ಶಿವಮೊಗ್ಗ ಸ್ಮಾರ್ಟ್‌ಸಿಟಿಗೆ ಕಪ್ಪುಚುಕ್ಕೆ: ಕಳಪೆ ಕಾಮಗಾರಿ, ಯೋಜನೆ ಕಾರ್ಯಗಳ ಬಗ್ಗೆ ಸಚಿವರ ಆಕ್ಷೇಪ

ಸ್ಮಾರ್ಟ್‍ಸಿಟಿಗೆ ಸಂಬಂಧಿಸಿದಂತೆ 990 ಕೋಟಿ ರು. ಹಣ ಮಂಜೂರಾಗಿದ್ದು, 71 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಅದರಲ್ಲಿ 67 ಕಾಮಗಾರಿಗಳು ಪೂರ್ಣಗೊಂಡಿವೆ. 920 ಕೋಟಿ ರು. ಖರ್ಚಾಗಿದ್ದು, 4 ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಸ್ಮಾರ್ಟ್‍ಸಿಟಿ ಯೋಜನೆಯ ಕುರಿತು ಅನೇಕ ದೂರುಗಳು ಬಂದಿವೆ. ಯುಜಿ ಕೇಬಲ್, ರಸ್ತೆ, ಚರಂಡಿ ಇತರೆ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳಿವೆ.

Poor Work of Shivamogga Smartcity grg

ಶಿವಮೊಗ್ಗ(ನ.03):  ಶಿವಮೊಗ್ಗ ನಗರವನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಆಧುನೀಕರಣಗೊಳಿಸಲು ಸಾವಿರ ಕೋಟಿ ಹಣವನ್ನು ವ್ಯಯ ಮಾಡಲಾಗುತ್ತಿದೆ. ಆದರೆ, ಈಗಾಗಲೇ ಕಳಪೆ ಕಾಮಗಾರಿಯಿಂದ ಇಡೀ ಯೋಜನೆಗೆ ಕೆಟ್ಟ ಹೆಸರು ಬಂದಿದೆ. ಸ್ಮಾರ್ಟ್‍ಸಿಟಿಗೆ ಸಂಬಂಧಿಸಿದಂತೆ 990 ಕೋಟಿ ರು. ಹಣ ಮಂಜೂರಾಗಿದ್ದು, 71 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಅದರಲ್ಲಿ 67 ಕಾಮಗಾರಿಗಳು ಪೂರ್ಣಗೊಂಡಿವೆ. 920 ಕೋಟಿ ರು. ಖರ್ಚಾಗಿದ್ದು, 4 ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಸ್ಮಾರ್ಟ್‍ಸಿಟಿ ಯೋಜನೆಯ ಕುರಿತು ಅನೇಕ ದೂರುಗಳು ಬಂದಿವೆ. ಯುಜಿ ಕೇಬಲ್, ರಸ್ತೆ, ಚರಂಡಿ ಇತರೆ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳಿವೆ.

ಹಲವು ಕಡೆ ನಿಧಾನಗತಿಯ ಹಾಗೂ ಕಳಪೆ ಕಾಮಗಾರಿ ನಡೆಯುತ್ತಿವೆ ಎಂಬ ಟೀಕೆಗಳ ಮಧ್ಯೆಯೇ, ಕೆಲ ದಿನಗಳ ಹಿಂದಷ್ಟೇ ಹಾಕಿರುವ ಪುಟ್‌ಪಾತ್‌ನಲ್ಲಿನ ಕಲ್ಲುಗಳು ಎದ್ದು ಬರುತ್ತಿವೆ. ರಸ್ತೆ ಮೇಲೆ ಬಿದ್ದ ಮಳೆ ಸರಾಗವಾಗಿ ಹರಿದು ಚರಂಡಿ ಸೇರದೆ ರಸ್ತೆಯಲ್ಲೇ ನಿಲ್ಲುತ್ತಿದೆ. ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಮಳೆ ನೀರು ಚರಂಡಿ ಸೇರುತ್ತಿಲ್ಲ ಎಂಬ ಆರೋಪದ ಧ್ವನಿ ಗಟ್ಟಿಯಾಗಿದೆ.

