ಜೋಗದಲ್ಲಿ ಸ್ಟಾರ್‌ ಹೋಟೆಲ್‌ : ತೀವ್ರ ವಿರೋಧ

  • ಜೋಗ ಜಲಪಾತಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಜಲಪಾತದ ಸಮೀಪದಲ್ಲಿ ಪಂಚತಾರಾ ಹೋಟೆಲ್‌ 
  • ರಾಜ್ಯ ಸರ್ಕಾರದ ನಿರ್ಧಾರದಿಂದ ಗುಡ್ಡ ಕುಸಿತದಂತಹ ಪ್ರಕೃತಿ ವಿಕೋಪ ಸೇರಿದಂತೆ ಪರಿಸರ ಅಸಮತೋಲನ ಉಂಟಾಗಲಿದೆ ಎಂದು ಪರಿಸರ ಪ್ರೇಮಿಗಳು ಆತಂಕ
oppose For Star Hotel  project At Jog Falls snr

ಬೆಂಗಳೂರು (ಜು.12):  ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಜಲಪಾತದ ಸಮೀಪದಲ್ಲಿ ಪಂಚತಾರಾ ಹೋಟೆಲ್‌ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಗುಡ್ಡ ಕುಸಿತದಂತಹ ಪ್ರಕೃತಿ ವಿಕೋಪ ಸೇರಿದಂತೆ ಪರಿಸರ ಅಸಮತೋಲನ ಉಂಟಾಗಲಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಜೋಗ ವೀಕ್ಷಣೆಗೆ ಮುಕ್ತ ಅವಕಾಶ : ಮಾರ್ಗಸೂಚಿ ಪಾಲನೆ ಕಡ್ಡಾಯ

ಅಭಿವೃದ್ಧಿ ಹೆಸರಿನಲ್ಲಿ ಬೃಹತ್‌ ಕಟ್ಟಡಗಳನ್ನು ನಿರ್ಮಿಸುವುದರಿಂದ ಜಲಪಾತದ ಸುತ್ತಲ ಭಾಗಗಳಲ್ಲಿನ ಭೂಮಿ ಸಡಿಲಗೊಂಡು ಗುಡ್ಡ ಕುಸಿತದಂತಹ ವಿಕೋಪಗಳಿಗೆ ಆಸ್ಪದ ನೀಡಬಹುದು. ಜೊತೆಗೆ, ಮುಂದೊಂದು ದಿನ ಜಲಪಾತ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದೂ ಅವರು ಎಚ್ಚರಿಸಿದ್ದಾರೆ.

ಪಶ್ಚಿಮಘಟ್ಟಪ್ರದೇಶದಿಂದ ಹರಿದು ಬರುವ ಶರಾವತಿ ನದಿಯಿಂದ ಜಲಪಾತ ನಿರ್ಮಾಣವಾಗಿದೆ. ಇದೀಗ ಪ್ರವಾಸೋದ್ಯಮ ಇಲಾಖೆ 185 ಕೋಟಿ ರು. ವೆಚ್ಚದಲ್ಲಿ ಸುಮಾರು ಒಂದು ಸಾವಿರ ಮಂದಿ ಉಳಿದುಕೊಳ್ಳುವಂತಹ ಪಂಚತಾರಾ ಹೋಟೆಲ್‌, ವ್ಯೂವ್‌ ಪಾಯಿಂಟ್‌, ಕಲಾಭವನ ನಿರ್ಮಾಣ, ಬೋಟಿಂಗ್‌ ಕ್ರೀಡೆಗಳಿಗೆ ಅನುವು ಮಾಡಿಕೊಡಲು ಮುಂದಾಗಿದೆ. ಲಿಂಗನಮಕ್ಕಿ ಜಲಾಶಯದಲ್ಲಿ 200 ಕ್ಯೂಸೆಕ್‌ ನೀರನ್ನು ಸಂಗ್ರಹಿಸಿ ಪ್ರವಾಸಿಗರನ್ನು ಆಕರ್ಷಿಸಲು ರಜಾ ದಿನಗಳಲ್ಲಿ ಜಲಪಾತಕ್ಕೆ ನೀರು ಬಿಡಲು ವ್ಯವಸ್ಥೆ ಮಾಡಲಾಗುವುದು. ಈ ಯೋಜನೆಯ ಮೇಲ್ವಿಚಾರಣೆಯನ್ನು ಕರ್ನಾಟಕ ವಿದ್ಯುತ್‌ ನಿಯಮ (ಕೆಪಿಸಿಎಲ್‌)ಕ್ಕೆ ವಹಿಸಿರುವುದಾಗಿ ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್‌ ತಿಳಿಸಿದ್ದಾರೆ. ಸರ್ಕಾರದ ಈ ನಿರ್ಧಾರ ಪ್ಲಾಸಿಕ್‌ ಸೇರಿದಂತೆ ವಿವಿಧ ಬಗೆಯ ತ್ಯಾಜ್ಯದಿಂದ ಜಲಾಶಯದ ಸುತ್ತಲಿನ ಪರಿಸರ ಇನ್ನಷ್ಟುಹಾನಿಗೆ ಕಾರಣವಾಗಲಿದೆ ಎಂದು ಪರಿಸರ ಹೋರಾಟಗಾರರು ಆರೋಪಿಸಿದ್ದಾರೆ.

