ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರ ಲಭ್ಯತೆ ಖಾತ್ರಿಪಡಿಸಿ: ಅಧಿಕಾರಿಗಳಿಗೆ DC ಡಾ.ಸೆಲ್ವಮಣಿ ಸೂಚನೆ

ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಇಂದು(ಸೋಮವಾರ) ರಸಗೊಬ್ಬರ ಲಭ್ಯತೆ ಕುರಿತು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ರೈತರಿಗೆ ತೊಂದರೆಯಾಗದಂತೆ ಸೂಚಿಸಿದರು.

Shivamogga DC Selvamani Meeting With agriculture Officers Over fertilizer rbj

ಶಿವಮಮೊಗ್ಗ, (ಜುಲೈ.18): ಶಿವಮೊಗ್ಗ ಜಿಲ್ಲೆಯಲ್ಲಿ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ರೈತರಿಗೆ ಸಮರ್ಪಕವಾಗಿ ಲಭ್ಯವಾಗುವಂತೆ ಖಾತ್ರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದ್ದಾರೆ. 

ಇಂದು(ಸೋಮವಾರ) ಜಿಲ್ಲೆಯಲ್ಲಿ ರಸಗೊಬ್ಬರ ಲಭ್ಯತೆ ಕುರಿತು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು. ಜಿಲ್ಲೆಯ ಅವಶ್ಯಕತೆಗನುಗುಣವಾಗಿ ವಿವಿಧ ಶ್ರೇಣಿಯ ರಸಗೊಬ್ಬರಗಳನ್ನು ಹಂತಹಂತವಾಗಿ ಪೂರೈಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಒಟ್ಟಾರೆಯಾಗಿ ಸೆಪ್ಟಂಬರ್ ಅಂತ್ಯದವರೆಗೆ 103857 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಿದ್ದು, ಇದುವರೆಗೆ 64130 ಮೆ.ಟನ್ ರಸಗೊಬ್ಬರ ಪೂರೈಕೆಯಾಗಿದೆ. ಇದರಲ್ಲಿ 47910 ಮೆ.ಟನ್ ರಸಗೊಬ್ಬರ ವಿತರಣೆ ಮಾಡಲಾಗಿದ್ದು, 16220 ಮೆ.ಟನ್ ರಸಗೊಬ್ಬರ ದಾಸ್ತಾನಿದೆ. ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವಂತೆ ಖಾತ್ರಿಪಡಿಸಬೇಕು ಎಂದು ಸೂಚಿಸಿದರು.

Shivamogga ಜಿಲ್ಲೆಯಲ್ಲಿ 1185 ಶಿಕ್ಷಕರ ಹುದ್ದೆಗಳು ಖಾಲಿ!

ಕೃಷಿ ಇಲಾಖೆ ಅಧಿಕಾರಿಗಳು ನಿರಂತರವಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ಲಭ್ಯತೆ ಬಗ್ಗೆ ಪರಿಶೀಲಿಸಬೇಕು. ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕು. ಕಲಬೆರೆಕೆ ರಸಗೊಬ್ಬರ ಮಾರಾಟದ ಮೇಲೆ ನಿಗಾ ಇರಿಸಿ ನಿರಂತರ ತಪಾಸಣೆ ಕಾರ್ಯ ಕೈಗೊಳ್ಳಬೇಕು. ರಸಗೊಬ್ಬರದ ಗುಣಮಟ್ಟದ ಬಗ್ಗೆ ದೂರುಗಳು ಬಂದ ತಕ್ಷಣ ಪರಿಶೀಲನೆ ನಡೆಸಿ, ಅಂತಹ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಹೇಳಿದರು.

ಪ್ರತಿ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುವ ರಸಗೊಬ್ಬರ ದಾಸ್ತಾನು ಬಗ್ಗೆ ವಿವರಗಳನ್ನು ಪ್ರಕಟಿಸಬೇಕು. ಕಳಪೆ ಬಿತ್ತನೆ ಬೀಜ ಪೂರೈಕೆ ಕುರಿತು ದೂರುಗಳು ಬಂದರೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಬೆಳೆ ಹಾನಿ ಸಮೀಕ್ಷೆ ನಡೆಸಲು ಸೂಚನೆ
 ಅತಿವೃಷ್ಟಿಯಿಂದ ಜಿಲ್ಲೆಯ ವಿವಿದೆಡೆ ಉಂಟಾಗಿರುವ ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ಸಮಗ್ರ ವರದಿಯನ್ನು ಸಲ್ಲಿಸಬೇಕು. ನೆರೆ ನೀರು ಕಡಿಮೆಯಾದ ತಕ್ಷಣ ಬೆಳೆ ಹಾನಿ ಸಮೀಕ್ಷೆ ಆರಂಭಿಸಬೇಕು. ಬೆಳೆ ಹಾನಿ ಕುರಿತು ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬೆಳೆಹಾನಿ ಸಂಭವಿಸಿದ ರೈತರಿಗೆ ಸೂಕ್ತ ಪರಿಹಾರ ಧನವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಜಿಲ್ಲೆಯಲ್ಲಿ ಬಿತ್ತನೆ ಗುರಿ
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 79602 ಹೆಕ್ಟೇರ್ ಭತ್ತ ಕೃಷಿ ಗುರಿ ಹೊಂದಲಾಗಿದ್ದು, ಇದುವರೆಗೆ 6776 ಹೆಕ್ಟೇರ್, 53ಸಾವಿರ ಹೆಕ್ಟೇರ್ ಮುಸುಕಿನ ಜೋಳ ಗುರಿ ಹೊಂದಲಾಗಿದ್ದು, 45795 ಹೆಕ್ಟೇರ್ ಗುರಿ ಸಾಧಿಸಲಾಗಿದೆ. ಒಟ್ಟಾರೆಯಾಗಿ 135184 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, 54042 ಹೆಕ್ಟೇರ್ ಬಿತ್ತನೆ ಗುರಿಯನ್ನು ಸಾಧಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಅವರು ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Latest Videos
Follow Us:
Download App:
  • android
  • ios