ಹೆಸರಿಗಷ್ಟೇ ‘ಗೋಲ್ಡನ್ ಚಾನ್ಸ್’: ಬಳ್ಳಾರಿ ವಿವಿ ತಾತ್ಸಾರಕ್ಕೆ ಕಂಗಾಲಾದ ವಿದ್ಯಾರ್ಥಿಗಳು
ಘೋಷಣೆಗಷ್ಟೇ ಸೀಮಿತವಾದ ವಿವಿ ನಡೆ| ಪದವಿ ಪೂರ್ಣಗೊಳಿಸಲು ಅಭ್ಯರ್ಥಿಗಳ ಕಾತರ|ಇಂತಹ ಯಾವ ಪ್ರಸ್ತಾಪವೇ ಇಲ್ಲ ಅಂತಾರೆ ವಿಸಿ ಅಲಗೂರು|ಬಳ್ಳಾರಿ ವಿವಿ 2017ರಲ್ಲಿಯೇ ನಿರ್ಧರಿಸಿತ್ತು|
ಕೆ.ಎಂ. ಮಂಜುನಾಥ್
ಬಳ್ಳಾರಿ[ಡಿ.14]: ನಾನಾ ಕಾರಣಗಳಿಂದ ಪದವಿ ಮುಗಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ನಿರ್ಧರಿಸಿದ್ದ ‘ಗೋಲ್ಡನ್ ಚಾನ್ಸ್’ ಅವಕಾಶ ಬರೀ ಘೋಷಣೆಗಷ್ಟೇ ಸೀಮಿತವಾಗಿದೆ.
ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಾತೊರೆಯುತ್ತಿದ್ದ ವಿದ್ಯಾರ್ಥಿಗಳು ವಿವಿಯ ತಾತ್ಸಾರ ಧೋರಣೆಯಿಂದ ಕಂಗಾಲಾಗಿದ್ದಾರೆ. ರಾಜ್ಯದ ವಿವಿಧ ವಿವಿಗಳಲ್ಲಿ ಪದವಿ ಪೂರ್ಣಗೊಳಿಸಿಕೊಳ್ಳಲು ಅಭ್ಯರ್ಥಿಗಳಿಗೆ ಅವಕಾಶ ಸಿಗುತ್ತಿದ್ದರೂ ಬಳ್ಳಾರಿ ವಿವಿ ಮಾತ್ರ ಏಕೆ ಇಂತಹ ಧೋರಣೆ ತೋರುತ್ತಿದೆ ಎಂಬ ಪ್ರಶ್ನೆ ಎದುರಾಗಿದೆ.
ಏನಿದು ಗೋಲ್ಡನ್ ಚಾನ್ಸ್?:
ಯುಜಿಸಿ ಮಾರ್ಗಸೂಚಿ ಪ್ರಕಾರ ಮೂರು ವರ್ಷದ ಪದವಿ ಕೋರ್ಸ್‌ಗಳನ್ನು ಗರಿಷ್ಠ ಆರು ವರ್ಷದೊಳಗೆ ಪೂರ್ಣಗೊಳಿಸಿಕೊಳ್ಳಬೇಕು. ಇಲ್ಲದಿದ್ದರೆ ಪದವಿ ಸಿಗುವುದಿಲ್ಲ. ಮತ್ತೆ ಪರೀಕ್ಷೆ ಎದುರಿಸಲು ಸಹ ಅವಕಾಶ ಇರುವುದಿಲ್ಲ. ಇದರಿಂದ ಅದೆಷ್ಟೋ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಮುಂದಿನ ವ್ಯಾಸಂಗ ಮಾಡುವ ಆಸಕ್ತಿ ಇರುವವರನ್ನು ಶಿಕ್ಷಣದಿಂದ ವಂಚಿತಗೊಳಿಸಿದಂತಾಗುತ್ತದೆ ಎಂಬ ಉದ್ದೇಶದಿಂದ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಕೊನೆಯ ಸುವರ್ಣಾವಕಾಶವನ್ನು ಕಲ್ಪಿಸಿ ವಿಶೇಷ ಪರೀಕ್ಷೆಯ ಅವಕಾಶ ನೀಡಿವೆ. ಕರ್ನಾಟಕ ವಿಶ್ವವಿದ್ಯಾಲಯ ಕೂಡ ಕಳೆದ ನವೆಂಬರ್ 4ರಂದು ಕೊನೆಯ ಸುವರ್ಣಾವಕಾಶ ಪರೀಕ್ಷೆಯ ಅಧಿಸೂಚನೆಯನ್ನು ಸಹ ಹೊರಡಿಸಿತ್ತು. ನವೆಂಬರ್ 6 ರಿಂದ 16 ರ ವರೆಗೆ ಶುಲ್ಕ ಪಾವತಿಯ ಅವಕಾಶವನ್ನು ನೀಡಿತ್ತು. ಇದರಿಂದ ಸೆಮಿಸ್ಟರ್ ಹಾಗೂ ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶ ಸಿಕ್ಕಿದೆಯಲ್ಲದೆ, ಆಯಾ ವರ್ಷದ ಪಠ್ಯಕ್ರಮದ ಪ್ರಕಾರವೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವಿವಿ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ, ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಮಾತ್ರ ‘ಗೋಲ್ಡನ್ ಚಾನ್ಸ್’ ಸಿಕ್ಕಿಲ್ಲ.
