Coronavirus: ಕೋವಿಡ್ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಡಾ.ಎಸ್. ಸೆಲ್ವಕುಮಾರ್ ಸೂಚನೆ
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ನಿರ್ವಹಿಸಲು ಪೂರ್ವ ಸಿದ್ಧತೆ ಜೊತೆಗೆ ಕೋವಿಡ್ ನಿಯಂತ್ರಣ ಕ್ರಮಗಳು, ಕೋವಿಡ್ ಲಸಿಕಾಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಸೂಚನೆ ನೀಡಿದರು.
ಶಿವಮೊಗ್ಗ (ಡಿ.27) : ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ನಿರ್ವಹಿಸಲು ಪೂರ್ವ ಸಿದ್ಧತೆ ಜೊತೆಗೆ ಕೋವಿಡ್ ನಿಯಂತ್ರಣ ಕ್ರಮಗಳು, ಕೋವಿಡ್ ಲಸಿಕಾಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಸೂಚನೆ ನೀಡಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರ ಈಗಾಗಲೇ ಕೋವಿಡ್ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದೆ. ಜಿಲ್ಲೆಯಲ್ಲಿನ ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ, ಆಕ್ಸಿಜನ್ ಪೂರೈಕೆ, ವೆಂಟಿಲೇಟರ್ ಸೇರಿದಂತೆ ಎಲ್ಲಾ ವ್ಯವಸ್ಥೆ ಗಳನ್ನು ಸಜ್ಜುಗೊಳಿಸಬೇಕು. ತಾಂತ್ರಿಕ ಸಿಬ್ಬಂದಿಯಿಂದ ಎಲ್ಲಾ ವ್ಯವಸ್ಥೆ ಮರುಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.
ಮಂತ್ರಿಗಿರಿ ಲಾಬಿ ಬಿಟ್ಟು ಈಶ್ವರಪ್ಪ ಸದನಕ್ಕೆ ಹೋಗಲಿ: ಕೆ.ಬಿ.ಪ್ರಸನ್ನಕುಮಾರ್
ಕೇಂದ್ರಿತ ಪ್ರದೇಶಗಳಲ್ಲಿ ಐಎಲ್‌ಐ, ಸಾರಿ (ಎಸ್‌ಎಆರ್‌ಐ) ಪ್ರಕರಣಗಳನ್ನು ಕೋವಿಡ್ ಪರೀಕ್ಷೆ ಒಳಪಡಿಸಬೇಕು. ಎಲ್ಲರೂ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅಳವಡಿಸಿ ಕೊಳ್ಳಬೇಕೆಂದು ತಿಳಿಸಿದರು.
ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಮಾತನಾಡಿ, ಗೋವುಗಳ ಚರ್ಮಗಂಟು ರೋಗದ ಲಸಿಕಾಕರಣ ನಡೆಯುತ್ತಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ 5829 ಜಾನುವಾರುಗಳಿಗೆ ವಿಮೆ ಮಾಡಿಸಲಾಗಿದೆ. ಶೇ.84 ಕೃತಕ ಗರ್ಭಧಾರಣೆ, ಶೇ.101 ಕೋಳಿಗಳ ಕೊಕ್ಕರೆ ರೋಗದ ವಿರುದ್ಧ ಲಸಿಕೆ ಹಾಕಲಾಗಿದೆ. 1,64,889 ರಾಸುಗಳಿಗೆ ಕಾಲುಬಾಯಿ ಜ್ವರದ ವಿರುದ್ಧ ಲಸಿಕೆ ಹಾಕಲಾಗಿದೆ. 486601 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, 18 ವಾರಗಳಿಗೆ ಆಗುವಷ್ಟುಲಭ್ಯವಿದೆ ಎಂದು ಮಾಹಿತಿ ನೀಡಿದರು.
ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಜಿಲ್ಲೆಯಲ್ಲಿ ಜನವರಿ 1ರಿಂದ ನವೆಂಬರ್ 30ವರೆಗೆ ಜಿಲ್ಲೆಯಲ್ಲಿ ಸರಾಸರಿ 2410 ಮಿ.ಮೀ. ಮಳೆಯಾಗಿದೆ. 2022ರ ಮುಂಗಾರು ಹಂಗಾಮಿನಲ್ಲಿ 79,602 ಹೆ. ಭತ್ತದ ಗುರಿ ಇದ್ದು 79131 ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗಿದೆ. 46877 ಹೆ. ಮುಸುಕಿನ ಜೋಳ, 742 ಹೆ.ನಲ್ಲಿ ಏಕದಳ (ರಾಗಿ-ಜೋಳ), 353 ಹೆ. ಪ್ರದೇಶದಲ್ಲಿ ದ್ವಿದಳ ಧಾನ್ಯ ಮತ್ತು 1127 ಹೆ.ನಲ್ಲಿ ವಾಣಿಜ್ಯ ಬೆಳೆ ಬೆಳೆಯಲಾಗಿದೆ. ಏಪ್ರಿಲ್‌ನಿಂದ ನವೆಂಬರ್‌ವರೆಗೆ 121390 ಮೆಟ್ರಿಕ್ ಟನ್ ರಸ ಗೊಬ್ಬರದ ಬೇಡಿಕೆ ಇದ್ದು, 132662 ಮೆ.ಟನ್ ಗೊಬ್ಬರ ವಿತರಣೆಯಾಗಿದ್ದು, 25165 ಮೆ.ಟನ್ ದಾಸ್ತಾನಿದೆ. ಶೇ.81 ರಷ್ಟುಬೀಜ ವಿತರಣೆ ಹಾಗೂ ಶೇ.80.09ರಷ್ಟುಔಷಧ ವಿತರಣೆಯಾಗಿದೆ ಎಂದು ವಿವರಿಸಿದರು.
ಡಿಡಿಪಿಐ ಪರಮೇಶ್ವರಪ್ಪ ಮಾತನಾಡಿ, 2020-21 ಮತ್ತು 2021-22 ರಲ್ಲಿ ನರೇಗಾ ಯೋಜನೆಯಡಿ ಒಟ್ಟು 133 ಶಾಲೆಗಳಿಗೆ ಕೊಠಡಿಗಳು ಮಂಜೂರಾಗಿದ್ದು, ಇಲ್ಲಿಯವರೆಗೆ 66 ಕೊಠಡಿ ನಿರ್ಮಾಣ ಮುಗಿದಿದೆ. ಎಸ್‌ಡಿಪಿ ಯೋಜನೆಯಡಿ 5 ಶಾಲೆಗಳ ಕೊಠಡಿ ನಿರ್ಮಾಣ ಮತ್ತು 16 ಶಾಲೆಗಳ ಕೊಠಡಿ ದುರಸ್ತಿಗೆ ಮಂಜೂರಾತಿ ದೊರೆತಿದ್ದು, 04 ಕೊಠಡಿಗಳು ಮಾತ್ರ ಪೂರ್ಣಗೊಂಡಿವೆ ಎಂದರು.
ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ ಮಾತನಾಡಿ, ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 30 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು ಈವರೆಗೆ 27,32,440 ಮಾನವ ದಿನಗಳನ್ನು ಪೂರೈಸಿ ಶೇ.91.08 ಭೌತಿಕ ಮತ್ತು ಶೇ.78.69 ಆರ್ಥಿಕ ಗುರಿ ಸಾಧಿಸಲಾಗಿದೆ ಎಂದರು.
ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ಬಸವ ವಸತಿ ಯೋಜನೆಯಡಿ 6231 ಮನೆಗಳ ಗುರಿ ನೀಡಲಾಗಿದ್ದು, 5682 ಅರ್ಜಿ ಆಯ್ಕೆಯಾಗಿವೆ. ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ 1919 ಗುರಿ ಇದ್ದು 1432 ಅರ್ಜಿ ಆಯ್ಕೆಯಾಗಿವೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಡಿ. ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
891 ಜನರಿಗೆ ಪರೀಕ್ಷೆ: 2 ಪಾಸಿಟಿವ್
ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಸಂಬಂಧ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಹಾಸಿಗೆ ಮತ್ತು ಆಮ್ಲಜನಕ ಪೂರೈಕೆ ಪರಿಶೀಲಿಸಲಾಗಿದೆ. ಕಳೆದ ವಾರ 891 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಇಬ್ಬರಿಗೆ ಪಾಸಿಟಿವ್ ಕಂಡು ಬಂದಿದೆ. ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಔಷಧಿಗಳ ಕೊರತೆ ಇದ್ದು, ಪತ್ರ ಬರೆಯ ಲಾಗಿದೆ ಎಂದು ಡಿಹೆಚ್‌ಒ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದರು.
Shivamogga: ಮದ್ದಿಲ್ಲದ KFD ತಡೆಗೆ ಕೋವಿಡ್ ಲಸಿಕೆ ಅಡ್ಡಿ..!
ಈವರೆಗೆ ಜಿಲ್ಲೆಯಲ್ಲಿ 12 ರಿಂದ 14 ವಯಸ್ಸಿನವರಿಗೆ ಕೋವಿಡ್ ಲಸಿಕೆ ಮೊದಲನೇ ಡೋಸ್ ಶೇ.110 ಮತ್ತು ಎರಡನೇ ಡೋಸ್ ಶೇ.86 ನೀಡಲಾಗಿದೆ. 15 ರಿಂದ 17 ವಯಸ್ಸಿ ನವರಿಗೆ ಮೊದಲನೇ ಡೋಸ್ ಶೇ.86, ಎರಡನೇ ಡೋಸ್ ಶೇ.97, 18 ವರ್ಷ ಮೇಲ್ಪಟ್ಟಮೊದಲನೇ ಡೋಸ್ 102, ಎರಡನೇ ಡೋಸ್ ಶೇ.99 ಹಾಗೂ ಮುನ್ನೆಚ್ಚರಿಕೆ ಡೋಸ್ ಶೇ.16 ನೀಡಲಾಗಿದ್ದು, ಮುನ್ನೆಚ್ಚರಿಕೆ ಡೋಸ್ ಶೇ.100 ಸಾಧನೆಗೆ ಕ್ರಮ ವಹಿಸಲಾಗುತ್ತಿದೆ ಎಂದು ವಿವರಿಸಿದರು.