Asianet Suvarna News Asianet Suvarna News

Vijayapura: ಗುಮ್ಮಟನಗರಿಯಲ್ಲಿ ರೈತನ ಕೈ ಹಿಡಿದ ಸೀತಾಫಲ: ಶೂನ್ಯ ಬಂಡವಾಳದ ಮೂಲಕ ಲಕ್ಷ-ಲಕ್ಷ ಲಾಭ

ದ್ರಾಕ್ಷಿ, ಲಿಂಬೆ ಬೆಳೆಗೆ ರಾಜ್ಯದಲ್ಲಿ ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಯಲ್ಲಿ ಈಗ ಸೀತಾಫಲ ಹಣ್ಣು ಬೆಳೆಯತ್ತ ಅನ್ನದಾತ ಮುಖ ಮಾಡಿದ್ದಾನೆ. ಶೂನ್ಯ ಬಂಡವಾಳ ಹಾಗೂ ಯಾವುದೇ ಸರ್ಕಾರಿ ಔಷಧಿ, ಗೊಬ್ಬರ ಉಪಯೋಗಿಸದೇ ಕೇವಲ ತೋಟದಲ್ಲಿ ದೊರೆಯುವ ಗೋಮೂತ್ರ, ತಿಪ್ಪೆಗೊಬ್ಬರ ಬಳಸಿ ಲಕ್ಷಾಂತರ ರೂ ಸೀತಾಫಲ ಹಣ್ಣು ಬೆಳೆಯುತ್ತಿದ್ದು ದ್ರಾಕ್ಷಿ ಮೇಲಿನ ವ್ಯಾಮೋಹ ಮರೆತು ಕಷ್ಟದಾಯಕವಲ್ಲದ ಸೀತಾಫಲ ಹಣ್ಣು ಬೆಳೆದು ಆರ್ಥಿಕವಾಗಿ ರೈತರು ಸಬಲರಾಗುತ್ತಿದ್ದಾರೆ. 

retired teacher grew custard apple with low investment in vijayapura gvd
Author
First Published Nov 25, 2022, 11:40 PM IST

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ನ.25): ದ್ರಾಕ್ಷಿ, ಲಿಂಬೆ ಬೆಳೆಗೆ ರಾಜ್ಯದಲ್ಲಿ ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಯಲ್ಲಿ ಈಗ ಸೀತಾಫಲ ಹಣ್ಣು ಬೆಳೆಯತ್ತ ಅನ್ನದಾತ ಮುಖ ಮಾಡಿದ್ದಾನೆ. ಶೂನ್ಯ ಬಂಡವಾಳ ಹಾಗೂ ಯಾವುದೇ ಸರ್ಕಾರಿ ಔಷಧಿ, ಗೊಬ್ಬರ ಉಪಯೋಗಿಸದೇ ಕೇವಲ ತೋಟದಲ್ಲಿ ದೊರೆಯುವ ಗೋಮೂತ್ರ, ತಿಪ್ಪೆಗೊಬ್ಬರ ಬಳಸಿ ಲಕ್ಷಾಂತರ ರೂ ಸೀತಾಫಲ ಹಣ್ಣು ಬೆಳೆಯುತ್ತಿದ್ದು ದ್ರಾಕ್ಷಿ ಮೇಲಿನ ವ್ಯಾಮೋಹ ಮರೆತು ಕಷ್ಟದಾಯಕವಲ್ಲದ ಸೀತಾಫಲ ಹಣ್ಣು ಬೆಳೆದು ಆರ್ಥಿಕವಾಗಿ ರೈತರು ಸಬಲರಾಗುತ್ತಿದ್ದಾರೆ. 

