ಗುತ್ತಿಗೆದಾರರಿಗೆ ಪಾಲಿಕೆ ಹಣಕ್ಕೆ ಬ್ಯಾಂಕ್ ಕೊಕ್ಕೆ: ತುರ್ತು ಅಗತ್ಯ ಇರೋರಿಗೆ ಹಣಕ್ಕೆ ಓವಿಡಿಎಸ್ ಜಾರಿ!
ಕಾಮಗಾರಿ ಮುಗಿಸಿ ಎರಡ್ಮೂರು ವರ್ಷ ಕಳದೆರೂ ಗುತ್ತಿಗೆದಾರರಿಗೆ ಹಣ ಪಾವತಿಸಲಾದ ಬಿಬಿಎಂಪಿಗೆ ಇದೀಗ ಬ್ಯಾಂಕ್‌ಗಳಿಂದಲೂ ಸಾಲ ಸಿಗದೇ ಪರದಾಡುವ ಸ್ಥಿತಿ ಎದುರಾಗಿದೆ.ಆರ್ಥಿಕ ಶಿಸ್ತು ಪಾಲಿಸದೇ ಆದಾಯ ಮೀರಿ ಕೈಗೊಂಡ ವೆಚ್ಚಗಳಿಂದ ಬಿಬಿಎಂಪಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಮೇ.28): ಕಾಮಗಾರಿ ಮುಗಿಸಿ ಎರಡ್ಮೂರು ವರ್ಷ ಕಳದೆರೂ ಗುತ್ತಿಗೆದಾರರಿಗೆ ಹಣ ಪಾವತಿಸಲಾದ ಬಿಬಿಎಂಪಿಗೆ ಇದೀಗ ಬ್ಯಾಂಕ್‌ಗಳಿಂದಲೂ ಸಾಲ ಸಿಗದೇ ಪರದಾಡುವ ಸ್ಥಿತಿ ಎದುರಾಗಿದೆ.ಆರ್ಥಿಕ ಶಿಸ್ತು ಪಾಲಿಸದೇ ಆದಾಯ ಮೀರಿ ಕೈಗೊಂಡ ವೆಚ್ಚಗಳಿಂದ ಬಿಬಿಎಂಪಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವ ಅವಧಿ ಹೆಚ್ಚಾಗುತ್ತಿದೆ. ಇದರಿಂದ ಕಾಮಗಾರಿ ನಡೆಸಿದ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿ ಹಣಕ್ಕಾಗಿ ಎರಡ್ಮೂರು ವರ್ಷ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ, ಬಿಬಿಎಂಪಿ ಬ್ಯಾಂಕ್‌ಗಳಿಂದ ಸಾಲ ಪಡೆದು ‘ಆಪ್ಷನಲ್ ವೆಂಡರ್ ಬಿಲ್ ಡಿಸ್ ಕೌಟಿಂಗ್ ಸಿಸ್ಟಮ್’ (ಓವಿಡಿಎಸ್) ಯೋಜನೆಯಡಿ ಹೂಡಿ ವ್ಯವಸ್ಥೆ ಮೂಲಕ ಗುತ್ತಿಗೆದಾರರಿಗೆ ಮುಂಗಡವಾಗಿ ಹಣ ಪಾವತಿಸುವುದಕ್ಕೆ ಮುಂದಾಗಿದೆ. ಆದರೆ, ಬ್ಯಾಂಕ್‌ಗಳು ಷರತ್ತುಗಳ ಮೇಲೆ ಷರತ್ತು ವಿಧಿಸುತ್ತಿರುವುದು ಬಿಬಿಎಂಪಿಗೆ ನುಂಗಲಾರದ ತುತ್ತಾಗಿದೆ.
ತಮ್ಮ ಅನುಕೂಲಕ್ಕೆ ತಕ್ಕಂತೆ ಸಚಿವ ಸಂಪುಟ ರಚನೆ ಮಾಡಿಕೊಂಡ ಸಿದ್ದು: ಬಿ.ಕೆ.ಹರಿಪ್ರಸಾದ್ ಆಕ್ರೋಶ
ಬ್ಯಾಂಕ್ ಹಾಕುವ ಷರತ್ತುಗಳೇನು?: ಎರಡು ವರ್ಷದ ಹಿಂದೆ ಕಾಮಗಾರಿ ಮುಗಿಸಿ ಬಿಲ್ ಸಲ್ಲಿಕೆಯಾಗಿ ಹಣ ಬಿಡುಗಡೆಗೆ ಕಾಯುತ್ತಿರುವ ಗುತ್ತಿಗೆದಾರರಿಗೆ ಬ್ಯಾಂಕ್ ಮೂಲಕ ಹಣ ನೀಡುವುದಕ್ಕೆ ಬಿಬಿಎಂಪಿಯು ತೀರ್ಮಾನಿಸಿತ್ತು. ಅದಕ್ಕಾಗಿ ಟೆಂಟರ್ ಸಹ ಆಹ್ವಾನಿಸಿತ್ತು. ಟೆಂಡರ್‌ನಲ್ಲಿ ಆಯ್ಕೆಗೊಂಡ ಬ್ಯಾಂಕ್ ಇದೀಗ ಎರಡು ವರ್ಷದ ಹಿಂದೆ ಕಾಮಗಾರಿ ಪೂರ್ಣಗೊಳಿಸಿ ಗುತ್ತಿಗೆದಾರರಿಗೆ ಹಣ ನೀಡುವುದಕ್ಕೆ ಸಾಧ್ಯವಿಲ್ಲ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಹಣ ನೀಡಲಾಗುವುದು ಎನ್ನುತ್ತಿದೆ. ಇನ್ನು ಪದೇ-ಪದೇ ಬಿಬಿಎಂಪಿಯ ಬ್ಯಾಂಕ್ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ನಾಲ್ಕು ವರ್ಷದ ಬ್ಯಾಂಕ್ ವಹಿವಾಟಿನ ಮಾಹಿತಿ ಪಡೆದು ಪರಿಶೀಲಿಸಿದರೂ ಸಾಲ ನೀಡುವುದಕ್ಕೆ ಮುಂದಾಗುತ್ತಿಲ್ಲ.
ಅರ್ಜಿ ಹಾಕಿ ಕಾಯುತ್ತಿರುವ ಗುತ್ತಿಗೆದಾರರು: ಈ ಯೋಜನೆಯಡಿ 2021ರ ಏಪ್ರಿಲ್‌ನಿಂದ ಸೆಪ್ಟಂಬರ್ 2021 ರ ಅವಧಿಯಲ್ಲಿ ಕಾಮಗಾರಿಯ ಬಿಲ್ ರಿಜಿಸ್ಟರ್ ಆಗಿರುವ ಅರ್ಹ ಗುತ್ತಿಗೆದಾರರಿಗೆ ಜೇಷ್ಠತೆ ಆಧಾರದಲ್ಲಿ ಮುಂಗಡ ಹಣ ನೀಡಲು ತೀರ್ಮಾನಿಸಲಾಗಿತ್ತು. ಕಳೆದ ಏ.1ರಿಂದಲೇ ಆಸಕ್ತ ಗುತ್ತಿಗೆದಾರರಿಂದ ಬಿಬಿಎಂಪಿಯ ಹಣಕಾಸು ವಿಭಾಗ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಿದ ಗುತ್ತಿಗೆದಾರರು ಹಣಕ್ಕಾಗಿ ಕಾದು ಕುಳಿತಿದ್ದಾರೆ. ಆದರೆ, ಬ್ಯಾಂಕ್‌ನೊಂದಿಗಿನ ಕಾಗದ ಪತ್ರಗಳ ವ್ಯವಹಾರವೇ ಪೂರ್ಣಗೊಂಡಿಲ್ಲ.
ಕೇವಲ 400 ಕೋಟಿಗೆ ಪರದಾಟ: ವೈಯಕ್ತಿಕ, ವಾಹನ ಸಾಲ ಸೇರಿದಂತೆ ವಿವಿಧ ರೂಪದಲ್ಲಿ ಜನರಿಗೆ ಸಾಲ ನೀಡುವುದಕ್ಕೆ ದಿನಕ್ಕೆ ಹತ್ತಾರು ಕರೆ ಮಾಡಿ ಕೇಳುವ ದೊಡ್ಡ ದೊಡ್ಡ ಬ್ಯಾಂಕ್‌ಗಳು, ಸಾವಿರಾರು ಕೋಟಿ ಮೊತ್ತದ ಆಸ್ತಿ ಹೊಂದಿರುವ, ವಾರ್ಷಿಕವಾಗಿ ಐದಾರು ಸಾವಿರ ಕೋಟಿ ರು. ಆದಾಯ ಗಳಿಸುವ ಬಿಬಿಎಂಪಿಗೆ ಕೇವಲ .400 ಕೋಟಿ ಸಾಲ ನೀಡುವುದಕ್ಕೆ ಆಲೋಚನೆ ಮಾಡುತ್ತಿವೆ.
ಏನಿದು ಓವಿಡಿಎಸ್?: ಬಿಬಿಎಂಪಿ ಕಾಮಗಾರಿ ನಡೆಸಿದ ಗುತ್ತಿಗೆದಾರರು ಬಿಲ್ ಪಾವತಿಗೆ ಎರಡ್ಮೂರು ವರ್ಷ ಕಾಯಬೇಕಾದ ಸ್ಥಿತಿ ಇದೆ. ಈ ಸಮಸ್ಯೆ ಸ್ವಲ್ಪಮಟ್ಟಿಗೆ ಪರಿಹರಿಸುವ ಉದ್ದೇಶದಿಂದ ಪಾಲಿಕೆಯು .400 ಕೋಟಿ ಮೊತ್ತದ ‘ಓವಿಡಿಎಸ್’ ಹೂಡಿ ಯೋಜನೆ ರೂಪಿಸಿದೆ. ಯೋಜನೆಯಡಿ ಖಾಸಗಿ ಬ್ಯಾಂಕ್ ಮೂಲಕ ಗುತ್ತಿಗೆದಾರರಿಗೆ ಮುಂಗಡವಾಗಿ ಹಣ ಕೊಡಿಸಲಾಗುತ್ತದೆ. ಇದರಿಂದ ಗುತ್ತಿಗೆದಾರರಿಗೆ ನಿಗದಿತ ಅವಧಿಗಿಂತ ಮೊದಲೇ ಹಣ ದೊರೆಯಲಿದೆ. ಬಿಬಿಎಂಪಿಯು ಬ್ಯಾಂಕ್ ಮೂಲಕ ಗುತ್ತಿಗೆದಾರರಿಗೆ ನೀಡಲಾಗುವ ಮುಂಗಡ ಹಣಕ್ಕೆ ಗುತ್ತಿಗೆದಾರರೇ ಬಡ್ಡಿ ಪಾವತಿಸಬೇಕಾಗುತ್ತದೆ. ಈ ಪದ್ಧತಿಯಲ್ಲಿ ಗುತ್ತಿಗೆದಾರರಿಗೆ ಬ್ಯಾಂಕ್ ನೀಡುವ ಹಣವನ್ನು ಆರು ತಿಂಗಳ ಅವಧಿಯಲ್ಲಿ ಬಿಬಿಎಂಪಿಯು ಬ್ಯಾಂಕ್‌ಗೆ ಮರು ಪಾವತಿ ಮಾಡಲಿದೆ. ಇದು ಗುತ್ತಿಗೆದಾರರಿಗೆ ಕಡ್ಡಾಯವಲ್ಲ. ಆಸಕ್ತರು ಹಾಗೂ ಅನಿವಾರ್ಯತೆ ಇರುವವರು ಮಾತ್ರ ಪಡೆಯಬಹುದಾಗಿದೆ.
2 ಸಾವಿರ ಕೋಟಿ ಬಿಲ್ ಬಾಕಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಿದ 2021ರ ಮಾಚ್‌ರ್‍ವರೆಗೆ ಬಿಲ್ ಸಲ್ಲಿಕೆಯಾದ ಗುತ್ತಿಗೆದಾರರಿಗೆ ಈಗಾಗಲೇ ಬಿಲ್ ಪಾವತಿ ಮಾಡಲಾಗಿದೆ. 2021ರ ಏಪ್ರಿಲ್‌ನಿಂದ ಈವರೆಗೆ ಪೂರ್ಣಗೊಂಡ ಕಾಮಗಾರಿಯ ಬಿಲ್ ಪಾವತಿ ಬಾಕಿ ಇದೆ. 2021-22ರ ಅವಧಿಯ 1,450 ಕೋಟಿ ಹಾಗೂ 2022-23ನೇ ಸಾಲಿನ 750 ಕೋಟಿ ಸೇರಿದಂತೆ ಸುಮಾರು 2 ಸಾವಿರ ಕೋಟಿ ಬಾಕಿ ಬಿಲ್ ಪಾವತಿಸಬೇಕಿದೆ.
ನೆಟ್ಟಾರು ಪತ್ನಿ ನೌಕರಿ ಖೋತಾ: ಸಿದ್ದು ಸರ್ಕಾರ ಪಿಎಫ್‌ಐ ಕೈಗೊಂಬೆ ಎಂದ ಬಿಜೆಪಿ!
ಓವಿಡಿಎಸ್ ಯೋಜನೆಯಡಿ ಬ್ಯಾಂಕ್ ಮೂಲಕ ಗುತ್ತಿಗೆದಾರರಿಗೆ ಹಣ ಕೊಡಿಸುವ ಕೊನೆಯ ಹಂತದಲ್ಲಿ ಖಾಸಗಿ ಬ್ಯಾಂಕ್ ಇನ್ನಿಲ್ಲದ ಷರತ್ತು ವಿಧಿಸುತ್ತಿದೆ. ಇದೀಗ ಆಯ್ಕೆಗೊಂಡಿರುವ ಬ್ಯಾಂಕ್ ಹಣ ನೀಡದಿದ್ದರೆ ಮತ್ತೆ ಟೆಂಡರ್ ಆಹ್ವಾನಿಸಿ ಬೇರೆ ಬ್ಯಾಂಕ್‌ಗಳಿಂದ ಗುತ್ತಿಗೆದಾರರಿಗೆ ಹಣ ಕೊಡಿಸುವ ಕೆಲಸ ಮಾಡುತ್ತೇವೆ.
-ಜಯರಾಮ್ ರಾಯಪುರ, ವಿಶೇಷ ಆಯುಕ್ತ, ಹಣಕಾಸು ವಿಭಾಗ