ವಿಜಯಪುರ: ಆಲಮಟ್ಟಿ ಡ್ಯಾಂನಲ್ಲಿ ನೀರಿನ ಕೊರತೆ; ರೈತರ ಸಂಕಷ್ಟ?
2021ರ ಡಿಸೆಂಬರ್‌ನಲ್ಲಿ ಅಕಾಲಿಕ ಮಳೆಯಾಗಿ ಜಲಾಶಯಕ್ಕೆ 20 ಟಿಎಂಸಿ ಅಡಿಯಷ್ಟು ಹೆಚ್ಚುವರಿ ನೀರು ಹರಿದು ಬಂದಿತ್ತು. ಆದರೆ, ಜಲಾಶಯದಲ್ಲಿ ಈಗ ಕೇವಲ 45 ಟಿಎಂಸಿ ಅಡಿ ಮಾತ್ರ ಸಂಗ್ರಹವಿದೆ.
ಗಂಗಾಧರ ಹಿರೇಮಠ
ಆಲಮಟ್ಟಿ(ಮಾ.11): ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಈ ಬಾರಿ ನೀರಿನ ಸಂಗ್ರಹದ ಕೊರತೆ ಕಂಡುಬಂದಿದೆ. ಕಳೆದ ವರ್ಷದ ಈ ದಿನದ (ಮಾರ್ಚ್ 10) ನೀರಿನ ಸಂಗ್ರಹ ಗಮನಿಸಿದಾಗ ಜಲಾಶಯದಲ್ಲಿ 68 ಟಿಎಂಸಿ ಅಡಿ ನೀರಿತ್ತು. ಆದರೆ, ಈ ವರ್ಷ 23 ಟಿಎಂಸಿ ಅಡಿ ಕಡಿಮೆ ನೀರಿನ ಸಂಗ್ರಹವಿದೆ. ಹೀಗಾಗಿ, ನೀರಿನ ಸಮರ್ಪಕ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಯಾವ ರೀತಿ ಕ್ರಮ ವಹಿಸಬೇಕು ಎಂಬ ಜಿಜ್ಞಾಸೆಯಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳು ಇದ್ದರೆ, ಫಲಾನುಭವಿ ರೈತರು ಹೇಗಾದರೂ ಮಾಡಿ ಇನ್ನು 15 ದಿನಗಳವರೆಗೆ ಹೆಚ್ಚುವರಿಯಾಗಿ ನೀರು ಪಡೆದು ತಮ್ಮ ಬೆಳೆಯನ್ನು ಉಳಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದಾರೆ.
2021ರ ಡಿಸೆಂಬರ್‌ನಲ್ಲಿ ಅಕಾಲಿಕ ಮಳೆಯಾಗಿ ಜಲಾಶಯಕ್ಕೆ 20 ಟಿಎಂಸಿ ಅಡಿಯಷ್ಟು ಹೆಚ್ಚುವರಿ ನೀರು ಹರಿದು ಬಂದಿತ್ತು. ಆದರೆ, ಜಲಾಶಯದಲ್ಲಿ ಈಗ ಕೇವಲ 45 ಟಿಎಂಸಿ ಅಡಿ ಮಾತ್ರ ಸಂಗ್ರಹವಿದೆ. ಮಾರ್ಚ್ 10ರಂದು ಜಲಾಶಯದಲ್ಲಿ 512.65 ಮೀ.ವರೆಗೆ ನೀರು ಲಭ್ಯವಿದ್ದು, ಜಲಾಶಯದಲ್ಲಿ 45 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಮೂರು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಸರಾಸರಿ 6 ಟಿಎಂಸಿ ಕಡಿಮೆ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಪ್ರತಿ ವರ್ಷ ನವೆಂಬರ್ ಅಂತ್ಯದವರೆಗೂ ಜಲಾಶಯದಲ್ಲಿ ಒಳಹರಿವು ಇರುತ್ತಿತ್ತು. ಆದರೆ, ಈ ಬಾರಿ 2022, ನವೆಂಬರ್ 11ರಂದು ಒಳಹರಿವು ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಜಲಾಶಯದಲ್ಲಿ ನೀರಿನ ಕೊರತೆ ಕಂಡುಬಂದಿದೆ.
ಆಲಮಟ್ಟಿ ಆಣೆಕಟ್ಟು ಎತ್ತರಕ್ಕೆ ಮತ್ತೆ ಮಹಾರಾಷ್ಟ್ರ ಕ್ಯಾತೆ
ಪ್ರಸ್ತುತ ಆಲಮಟ್ಟಿ ಜಲಾಶಯದಲ್ಲಿ ಬಳಕೆ ಯೋಗ್ಯ ಲೈವ್ ಸ್ಟೋರೇಜ್ ನೀರು 27.473 ಟಿಎಂಸಿ ಅಡಿ ಹಾಗೂ ನಾರಾಯಣಪುರ ಜಲಾಶಯದಲ್ಲಿ 12 ಟಿಎಂಸಿ ಅಡಿ ಮಾತ್ರ ಲಭ್ಯವಿದೆ. ಸಾಮಾನ್ಯವಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ಹಿಂಗಾರು ಹಂಗಾಮಿಗೆ ಪ್ರತಿ ವರ್ಷ ಮಾಚ್‌ರ್ 30ರವರೆಗೆ ಮಾತ್ರ ಕಾಲುವೆಗೆ ನೀರು ಹರಿಸಲಾಗುತ್ತದೆ. ಆದರೆ, ಈ ವರ್ಷ ಕಾಲುವೆಗೆ ನೀರು ಹರಿಸುವ ಅವಧಿಯನ್ನು ಇನ್ನೂ 15 ದಿನ ವಿಸ್ತರಿಸಬೇಕೆಂಬ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಒಂದೆಡೆ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ನೀರಿನ ಸಂಗ್ರಹ ದಿನೇ ದಿನೇ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಕಾಲುವೆಗೆ ನೀರಿನ ಹರಿವಿನ ಅವಧಿ ಹೆಚ್ಚಿಸಲು ಒತ್ತಡ ಹೆಚ್ಚಿದೆ.
ಆಲಮಟ್ಟಿ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ನಿತ್ಯ 0.1 ಟಿಎಂಸಿ ಅಡಿ, ನಾರಾಯಣಪುರ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ 0.9 ಟಿಎಂಸಿ ಅಡಿ ಸೇರಿ ನಿತ್ಯ 1 ಟಿಎಂಸಿ ಅಡಿ ನೀರು ಅಗತ್ಯವಾಗಿದೆ. 14 ದಿನ ನೀರು ಹರಿವು 10 ದಿನ ನೀರು ಸ್ಥಗಿತ ಹೀಗೆ ವಾರಾಬಂದಿ ಮೇಲೆ ಸಂಬಂಧಪಟ್ಟ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತಿದೆ. ವೇಳಾಪಟ್ಟಿಪ್ರಕಾರ ಮಾಚ್‌ರ್ 8ರಂದು ಕಾಲುವೆಗೆ ನೀರು ಹರಿಸುವುದು ಸ್ಥಗಿತಗೊಳ್ಳುತ್ತದೆ. ಕೊನೆಯದಾಗಿ ಮಾಚ್‌ರ್ 18 ರಿಂದ ಮಾಚ್‌ರ್ 30ರವರೆಗೆ 13 ದಿನ ನೀರು ಮಾತ್ರ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಅತ್ಯಂತ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡ ಪರಿಣಾಮ ಮಾಚ್‌ರ್ 30ರವರೆಗೆ ನೀರು ಕೊಡಲು ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಹೆಚ್ಚುವರಿ ನೀರು ಕೊಡುವುದನ್ನು ನೀರಾವರಿ ಸಲಹಾ ಸಮಿತಿಯೇ ನಿರ್ಧರಿಸಬೇಕು ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ. ನಿಗದಿತ ಅವಧಿಯಲ್ಲಿ ಕಾಲುವೆಗೆ ನೀರು ಹರಿಸಿದ ನಂತರ ಎರಡು ಜಲಾಶಯ ಸೇರಿ ಕೇವಲ 27 ಟಿಎಂಸಿ ನೀರು ಮಾತ್ರ ಬಾಕಿ ಉಳಿಯುತ್ತದೆ.
ಎರಡೂ ಜಲಾಶಯ ಸೇರಿ ಜೂನ್ 2023ರವರೆಗೆ ಹಿನ್ನೀರಿನ ಬಳಕೆ, ಭಾಷ್ಪೀಭವನ, ಕೈಗಾರಿಕಾ ಬಳಕೆ, ಎನ್‌ಟಿಪಿಸಿ, ಆರ್‌ಟಿಪಿಎಸ್, ಮತ್ತಿತರರ ಬಳಕೆಗೆ 35 ಟಿಎಂಸಿ ನೀರು ಅಗತ್ಯ. ಆದರೆ, ಬಳಕೆಗೆ ಯೋಗ್ಯವಾದ 27 ಟಿಎಂಸಿ ನೀರು ಮಾತ್ರ ಉಳಿಯುತ್ತದೆ. ಹೀಗಾಗಿ, ಸುಮಾರು 8ರಿಂದ 10 ಟಿಎಂಸಿ ನೀರು ಕೊರತೆಯಾಗುತ್ತದೆ.
ನೀರಿನ ಕೊರತೆ ಎದುರಾದಾಗ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಬಳಸಿದ ಉದಾಹರಣೆಗಳು ಸಾಕಷ್ಟಿವೆ. ಈ ಬಾರಿಯೂ ಅದೇ ರೀತಿಯ ಕ್ರಮವನ್ನು ವಹಿಸಬೇಕು. ಆಲಮಟ್ಟಿ ಅಣೆಕಟ್ಟು ವ್ಯಾಪ್ತಿಯ ಕಾಲುವೆಗಳಿಗೆ ಬಳಕೆಯಾಗುವ ನೀರಿನ ಪ್ರಮಾಣ ಅತಿ ಕಡಿಮೆ ಇದ್ದು, ನಿತ್ಯ 0.1 ಟಿಎಂಸಿ ನೀರು ಮಾತ್ರ ಅಗತ್ಯ. ಹೀಗಾಗಿ, ಶೇಂಗಾ ಸೇರಿದಂತೆ ಇನ್ನಿತರ ಬೆಳೆಗಳಿಗೆ ಏಪ್ರಿಲ್ ಅಂತ್ಯದವರೆಗೆ ನೀರು ಹರಿಸಬೇಕು ಅಂತ ರೈತ ಮುಖಂಡ ಸೀತಪ್ಪ ಗಣಿ ನಿಂಗರಾಜ ಆಲೂರ ತಿಳಿಸಿದ್ದಾರೆ.
ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನಲ್ಲಿ ಪಕ್ಷಿಧಾಮಕ್ಕೆ ವನ್ಯಜೀವಿ ಮಂಡಳಿ ಗ್ರೀನ್ ಸಿಗ್ನಲ್
ಏಪ್ರಿಲ್ ನಂತರ ಜಲಾಶಯದ ನೀರಿನ ನಿರ್ವಹಣೆಯ ಜವಾಬ್ದಾರಿ ಕುಡಿಯುವ ನೀರಿನ ಉದ್ದೇಶದಿಂದ ಬೆಳಗಾವಿ ಪ್ರಾದೇಶಿಕ ವಿಭಾಗಕ್ಕೆ ಹೋಗುತ್ತದೆ. ಮಾಚ್‌ರ್ ಅಂತ್ಯಕ್ಕೆ ಚುನಾವಣಾ ನೀತಿಸಂಹಿತೆ ಬರುವ ಸಾಧ್ಯತೆ ಇದೆ. ಹೀಗಾಗಿ, ಕಾಲುವೆಗೆ ನೀರು ಬಿಡುವ ನೀರಾವರಿ ಸಲಹಾ ಸಮಿತಿ ರದ್ದಾಗುತ್ತದೆ. ಅದು ರದ್ದಾಗುವ ಮೊದಲೇ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಲಿ ಇಲ್ಲವೇ ಜಲಸಂಪನ್ಮೂಲ ಸಚಿವರಾಗಲಿ ಮಧ್ಯಪ್ರವೇಶಿಸಿ ಏ.15ರವರೆಗೆ ನೀರು ಹರಿಸಲು ಈಗಲೇ ಆದೇಶಿಸಬೇಕು ಅಂತ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದ್ದಾರೆ.
ನೀರು ಎತ್ತುವ ಪರವಾನಗಿ ಸ್ಥಗಿತ
ಐಸಿಸಿ ಸಭೆಯಲ್ಲಿ ನಿರ್ಧರಿಸಿದಂತೆ ಮಾಚ್‌ರ್ 30ರವರೆಗೆ ಮಾತ್ರ ಕಾಲುವೆಗಳಲ್ಲಿ ನೀರು ಹರಿಸಲಾಗುವುದು. ನೀರನ್ನು ಮಿತವಾಗಿ ಬಳಸಬೇಕು. ನಿಷೇಧಿತ ಬೆಳೆಗಳು, ಭತ್ತ ಹಾಗೂ ಕಬ್ಬಿಗೆ ನೀರು ಕೊಡಲು ಆಗುವುದಿಲ್ಲ. ಆಲಮಟ್ಟಿಜಲಾಶಯದ ಹಿನ್ನೀರಿನಿಂದ ನೀರನ್ನು ಪಂಪ್‌ಸೆಟ್ ಮೂಲಕ ಎತ್ತಿ ನೀರಾವರಿಗೆ ಬಳಸಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಕುರಿತು ನೀಡಿದ ಅನುಮತಿಯನ್ನು ರದ್ದುಗೊಳಿಸಲಾಗಿದೆ. ಕುಡಿಯುವ ನೀರು ಹಾಗೂ ಇತರ ತುರ್ತು ಅವಶ್ಯಕತೆಗಳ ಸಲುವಾಗಿ 2023ರ ಜೂನ್‌ವರೆಗೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಅಗತ್ಯವಿದೆ ಎಂದು ಕೆಬಿಜೆಎನ್‌ಎಲ್ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್.ಸುರೇಶ ಮಾಹಿತಿ ನೀಡಿದ್ದಾರೆ.