ಬಳ್ಳಾರಿ ವಿವಿ 2017ರಲ್ಲಿಯೇ ನಿರ್ಧರಿಸಿತ್ತು:
ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಕಳೆದ 2017ರ ಏಪ್ರಿಲ್ 20ರಂದು ವಿವಿಯ ವಿದ್ಯಾವಿಷಯಕ ಪರಿಷತ್ ಸಭೆಯಲ್ಲಿ ಗೋಲ್ಡನ್ ಚಾನ್ಸ್ ಅವಕಾಶ ಕಲ್ಪಿಸುವ ನಿರ್ಣಯವನ್ನು ಸಹ ತೆಗೆದುಕೊಳ್ಳಲಾಯಿತು. ಆದರೆ, ಘೋಷಣೆ ಮಾಡಿದ್ದು ಬಿಟ್ಟರೆ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ಮಾಡಲಿಲ್ಲ. ಇದೀಗ ಬಂದಿರುವ ಕುಲಪತಿಗಳು ಸಹ ಕಾಳಜಿ ತೆಗೆದುಕೊಂಡಂತೆ ಕಂಡುಬರುವುದಿಲ್ಲ. ಇದು ಪದವಿ ಪೂರ್ಣಗೊಳಿಸಿಕೊಳ್ಳಬೇಕು ಎಂದು ಹಾತೊರೆಯುತ್ತಿರುವ ಅಭ್ಯರ್ಥಿಗಳಿಗೆ ನುಂಗದ ತುತ್ತಾಗಿ ಪರಿಣಮಿಸಿದೆಯಲ್ಲದೆ, ವಿವಿಯೇ ಘೋಷಣೆ ಮಾಡಿದಂತೆ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವ ಅಭ್ಯರ್ಥಿಗಳಿಗೆ ‘ಗೋಲ್ಡನ್ ಚಾನ್ಸ್’ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಅಭ್ಯರ್ಥಿಗಳ ಹಿತ ಕಾಯಬೇಕು:
ಕಳೆದ 2017ರಲ್ಲಿ ವಿವಿಯ ವಿದ್ಯಾವಿಷಯಕ ಪರಿಷತ್‌ನ ಸದಸ್ಯನಾಗಿ ನಾನು ಕೂಡ ‘ಗೋಲ್ಡನ್ ಚಾನ್ಸ್’ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದೆ. ಸಭೆಯ ನಿರ್ಣಯದಂತೆ ಅಭ್ಯರ್ಥಿಗಳ ಹಿತ ಕಾಯುವ ನಿರ್ಣಯಕ್ಕೆ ಬರಲಾಯಿತು. ಮುಂದಿನ ವ್ಯಾಸಂಗಕ್ಕೆ ಹೋಗುವ ಆಸಕ್ತರಿಗೆ ಇದು ಅನುಕೂಲವಾಗಲಿ ಎಂಬುದೇ ನಮ್ಮೆಲ್ಲರ ಉದ್ದೇಶವಾಗಿತ್ತು. ಆದರೆ, ಈ ವರೆಗೆ ಅದು ಜಾರಿಯಾಗಿಲ್ಲ ಎಂಬುದು ಅತ್ಯಂತ ಬೇಸರದ ಸಂಗತಿ ಎನ್ನುತ್ತಾರೆ ವಿವಿಯ ವಿದ್ಯಾವಿಷಯಕ ಪರಿಷತ್ ಮಾಜಿ ಸದಸ್ಯ ವೆಂಕಟೇಶ್ ಹೆಗಡೆ.
ಕುಲಪತಿ ಸುಭಾಷ್ ಅವರು ‘ಗೋಲ್ಡನ್ ಚಾನ್ಸ್’ನ ಪ್ರಸ್ತಾಪ ಸಭೆಯ ಮುಂದಿಟ್ಟಾಗ ಇದೊಂದು ಉತ್ತಮ ಕಾರ್ಯ ಎಂದುಕೊಂಡು ಎಲ್ಲರೂ ಒಪ್ಪಿಗೆ ನೀಡಿದ್ದೆವು. ಅದನ್ನು ವಿವಿ ಕಾರ್ಯರೂಪಕ್ಕೆ ತರದೆ ನಿರ್ಲಕ್ಷ್ಯ ತೋರಿದೆ. ಇದರಿಂದ ನೂರಾರು ಅಭ್ಯರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಹೋಗುವ ಅವಕಾಶ ತಪ್ಪಿದಂತಾಗಿದೆ ಎನ್ನುತ್ತಾರೆ ವೆಂಕಟೇಶ್ ಹೆಗಡೆ.