ಇದು ಸೀತಾಫಲ ಬೆಳೆದ ಶಿಕ್ಷಕನ ಕೃಷಿ ಸಾಧನೆ: ಇದಕ್ಕೆ ನಿವೃತ್ತ ಶಿಕ್ಷಕನೊಬ್ಬನ ಯಶೋಗಾಥೆ ಉದಾಹರಣೆಯಾಗಿದೆ. ಇವರ ಸೀತಾಫಲ ಕೃಷಿ ನೋಡಿ ಅಕ್ಕಪಕ್ಕದ ರೈತರು ಸಹ ಇದೇ ಬೆಳೆ ಬೆಳೆಯಲು ಪ್ರೇರಣೆ ದೊರೆತಿದೆ. ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮದ ನಿವೃತ್ತ ಶಿಕ್ಷಕ ಕಾಶಿರಾಯಗೌಡ ಬಿರಾದಾರ ಎಂಬುವರು, ತಮ್ಮ 12 ಎಕರೆ ತೋಟಗಾರಿಕೆ ಜಮೀನಿನಲ್ಲಿ 4 ಎಕರೆಯಲ್ಲಿ ಎರಡು ವರ್ಷದ ಹಿಂದೆ ಬಾರ್ಸಿಯಿಂದ ಸೀತಾಫಲ ಸಸಿ ತಂದು ನೆಟ್ಟಿದ್ದರು. ಎರಡು ವರ್ಷಗಳ ಕಾಲ ಸಾವಯವ ಕೃಷಿಯಿಂದ  ಡ್ರಿಪ್ ಮೂಲಕ ನೀರು ಉಣಿಸಿದ್ದರು. ಈಗ ಚಾಟ್ನಿಗೆ ಮಾಡಿಸಿದ್ದು, 4ಎಕರೆ ಭೂಮಿಯಲ್ಲಿ ಫಲವತ್ತಾದ 1000ಗಿಂತ ಹೆಚ್ಚು ಗಿಡಗಳು ಬೆಳೆದು ನಿಂತಿವೆ. 

ಬಸವನ ಬಾಗೇವಾಡಿ ಮತಕ್ಷೇತ್ರದ ಸಮಸ್ಯೆ ಪರಿಹರಿಸಲು ಸಿಎಂ ಬೊಮ್ಮಾಯಿಗೆ ಬೆಳ್ಳುಬ್ಬಿ ಮನವಿ

ಮೊದಲ ಹಂತದಲ್ಲೆ ಲಕ್ಷಾಂತರ ರೂಪಾಯಿ ಗಳಿಕೆ: ಮೊದಲು ಕಂತಿನಲ್ಲಿ ಲಕ್ಷಾಂತರ ರೂ. ಗಳಿಸಿದ್ದ ಇವರು ಈಗ ಎರಡನೇ ಹಂತದ ಹಣ್ಣು ಕೀಳುತ್ತಿದ್ದಾರೆ. ಈಗಾಗಲೇ ಶೇ.80ರಷ್ಟು ಹಣ್ಣು ಕಿತ್ತಿದ್ದಾರೆ. ಇದು ಸುಮಾರು 4 ಟನ್‌‌ನಷ್ಟು ಸೀತಾಫಲ ಹಣ್ಣು ಬಂದಿದೆ. ಇದನ್ನು ಬೆಂಗಳೂರು, ಮೈಸೂರು, ಹೈದ್ರಾಬಾದ್, ವಿಜಯಪುರ ಸೇರಿದಂತೆ ವಿವಿಧೆಡೆ ಮಾರಾಟ ಮಾಡಲಾಗಿದೆ. ಸದ್ಯ ಬೆಂಗಳೂರು, ಮೈಸೂರಿನಲ್ಲಿ ಸೀತಾಫಲ ಹಣ್ಣಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ಪ್ರತಿ ಕೆಜಿಗೆ 120-160ರಷ್ಟು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮದ್ಯವರ್ತಿ ಹಾಗೂ ಸಾರಿಗೆ ವೆಚ್ಚ ತೆಗೆದರೆ ಪ್ರತಿ ಕೆಜಿಗೆ 100ರೂ. ಉಳಿಯುತ್ತದೆ ಎನ್ನುತ್ತಾರೆ. ನಿವೃತ್ತ ಶಿಕ್ಷಕನ ಪುತ್ರ ನಾನಾಗೌಡ ಬಿರಾದಾರ.

