Asianet Suvarna News Asianet Suvarna News

ಉಡುಪಿ ಸೀರೆಗಳಿಗೆ ಅಡಕೆ ಚೊಗರಿನ ನೈಸರ್ಗಿಕ ಬಣ್ಣ ನೀಡುವ ಪ್ರಯೋಗ ಯಶಸ್ಸು

ಪ್ರಸ್ತುತ ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಉಡುಪಿ ಸೀರೆಗಳಿಗೆ ಅಡಕೆ ಚೊಗರಿನ ವರ್ಣದೊಂದಿಗೆ ಹೊಸ ರೂಪ ಪಡೆಯುತ್ತಿವೆ. ಕಳೆದ ನಾಲ್ಕು ತಿಂಗಳಿನಿಂದ ನೇಕಾರರು ಕೈಮಗ್ಗದ ಬಟ್ಟೆಗಳಿಗೆ ಅಡಕೆ ಚೊಗರಿನ ಬಣ್ಣ ನೀಡುವ ಪ್ರಯೋಗದಲ್ಲಿ ತೊಡಗಿಸಿಕೊಂಡಿದ್ದು ಯಶಸ್ಸು ದೊರಕಿದೆ.

Success in dyeing Udupi sarees with nut chogari natural colour rav
Author
First Published Jul 30, 2023, 10:29 AM IST

ವಿಶೇಷ ವರದಿ

ಮೂಲ್ಕಿ (ಜು.30) :  ಕೈಮಗ್ಗ ನಶಿಸುತ್ತಿರುವ ಸಂದರ್ಭದಲ್ಲಿ ಕೆಲವು ವರ್ಷಗಳ ಹಿಂದೆ ಕಾರ್ಕಳದ ಕದಿಕೆ ಟ್ರಸ್ಟ್‌ ಕಿನ್ನಿಗೋಳಿ ತಾಳಿಪಾಡಿಯ ನೇಕಾರರ ಸಂಘದ ಜೊತೆಗೂಡಿ ನೇಕಾರರ ಯುವ ಪೀಳಿಗೆಗೆ ತರಬೇತಿ ಹಾಗೂ ಸವಲತ್ತುಗಳನ್ನು ನೀಡಿ ಕಿನ್ನಿಗೋಳಿಯಲ್ಲಿ ಉಡುಪಿ ಸೀರೆಗಳನ್ನು ತಯಾರಿಸುವ ಕಾಯಕ ಕೈಗೆತ್ತಿಗೊಂಡಿತು. ಕೈಮಗ್ಗದ ಬಟ್ಟೆಗಳಿಗೆ ಪುನಶ್ಚೇತನ ನೀಡುವ ಕಾರ್ಯ ನಡೆಸಿದ್ದು, ಉಡುಪಿಯ ಕೃಷ್ಣಮಠದಲ್ಲಿ ಇಂದಿಗೂ ಇಲ್ಲಿಂದ ತಯಾರಿಸುವ ಕೈಮಗ್ಗ ಸೀರೆ ಬಳಕೆಯಾಗುತ್ತಿದೆ.

ಉಡುಪಿ ಸೀರೆಗೆ ಅಡಕೆ ಚೊಗರಿನ ವರ್ಣ:

ಪ್ರಸ್ತುತ ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಉಡುಪಿ ಸೀರೆಗಳಿಗೆ ಅಡಕೆ ಚೊಗರಿನ ವರ್ಣದೊಂದಿಗೆ ಹೊಸ ರೂಪ ಪಡೆಯುತ್ತಿವೆ. ಕಳೆದ ನಾಲ್ಕು ತಿಂಗಳಿನಿಂದ ನೇಕಾರರು ಕೈಮಗ್ಗದ ಬಟ್ಟೆಗಳಿಗೆ ಅಡಕೆ ಚೊಗರಿನ ಬಣ್ಣ ನೀಡುವ ಪ್ರಯೋಗದಲ್ಲಿ ತೊಡಗಿಸಿಕೊಂಡಿದ್ದು ಯಶಸ್ಸು ದೊರಕಿದೆ.

