ಪುಸ್ತಕ, ಯೂ ಟ್ಯೂಬ್ ನೋಡಿ ಕೃಷಿ ಕಲಿತು ಲಕ್ಷ ಲಕ್ಷ ಸಂಪಾದಿಸುತ್ತಿರುವ ಮಹಿಳೆ!
ಮಹಿಳಾ ಮನಸ್ಸು ಮಾಡಿದಲ್ಲಿ ಯಾವ ಸಾಧನೆಯೂ ಆಕೆಯ ಕೈ ಹಿಡಿಯಲಿದೆ. ಈ ಕೃಷಿಕ ಮಹಿಳೆ ಸಾಲದ ಸುಳಿಯಲ್ಲಿದ್ದ ಕುಟುಂಬವನ್ನ ಅದರಿಂದ ರಕ್ಷಿಸಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.
ವರದಿ : ದೇವರಾಜು ಕಪ್ಪಸೋಗೆ
ಚಾಮರಾಜನಗರ (ಮಾ.08): ಸಾಲದ ಸುಳಿಯಲ್ಲಿದ್ದ ಕುಟುಂಬವನ್ನು ಮೇಲೆತ್ತಿ, ಸಮಗ್ರ ಕೃಷಿ ಪದ್ಧತಿಗೆ ಕುಟುಂಬವನ್ನು ಒಪ್ಪಿಸಿ ಇಡೀ ಕುಟುಂಬಕ್ಕೆ ಆಧಾರ ಮಾಡಿಕೊಟ್ಟಈ ಮಹಿಳೆ ಕುಟುಂಬದ ಕಣ್ಣಾಗಿದ್ದಾರೆ.
- ಹೌದು, ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರ ಗ್ರಾಮದ ‘ಪ್ರಭಾಮಣಿ’ ಎಂಬವರು ತನ್ನ ತಮ್ಮ ನೀಡಿದ ಸಮಗ್ರ ಕೃಷಿ, ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳ ಕೃಷಿಗೆ ಸಂಬಂಧಿಸಿದ ಹತ್ತಾರು ಪುಸ್ತಕಗಳನ್ನು ಓದಿ, ಯೂಟ್ಯೂಬ್‌ನಲ್ಲಿ ಕೃಷಿಗೆ ಸಂಬಂಧಿಸಿದಂತೆ ಬರುವ ಮಾಹಿತಿ ಪಡೆದು ಇಡೀ ಕುಟುಂಬವನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಸೈ ಎನಿಸುವಷ್ಟರ ಮಟ್ಟಿಗೆ ಆದಾಯದ ಮೂಲ ಕಂಡುಕೊಂಡಿದ್ದಾರೆ.
5 ಎಕರೆ ಜಮೀನಿನಲ್ಲಿ 1 ಎಕರೆ ಪ್ರದೇಶವನ್ನು ಸೊಪ್ಪು, ತರಕಾರಿ ಬೆಳೆಯಲು ಮೀಸಲಿಟ್ಟಿದ್ದು, ಅದನ್ನು ಭಾಗ ಮಾಡಿಕೊಂಡು 10 ಗುಂಟೆ ಜಾಗದಲ್ಲಿ ವಿವಿಧ ಬಗೆಯ ತರಕಾರಿ, ಸೊಪ್ಪುಗಳನ್ನು ಬೆಳೆಯಲಿದ್ದು, ವಿವಿಧ ಅವಧಿಯಲ್ಲಿ ಫಸಲು ಕೈ ಸೇರುವುದರಿಂದ ಪ್ರತಿದಿನ .1500 ಆದಾಯಗಳಿಸುತ್ತಾರೆ. ಇದರೊಟ್ಟಿಗೆ, ವಾಣಿಜ್ಯ ಬೆಳೆಗಳಾದ ಅರಿಶಿಣ, ಬಾಳೆ, ಕೋಸು ಹಾಗೂ ಕಬ್ಬನ್ನು ಬೆಳೆಯುತ್ತಿದ್ದು, ಹೈನುಗಾರಿಕೆ ನಡೆಸುವ ಮೂಲಕ ನಿತ್ಯ 10 ರಿಂದ 12 ಲೀಟರ್ ಹಾಲು ಹಾಕುತ್ತಾರೆ. ನರ್ಸರಿಯೂ ಇದ್ದೂ ಸಮಗ್ರ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ.
ಇದ್ದ ಜಮೀನನ್ನು ಗುತ್ತಿಗೆ ಕೊಟ್ಟು ಕೂಲಿ ಮಾಡುತ್ತಿದ್ದ ಕುಟುಂಬವನ್ನು ಈಗ ‘ಪ್ರಭಾಮಣಿ’ ಸ್ವಾವಲಂಬಿ ಜೀವನ ನಡೆಸುವಂತೆ ಮಾಡಿದ್ದು. ಒಂದೇ ಬೆಳೆ ಬೆಳೆದು ಕೈ ಸುಟ್ಟುಕೊಂಡು ಸಾಲದಸೋಲಿಗೆ ಸಿಲುಕಿದ್ದ ಪತಿಗೆ ಮಾರ್ಗದರ್ಶನ ಮಾಡಿ ಸಮಗ್ರ ಕೃಷಿ ಆರಂಭಿಸಿ ಪ್ರತಿದಿನ .1500 ಆದಾಯ ಕಾಣುತ್ತಿದ್ದಾರೆ.