ಆಪರೇಶನ್‌ ಕಮಲಕ್ಕೆ ಕಾಂಗ್ರೆಸ್‌ ಯಾವ ಶಾಸಕರೂ ಬಲಿಯಾಗಲ್ಲ: ಆಯನೂರು ಮಂಜುನಾಥ್‌

ಮಳೆ ಬಂದರೆ ಬಣ್ಣ ಬಯಲು:

ಒಂದು ಬಾರಿ ರಸ್ತೆ ಅಥವಾ ಫುಟ್‌ಪಾತ್‌ ಮಾಡಿದರೆ ಕನಿಷ್ಠ 20- 30 ವರ್ಷ ಬಾಳಿಕೆ ಬರಬೇಕು ಎನ್ನುತ್ತದೆ ಸರ್ಕಾರ. ಆದರೆ, ಸದ್ಯ ನಡೆಯುತ್ತಿರುವ ಕಾಮಗಾರಿಗಳು ಒಂದು ಮಳೆಗಾಲ ಕಳೆಯುವುದರೊಳಗೆ ಕೆಟ್ಟುಹೋಗುತ್ತಿರುವುದು ಮಾತ್ರ ವಿಪರ್ಯಾಸ. ಇಷ್ಟು ದೊಡ್ಡ ಮೊತ್ತ ನೀಡಿದರೂ ಗುಣಮಟ್ಟದ ಕಾಮಗಾರಿ ಮಾತ್ರ ಆಗಿಲ್ಲ. ಮಳೆ ಬಂದರೆ ಅಕ್ಕಪಕ್ಕದ ರಸ್ತೆಯ ನೀರೆಲ್ಲ ಈ ರಸ್ತೆಗೆ ಹರಿದು ಬರುತ್ತದೆ, ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ನದಿಯಾಗುತ್ತಿವೆ.

ಅವೈಜ್ಞಾನಿಕ ಕಾಮಗಾರಿ:

ನಗರದ ಬಹುತೇಕ ರಸ್ತೆಗಳು ಅವೈಜ್ಞಾನಿಕವಾಗಿವೆ. ರಸ್ತೆ ಕಾಮಗಾರಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ಮಾರ್ಗಸೂಚಿಯ ಪ್ರಕಾರ ಮಳೆ ನೀರು ಒಳಹರಿವಿನ ಜಾಲರಿ ಕಿಂಡಿಗಳ ಮೂಲಕ ಚರಂಡಿ ಸೇರಬೇಕು. ಆದರೆ, ಇಲ್ಲಿ ಈ ಯಾವ ನಿಯಮಗಳನ್ನೂ ಪಾಲಿಸಲಾಗಿಲ್ಲ. ಜಲಮಂಡಳಿ, ಮೆಸ್ಕಾಂ ಕೇಬಲ್‌ಗಳಿಗಾಗಿ ರಸ್ತೆ ಅಥವಾ ಪಾದಚಾರಿ ಮಾರ್ಗ ಮಾಡುವ ಮೊದಲೇ ಪೈಪ್‌ಗಳನ್ನು ಅಳವಡಿಸಬೇಕು. ಆದರೆ, ಇಲ್ಲಿ ರಸ್ತೆ ಕಾಮಗಾರಿ ಮುಗಿದ ಮೇಲೆ ಕೇಬಲ್‌ ಅಳವಡಿಸುವ ಕಾರ್ಯ ನಡೆಯುತ್ತಿವೆ.

ಸ್ಮಾರ್ಟ್‌ಸಿಟಿ ಯೋಜನೆಗೆ ತನಿಖೆಯ ಬಿಸಿ:

ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳ ಗುಣಮಟ್ಟದ ಕುರಿತು ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೆ ಸಚಿವರು ತನಿಖೆಯ ಸುಳಿವು ನೀಡಿದ್ದಾರೆ. ಈ ನಡುವೆ ಸ್ಮಾರ್ಟ್‌ಸಿಟಿ ಯೋಜನೆ ವಿರುದ್ಧ 1800 ಅಕ್ಷೇಪಣೆ ಬಂದಿದ್ದು, ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ವೇಳೆ ಸ್ಥಳೀಯರಿಗೆ ಮಾಹಿತಿ ನೀಡದೆ ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬ ದೂರುಗಳಿದ್ದವು. ಈ ಮಧ್ಯೆ ಆಕ್ಷೇಪಣೆ ಸಲ್ಲಿಸುವಂತೆ ತಿಳಿಸಲಾಗಿದ್ದು, 1800 ಆಕ್ಷೇಪಣೆಗಳು ಬಂದಿವೆ ಎಂದು ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಮಾಯಣ್ಣಗೌಡ ನಗರಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಆಕ್ಷೇಪಣೆಗಳಿವೆ. ಈ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದರು.
ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ಲೋಪವಾಗಿರುವುದು ಎದ್ದು ಕಾಣುತ್ತಿದೆ. ಸಾವಿರ ಕೋಟಿ ರು. ಹಣ ಸುಮ್ಮನೆ ಬರುವುದಿಲ್ಲ. ಆದ್ದರಿಂದ ಕಾಮಗಾರಿಗಳ ಕುರಿತು ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯರನ್ನು ಒತ್ತಾಯಿಸಿದ್ದೇವೆ. ತನಿಖೆಯ ಸ್ವರೂಪದ ಕುರಿತು ಸಿಎಂ ನಿರ್ಧರಿಸಲಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ಜನರ ಸಲಹೆ ಪಡೆಯದೆ, ಜನಪ್ರತಿನಿಧಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸ್ಮಾರ್ಟ್‌ ಸಿಟಿ ಯೋಜನೆ ಪೂರ್ಣಗೊಳಿಸಲಾಗಿದೆ. ಅಲ್ಲದೆ ಕಾಮಗಾರಿಯಲ್ಲಿ ಗುಣಮಟ್ಟವಿಲ್ಲದೆ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆ ಕಾಮಗಾರಿ ಕುರಿತು ತನಿಖೆ ನಡೆಸಲೇಬೇಕು ಎಂಬ ಒತ್ತಾಯವಿದೆ ಎಂದು ಹೇಳಿದ್ದಾರೆ. ಹೀಗಾಗಿ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳಿಗೆ ಈಗ ತನಿಖೆ ಬಿಸಿ ಇದೆ.

ಜನಮಾನಸದಲ್ಲಿ ಎಸ್‌.ಬಂಗಾರಪ್ಪರಿಗೆ ಶಾಶ್ವತ ಸ್ಥಾನ: ಸಚಿವ ಮಧು ಬಂಗಾರಪ್ಪ

ಪಾಲಿಕೆಗೆ ವಹಿಸಲು ಹರಸಾಹಸ:

ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳು ಪೂರ್ಣಗೊಂಡಿದ್ದು, ಅವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡುವ ಸಿದ್ಧತೆ ನಡೆಯುತ್ತಿದೆ. ಆದರೆ, ನ್ಯೂನತೆಗಳನ್ನು ಸರಿಪಡಿಸದೆ ಪಾಲಿಕೆಗೆ ಕಾಮಗಾರಿಗಳ ಹಸ್ತಾಂತರ ಮಾಡಬಾರದು ಎಂಬ ಆಕ್ಷೇಪ ಇದೆ. ಈ ಹಿಂದೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿಯು ಸದಸ್ಯರು ಸಮಸ್ಯೆಗಳ ಆಗರವಾಗಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ಪಾಲಿಕೆಗೆ ಹಸ್ತಾಂತರ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದರು.

ಸ್ಮಾರ್ಟ್‌ಸಿಟಿ ಕಾಮಗಾರಿ ಆರಂಭದಲ್ಲೇ ನಾವು ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗಳ ಕುರಿತು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಸಾಕಷ್ಟು ದೂರು ಕೊಟ್ಟಿದ್ದೆವು. ಸ್ಮಾರ್ಟ್‌ಸಿಟಿ ಯೋಜನೆಯಿಂದ ನಗರದಲ್ಲಿ ನಿರ್ಮಿಸಲಾಗಿರುವ ಸ್ಮಾರ್ಟ್‌ ಶೌಚಾಲಯಗಳಿಗೆ ನೀರಿನ ಸಂಪರ್ಕವೇ ಇಲ್ಲ. ಗೋಪಾಳದಲ್ಲಿ ನಡೆದಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿಯೂ ಸೇರಿ, ನೂರಾರು ಕಾಮಗಾರಿಗಳು ಅಸಂಬದ್ಧವಾಗಿ ನಡೆದಿವೆ. ಈ ಬಗ್ಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಮಾರ್ಟ್‌ಸಿಟಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಕಾಮಗಾರಿಗಳ ಜಂಟಿ ಪರಿಶೀಲನೆ ನಡೆಸಬೇಕು. ಕಳಪೆ ಕಾಮಗಾರಿಗಳು ಸರಿಪಡಿಸಬೇಕು ಎಂದು ನಾಗರಿಕ ಹಿತ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ್‌ಕುಮಾರ್‌ ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios