ಮಡಿಕೇರಿ(ನ.18): ಕಾಡಾನೆಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕಾಡಾನೆಗಳು ನಾಡಿಗೆ ಬರದಂತೆ ಜಿಲ್ಲೆಯ ಅರಣ್ಯದ ಗಡಿ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ನೇತಾ​ಡುವ ಸೌರ ಬೇಲಿ​ಗ​ಳನ್ನು ಹಾಕಿದ್ದು, ಅವು ಕಾಡು ಪಾಲಾಗುತ್ತಿವೆ.

ಕೊಡಗು ಜಿಲೆಯಲ್ಲಿ ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕಿನ ಹಲವೆಡೆ ಸುಮಾರು 21 ಕಿಲೋ ಮೀಟರ್‌ ನೇತಾ​ಡುವ ಸೌರ ಬೇಲಿ​ಗ​ಳನ್ನು ಹಾಕಲಾಗಿದೆ. ಮಳೆಯಿಂದಾಗಿ ಬೇಲಿಗಳೆಲ್ಲವೂ ಗಿಡಗಂಟಿಗಳಿಂದ ಆವರಿಸಿಕೊಂಡಿದ್ದು, ಇದರ ನಿರ್ವಹಣೆ ಮಾತ್ರ ಆಗುತ್ತಿಲ್ಲ. ಇದಲ್ಲದೆ ತುಂಡಾಗಿ ಬಿದ್ದಿರುವ ಬೇಲಿಗಳನ್ನು ಸರಿಪಡಿಸುವ ಕೆಲಸವೂ ಹಾಗೇ ಇದೆ.

ಸಾವಿನ ಮನೆಮುಂದೆ ಮಸೀದಿ ಮೈಕ್ ಸೌಂಡ್ ಆಫ್, ಸೌಹಾರ್ದತೆ ಮೆರೆದ ಜನ

ಚಿಕ್ಲಿಹೊಳೆ ಜಲಾಶಯ ಸಮೀಪದಲ್ಲಿರುವ ಅರಣ್ಯದಲ್ಲಿ ಈ ಸೌರ ಬೇಲಿ ಕಾಡು ಗಿಡಗಳಿಂದ ಆವರಿಸಿದೆ. ಇದರಿಂದ ಈ ಯೋಜನೆ ಕಾಡು ಪಾಲಾಗುವ ಮುನ್ನ ಸಂಬಂಧಪಟ್ಟಇಲಾಖೆಯವರು ಎಚ್ಚೆತ್ತುಕೊಳ್ಳಬೇಕಾಗಿದೆ.

ಜಿಲ್ಲೆಯ ವಿವಿಧ ಭಾಗದಲ್ಲಿ ಕಾಡಾನೆ ಹಾವಳಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇದು ಹಲವಾರು ವರ್ಷಗಳಿಂದ ಕೊಡಗು ಜಿಲ್ಲೆ ಎದುರಿಸುತ್ತಿರುವ ಸಮಸ್ಯೆಯಾಗಿದೆ. ಅರಣ್ಯದಿಂದ ಕಾಫಿ ತೋಟಕ್ಕೆ ಲಗ್ಗೆಯಿಡುವ ಕಾಡಾನೆಗಳು ಕಾಫಿ ತೋಟದಲ್ಲಿ ದಾಂದಲೆ ನಡೆಸುತ್ತಿದ್ದು, ಬಾಳೆ, ಅಡಕೆ ಸೇರಿದಂತೆ ಗಿಡಿಗಳನ್ನು ಧ್ವಂಸ ಮಾಡುವುದರೊಂದಿಗೆ, ಮನುಷ್ಯನ ಮೇಲೂ ದಾಳಿ ನಡೆಸುತ್ತಿವೆ.

ಜೀತಕ್ಕಿದ್ದವರ ಮಾಹಿತಿ ಪಡೆಯಲು ವ್ಯಾಪಾರಿಯಂತೆ ಹೋಗಿದ್ದ ಎಸಿ!

ಕಾಡಾನೆ ದಾಳಿಯಿಂದ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ 80ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅರಣ್ಯ ಇಲಾಖೆ ಎಷ್ಟೇ ಹೊಸ ಯೋಜನೆ ತಂದರೂ ಕಾಡಾನೆಗಳ ಹಾವಳಿ ಮಾತ್ರ ನಿಲ್ಲುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಡಾನೆ ತಡೆಗೆ ಅರಣ್ಯ ಇಲಾಖೆ ವಿನೂತನ ಮಾದರಿಯ ನೇತಾ​ಡುವ ಸೌರ ಬೇಲಿ ಅಳವಡಿಸಿದೆ.