ಮೈಸೂರು; ಸುಸ್ಥಿರ ಕೃಷಿಯಲ್ಲಿ ಸೈ ಎನಿಸಿಕೊಂಡ ಸಾಧಕಿ
ಪುಸ್ತಕಗಳು, ಯೂಟ್ಯೂಬ್ ವಿಡಿಯೋ, ಕೆವಿಕೆ ವಿಜ್ಞಾನಿಗಳ ಸಹಾಯ ಪಡೆದು ಕೃಷಿ ಚಟುವಟಿಕೆ ನಡೆಸುವುದಲ್ಲದೇ, ನರ್ಸರಿ ಮಾಡಿ ಕೊಂಡಿರುವ ‘ಪ್ರಭಾಮಣಿ’ 20ರಿಂದ 25 ಬಗೆಯ ತರಕಾರಿ, ಸೊಪ್ಪಿನ ಬೀಜಗಳನ್ನು ತಯಾರಿಸಿಕೊಳ್ಳಲಿದ್ದು, ರಾಸಾಯನಿಕ ಮುಕ್ತ ತರಕಾರಿ, ಸೊಪ್ಪನ್ನು ಬೆಳೆಯುತ್ತಿದ್ದಾರೆ. ಆದಾಯ ಗಳಿಸುತ್ತಿದ್ದಂತೆ ಮಿನಿ ಟ್ರ್ಯಾಕ್ಟರ್ ಕೂಡ ಕೊಂಡುಕೊಂಡು ಸ್ವಂತ ಕೆಲಸ ಮತ್ತು ಬಾಡಿಗೆಗೂ ಪತಿ ಪ್ರಕಾಶ್ ತೆರಳುತ್ತಾರೆ.
‘ಪ್ರಭಾಮಣಿ’ ಹಾಗೂ ಪ್ರಕಾಶ್, ತಂದೆ-ತಾಯಂದಿರು, ಮಕ್ಕಳು ಕೂಡ ಜಮೀನಿನಲ್ಲಿ ಕೆಲಸ ಮಾಡಲಿದ್ದು, ಕಾರ್ಮಿಕರನ್ನು ಇವರು ಬಳಸಿಕೊಳ್ಳುವುದು ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರವಾದ್ದರಿಂದ ಕೂಲಿ ಕಾರ್ಮಿಕರ ಹಣವೂ ಇವರಿಗೆ ಉಳಿತಾಯವಾಗಿದೆ.
ಏನು ಬೆಳೆದಿದ್ದಾರೆ?
ಕ್ಯಾರೆಟ್, ಬೀನ್ಸ್, ಹೀರೇಕಾಯಿ, ಕುಂಬಳಕಾಯಿ, ಸೋರೆಕಾಯಿ, ಬೆಂಡೆಕಾಯಿ, ಈರುಳ್ಳಿ, ಬೀಟ್ ರೂಟ್, ಬದನೆ, ಅಗಸೆ, ನುಗ್ಗೆ ಸೊಪ್ಪು, ಪಾಲಾಕ್, ದಂಟು, ಮೆಂತ್ಯೆ, ಕಿಲಕಿರೆ, ಪುದಿನಾ, ಕೊತ್ತಂಬರಿ, ಸಬಸಿಗೆ ಹಾಗೂ ಕರಿಬೇವು ಸೊಪ್ಪನ್ನು ಕೇವಲ 10 ಗುಂಟೆ ಜಾಗದಲ್ಲಿ ಬೆಳೆಯುತ್ತಿದ್ದಾರೆ. ಒಂದು ಬೆಳೆ ತೆಗೆದುಕೊಂಡ ಮತ್ತೊಂದು ಸ್ಧಳದಲ್ಲಿ ಸೊಪ್ಪು ಬೆಳೆಯುತ್ತಾರೆ. ಇನ್ನು, ಸೌತೆಕಾಯಿ, ಟೊಮೆಟೋ, ಪರಂಗಿ, ಬಾಳೆ, ಅರಿಶಿಣ, ಕೋಸು, ಕಬ್ಬು ಬೆಳೆಯಲಿದ್ದು 5 ಹಸುಗಳನ್ನು ಸಾಕಿಕೊಂಡಿದ್ದಾರೆ.
‘ಪ್ರಭಾಮಣಿ’ ಓದಿದ ಪುಸ್ತಕಗಳು ಯಾವುವು?