ಎದುರು ನೋಡುತ್ತಿದ್ದೇವೆ:
ಬೇರೆ ವಿವಿಗಳಲ್ಲಿ ಈಗಾಗಲೇ ಗೋಲ್ಡನ್ ಚಾನ್ಸ್ ನೀಡಲಾಗುತ್ತಿದೆ. ಆದರೆ, ಬಳ್ಳಾರಿ ವಿವಿಯವರು ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಅತ್ಯಂತ ಬೇಸರ ತಂದಿದೆ. ನಾವು ಪರೀಕ್ಷೆ ಎದುರಿಸಿ ಪದವಿ ಪೂರ್ಣಗೊಳಿಸಿಕೊಳ್ಳಬೇಕು ಎಂಬ ಹಂಬಲವಿದೆ. ಆದರೆ, ಓದುವವರಿಗೆ ಅವಕಾಶ ಮಾಡಿಕೊಡದ ವಿವಿ ನಡೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಾರೆ ಪರೀಕ್ಷೆ ಬರೆಯಲು ಕಾತರದಿಂದ ಕಾಯುತ್ತಿರುವ ಅಭ್ಯರ್ಥಿ ರಮೇಶ್.
ಇದು ನನ್ನೊಬ್ಬನ ಸಂಕಟವಲ್ಲ. ನನ್ನಂತಹ ಅನೇಕ ಅಭ್ಯರ್ಥಿಗಳು ಇದೇ ತಳಮಳ ಎದುರಿಸುತ್ತಿದ್ದಾರೆ. ಕರ್ನಾಟಕ ವಿವಿ ಸೇರಿದಂತೆ ಅನೇಕ ವಿವಿಗಳಲ್ಲಿ ಈಗಾಗಲೇ ಪರೀಕ್ಷೆಗಾಗಿ ಶುಲ್ಕ ಕಟ್ಟಿಸಿಕೊಳ್ಳುತ್ತಿದ್ದಾರೆ. ಬಳ್ಳಾರಿ ವಿವಿಯಲ್ಲಿ ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಯಾರೂ ಮಾಹಿತಿಯನ್ನು ಸಹ ನೀಡುವುದಿಲ್ಲ ಎಂದು ಆರೋಪಿಸುವ ರಮೇಶ್, ವಿವಿ ನಡೆಯನ್ನು ಬಳ್ಳಾರಿಯಲ್ಲಿ ಯಾರೂ ಪ್ರಶ್ನಿಸುತ್ತಿಲ್ಲವೇಕೆ ಎಂದು ಕೇಳುತ್ತಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಮಾಹಿತಿ ನೀಡಿದ ಬಳ್ಳಾರಿ ವಿವಿ ಕುಲಪತಿ ಸಿದ್ದು ಪಿ. ಅಲಗೂರು ಅವರು, ಗೋಲ್ಡನ್ ಚಾನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿವಿ ತೆಗೆದುಕೊಂಡ ನಿರ್ಣಯದ ಬಗ್ಗೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ಅಭ್ಯರ್ಥಿಗಳ ಹಿತ ಕಾಯುವ ದೃಷ್ಟಿಯಿಂದ ಏನು ಮಾಡಬೇಕು ಎಂಬುದರ ಕುರಿತು ಪರಿಶೀಲಿಸುತ್ತೇವೆ. ಕಾನೂನು ಚೌಕಟ್ಟಿನಲ್ಲಿದ್ದರೆ ಖಂಡಿತ ಗಮನ ಹರಿಸುತ್ತೇವೆ ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ 2017ರ ವಿದ್ಯಾವಿಷಯಕ ಪರಿಷತ್ ಸಭೆಯಲ್ಲಿ ‘ಗೋಲ್ಡನ್ ಚಾನ್ಸ್’ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ವರೆಗೆ ಜಾರಿಯಾಗಿಲ್ಲ ಎಂಬುದು ವಿಪರ್ಯಾಸ ಎಂದು ಬಳ್ಳಾರಿ ವಿವಿ ವಿದ್ಯಾವಿಷಯಕ ಪರಿಷತ್ ಮಾಜಿ ಸದಸ್ಯ ವೆಂಕಟೇಶ್ ಹೆಗಡೆ ಅವರು ಹೇಳಿದ್ದಾರೆ.