ಶೂನ್ಯ ಬಂಡವಾಳ, ತಜ್ಞರಿಂದ ಸಲಹೆ: ಸುಮಾರು 40ವರ್ಷ ಶಿಕ್ಷಕ ವೃತ್ತಿ ಮಾಡಿ ನಿವೃತ್ತಿಯಾದ ಮೇಲೆ ಕಾಶಿರಾಯನಗೌಡ ಬಿರಾದಾರ, ಮನೆಯಲ್ಲಿ ಖಾಲಿ ಕುಳಿತುಕೊಳ್ಳದೇ ಕೃಷಿ ತಜ್ಞರ ಸಲಹೆ ಪಡೆದು ಶೂನ್ಯ ಬಂಡವಾಳದಲ್ಲಿ ಅದರಲ್ಲಿ ಸೀತಾಫಲ ಸಸಿ ಒಂದಕ್ಕೆ 60-70ರೂ. ಖರ್ಚು ಮಾಡಿದ್ದು ಬಿಟ್ಟರೆ, ಗೊಬ್ಬರ, ಔಷಧಿಯಲ್ಲವೋ ತೋಟದ ಮನೆಯಲ್ಲಿ ಹೈನುಗಾರಿಕೆ ಮಾಡಿ, ಅದೇ ಗೊಬ್ಬರ ಸಾವಯವ ಔಷಧಿ ಬೆಳೆಸಿ ಸೀತಾಫಲ ಹಣ್ಣು ಬೆಳೆದು ಸೈ ಎನಿಸಿಕೊಂಡಿದ್ದಾರೆ.
 
ಬೆಳೆ ನೋಡಲು ತೋಟಕ್ಕೆ ಬರ್ತಿರೋ ಅಧಿಕಾರಿಗಳು, ಜನ: ಹೆಗಡಿಹಾಳ ಗ್ರಾಮದಲ್ಲಿ ಶೂನ್ಯ ಬಂಡವಾಳದಲ್ಲಿ ಸೀತಾಫಲ ಹಣ್ಣು ಬೆಳೆದು ಯಶಸ್ವಿಯಾದ ಬಿರಾದಾರ ಅವರ ತೋಟಕ್ಕೆ ಕೃಷಿ ಅಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಬಂದು ನೋಡಿಕೊಂಡು ಅವರು ಸಹ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೀತಾಫಲ ಹಣ್ಣು ಬೆಳೆಯುತ್ತಿದ್ದಾರೆ. ದ್ರಾಕ್ಷಿ, ಲಿಂಬೆ ಬೆಳೆ ಬೆಳೆದು ಅಕಾಲಿಕ ಮಳೆ, ಬರಗಾಲದಿಂದ ಹಲವು ವರ್ಷಗಳಿಂದ ಬೆಳೆ ಕೈಗೆಟುಗದೇ ನಷ್ಟ ಅನುಭವಿಸುತ್ತಿದ್ದರು. ಈಗ ಸೀತಾಫಲ ಬೆಳೆಯತ್ತ ಆಕರ್ಷಿತರಾಗಿದ್ದೇವೆ. ನಾವು ಸಹ ನಮ್ಮ ತೋಟದಲ್ಲಿ ಸೀತಾಫಲ ಹಣ್ಷು ಬೆಳೆ ಬೆಳೆಯುತ್ತಿದ್ದೇವೆ ಎನ್ನುತ್ತಾರೆ ರೈತರು.

ತೋಟಗಾರಿಕೆಗೆ ಹೇಳಿ ಮಾಡಿಸಿದ ಬೆಳೆ ಸೀತಾಫಲ: ಒಮ್ಮೆ ಸೀತಾಫಲ ಹಣ್ಣಿನ ಗಿಡ ಬೆಳೆದು ನಿಂತರೆ ಸಾಕು ಪ್ರತಿ ವರ್ಷ ಚಾಟ್ನಿ ಮಾಡಿ ಲಾಭಗಳಿಸಬಹುದು ಎನ್ನುವದನ್ನು ನಿವೃತ್ತ ಶಿಕ್ಷಕರೊಬ್ಬರು ತೋರಿಸಿಕೊಟ್ಟಿದ್ದಾರೆ. ಹೆಚ್ಚು ನೀರಿನ ಅವಶ್ಯಕತೆಯೋ ಈ ಗಿಡಗಳಿಗೆ ಬೇಕಿಲ್ಲ, ಈ ಜಮೀನಿಗೆ ಸರ್ಕಾರಿ ಗೊಬ್ಬರ, ಔಷಧಿ ಸಿಂಪಡಿಸದೇ ಕೇವಲ ಸಾವಯವ ಹೈನುಗಾರಿಕೆ ಮೂಲಕ ದೊರೆಯುವ ಗೊಬ್ಬರ, ತಿಪ್ಪೆ ಗುಂಡಿಯ ಕಸ ಬಳಸಿದರೆ ಒಳ್ಳೆಯ ಲಾಭ ಪಡೆಯಬಹುದು ಎನ್ನುವದನ್ನು ಬಿರಾದಾರ ಕುಟುಂಬ ತೋರಿಸುವ ಮೂಲಕ ಇತರ ರೈತರಿಗೆ ಮಾರ್ಗದರ್ಶ ಕರಾಗಿದ್ದಾರೆ.

ಬೆಳೆ ಕಂಡು ಅಧಿಕಾರಿಗಳ ಸಂತಸ: ತಮ್ಮ 12 ಎಕರೆ ಫಲವತ್ತಾದ ಭೂಮಿಯನ್ನು ತೋಟಗಾರಿಕೆ ಬೆಳೆ ಬೆಳೆಗೆ ಪರಿವರ್ತಿಸಿಕೊಂಡು ನಾನಾ ತೋಟಗಾರಿಕೆ ಹಣ್ಣು ಬೆಳೆದು ಯಶಸ್ವಿಯಾಗಿರುವದಕ್ಕೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇವರಿಗೆ ತೋಟದಲ್ಲಿ ಈರುಳ್ಳಿ ಶೇಖರಣಾ ಘಟಕ ನಿರ್ಮಿಸಲು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ 87.500ರೂ. ಸಹಾಯಧನ ಮಂಜೂರು ಮಾಡಿದ್ದಾರೆ ಅಲ್ಲದೇ, ಹುಣಸೆ ಪ್ರದೇಶ ವಿಸ್ತರಣೆಗೆ ಹಾಗೂ ಹನಿ ನೀರಾವರಿಗೂ ಸಹ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಬ್ಸಿಡಿಗೆ ರೈತನಿಗೆ ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ. ಕೃಷಿಯಲ್ಲಿ ನಷ್ಟ ಅನುಭವಿಸುತ್ತಿರುವ ರೈತರು ನಿವೃತ್ತ ಶಿಕ್ಷಕ ಕಾಶಿರಾಯನಗೌಡ ಬಿರಾದಾರ ಅವರ ತೋಟಕ್ಕೆ ಭೇಟಿ ನೀಡಿ ಯಾವ ರೀತಿ ಕೃಷಿಯಲ್ಲಿ ಯಶಸ್ವಿಯಾಗಬೇಕು ಎನ್ನುವ ಮಾಹಿತಿ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. 

ವಿಜಯಪುರ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ, ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಮಧುಮೇಹಕ್ಕೆ ರಾಮಬಾಣ ಸೀತಾಫಲ: ತೋಟದಲ್ಲಿ ಬೆಳೆದ ಸೀತಾಫಲ, ಜಂಬು ನಿರಳೆ ಮಧುಮೇಹಕ್ಕೆ ರಾಮಬಾಣವಾಗಿದೆ. ಈ ಹಣ್ಣುಗಳು ಸದೃಢ ಆರೋಗ್ಯ ಕಾಪಾಡಲು ಅತಿ ಉತ್ತಮವಾಗಿದೆ. 

ಬೆಂಗಳೂರು, ಮೈಸೂರಲ್ಲಿ ಹಣ್ಣಿಗೆ ಡಿಮ್ಯಾಂಡ್: ಸದ್ಯ ಬೆಂಗಳೂರು, ಮೈಸೂರಿನಲ್ಲಿ ಸೀತಾಫಲ ಹಣ್ಣಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ಪ್ರತಿ ಕೆಜಿಗೆ 120-160ರಷ್ಟು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮಧ್ಯವರ್ತಿ ಹಾಗೂ ಸಾರಿಗೆ ವೆಚ್ಚ ತೆಗೆದರೆ ರೈತನಿಗೆ ಪ್ರತಿ ಕೆಜಿಗೆ 100ರೂ. ಉಳಿಯುತ್ತಿದೆ.

Follow Us:
Download App:
  • android
  • ios