News Hour: ಉಡುಪಿ ವಿಡಿಯೋಕಾಂಡ, ತನಿಖೆಯಂತೂ ಶುರುವಾಯ್ತು, ತಾರ್ಕಿಕ ಅಂತ್ಯ ಸಿಗುತ್ತಾ?

ತಾಳಿಪಾಡಿ ಸಂಘವು ಅಡಕೆಯ ಚೊಗರು ಬಳಸಿ ಕಂದು, ಕೆಂಪು ಸಹಿತ ನಾಲ್ಕಾರು ಛಾಯೆಗಳುಳ್ಳ ಸೀರೆಗಳನ್ನು ಸಿದ್ಧಪಡಿಸಿದ್ದು ಒಂದೇ ದ್ರಾವಣವನ್ನು 2-3 ಬಾರಿ ಬಳಸಬಹುದು. ಇದರಲ್ಲಿ ನೂಲನ್ನು ಪ್ರತಿ ಬಾರಿ ಸಂಸ್ಕರಿಸಿದಾಗ ಛಾಯೆ ಬದಲಾಗುತ್ತದೆ. ಹಿಂದೆ ಮಂಜಿಷ್ಠ ಗಿಡದ ಬೇರಿನ ಪುಡಿಯಿಂದ ಕೆಂಪು, ನೇರಳೆ, ದಾಳಿಂಬೆ ಸಿಪ್ಪೆಯಿಂದ ಹಳದಿ, ಬೂದು, ಇಂಡಿಗೋದಿಂದ ನೀಲ, ಕಾಡು ಬಾದಾಮಿ ಗಿಡದ ಎಲೆಯಿಂದ ಹಳದಿ, ಚೆಂಡು ಹೂವುಗಳಿಂದ ಹಳದಿ ವರ್ಣಗಳನ್ನು ಸಿದ್ಧಪಡಿಸಲಾಗುತ್ತಿತ್ತು.

ಇದೀಗ ಅಡಕೆ ಚೊಗರು ಹೊಸ ಸೇರ್ಪಡೆಯಾಗಿದೆ. ಇದರಿಂದ ನೀರುಳ್ಳಿಯ ವರ್ಣ, ಕೆಂಪು, ಗಾಢ ಕಂದು ಬಟ್ಟೆಸಿದ್ಧಪಡಿಸಬಹುದಾಗಿದೆ. ಕದಿಕೆ ಟ್ರಸ್ಟ್‌ನ ಮಮತಾ ರೈ ಮಾರ್ಗದರ್ಶನದಲ್ಲಿ ವಾಸುದೇವ ಶೆಟ್ಟಿಗಾರ್‌ ಮತ್ತು ದಿನೇಶ್‌ ಶೆಟ್ಟಿಗಾರ್‌ ಅಡಕೆ ಚೊಗರಿನ ಪುಡಿಯಿಂದ ಬಣ್ಣಗಳನ್ನು, ಶಾರದಾ ಶೆಟ್ಟಿಗಾರ್‌, ಸಾಧನಾ ಶೆಟ್ಟಿಗಾರ್‌ ಸೀರೆಗಳನ್ನು ನೇಯ್ದು ತಯಾರಿಸಿದ್ದಾರೆ.

ಕೈಮಗ್ಗದಲ್ಲಿ ತಯಾರಾಗುವ ಉಡುಪಿ ಸೀರೆಗೆ ಬೇಡಿಕೆ ಹೆಚ್ಚಿದ್ದು ಎರಡು ವರ್ಷಗಳಲ್ಲಿ ನೇಕಾರರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದಾಯವಿಲ್ಲದೆ ನೇಕಾರಿಕೆಯಿಂದ ದೂರವಾಗಿದ್ದವರು 10-15 ವರ್ಷಗಳ ಬಳಿಕ ಮತ್ತೆ ಮಗ್ಗಗಳತ್ತ ಮರಳುತ್ತಿದ್ದಾರೆ. ಹೊಸ ತಲೆಮಾರಿನ ಪದವಿ, ಡಿಪ್ಲೊಮಾ ಪದವೀಧರರೂ ನೇಕಾರಿಕೆ ಕಲಿತು ಕೈಮಗ್ಗದಲ್ಲಿ ಸೀರೆ, ಶಾಲು, ಟವಲ್‌, ಶರ್ಚ್‌ಪೀಸ್‌ಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಧೂಳು ಹಿಡಿದು ಮೂಲೆ ಸೇರಿದ್ದ ಕೈಮಗ್ಗಗಳೆಲ್ಲ ರಿಪೇರಿ ಕಂಡು ಉಡುಗೆ ನೇಯಲು ಸಿದ್ಧವಾಗುತ್ತಿವೆ.

ಎರಡು ವರುಷಗಳಲ್ಲಿ ತಾಳಿಪಾಡಿ ನೇಕಾರರ ಸಹಕಾರ ಸಂಘದ ವ್ಯಾಪ್ತಿಯಲ್ಲಿದ್ದ ನೇಕಾರರ ಸಂಖ್ಯೆ 8ರಿಂದ 34ಕ್ಕೇರಿದೆ. ಉಡುಪಿಯಲ್ಲಿ 10, ಬ್ರಹ್ಮಾವರದಲ್ಲಿ 5 ಹಾಗೂ ಮಂಗಳೂರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ 11 ಮಂದಿ ನೇಕಾರರಿದ್ದಾರೆ. ಒಟ್ಟು 72 ಮಂದಿ ನೇಕಾರರಿದ್ದಾರೆ. ಅವರಲ್ಲಿ 67 ಮಂದಿ ಉಡುಪಿ ಸೀರೆ ನೇಯುತ್ತಾರೆ.

ತಿಂಗಳಿಗೆ ನೂರು ಸೀರೆ ತಯಾರಿ: ಪ್ರತಿ ತಿಂಗಳು ತಾಳಿಪಾಡಿ ಸಂಘದಲ್ಲಿ ಸಹಜ ಬಣ್ಣದ 30 ಹಾಗೂ ಇತರ 70 ಸೀರೆಗಳು ಸೇರಿದಂತೆ 100 ಸೀರೆಗಳು ತಯಾರಾಗುತ್ತಿವೆ. ಎರಡು ಮಗ್ಗಗಳಲ್ಲಿ ಉಡುಪಿ ಕೃಷ್ಣಮಠಕ್ಕೆ ಶಾಲುಗಳನ್ನು ತಯಾರಿಸಲಾಗುತ್ತಿದೆ. ಪ್ರತಿ ಸೀರೆಗಳಲ್ಲಿ ಆಯಾ ನೇಕಾರರ ಚಿತ್ರಗಳನ್ನು ಮುದ್ರಿಸಲಾಗುತ್ತಿದ್ದು, ಜಿ.ಐ. ಟ್ಯಾಗ್‌ ಹಾಕಲಾಗುತ್ತಿದೆ. ಸಂಜೀವ ಶೆಟ್ಟಿಗಾರ್‌ ನೇಯ್ದ ಸೀರೆಗೆ ಡಿಮಾಂಡ್‌ ಹೆಚ್ಚಿದ್ದು, ಅವರು ನೇಕಾರರಲ್ಲಿ ಸದ್ಯದ ಸ್ಟಾರ್‌ ಆಗಿದ್ದಾರೆ.

ನಬಾರ್ಡ್‌ ಸಹಕಾರದೊಂದಿಗೆ ಕದಿಕೆ ಟ್ರಸ್ಟ್‌ ಪ್ರಯತ್ನದಿಂದ ತಾಳಿಪಾಡಿ ಸಂಘದಲ್ಲಿ 25 ಕೈಮಗ್ಗಗಳು ಕಾರ್ಯನಿರ್ವಹಿಸುತ್ತಿವೆ. ಒಂದೆರಡು ಮಗ್ಗಗಳಿಗೆ ಸೆಲ್ಕೊದಿಂದ ಸೋಲಾರ್‌ ಡ್ರೈಯರ್‌ ಅಳವಡಿಸುವ ಕಾರ್ಯ ಆರಂಭವಾಗಿದೆ.