'ವಿಶ್ವವಿಖ್ಯಾತ ಜೋಗ ಪ್ರವಾಸಿ ಸೌಲಭ್ಯಕ್ಕೆ 185 ಕೋಟಿ ರು.'

ಜೋಗ ಜಲಪಾತ ನೈಸರ್ಗಿಕವಾಗಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಮುಂದಾಗಿರುವುದರಿಂದ ಪ್ರಕೃತಿ ವಿಕೋಪಗಳಿಗೆ ಅವಕಾಶ ಮಾಡಿಕೊಟ್ಟಂತಾಗಲಿದೆ. ಜಲಪಾತದ ಸುತ್ತಮುತ್ತಲ ಭಾಗಗಳಲ್ಲಿನ ಅಪರೂಪದ ಜೀವವೈವಿಧ್ಯತೆ ಮತ್ತು ಸಸ್ಯಸಂಕುಲ ನಾಶಕ್ಕೆ ಸರ್ಕಾರವೇ ಅವಕಾಶ ಮಾಡಿಕೊಡುತ್ತಿದೆ. ಆದ್ದರಿಂದ ಜೋಗದ ಸುತ್ತಲ ಭಾಗಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಬಾರದು. ನೈಸರ್ಗಿಕವಾಗಿ ಜಲಪಾತ ಹರಿಯಲು ಬಿಡಬೇಕು ಎಂದು ಸಾಗರದ ಪರಿಸರ ಹೋರಾಟಗಾರ ಅಖಿಲೇಶ್‌ ಚಿಪ್ಪಳಿ ಆಗ್ರಹಿಸಿದ್ದಾರೆ.

ಹೆಚ್ಚು ಪ್ರವಾಸಿಗರನ್ನು ಆಕರ್ಷಣೆ ಮಾಡಲೇಬೇಕು ಎಂದಾದಲ್ಲಿ ಸಾಗರದಲ್ಲಿ ಸೌಲಭ್ಯಗಳನ್ನು ಕಲ್ಪಿಸಲಿ. ಅಲ್ಲಿಂದ ಪ್ರವಾಸಿಗರಿಗಾಗಿ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲಿ. ಅದರ ಹೊರತಾಗಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವುದು ಸರಿಯಲ್ಲ. ಈ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಗಳಾಗುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ವಿದ್ಯುತ್‌ ಉತ್ಪಾದನೆಗೆ ಧಕ್ಕೆ:

ವಿದ್ಯುತ್‌ ಉತ್ಪಾದನೆ ಉದ್ದೇಶದಿಂದ ಲಿಂಗನಮಕ್ಕಿ ಜಲಾಶಯ ನಿರ್ಮಿಸಲಾಗಿದೆ. ಪ್ರಸ್ತುತ 25.7 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಜಲಾಶಯದಲ್ಲಿ 200 ಕ್ಯೂಸೆಕ್‌ ನೀರು ಸಂಗ್ರಹಿಸಿ ರಜಾದಿನಗಳಲ್ಲಿ ಬಿಡಲು ಮುಂದಾದಲ್ಲಿ ವಿದ್ಯುತ್‌ ಉತ್ಪಾದನೆಗೂ ಧಕ್ಕೆಯಾಗಲಿದೆ. ಹೀಗಾಗಿ ಜಲಾಶಯದ ಸುತ್ತಲ ಭಾಗಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪರಿಸರಕ್ಕೆ ಹಾನಿಯಿಲ್ಲ

ಪ್ರವಾಸೋದ್ಯಮ ಇಲಾಖೆ ಪ್ರಾಯೋಜಕತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ. ಇದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ.

- ಸಿಂಧೂ ರೂಪೇಶ್‌, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ

ನಿಯಮ ಉಲ್ಲಂಘನೆ

ಜಲಪಾತ ಸುತ್ತಮುತ್ತ ನಿಯಮ ಉಲ್ಲಂಘಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಮುಂದಾಗಿರುವ ಸರ್ಕಾರದ ಕ್ರಮದಿಂದ ಪರಿಸರ ಅಸಮತೋಲನಕ್ಕೆ ಕಾರಣವಾಗಲಿದೆ.

- ಅಖಿಲೇಶ್‌ ಚಿಪ್ಪಳಿ, ಪರಿಸರ ಹೋರಾಟಗಾರ, ಸಾಗರ

Latest Videos
Follow Us:
Download App:
  • android
  • ios