ಕೊರೋನಾದಿಂದ ಹಾಪ್‌ಕಾಮ್ಸ್‌ಗೆ ತಿರುಗಿದ ಶುಕ್ರದೆಶೆ!
ಕೊರೋನಾದಿಂದಾಗಿ ಲಾಕ್‌ಡೌನ್ ಘೋಷಿಸಿದ ಹಾಪ್‌ಕಾಮ್ಸ್‌ಗೆ ಜಾಕ್‌ಪಾಟ್ ಹೊಡೆದಿದೆ. ಕೊರೋನಾಗೆ ಮೊದಲು ಶಿವಮೊಗ್ಗ ನಗರದಲ್ಲಿ 8 ಮಾರಾಟ ಮಳಿಗೆಗಲ್ಲಿ ದಿನವೊಂದಕ್ಕೆ ಗರಿಷ್ಠ 3.5 ಟನ್ ತರಕಾರಿ ಹಾಗೂ ಹಣ್ಣು ಮಾರಾಟ ಮಾಡುತ್ತಿದ್ದ ಹಾಪ್‌ಕಾಮ್ಸ್ ಕೊರೋನಾ ನಂತರ ಇದೇ ಮಳಿಗೆಗಳಲ್ಲಿ ಪ್ರತಿದಿನ ಸುಮಾರು 7 ಟನ್ ಮಾರಾಟ ಮಾಡುತ್ತಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
- ಗೋಪಾಲ್ ಯಡಗೆರೆ
ಶಿವಮೊಗ್ಗ(ಮೇ.06): ಕೊರೋನಾದಿಂದಾಗಿ ನಿತ್ಯ ಲಾಭ ನಷ್ಟಗಳ ಲೆಕ್ಕಾಚಾರ ನಡೆಯುತ್ತಿದೆ. ಸಾಕಷ್ಟು ಮಂದಿ, ಸಂಸ್ಥೆಗಳು ಕೊರೋನಾದಿಂದ ನಷ್ಟಕ್ಕೆ ಈಡಾಗಿದ್ದರೆ, ಲಾಭ ಮಾಡಿಕೊಂಡ ವ್ಯಕ್ತಿ ಮತ್ತು ಸಂಸ್ಥೆಗಳೂ ಇವೆ. ಇದರಲ್ಲಿ ಹಾಪ್‌ಕಾಮ್ಸ್‌ಗೆ ಮಹತ್ವದ ಸ್ಥಾನ ದೊರಕುತ್ತದೆ. ಜನರ ಮನಸ್ಸಿನಿಂದ ಮರೆಯಾಗಿ, ಹುಟ್ಟಿದ ಉದ್ದೇಶವನ್ನೂ ಮರೆಯುವ ಮೂಲಕ ಗ್ರಾಹಕರಿಂದ ದೂರವಾಗಿದ್ದ ಹಾಪ್‌ಕಾಮ್ಸ್ (ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ)ಗೆ ಕೊರೋನಾ ಪುನರ್‌ಜನ್ಮ ನೀಡಿದೆ.
ತನ್ನ ಅಳಿವು ಉಳಿವಿನ ಹೋರಾಟ ನಡೆಸುತ್ತಲೇ ದಶಕಗಳ ಕಾಲದಿಂದ ಕುಟುಕು ಜೀವ ಉಳಿಸಿಕೊಂಡಿದ್ದ ಇದು ಸಣ್ಣ ರಾಜಕೀಯ ಗಂಜಿ ಕೇಂದ್ರವಾಗಿತ್ತು. ದೊಡ್ಡ ದೊಡ್ಡ ರಾಜಕಾರಣಿಗಳು ತಮ್ಮ ಹಿಂಬಾಲಕರಿಗೆ ಇದರ ಅಧ್ಯಕ್ಷ ಸ್ಥಾನ ಕರುಣಿಸುವುದರ ಹೊರತಾಗಿ ಇನ್ನೇನೂ ದೊಡ್ಡ ಸಾಧನೆ ಇದರಿಂದ ಆಗಿರಲಿಲ್ಲ.
ಬೆಳೆಗಾರರಿಂದ ಅವರ ಉತ್ಪನ್ನವನ್ನು ಕೊಂಡು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಉತ್ಪಾದಕ ಮತ್ತು ಕೊಳ್ಳುಗನ ನಡುವೆ ಕೊಂಡಿಯಾಗಿ ಇಬ್ಬರ ಅಸ್ತಿತ್ವವನ್ನು ಕಾಪಾಡಬೇಕಾದ ಮೂಲ ಉದ್ದೇಶ ಇದರದು. ಆದರೆ ಈ ಕೆಲಸ ಎಂದು ಮಾಡಿದೆ ಎಂಬುದು ಸ್ಪಷ್ಟವಾಗಿ ನಮ್ಮ ರೈತರಿಗೇ ಗೊತ್ತಿಲ್ಲ. ಚಿಕ್ಕದೊಂದು ತರಕಾರಿ ಅಂಗಡಿಯ ಹೊರತಾಗಿ ಇನ್ನೇನೂ ಇಲ್ಲಿಲ್ಲ. ದಶಕದ ಹಿಂದೆ ಅಲ್ಲಲ್ಲಿ ಹಾಪ್‌ಕಾಮ್ಸ್ ಮಳಿಗೆ ತೆರೆಯಲಾಗಿದ್ದರೂ, ಕೊನೆಗೆ ಇದರ ವ್ಯವಸ್ಥಿತ ನಿರ್ವಹಣೆ ಮಾಡಲಾಗದೆ ಅದು ಇದ್ದವರ ಸ್ವತ್ತಾಗಿತ್ತು.
ಆದರೆ ಕೊರೋನಾ ಕಾಲದಲ್ಲಿ ಈ ಸಂಸ್ಥೆಗೆ ಅಕ್ಷರಶಃ ಶುಕ್ರದೆಶೆ ತಿರುಗಿದೆ. ಇದ್ದಕಿದ್ದಂತೆ ಲಾಕ್‌ಡೌನ್ ಘೋಷಣೆಯಾದಾಗ ಲಾಕ್‌ಡೌನ್ ಶಬ್ದವನ್ನೇ ಕೇಳಿರದ, ಇದನ್ನು ಅನುಭವಿಸಿರದ ಜನ ತಮಗಿನ್ನೂ ಏನೇನೂ ಸಿಗುವುದಿಲ್ಲ ಎಂಬಂತೆ ರಾಶಿ ರಾಶಿ ತರಕಾರಿ ಮತ್ತು ಹಣ್ಣನ್ನು ಕೊಳ್ಳಲಾರಂಭಿಸಿದರು. ಇದೊಂದು ಮೇನಿಯಾ ರೀತಿ ಹಬ್ಬಿತು. ಸರ್ಕಾರವೂ ಇದಕ್ಕೆ ಪೂರಕ ಎಂಬಂತೆ ಆದೇಶಗಳನ್ನು, ಪ್ರತಿಕ್ರಿಯೆಗಳನ್ನೂ ನೀಡತೊಡಗಿತು. ಇದೇ ಹಾಪ್‌ಕಾಮ್ಸ್‌ಗೆ ಶುಕ್ರದೆಶೆ ತಿರುಗಲು ಕಾರಣ.
ಮದ್ಯದ ನಶೆ ಏನೆಲ್ಲಾ ಮಾಡಿಸುತ್ತದೆ, ಶಿವಮೊಗ್ಗದ ವ್ಯಕ್ತಿಯ ಪ್ರಾಣ ಹಾರಿಹೋಯ್ತು!
ತರಕಾರಿಗಾಗಿ ಎಪಿಎಂಸಿ ಮಾರುಕಟ್ಟೆಗೆ ಜನ ಮುತ್ತಿಗೆ ಹಾಕಲಾರಂಭಿಸಿದಾಗ ಜಿಲ್ಲಾಡಳಿತ ಹಾಫ್‌ಕಾಮ್ಸ್ ಮೂಲಕ ತರಕಾರಿ ಮತ್ತು ಹಣ್ಣನ್ನು ವಿಲೇವಾರಿ ಮತ್ತು ಜನರಿಗೆ ತಲುಪಿಸಲು ಮುಂದಾಯಿತು. ಇದು ಈ ಸಂಸ್ಥೆಯ ಭಾಗ್ಯದ ಬಾಗಿಲು ತೆರೆಯಿತು. ಒಮ್ಮೇಗೆ ಎದ್ದು ಕುಳಿತ ಸಂಸ್ಥೆ ತನ್ನ ಅಸ್ತಿತ್ವ ತೋರಿಸಲಾರಂಭಿಸಿತು. ಉಮೇದಿಗೆ ಬಿದ್ದು ಕೆಲಸ ಮಾಡಲಾರಂಭಿಸಿತು. ಬೆಲೆ ಏರಿಕೆಯ ಬಿಸಿ ಚುಚ್ಚುವ ಮುನ್ನವೇ ತಾನೇ ಮುಂದಾಗಿ ಜನರ ನೆರವಿಗೆ ಬಂದಿತು.
ಹೆಚ್ಚಿದ ಬೇಡಿಕೆ :
ಕೊರೋನಾಗೆ ಮೊದಲು ಶಿವಮೊಗ್ಗ ನಗರದಲ್ಲಿ 8 ಮಾರಾಟ ಮಳಿಗೆಗಲ್ಲಿ ದಿನವೊಂದಕ್ಕೆ ಗರಿಷ್ಠ 3.5 ಟನ್ ತರಕಾರಿ ಹಾಗೂ ಹಣ್ಣು ಮಾರಾಟ ಮಾಡುತ್ತಿದ್ದ ಹಾಪ್‌ಕಾಮ್ಸ್ ಕೊರೋನಾ ನಂತರ ಇದೇ ಮಳಿಗೆಗಳಲ್ಲಿ ಪ್ರತಿದಿನ ಸುಮಾರು 7 ಟನ್ ಮಾರಾಟ ಮಾಡುತ್ತಿದೆ. ಇಷ್ಟು ಮಾತ್ರವಲ್ಲ, ಜನರ ಮನೆ ಬಾಗಿಲಿಗೆ ತರಕಾರಿ ಮತ್ತು ಹಣ್ಣನ್ನು ತಲುಪಿಸುವ ಪ್ರಕ್ರಿಯೆಗೂ ಮುಂದಾಯಿತು. ಸಂಚಾರಿ ಹಾಪ್‌ಕಾಮ್ಸ್ ವಾಹನಕ್ಕೆ ಜನರಿಂದ ಬೆಂಬಲ ದೊರೆಯಿತು.
13 ವಾಹನದಿಂದ ಆರಂಭವಾದ ಸಂಚಾರಿ ಹಾಪ್ಕಾಮ್ಸ್ ಕಲ್ಪನೆ ಇಂದು 80 ಕ್ಕೆ ಏರಿಕೆಯಾಗಿದೆ. ಸುಲಭ ದರದಲ್ಲಿ ಮನೆ ಬಾಗಿಲಲ್ಲೇ ದೊರಕುತ್ತಿರುವ ಗುಣಮಟ್ಟದ ತರಕಾರಿ ಹಾಗೂ ಹಣ್ಣನ್ನು ಜನರೂ ಸಹ ಅಷ್ಟೇ ಪ್ರೀತಿಯಿಂದ ಖರೀದಿಸುತ್ತಿದ್ದಾರೆ. ಇದರಿಂದಾಗಿ ಸಂಚಾರಿ ಹಾಪ್‌ಕಾಮ್ಸ್ ವಾಹನದ ಮೂಲಕ 9 ರಿಂದ 12 ಟನ್ ನಷ್ಟುತರಕಾರಿ ಮಾರಾಟವಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೀಶ್ ತಿಳಿಸುತ್ತಾರೆ.
ಹೊಸ ಮಳಿಗೆಗಳ ಆರಂಭ:
ಹೇಳಿಕೊಳ್ಳಲು ಜಿಲ್ಲಾಮಟ್ಟದ ಕಾರ್ಯವ್ಯಾಪ್ತಿ ಹೊಂದಿದ್ದರೂ ಕೇವಲ ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗಿರುವ ಹಾಪ್‌ಕಾಮ್ಸ್ ಚಟುವಟಿಕೆಯನ್ನು ಹೊಸ ಮಳಿಗೆಗಳ ಸ್ಥಾಪನೆ ಮೂಲಕ ಇನ್ನಷ್ಟುವಿಸ್ತರಿಸಲು ನಿರ್ಧರಿಸಲಾಗಿದೆ.
ನಗರದ ಹೃದಯ ಭಾಗಕ್ಕಿಂತ ಹೆಚ್ಚಾಗಿ ಹೊರವಲಯದ ಬಡಾವಣೆಗಳಲ್ಲಿ ಹಾಪ್ ಕಾಮ್ಸ್ ಮಳಿಗೆಗಳನ್ನು ಸ್ಥಾಪಿಸಿ ಆ ಮೂಲಕ ಸ್ಪರ್ಧಾತ್ಮಕ ದರಕ್ಕೆ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಶಿವಮೊಗ್ಗದಲ್ಲಿ ಸುಮಾರು 25 ಮಳಿಗೆಗಳನ್ನು ಹೊಸದಾಗಿ ಪ್ರಾರಂಭಿಸುವ ಉದ್ದೇಶವಿದೆ. ಈ ಸಂಬಂಧ ಮಹಾನಗರ ಪಾಲಿಕೆ ಮತ್ತು ಹಾಪ್‌ಕಾಮ್ಸ್ ನಡುವೆ ಮಾತುಕತೆ ನಡೆದಿದೆ.
ಹಾಗೆಯೇ ಈಗಿರುವ ಮಳಿಗೆಗಳ ಹೊರತಾಗಿ ಶಿಕಾರಿಪುರದಲ್ಲಿ 5, ಸಾಗರ ಮತ್ತು ಸೊರಬದಲ್ಲಿ ತಲಾ 3 ಮಳಿಗೆಗಳನ್ನು ಪ್ರಾರಂಭಿಸಲು ಹಾಪ್‌ಕಾಮ್ಸ್ ಆಡಳಿತ ಮಂಡಳಿ ಉದ್ದೇಶಿಸಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಎಲ್ಲಾ ಮಳಿಗೆಗಳು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಆರಂಭಗೊಳ್ಳಲಿವೆ.
ವಹಿವಾಟು ಹೆಚ್ಚಳ: ಅಸಮರ್ಪಕ ನಿರ್ವಹಣೆ, ಸರ್ಕಾರದ ನಿರ್ಲಕ್ಷ್ಯ ಹಾಗೂ ಗ್ರಾಹಕರನ್ನು ಸೆಳೆಯಲು ವಿಫಲವಾಗಿದ್ದ ಹಾಪ್‌ಕಾಮ್ಸ್ ಇದೀಗ ದಿನವೊಂದಕ್ಕೆ 7-8 ಲಕ್ಷ ರು. ವಹಿವಾಟು ನಡೆಸುತ್ತಿದೆ.