ಏನಿದು ನೇತಾ​ಡುವ ಸೌರ ಬೇಲಿ? (ಹ್ಯಾಂಗಿಂಗ್‌ ಸೋಲಾರ್‌ ಫೆನ್ಸ್‌):

ಚಿಕ್ಲಿಹೊಳೆ ಜಲಾಶಯ, ಸಿದ್ದಾಪುರದ ಮಾಲ್ದಾರೆಯ ದೇವಮಚ್ಚಿ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯದಂಚಿನಲ್ಲಿ ಈ ಹ್ಯಾಂಗಿಂಗ್‌ ಫೆನ್ಸ್‌ ಅಳವಡಿಸಿದ್ದು, ಅರಣ್ಯದ ಸುತ್ತಲೂ ಸುಮಾರು 20 ಅಡಿ ಉದ್ದದ ಕಂಬವನ್ನು ಹಾಕಲಾಗಿದ್ದು, ಪ್ರತಿ ಕಂಬದಿಂದ ಕಂಬಕ್ಕೆ ಸೋಲಾರ್‌ ವಿದ್ಯುತ್‌ ತಂತಿ ಅಳವಡಿಸಲಾಗಿದೆ. ಬಳಿಕ ಆ ತಂತಿಯಿಂದ ಕೆಳಕ್ಕೆ ಸುಮಾರು 15 ಅಡಿ ಉದ್ದದ ತಂತಿಯನ್ನು ಜೋತು ಬಿಡಲಾಗಿದೆ.

ಬಳಿಕ ತಂತಿಗಳಿಗೆ ಸೋಲಾರ್‌ನ ಮೂಲಕ ಸಣ್ಣ ಪ್ರಮಾಣದ ವಿದ್ಯುತ್‌ ಹರಿಸಲಾಗುತ್ತಿದೆ. ಕಾಡಾನೆಗಳು ಈ ಫೆನ್ಸ್‌ಗಳನ್ನು ದಾಟಿ ಬರಲು ಸಾಧ್ಯವಾಗುವುದಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷಗಾದಿ ಆಕಾಂಕ್ಷಿಗಳಿಗೆ ವಯೋಮಿತಿ ನಿಯಮ ಅಡ್ಡಿ!

ನೇತಾ​ಡುವ ಬೇಲಿ​ಯಿಂದಾ​ಗಿ ಕಾಡಾನೆಗಳು ಕಾಡಿನಿಂದ ಹೊರ ಬರುವುದನ್ನು ತಡೆಯುವುದರೊಂದಿಗೆ ಸಣ್ಣ ಪ್ರಾಣಿಗಳಿಗೂ ಕೆಳಭಾಗದ ಸುಮಾರು ಐದು ಅಡಿ ತಂತಿ ಇಲ್ಲದ ಪ್ರದೇಶದ ಮೂಲಕ ಓಡಾಡಬಹುದಾಗಿದೆ.

ಉತ್ತಮ ಯೋಜನೆ:

ಕಾಡಾನೆ ಹಾವಳಿ ತಡೆಗೆ ಸೋಲಾರ್‌ ಬೇಲಿ, ಕಂದಕ ನಿರ್ಮಾಣ ಸೇರಿದಂತೆ ಹಲವು ಯೋಜನೆಯನ್ನು ಜಾರಿಗೆ ತಂದಿದ್ದರೂ, ಕಾಡಾನೆಗಳ ಉಪಟಳ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿತ್ತು. ಕಂದಕಗಳನ್ನು ದಾಟಿ ಬರುವುದು, ಸೋಲಾರ್‌ ಬೇಲಿಗಳ ಮೇಲೆ ಮರವನ್ನು ಎತ್ತಿ ಹಾಕಿ ಕಾಡಾನೆಗಳು ಉಪಾಯದಿಂದ ನಾಡಿಗೆ ಬರುತ್ತಿತ್ತು. ನೂತನ ಪ್ರಯೋಗವಾಗಿ ಹಾಕಲಾಗಿರುವ ನೇತಾ​ಡುವ ಬೇಲಿ​ಯಿಂದಾಗಿ ಒಂದಷ್ಟುಆನೆ ಹಾವಳಿ ಕಡಿಮೆಯಾಗಿತ್ತು.

ಅಂತರಗಳಿಂದ ಬರುತ್ತಿವೆ ಆನೆಗಳು:

ಬೇಲಿ ಅಳ​ವ​ಡಿ​ಸಿ​ರುವ ಕಡೆಗಳಲ್ಲಿ ಅಂತರಗಳು ಉಂಟಾಗಿವೆ. ಇದರಿಂದ ಆ ಮೂಲಕ ಕಾಡಾನೆಗಳು ಅರಣ್ಯದಿಂದ ನಾಡಿಗೆ ಬರಬಹುದಾದ ಸಾಧ್ಯತೆಯಿದೆ. ಆದ್ದರಿಂದ ಅಂತರ ಉಂಟಾಗಿರುವ ಬೇಲಿಗಳನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತುಂಡಾದ ಬೇಲಿ​ಗ​ಳು:

ನೇತಾ​ಡುವ ಸೌರ ಬೇಲಿ​ಗಳು ತುಂಡಾಗಿ ಬಿದ್ದಿವೆ. ಇದಕ್ಕೆ ಚಿಕ್ಲಿಹೊಳೆ ಜಲಾಶಯ ಸಮೀಪದ ಅರಣ್ಯದಲ್ಲಿ ಹಾಕಲಾಗಿರುವುದು ಉದಾಹರಣೆಯಾಗಿದೆ. ಈಗ ತುಂಡಾಗಿ ಬಿದ್ದಿರುವ ಬೇಲಿ​ಯಿಂದಾಗಿ ಕಾಡಾನೆಗಳು ಸುಲಭವಾಗಿ ಕಾಡಿನಿಂದ ನಾಡಿಗೆ ದಾಟಬಹುದಾಗಿದೆ.

ರೈಲ್ವೇ ಬ್ಯಾರಿಕೇಡ್‌

ಕೊಡಗಿನಲ್ಲಿ ಗಂಭೀರ ಸಮಸ್ಯೆಯಾಗಿರುವ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯದ ಗಡಿಗಳಲ್ಲಿ ರೇಲ್ವೇ ಹಳಿ ಹಾಕುವ ಯೋಜನೆ ಸಿದ್ಧವಾಗಿದೆ. ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಕಂಬಿಗಳನ್ನು ಖರೀದಿಸಲು ಆದೇಶ ನೀಡಲಾಗಿದೆ. ಇದನ್ನು ಹಾಕುವ ಯೋಜನೆ ಸಿದ್ಧತೆಯಾಗಿದೆ. ಜಿಲ್ಲಾ ಅರಣ್ಯ ಇಲಾಖೆಯಿಂದ ವಿಸ್ತೃತ ಯೋಜನೆ ತಯಾರಾಗಿದ್ದು, ಸರ್ಕಾರ ಹಣ ಬಿಡುಗಡೆ ಮಾಡಬೇಕಾಗಿದೆ.

ಸ್ಯಾಂಡ್‌ ಬಜಾರ್‌ ಆ್ಯಪ್‌ : 11 ಸಾವಿರಕ್ಕೂ ಹೆಚ್ಚು ಜನರಿಂದ ಮರಳಿಗೆ ಬೇಡಿಕೆ.

21 ಕಿ.ಮೀ. ಸೌರ ಬೇಲಿ​ಗಳ ನಿರ್ವಹಣೆ ಮಾಡಲಾಗುವುದು. ಈ ಕೆಲಸ ಸದ್ಯದಲ್ಲೇ ಆರಂಭವಾಗಲಿದೆ. ತುಂಡಾಗಿರುವ ಬೇಲಿಗಳನ್ನು ಸರಿಪಡಿಸಲಾಗುವುದು. ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೇ ಹಳಿ ಹಾಕುವ ಯೋಜನೆ ಸಿದ್ಧವಾಗಿದ್ದು, ಸರ್ಕಾರದಿಂದ ಹಣ ಬಿಡುಗಡೆಯಾಗಬೇಕಿದೆ ಎಂದು ಮಡಿಕೇರಿ ಡಿಎಫ್‌ಒ ಪ್ರಭಾಕರನ್‌ ಹೇಳಿದ್ದಾರೆ.

ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅರಣ್ಯ ಇಲಾಖೆ ಬೇಲಿ ಅಳವಡಿಸಿದೆ. ಆದರೆ ಇದು ಪ್ರಯೋಜನವಿಲ್ಲ. ಕಾಡುಪಾಲಾಗುತ್ತಿದೆ. ಚಿಕ್ಲಿಹೊಳೆ ವ್ಯಾಪ್ತಿಯಲ್ಲಿ ಕಾಡಾನೆ ಸಾಮಾನ್ಯವಾಗಿ ಬರುತ್ತಿದೆ. ಇದರ ನಷ್ಟಯಾರು ತುಂಬಬೇಕು? ಕಂದಕವನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಕಾಡಾನೆ ಸಮಸ್ಯೆ ತಪ್ಪುತ್ತದೆ ಎಂದು ಕಂಬಿನಾಣೆ ನಿವಾಸಿ ಅರುಣ್ ಕುಮಾರ್ ಹೇಳಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು