ಪುತ್ತೂರು: ಹಿಂದೂ ಕಾರ್ಯಕರ್ತರ ಆಕ್ರೋಶ ತಣ್ಣಗಾಗಿಸಲು ಫೀಲ್ಡಿಗಿಳಿದ RSS

ಹಿಂದೂ ಮುಖಂಡ ಪ್ರವೀಣ್ ‌ನೆಟ್ಟಾರು‌ ಹತ್ಯೆ ಬಳಿಕ ಆಕ್ರೋಶಗೊಂಡಿದ್ದ ಕಾರ್ಯಕರ್ತರನ್ನ ‌ಸಮಾಧಾನಪಡಿಸಲು ಬಿಜೆಪಿ ನಾಯಕರಿಗೆ ಸಾಧ್ಯವಾಗ್ತಿಲ್ಲ. ಹೀಗಾಗಿ ಸ್ವತಃ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಆಕ್ರೋಶ ತಣಿಸಲು ಫೀಲ್ಡಿಗಿಳಿದಿದ್ದು, ಪ್ರವೀಣ್ ಹತ್ಯೆ ಬಳಿಕ ಪುತ್ತೂರು ಭಾಗದಲ್ಲಿ ಆರ್ ಎಸ್ ಎಸ್ ಪ್ರಮುಖರು ಬೈಠಕ್ ನಡೆಸಿದ್ದಾರೆ.

Puttur  RSS entered the field to cool down the anger of Hindu activists akb

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ‌ಮಂಗಳೂರು
ಮಂಗಳೂರು: ಹಿಂದೂ ಮುಖಂಡ ಪ್ರವೀಣ್ ‌ನೆಟ್ಟಾರು‌ ಹತ್ಯೆ ಬಳಿಕ ಆಕ್ರೋಶಗೊಂಡಿದ್ದ ಕಾರ್ಯಕರ್ತರನ್ನ ‌ಸಮಾಧಾನಪಡಿಸಲು ಬಿಜೆಪಿ ನಾಯಕರಿಗೆ ಸಾಧ್ಯವಾಗ್ತಿಲ್ಲ. ಹೀಗಾಗಿ ಸ್ವತಃ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಆಕ್ರೋಶ ತಣಿಸಲು ಫೀಲ್ಡಿಗಿಳಿದಿದ್ದು, ಪ್ರವೀಣ್ ಹತ್ಯೆ ಬಳಿಕ ಪುತ್ತೂರು ಭಾಗದಲ್ಲಿ ಆರ್ ಎಸ್ ಎಸ್ ಪ್ರಮುಖರು ಬೈಠಕ್ ನಡೆಸಿದ್ದಾರೆ.

ಸಂಘಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಜೊತೆ ಸಂಘದ ಪ್ರಮುಖರು ಬೈಠಕ್ ನಡೆಸಿದ್ದು, ಪುತ್ತೂರು, ಸುಳ್ಯ, ಕಡಬ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಬೈಠಕ್ ನಡೆಸಲಾಗಿದೆ. ಬಿಜೆಪಿ ಸರ್ಕಾರದ ವಿರುದ್ದ ಕಾರ್ಯಕರ್ತರ ಅಸಮಾಧಾನದ ಆತ್ಮಾವಲೋಕನ ನಡೆಸಲು ಮುಂದಾದ ಆರ್ ಎಸ್ ಎಸ್, ಬಿಜೆಪಿ ಹಾಗೂ ಪರಿವಾರದ ಪ್ರಮುಖರ ಜೊತೆ ಮಾತುಕತೆ ನಡೆಸಿದೆ. ಸ್ಥಳೀಯ ಬಿಜೆಪಿ ನಾಯಕರ ಸಮ್ಮುಖದಲ್ಲೇ ಬೈಠಕ್ ‌ನಡೆಸಿದ ಆರ್ ಎಸ್ ಎಸ್ ಪ್ರಮುಖರು, ಬೆಳ್ಳಾರೆ ಘಟನೆಗೆ ಕಾರಣ ಏನು? ಅಸಮಾಧಾನ ಯಾಕೆ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರವೀಣ್ ಹತ್ಯೆ ಹೊರತಾಗಿ ಹಲವು ಅಸಮಾಧಾನಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಜಿಲ್ಲೆಯ ‌ಕೆಲ ಶಾಸಕರು, ಸಂಸದ, ಸಚಿವರ ಬಗ್ಗೆ ಸಂಘದ ಪ್ರಮುಖರಲ್ಲಿ ಕಾರ್ಯಕರ್ತರು ದೂರಿಕೊಂಡಿದ್ದಾರೆ ಎನ್ನಲಾಗಿದೆ. ‌ನಾಲ್ಕು ತಾಲೂಕುಗಳಲ್ಲಿ ಕಳೆದೊಂದು ವಾರದಲ್ಲಿ ಬೈಠಕ್ ನಡೆಸಲಾಗಿದ್ದು, ಆರ್ ಎಸ್‌ಎಸ್ ನ ಪ್ರಾಂತ ಜವಾಬ್ದಾರಿಯ ನಾಯಕರೊಬ್ಬರು ಈ ಬೈಠಕ್ ತೆಗೆದುಕೊಂಡಿದ್ದಾರೆ. 

Praveen Nettaru Murder Case, ಎನ್‌ಐಎ ತಂಡದಿಂದ ಪ್ರತ್ಯೇಕ ಕೇಸು ದಾಖಲು

ಪ್ರವೀಣ್ ಹತ್ಯೆಯಾದ ಬೆಳ್ಳಾರೆಯಲ್ಲೂ ಬೈಠಕ್!

ಕಾರ್ಯಕರ್ತರ ಆಕ್ರೋಶದ ಬಿಸಿ ಎಂಥದ್ದು ಅನ್ನೋದನ್ನ ಇಡೀ ರಾಜ್ಯಕ್ಕೆ ತೋರಿಸಿಕೊಟ್ಟ ಬೆಳ್ಳಾರೆಯಲ್ಲಿ ಸಂಘದ ಬೈಠಕ್ ನಡೆದಿದೆ. ಪ್ರವೀಣ್ ಹತ್ಯೆ ಬಳಿಕ ಕೆಂಡದಂತಿರೋ ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರ ಆಕ್ರೋಶಗಳನ್ನ ಸಮಾಧಾನದಿಂದ ಕೇಳಿಸಿಕೊಳ್ಳಲು ಆರ್ ಎಸ್ ಎಸ್ ಬೈಠಕ್ ನಡೆಸಿದೆ. ಬೆಳ್ಳಾರೆಯ ಖಾಸಗಿ ಸಭಾಂಗಣದಲ್ಲಿ ಪ್ರಾಂತ ಜವಾಬ್ದಾರಿಯ ನಾಯಕರೊಬ್ಬರ ಉಸ್ತುವಾರಿಯಲ್ಲಿ ಈ ಬೈಠಕ್ ನಡೆದಿದ್ದು, ಸ್ಥಳೀಯ ಶಾಸಕರೊಬ್ಬರು ಹಾಜರಿದ್ದರು ಎನ್ನಲಾಗಿದೆ. ಅಲ್ಲದೇ ಆ ಭಾಗದ ಬಿಜೆಪಿ ಪ್ರಮುಖರು, ಪರಿವಾರದ ಮುಖಂಡರು ಹಾಗೂ ಕೆಲ ಆಯ್ದ ಜವಾಬ್ದಾರಿಯುತ ಕಾರ್ಯಕರ್ತರಿಗೆ ಬೈಠಕ್ ಗೆ ಆಹ್ವಾನ ‌ನೀಡಲಾಗಿತ್ತು. ಈ ಬೈಠಕ್ ನಲ್ಲಿ ಸಂಘದ ಪುತ್ತೂರು ಭಾಗದ ಪ್ರಮುಖರು ಕೂಡ ಹಾಜರಿದ್ದು, ಕಾರ್ಯಕರ್ತರ ನೋವು ಆಲಿಸಿದ್ದಾರೆ. ಈ ವೇಳೆ ಅನೇಕರು ಜಿಲ್ಲೆಯ ಬಿಜೆಪಿ ನಾಯಕರ ವಿರುದ್ದವೇ ಅಸಮಾಧಾನ ತೋಡಿಕೊಂಡಿದ್ದು, ಹತ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರೋ ಸರ್ಕಾರದ ವಿರುದ್ದವೂ ಅಸಮಾಧಾನ ತೋರಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಲ್ಲರ ಅಭಿಪ್ರಾಯ ಮತ್ತು ನೋವು ಆಲಿಸಿದ ಸಂಘದ ಪ್ರಮುಖರು ಮುಂದಿನ ದಿನಗಳಲ್ಲಿ ಸಂಘದ ಶಿಸ್ತು ಮೀರದಂತೆಯೂ ಕಾರ್ಯಕರ್ತರಿಗೆ ಸೂಚನೆ ನೀಡಿ, ಪಕ್ಷದ ಪ್ರಮುಖರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

Praveen Nettaru Murder: ಎನ್‌ಐಎ ತನಿಖೆಯಿಂದ ಕೊಲೆ ಹಿಂದಿನ ಸೀಕ್ರೆಟ್ ಔಟ್

ಪುತ್ತೂರಿನ ಪ್ರಾಂತ ಬೈಠಕ್ ನಲ್ಲಿ ಚರ್ಚೆ ಸಾಧ್ಯತೆ!

ಅಗಸ್ಟ್ 26ರಿಂದ ಪುತ್ತೂರಿನಲ್ಲಿ ‌ಆರ್ ಎಸ್ ಎಸ್ ದಕ್ಷಿಣ ಪ್ರಾಂತ ಬೈಠಕ್ ನಡೆಯಲಿದ್ದು ಬೈಠಕ್ ನಲ್ಲಿ ಸಂಘದ ಅಖಿಲ ಭಾರತ ಪ್ರತಿನಿಧಿ ಸಭಾದ ಹಲವು ಪ್ರಮುಖರು ಭಾಗಿಯಾಗಲಿದ್ದಾರೆ. ಸುಮಾರು 830 ಮಂದಿ ಅಪೇಕ್ಷಿತ ಸಂಘದ ಪ್ರತಿನಿಧಿಗಳು ಬೈಠಕ್ ನಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸ್ಥರದ ಅಧಿಕಾರಿಗಳು, ಸಂಘದ ವಿವಿಧ ಕ್ಷೇತ್ರದ ಪ್ರಮುಖ ಅಧಿಕಾರಿಗಳು, ಕಾರ್ಯಕಾರಿಣಿಯ ಸದಸ್ಯರು ಭಾಗಿಯಾಗಲಿದ್ದಾರೆ. ಪ್ರಮುಖವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತದ ಮುಂದಿನ ಕಾರ್ಯವಿಧಿ, ಕಾರ್ಯವಿಸ್ತಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಅ.27ರಂದು ಬಿಜೆಪಿ ‌ಮತ್ತು ಆರ್ ಎಸ್ ಎಸ್ ಸಮನ್ವಯ ಬೈಠಕ್ ನಡೆಯುವ ಸಾಧ್ಯತೆ ಇದ್ದು, ಸಮನ್ವಯ ಬೈಠಕ್ ನಲ್ಲಿ ಕರಾವಳಿ ಕಾರ್ಯಕರ್ತರ ಅಸಮಾಧಾನದ ಬಗ್ಗೆ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ‌ಭಾಗಿಯಾಗುವ ಬಗ್ಗೆ ಮಾಹಿತಿ ಇದೆ. ಇದರಲ್ಲಿ ಬೆಳ್ಳಾರೆ ಘಟನೆ ಬಗ್ಗೆ ಹಾಗೂ ಕಾರ್ಯಕರ್ತರ ಆಕ್ರೋಶದ ಕುರಿತು ಸಂಘದ ಪ್ರಮುಖರು‌ ಬಿಜೆಪಿ ನಾಯಕರಿಗೆ ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ. ಆದರೆ ಸಮನ್ವಯ ಬೈಠಕ್ ‌ಬಗ್ಗೆ ಇನ್ನೂ ಅಂತಿಮವಾಗಿಲ್ಲ.
 

Latest Videos
Follow Us:
Download App:
  • android
  • ios