Hubballi: ಆಮೆಗತಿಯಲ್ಲಿ ಸಾಗಿದೆ ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆ!
ಅದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ, ಮನೆ ಮನೆಗೆ ಪೈಪ್ ಲೈನ್ ಮೂಲಕ ನ್ಯಾಚುರಲ್ ಗ್ಯಾಸ್ ಪೂರೈಸುವ ಉದ್ದೇಶದಿಂದ ಜಾರಿ ಮಾಡಿರುವ ಯೋಜನೆ ಅದು.
ವರದಿ: ಗುರುರಾಜ್ ಹೂಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹುಬ್ಬಳ್ಳಿ
ಹುಬ್ಬಳ್ಳಿ (ಮೇ.06): ಅದು ಕೇಂದ್ರ ಸರ್ಕಾರದ (Central Govt) ಮಹತ್ವಾಕಾಂಕ್ಷೆಯ ಯೋಜನೆ, ಮನೆ ಮನೆಗೆ ಪೈಪ್ ಲೈನ್ (Pipeline) ಮೂಲಕ ನ್ಯಾಚುರಲ್ ಗ್ಯಾಸ್ (Natural Gas) ಪೂರೈಸುವ ಉದ್ದೇಶದಿಂದ ಜಾರಿ ಮಾಡಿರುವ ಯೋಜನೆ ಅದು. ಆದರೆ ಕಾಮಗಾರಿ ಆರಂಭಗೊಂಡು ಐದು ವರ್ಷ ಕಳೆದರೂ ಇದುವರೆಗೆ ಕೇವಲ 12500 ಮನೆಗಳಿಗೆ ಮಾತ್ರ ಗ್ಯಾಸ್‌ಲೈನ್ ಸಂಪರ್ಕ ಕಲ್ಪಿಸಲಾಗಿದ್ದು, ಯೋಜನೆ ಆಮೆಗತಿ ವೇಗದಲ್ಲಿ ಸಾಗಿದೆ.
ಕೇಂದ್ರ ಸರ್ಕಾರದ ಪೆಟ್ರೋಲಿಯಂ ಆಂಡ್ ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (PNGRB) ಯೋಜನೆಯ ಜಾರಿ ಹೊಣೆಯನ್ನು, ಇಂಡಿಯನ್ ಆಯಿಲ್-ಅದಾನಿ ಗ್ಯಾಸ್ ಕಂಪನಿಗೆ ವಹಿಸಿದೆ. ಧಾರವಾಡ ಜಿಲ್ಲೆಯಲ್ಲಿ (PNG) ಪೈಪಡ್ ನ್ಯಾಚುರಲ್ ಗ್ಯಾಸ್ ಹಾಗೂ ಕಂಪ್ರೇಸ್ಸಡ್ ನ್ಯಾಚುರಲ್ ಗ್ಯಾಸ್. (CNG) ಸಂಪರ್ಕ ಕಲ್ಪಿಸುವ ಕುರಿತ 2015 ರಲ್ಲಿ ಯೋಜನೆ ರೂಪಿಸಲಾಗಿತ್ತು.ಆದ್ರೇ 2017 ಸೆಪ್ಟೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. 2018 ಫೆಬ್ರವರಿ 10ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್ ಕಾರ್ಯಕ್ರಮದ ಮೂಲಕ ಯೋಜನೆಗೆ ಚಾಲನೆ ನೀಡಿದ್ದರು.
ಯೋಜನೆ ಕೆಲಸ ಆರಂಭಗೊಂಡು ಐದು ವರ್ಷ ಕಳೆದಿದೆ. ಉದ್ಘಾಟನೆಗೊಂಡು ನಾಲ್ಕು ವರ್ಷ ಮುಗಿದಿದೆ. ಆದರೆ ಹುಬ್ಬಳ್ಳಿ ಧಾರವಾಡದಲ್ಲಿ ಈವರೆಗೆ ಕೇವಲ 12500 ಮನೆಗಳಿಗೆ ಮಾತ್ರ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಐದು ಸಿಎನ್‌ಜಿ ಸ್ಟೇಷನ್ ಆರಂಭಿಸಲಾಗಿದೆ. ಅಷ್ಟೇ ಅಲ್ಲದೆ ಅತ್ಯಂತ ಸುರಕ್ಷಿತ ಹಾಗೂ ಎಲ್‌ಪಿಜಿ ಗ್ಯಾಸ್‌ಗಿಂತಲೂ ಕಡಿಮೆ ವೆಚ್ಚದ್ದು ಎಂಬ ಹೆಸರು ಗಳಿಸಿದ್ದರು. ಇದುವರೆಗೆ ನ್ಯಾಚುರಲ್ ಗ್ಯಾಸ್ ಸಂಪರ್ಕ ಸಂಖ್ಯೆ ಹೆಚ್ಚಳವಾಗಿಲ್ಲ.
Gadag: ಗ್ಯಾಸ್ ಫಿಲ್ಲಿಂಗ್ ಅಕ್ರಮ ಅಡ್ಡೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳಿಂದ ದಾಳಿ!
ಎಷ್ಟು ಸುರಕ್ಷಿತ?: ಎಲ್‌ಪಿಜಿ ಗ್ಯಾಸ್ ಲೀಕ್ ಆದರೆ ಒಂದೇ ಕಡೆ ನಿಲ್ಲುತ್ತದೆ. ಸುಲಭವಾಗಿ ಬೆಂಕಿಹೊತ್ತಿಕೊಳ್ಳುತ್ತದೆ. (PNG) ಗಾಳಿಯಲ್ಲಿ ಸುಲಭವಾಗಿ ಬೆರೆತು ಬಿಡುತ್ತದೆ. ಇದರಿಂದಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ. ವಾಯುಮಾಲಿನ್ಯ ಪ್ರಮಾಣ ಕಡಿಮೆ ಮಾಡುತ್ತದೆ. ಎಲ್‌ಪಿಜಿಗಿಂತಲೂ ಪಿಎನ್‌ಜಿ-ಸಿಎನ್.ಜಿ ಬಳಕೆಯಿಂದ ಹಣ ಉಳಿತಾಯವಾಗುತ್ತದೆ ಅನ್ನೊದು ಸರ್ಕಾರದ ವಾದ.
ಹುಬ್ಬಳ್ಳಿಯ ಉಣಕಲ್‌ನಲ್ಲಿ ಸಿಜಿಎಸ್: ಮಹಾರಾಷ್ಟ್ರದ ದಾಬೋಲ್‌ನಿಂದ ಗದಗ ರಸ್ತೆಯ ಮಾರ್ಗವಾಗಿ ಬೆಂಗಳೂರಿಗೆ ಗ್ಯಾಸ್‌ಪೈಪ್ ಲೈನ್ ಮೂಲಕ ಅನಿಲ ಪೂರೈಸಲಾಗುತ್ತದೆ. ಇದೇ ಮಾರ್ಗದಲ್ಲಿ ಹುಬ್ಬಳ್ಳಿ ಉಣಕಲ್‌ನ ಮಾರಡಗಿ ರಸ್ತೆಯಲ್ಲಿ ಸಿಟಿ ಗ್ಯಾಸ್ ಸ್ಟೇಷನ್ (ಸಿಜಿಎಸ್) ಗೆ ಗ್ಯಾಸ್ ಸರಬರಾಜು ಮಾಡಲಾಗುತ್ತಿದೆ. ಅಲ್ಲಿಂದ ಹುಬ್ಬಳ್ಳಿ ಧಾರವಾಡ ಅವಳಿನಗರದ ವಿವಿಧ ಬಡಾವಣೆಗಳಿಗೆ ಗ್ಯಾಸ್ ಸರಬರಾಜು ಮಾಡಲಾಗುತ್ತೆ.
ಕೈಗಾರಿಕೆಗಳಿಗೆ ಗ್ಯಾಸ್ ಲಭ್ಯ: ಗೋಕುಲ, ಗಾಮನಗಟ್ಟಿ, ರಾಯಪೂರ, ಬೇಲೂರು ಕೈಗಾರಿಕಾ ಪ್ರದೇಶಗಳ ಹಲವು ಕೈಗಾರಿಕೆಗಳಿಗೆ ಪಿ.ಎನ್.ಜಿ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಹುಬ್ಬಳ್ಳಿ ಧಾರವಾಡ 10ಕ್ಕೂ ಅಧಿಕ ಹೋಟೆಲ್‌ಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಅಧಿಕಾರಿಗಳು ಜನ ಸಮಾನ್ಯರಿಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ.
2016 ರಿಂದ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಈಗಾಗಲೇ ಪೈಪ್ಡ್ ನ್ಯಾಚುರಲ್ ಗ್ಯಾಸ್ ಅಳವಡಿಕೆ ಕಾರ್ಯ ಮುಂದುವರೆದಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಈ ಯೋಜನೆ ಪೂರ್ಣಗೊಂಡಿಲ್ಲ. ಅಧಿಕಾರಿಗಳಲ್ಲಿ ಹಾಗೂ ಜನಪ್ರತಿನಿಧಿಗಳಲ್ಲಿ ಮೂಡುತ್ತಿರುವ ನಿರಾಸಕ್ತಿ ಹಾಗೂ ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತಂತೆ ತಿಳಿವಳಿಕೆ ಹಾಗೂ ಜಾಗೃತಿ ಕೊರತೆಯೇ ಈ ಸಮಸ್ಯೆಗೆ ಕಾರಣವಾ ಅನ್ನೋ ಅನುಮಾನ ಹುಟ್ಟುಹಾಕಿದೆ. ಇನ್ನೂ ಹುಬ್ಬಳ್ಳಿ ಧಾರವಾಡ ಅವಳಿ ನಗರ 18 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ.
ರೈಲ್ವೆ ನೇಮಕಾತಿ: ನೋಟಿಫಿಕೇಶನ್ ಅಷ್ಟೇ ಅಲ್ಲ, ಅಭ್ಯರ್ಥಿಗಳ ಪಟ್ಟಿಯೂ ನಕಲಿ..!
ಮನೆ ಮನೆಗೆ ಪೈಪ್ ಲೈನ್ ಮೂಲಕ ಗ್ಯಾಸ್ ಪೂರೈಸುವ ಯೋಜನೆ ಪೂರ್ಣಗೊಳ್ಳುವುದು ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ. ನಿಧಾನಗತಿಯ ಕಾಮಗಾರಿಯಿಂದ ಜನರು ಮನೆಗೆ ನೇರವಾಗಿ ಪೈಪ್ ಲೈನ್ ಮೂಲಕ ಗ್ಯಾಸ್ ಯಾವಾಗ ಬರಲಿದೆ ಎಂದು ದಾರಿ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಯೋಜನೆಯ ಕುರಿತು ಜನರಲ್ಲಿ ಜಾಗೃತಿ ಮೂಡಿದ್ರೆ ಮಾತ್ರ ಯೋಜನೆಯ ಉಪಯೋಗ ಸಾರ್ವಜನಿಕರಿಗೆ ದೊರೆಯಲಿದೆ. ಒಟ್ಟಿನಲ್ಲಿ ಅವಳಿನಗರಕ್ಕೆ ಹಲವಾರು ಯೋಜನೆ ಬಂದರೂ ಕೆಲಸ ಮಾತ್ರ ಆಮೆಗತಿಯಲ್ಲಿ ಆಗುವುದರಿಂದ ಜನರು ಯೋಜನೆ ಉಪಯುಕ್ತತೆಯ ಭರವಸೆಯನ್ನು ಮರೆಯುವಂತಾಗಿದೆ.