ಪುಸ್ತಕದ ಬದನೆಕಾಯಿ, ಕೃತಿಯೇ ಬೇರೆ- ಕಾರ್ಯವೇ ಬೇರೆ ಎಂಬ ಮಾತುಗಳಿಗೆ ಅಪವಾದದಂತೆ ಪುಸ್ತಕಗಳನ್ನು ಓದಿ ಸಮಗ್ರ ಕೃಷಿಗೆ ಪ್ರೇರೆಪಣೆ ಪಡೆದು ದಿನಕ್ಕೆ ಒಂದೂವರೆ ಸಾವಿರ ರು. ಆದಾಯ ಪಡೆಯುತ್ತಿರುವ ಪ್ರಭಾಮಣಿ ಅವರಿಗೆ ನೈಸರ್ಗಿಕ ತೋಟಗಾರಿಕೆ ಬೆಳೆಗಳ ಪೋಷಣೆ ಶಾಸ್ತ್ರ-ಭಾಗ 1 ಮತ್ತು 2, ನೈಸರ್ಗಿಕ ಕೃಷಿಯ ತಾಂತ್ರಿಕತೆ, ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ, ಸಾವಯವ ಕೃಷಿ- ಒಂದು ಸಂಚು, ಒಂದು ವಂಚನೆ, ನೈಸರ್ಗಿಕ ತೋಟಗಾರಿಕೆ, ನಾಟಿ ಹಸು, ಸುಭಾಶ್ ಪಾಳೇಕರ್ ಅವರ ಮಾದರಿ, ದಿ ಫಿಲಾಸಫಿ ಆಫ್ ಸ್ಪಿರಿಚ್ಯುವಲ್ ಫಾರ್ಮಿಂಗ್ ಪುಸ್ತಕಗಳನ್ನು ಓದಿ ಲಾಭ ಕಂಡುಕೊಂಡಿದ್ದಾರೆ. ಇದರೊಟ್ಟಿಗೆ, ಯೂಟ್ಯೂಬ್‌ನಲ್ಲಿ ಪ್ರಗತಿಪರ ರೈತರು ಅಳವಡಿಸಿಕೊಂಡಿರುವ ಮಾದರಿಗಳ ವಿಡಿಯೋಗಳು ಕೂಡ ಇವರ ಮಾರ್ಗದರ್ಶಕವಾಗಿವೆ.
ನಾನು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. 6 ಸಾವಿರ ಸಂಬಳ ಬರುತಿತ್ತು. ತಿಂಗಳಿಗೆ 1 ಸಾವಿರ ರು. ಬಸ್ ಚಾಜ್‌ರ್, 1 ಸಾವಿರ ತರಕಾರಿ- ಹಣ್ಣಿಗೆ, 800 ರು. ಹಾಲಿಗೆ ಹೋಗುತ್ತಿತ್ತು. ನೆಮ್ಮದಿಯೂ ಇರಲಿಲ್ಲ. ಕೃಷಿ ಪ್ರಾರಂಭಿಸಿದ ಮೇಲೆ ಇದೆಲ್ಲಾ ಉಳಿತಾಯವಾಗಿ ಬೇಕದ್ದನೆಲ್ಲ ನಾವೇ ಬೆಳೆದುಕೊಳ್ಳುತಿದ್ದೇವೆ. ನನ್ನ ತಮ್ಮ ನೀಡಿದ ಕೃಷಿಗೆ ಸಂಬಂಧಿಸಿದ ಪುಸ್ತಕಗಳಿಂದ ನಮ್ಮ ಜೀವನ ಬದಲಾಯಿತು. ಕೃಷಿಯಿಂದ ಖುಷಿ ಜೀವನ ನಡೆಸುತ್ತಿದ್ದೇವೆ.
- ಪ್ರಭಾಮಣಿ, ರೈತ ಮಹಿಳೆ, ಅಟ್ಟುಗೂಳಿಪುರ
ಪ್ರಭಾಮಣಿ ಅವರು ಆಗಾಗ್ಗೆ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವ ಜೊತೆಗೆ ಕೃಷಿ ಸಂಬಂಧಿಸಿದ ತರಬೇತಿ ಮತ್ತುಕಾರ್ಯಗಾರಗಳಲ್ಲೂ ಭಾಗವಹಿಸುವ ಮೂಲಕ ಎಲ್ಲವನ್ನು ಅಳವಡಿಸಿ ಕೊಂಡು ಮಾದರಿ ರೈತ ಮಹಿಳೆಯಾಗಿದ್ದಾರೆ. ನಿಜಕ್ಕೂ ಇವರ ಕೃಷಿ ಕಾಯಕ ಮೆಚ್ಚುವಂತಹದ್ದು.
- ಡಾ.ಯೋಗೇಶ್ ಜಿ.ಎಸ್., ಮಣ್ಣು ವಿಜ್ಞಾನಿ, ಕೆವಿಕೆ.