Asianet Suvarna News Asianet Suvarna News

ದಾವಣಗೆರೆ: ಭದ್ರಾ ನೀರಿಗಾಗಿ ಎರಡು ಜಿಲ್ಲೆಗಳ ರೈತರ ನಡುವೆ ಅಸಮಾಧಾನ

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನೂ ಮುಂದಿನ ದಿನಗಳಲ್ಲಿ ಮಳೆ ಬಂದು ಅಣೆಕಟ್ಟೆ ತುಂಬುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ನೀರು ಬಿಟ್ಟಿರುವುದನ್ನು ಪುನರ್ ಪರಿಶೀಲಿಸಿ  ಬೇಸಿಗೆ ಬೆಳೆಗೆ ನೀರು ಬಿಡಿ ಎಂದು ಸಚಿವರಲ್ಲಿ ಮನವಿ ಮಾಡಿದ್ದಾರೆ. 

Resentment Between Farmers of Two Districts for Bhadra Water in Davanagere grg
Author
First Published Aug 17, 2023, 12:00 AM IST

ವರದಿ: ವರದರಾಜ್

ದಾವಣಗೆರೆ(ಆ.17):   ಭದ್ರಾ ಜಲಾಶಯಕ್ಕೆ ನೀರು ಬಿಟ್ಟಿರುವ ವಿಚಾರ ಇದೀಗ ಎರಡು ಜಿಲ್ಲೆಗಳ ರೈತರಲ್ಲಿ ಒಂದು ರೀತಿಯ ಅಸಮಾಧಾನಕ್ಕೆ ಕಾರಣವಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಜಲಾಶಯಕ್ಕೆ ನೀರು ಬಿಟ್ಟಿರುವುದನ್ನು ಪುನರ್ ಪರಿಶೀಲಿಸಬೇಕೆಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದೆ. ರೈತ ಸಂಘದ ನಡೆಯನ್ನು ದಾವಣಗೆರೆ ಜಿಲ್ಲಾ ಭದ್ರಾ ಅಚ್ಚುಕಟ್ಟುದಾರರ ಸಂಘ ತೀವ್ರವಾಗಿ ಖಂಡಿಸಿದ್ದು ಯಾವುದೇ ಕಾರಣಕ್ಕೆ ಸರ್ಕಾರ ನೀರಿಗೆ ತಡೆಹಾಕಬಾರದು ಎಂದು ಆಗ್ರಹಿಸಿದೆ. 

ಇದ್ದಕ್ಕಿದ್ದಂತೆ ಮಳೆ ಕೈಕೊಟ್ಟಿರುವುದು ಇದೀಗ ದಾವಣಗೆರೆ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆ ರೈತರ ನಡುವೆ ಅಸಮಾಧಾನಕ್ಕೆ ಕಾರಣವಾಗಿದೆ. ನಿನ್ನೆ  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಭದ್ರಾ ಜಲಾಶಯದ ನೀರಿನ ಬಗ್ಗೆ ಮಾತನಾಡಿರುವುದು  ದಾವಣಗೆರೆ ಜಿಲ್ಲೆಯ  ರೈತರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ಸಚಿವರನ್ನು ಸಂಪರ್ಕಿಸಿದ ಬಸವರಾಜಪ್ಪ  ತತಕ್ಷಣ ನೀರಾವರಿ ಸಲಹಾ ಸಮಿತಿ, ಸಂಭಂದಪಟ್ಟ ಕೃಷಿ, ತೋಟಗಾರಿಕೆ, ಹವಮಾನ ಇಲಾಖೆ ತಜ್ಞರು, ಶಾಸಕರು, ಮಂತ್ರಿಗಳನ್ನೊಳಗೊಂಡ ಸಭೆಯನ್ನು ಕರೆದು ಚರ್ಚಿಸಿ  ಭದ್ರಾ ಜಲಾಶಯದಲ್ಲಿ ನೀರು ಬಿಟ್ಟಿರುವುದನ್ನು  ಪುನರ್ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಆಸ್ಟ್ರಿಯಾ ರೈತರ ಕೃಷಿ ಪದ್ಧತಿ ಬಗ್ಗೆ ತರಳಬಾಳು ಶ್ರೀಗಳ ಮೆಚ್ಚುಗೆ: ಅಧ್ಯಾಪಕರಿಗೆ ಗೌರವ ಸಮರ್ಪಣೆ

ಶಿವಮೊಗ್ಗ ಜಿಲ್ಲೆಯ ರೈತರ ಪ್ರಕಾರ  ಭದ್ರಾ ಅಣೆಕಟ್ಟೆಯಲ್ಲಿ ಈಗಿರುವ ನೀರಿನಲ್ಲಿ ಭದ್ರಾ ಬಲದಂಡೆಯಲ್ಲಿ 2650 ಕ್ಯೂಸೆಕ್ಸ್, ಎಡದಂಡೆಯಲ್ಲಿ 380 ಕ್ಯೂಸೆಕ್ಸ್ ಹರಿಸಿದರೆ 100 ದಿನಗಳಿಗೆ ಸಾಕಾಗುತ್ತದೆ. ಈ ಪ್ರಮಾಣದಲ್ಲಿ ನೀರು ಹರಿಸಿದರೆ ನಾಲಾ ಕೊನೆ ಅಂಚಿನ ರೈತರಿಗೆ ನೀರು ತಲುಪುವುದಿಲ್ಲ. ಈ ಕಾರಣದಿಂದಾಗಿ ಹಿಂದಿನ ವರ್ಷಗಳಲ್ಲಿ ಅಣೆಕಟ್ಟೆ ತುಂಬಿದಾಗ ಬಲದಂಡೆಯಲ್ಲಿ 3200 ಕ್ಯೂಸೆಕ್ಸ್, ಎಡದಂಡೆಯಲ್ಲಿ 480 ಕ್ಯೂಸೆಕ್ಸ್ ನೀರು ಹರಿಸಿದರೆ ನಾಲಾ ಕೊನೆ ಭಾಗದ ರೈತರಿಗೆ ನೀರು ತಲುಪಿಸಲಾಗುತ್ತದೆ. ಆದರೆ ಈ ಪ್ರಮಾಣದಲ್ಲಿ ನೀರು ಹರಿಸಿದರೆ ಈಗ ಅಣೆಕಟ್ಟೆಯಲ್ಲಿ ಸಂಗ್ರಹವಿರುವ ನೀರು 80ದಿನಗಳಿಗೆ ಮಾತ್ರ ಸಾಕಾಗುತ್ತದೆ.  ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನೂ ಮುಂದಿನ ದಿನಗಳಲ್ಲಿ ಮಳೆ ಬಂದು ಅಣೆಕಟ್ಟೆ ತುಂಬುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ನೀರು ಬಿಟ್ಟಿರುವುದನ್ನು ಪುನರ್ ಪರಿಶೀಲಿಸಿ  ಬೇಸಿಗೆ ಬೆಳೆಗೆ ನೀರು ಬಿಡಿ ಎಂದು ಸಚಿವರಲ್ಲಿ ಮನವಿ ಮಾಡಿದ್ದಾರೆ. 

ಈ ವಿಚಾರ ದಾವಣಗೆರೆ ಭದ್ರಾ ಅಚ್ಚುಕಟ್ಟು ದಾರ ರೈತರಿಗೆ ಗೊತ್ತಾಗುತ್ತಿದ್ದಂತೆ ಕೆಂಡಾಮಂಡಲರಾಗಿದ್ದಾರೆ. ಆಗಸ್ಟ್ 10 ರಿಂದ ಭದ್ರಾ ಜಲಾಶಯದಿಂದ ನೀರು ಬಿಡುಗಡೆಯಾಗಿದ್ದು ರೈತರು ಮುಂಗಾರು ಭತ್ತದ ಕೃಷಿಯಲ್ಲಿ ತೊಡಗಿದ್ದಾರೆ. ನೀರು ಬರುತ್ತಿರುವ ಕಾರಣಕ್ಕೆ  ಮಡಿ ಮಾಡಿ ಭತ್ತದ ಸಸಿ ನಾಟಿ ಮಾಡುತ್ತಿದ್ದಾರೆ. ಆದ್ರೆ ಸಚಿವರು ಶಿವಮೊಗ್ಗ ರೈತರ ಮಾತು ಕೇಳಿಕೊಂಡು ನೀರು ನಿಲ್ಲಿಸಿದ್ರೆ ರೈತರ ಕೋಟ್ಯಾಂತರ ನಷ್ಟ ಅನುಭವಿಸುತ್ತಾರೆ. ಮಳೆ ವಾಡಿಕೆಗಿಂತ ಕಡಿಮೆ ಆದ್ರೆ ಬೇಸಿಗೆ ಬೆಳೆಯಲು ಸಾಧ್ಯವಾಗುವುದಿಲ್ಲ. ಕುಡಿಯಲು ಮತ್ತು ಬಳಕೆಗೆ ಮಾತ್ರ ಭದ್ರಾ ನೀರು ಬಳಸುವ ಅನಿವಾರ್ಯತೆ ಎದುರಾಗುತ್ತದೆ.. ಮಳೆ ಪರಿಸ್ಥಿತಿ ನೋಡಿದ್ರೆ ಬೇಸಿಗೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ಕಾಡಾ ಸಮಿತಿಯನ್ನು ದಾವಣಗೆರೆಯಲ್ಲೇ ಕರೆದು ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು ಎಲ್ಲೋ ಶಿವಮೊಗ್ಗದಲ್ಲಿ ನೀರು ಹರಿಸುವುದಕ್ಕೆ ತೀರ್ಮಾನಗಳಾದ್ರೆ ದೊಡ್ಡ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಮುಂಗಾರು ಮಳೆ ಪರಿಸ್ಥಿತಿ ನೋಡಿಕೊಂಡು ಬೇಸಿಗೆ ಬೆಳೆಯನ್ನು ಮಾಡಿದ್ರೆ ಆಯಿತು  ಎಂದು ಶಿವಮೊಗ್ಗ ಜಿಲ್ಲೆಯ  ರೈತರು ಯೋಚಿಸುತ್ತಿದ್ದರೇ ಬೇಸಿಗೆ ಬೆಳೆ ಮೇಲೆ ನಮಗೆ ನಂಬಿಕೆ ಇಲ್ಲ ಈಗ ಭದ್ರಾ ಜಲಾಶಯದಿಂದ ಹರಿಯುತ್ತಿರುವ ನೀರನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವಂತಿಲ್ಲ. ಒಂದು ವೇಳೆ ನಿಲ್ಲಿಸಿದ್ರೆ ದೊಡ್ಡ ಹೋರಾಟಕ್ಕೆ ದಾವಣಗೆರೆ ಜಿಲ್ಲೆಯ ರೈತರು ಮುಂದಾಗಿದ್ದಾರೆ. ಭದ್ರಾ  ನೀರಿನ ವಿಚಾರವಾಗಿ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದ್ದು ಎಚ್ಚರಿಕೆ ಹೆಜ್ಜೆ ಇಡಬೇಕಾಗಿದೆ.

Follow Us:
Download App:
  • android
  • ios