೆ ಬಂದ ರೋಗ ನಿಯಂತ್ರಿಸಿ ಉತ್ತಮ ಬೆಳೆ ಬೆಳೆಯುವಲ್ಲಿ ಮಾರ್ಗದರ್ಶನ ನೀಡಲು ವಿಜ್ಞಾನಿಗಳು ಸಂಪೂರ್ಣ ವಿಫಲವಾಗಿದ್ದಾರೆ. 

ರೋಗ ತಗಲಿ ಸುಮಾರು 10 ವರ್ಷ ಕಳೆದರೂ ಯಾವುದೇ ನಿರ್ದಿಷ್ಟ ಔಷಧ ಸೂಚಿಸಿಲ್ಲ. ಅಡಿಕೆ ಮತ್ತು ಕಾಳುಮೆಣಸಿಗೆ ಸಿಂಪಡಿಸುವ ಮೈಲು ತುತ್ತವನ್ನೇ ಇದಕ್ಕೂ ಬಳಸಿ ಅಂತ ಜಾರಿಕೊಳ್ಳುತ್ತಿದ್ದಾರೆ. ಈ ಔಷಧ ಸ್ವಲ್ಪವೂ ಪರಿಣಾಮಕಾರಿ ಆಗುತ್ತಿಲ್ಲ ಅನ್ನೋದು ರೈತರ ಅಭಿಪ್ರಾಯ. ವೆನಿಲ್ಲಾಕ್ಕೆ ರೋಗ ಆವರಿಸಿದರೂ ಬೆಳೆ ಬೆಳೆಯೋ ಪ್ರಯತ್ನ ಸಂಪೂರ್ಣ ನಿಂತಿಲ್ಲ. ಅಲ್ಲಲ್ಲಿ ಕೆಲ ಉತ್ಸಾಹೀ ಬೆಳೆಗಾರರು ನಾನಾ ವಿಧದಲ್ಲಿ ಬಳ್ಳಿ ನಾಟಿ ಮಾಡುತ್ತಿದ್ದಾರೆ. ಶೇಡ್ ನೆಟ್, ಪಾಲಿಹೌಸ್ ಗಳಲ್ಲಿ ನಾಟಿ ಮಾಡಿ ಕೆಲವರು ಬೆಳೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕೆಲವರು ಪ್ಲ್ಯಾಸ್ಟಿಕ್ ಶೀಟ್ ಹಾಸಿ ಕೇವಲ ಕೋಕೋ ಪಿಟ್ ಗಳನ್ನು ಬಳಸಿ ಬಳ್ಳಿ ಬೆಳೆಸುವ ಪ್ರಯತ್ನ ಮಾಡಿದರೆ, ಮತ್ತಷ್ಟು ಜನರು ಪಾಟ್ ಗಳಲ್ಲಿ, ಪಾಲಿಥೀನ್ ಚೀಲದಲ್ಲಿ ವೆನಿಲ್ಲಾ ಬದುಕಿಸೋ ಸಾಹಸಕ್ಕೆ ಮುಂದಾಗಿದ್ದಾರೆ. ಆದರೂ, ರೈತರಗೆ ನಿರೀಕ್ಷೆಯ ಯಶಸ್ಸು ಇನ್ನೂ ಸಿಕ್ಕಿಲ್ಲ. 

ಒಟ್ಟಿನಲ್ಲಿ ಕಾಳುಮೆಣಸಿಗೆ ಪರ್ಯಾಯವಾಗಿ ಬೆಳೆಯಬಲ್ಲ ಪ್ರಮುಖ ಉಪ ಬೆಳೆ ಅನ್ನೋ ಭರವಸೆ ಮೂಡಿಸಿದ್ದ ವೆನಿಲ್ಲಾ, ಇದೀಗ ಜಿಲ್ಲೆಯಲ್ಲಿ ಹೇಳ ಹೆಸರಿಲ್ಲದಂತಾಗಿದೆ. ಮಹಾಮಾರಿ ರೋಗದಿಂದ ಬೆಳೆಯನ್ನು ರಕ್ಷಿಸಿ, ರೈತರ ಬೆನ್ನಿಗೆ ನಿಲ್ಲೊ ಕೆಲಸ ವಿಜ್ಞಾನಿಗಳಿಂದ ಆದಲ್ಲಿ ಈ ಬೆಳೆಗಾರರು ಉತ್ತಮ ಬೆಳೆ ಪಡೆಯೋದು ಕಷ್ಟಕರವೇನಲ್ಲ.

Follow Us:
Download App:
  • android
  • ios