ಈಗ ಆನ್‌ಲೈನ್‌ನಲ್ಲಿ ಮಾರಾಟ ಯಶಸ್ವಿಯಾಗಿದ್ದು ರಾಜ್ಯ ಮಾತ್ರವಲ್ಲ ದೇಶ ವಿದೇಶದಿಂದಲೂ ಬೇಡಿಕೆ ಬರುತ್ತಿದೆ. ನಮ್ಮ ಪ್ರಾಜೆಕ್ಟ್ ಅತ್ಯುತ್ತಮವಾಗಿದೆ ಎಂದು ನಬಾರ್ಡ್‌ ಕೂಡ ಶ್ಲಾಘಿಸಿದೆ ಎನ್ನುತ್ತಾರೆ ಕದಿಕೆ ಟ್ರಸ್ಟ್‌ನ ಮಮತಾ ರೈ.

ಪೊಲೀಸ್ ತನಿಖೆ ಮೇಲೆ ಅಪನಂಬಿಕೆ ಇದ್ರೆ ಕಲ್ಲಡ್ಕ ಪ್ರಭಾಕರ್ ಭಟ್ಟರಿಂದ ಮಾಡಿಸಿ: ಯಶ್‌ಪಾಲ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬಹು ವರ್ಷಗಳ ಹಿಂದೆ ರಾಷ್ಟ್ರಪ್ರಶಸ್ತಿ ಪಡೆದ ನಮ್ಮ ಸಂಘದಲ್ಲಿ ಮತ್ತೆ ಚಟುವಟಿಕೆ ಕಾಣುತ್ತಿದೆ. ನೈಸರ್ಗಿಕ ಬಣ್ಣ ಬಳಕೆ ಬಗ್ಗೆ ನಬಾರ್ಡ್‌ ಹಾಗೂ ಇತರ ಸಂಸ್ಥೆಗಳಿಂದ ನೇಕಾರರಿಗೆ ನಿರಂತರ ತರಬೇತಿ ನೀಡಲಾಗುತ್ತಿದ್ದು ಇದೀಗ ಪೂರ್ಣ ಪ್ರಮಾಣದಲ್ಲಿ ಅಡಕೆ ಚೊಗರಿನ ಸೀರೆ ತಯಾರಿಸುತ್ತಿದ್ದೇವೆ. ಗ್ರಾಹಕರಿಂದಲೂ ಬೇಡಿಕೆ ಬರುತ್ತಿದೆ

- ಮಾಧವ ಶೆಟ್ಟಿಗಾರ್‌, ಮುಖ್ಯಸ್ಥರು, ತಾಳಿಪಾಡಿ ನೇಕಾರರ ಸಹಕಾರಿ ಸಂಘ

ಅಡಿಕೆ ಚೊಗರು ಮಳೆನಾಡಿನ ಮುಖ್ಯವಾಗಿ ಶಿರಸಿ, ಸಿದ್ದಾಪುರ,ಯಲ್ಲಾಪುರ, ಸಾಗರ ತಾಲೂಕುಗಳಲ್ಲಿ ಅಡಕೆ ಸಂಸ್ಕರಣೆ ವೇಳೆ ಉತ್ಪಾದನೆಯಾಗುವ ದ್ರವರೂಪದ ಪದಾರ್ಥವಾಗಿದ್ದು ಬಿಸಿಲಿಗಿಟ್ಟು ಒಣಗಿಸಿದಾಗ ಮಂದರೂಪಕ್ಕೆ ಬರುತ್ತದೆ. ಗಾಢ ಕಂದು ಬಣ್ಣದ ಚೊಗರನ್ನು ಪುಡಿ ರೂಪಕ್ಕೆ ಪರಿವರ್ತಿಸಿ ದಾಸ್ತಾನು ಮಾಡಲಾಗುತ್ತದೆ. ಇದು ಸುದೀರ್ಘ ಕಾಲ ಬಣ್ಣಕಳೆದುಕೊಳ್ಳದಿರುವ ಕಾರಣ ನೈಸರ್ಗಿಕ ಬಣ್ಣವಾಗಿ ಹೆಚ್ಚಿನ ಮನ್ನಣೆ ಪಡೆದಿದೆ

- ಶ್ರೀಪಡ್ರೆ, ಹಿರಿಯ ಕೃಷಿ ಪತ್ರಕರ್ತ.

Follow Us:
Download App:
  • android
  • ios