ಲಾಕ್‌ಡೌನ್‌ನಿಂದ ಅಪಘಾತ ಕಡಿಮೆ: ಕಳೆದ ವರ್ಷ ಸಾವಿನ ಸಂಖ್ಯೆ ಇಳಿಮುಖ
ಪೊಲೀಸರಿಂದ 3 ವರ್ಷದ ಅಪಘಾತ ವಿಮರ್ಶೆ| ಪ್ರೌಢ ಶಿಕ್ಷಣದಲ್ಲಿ ಸಂಚಾರ ಅರಿವಿನ ಬಗ್ಗೆ ಜಾಗೃತಿ ಅಗತ್ಯ: ಅಭಿಪ್ರಾಯ| 2018ಕ್ಕೆ ಹೋಲಿಸಿದರೆ 2019, 2020ರಲ್ಲಿ ಅಪಘಾತ, ಸಾವಿನ ಸಂಖ್ಯೆ ಇಳಿಮುಖ| ಅಪಘಾತಗಳ ವಿಮರ್ಶೆ ಎಂಬ ಕಿರುಹೊತ್ತಿಗೆಯಲ್ಲಿ ಮಾಹಿತಿ ಬಹಿರಂಗ|
ಬೆಂಗಳೂರು(ಜ.25): ರಾಜಧಾನಿ ಬೆಂಗಳೂರಿನಲ್ಲಿ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಕಡಿಮೆಯಾಗಿದ್ದು, ಅಪಘಾತಗಳ ಸಂಖ್ಯೆ ಕೂಡ ಇಳಿಕೆಯಾಗಿದೆ. ನಗರ ಸಂಚಾರ ಪೊಲೀಸರು ಮೂರು ವರ್ಷದ ಅವಧಿಯಲ್ಲಿ ಸಂಭವಿಸಿದ ಅಪಘಾತಗಳ ವಿಮರ್ಶೆ ಎಂಬ ಕಿರುಹೊತ್ತಿಗೆಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರ ಪೈಕಿ ಪುರುಷರು ಹೆಚ್ಚಿದ್ದು, 21 ವರ್ಷದಿಂದ 40 ವಯಸ್ಸಿನೊಳಗಿನವರು ಅಪಘಾತಕ್ಕೆ ಬಲಿಯಾದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2020ರಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಲಾಕ್‌ಡೌನ್ ಹಾಗೂ ಕೊರೋನಾ ವೇಳೆ ಬಹುತೇಕ ವಾಹನಗಳು ರಸ್ತೆಗಿಳಿಯದಿರುವುದು ಕಾರಣ ಎಂದು ಹೇಳಲಾಗಿದೆ.
ನಗರದಲ್ಲಿ 2018ರಲ್ಲಿ 846, 2019ರಲ್ಲಿ 810 ಹಾಗೂ 2020ರಲ್ಲಿ 632 ಅಪಘಾತ ಪ್ರಕರಣಗಳು ದಾಖಲಾಗಿವೆ. ಇನ್ನು 2018ರಲ್ಲಿ 870 ಮಂದಿ ಅಪಘಾತದಿಂದ ಮೃತಪಟ್ಟರೆ, 2019ರಲ್ಲಿ 832 ಹಾಗೂ 2020ರಲ್ಲಿ 657 ಮಂದಿ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಸ್ವಯಂ ಅಪಘಾತದಿಂದಾಗಿ 2018ರಲ್ಲಿ 178, 2019ರಲ್ಲಿ 144 ಹಾಗೂ 2020ರಲ್ಲಿ 164 ಮಂದಿ ಅಸುನೀಗಿದ್ದಾರೆ. ಇನ್ನು ಇತರೆ ವಾಹನಗಳ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ 2018ರಲ್ಲಿ 692, 2019ರಲ್ಲಿ 688 ಹಾಗೂ 2020ರಲ್ಲಿ 493 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪುರುಷರೇ ಹೆಚ್ಚು ಬಲಿ:
ಕಳೆದ ಮೂರು ವರ್ಷದಲ್ಲಿ ಅಪಘಾತದಲ್ಲಿ ಮರಣ ಹೊಂದಿದ್ದವರ ಪೈಕಿ ಪುರುಷರ ಸಂಖ್ಯೆ ಹೆಚ್ಚಿದ್ದು, ಮೂರು ವರ್ಷದಲ್ಲಿ 525 ಪುರುಷರು ಹಾಗೂ 100 ಮಹಿಳೆಯರು ಅಪಘಾತದಲ್ಲಿ ಬಲಿಯಾಗಿದ್ದಾರೆ. ಈ ಪೈಕಿ 21 ವರ್ಷದಿಂದ 40 ವಯಸ್ಸಿನೊಳಗಿನವರು ಹೆಚ್ಚಿದ್ದಾರೆ. 41ರಿಂದ 50 ವಯಸ್ಸಿನ ವಯೋಮಾನದವರು ನಂತರ ಸ್ಥಾನ ಪಡೆದಿದ್ದಾರೆ. 11ರಿಂದ 20 ವಯಸ್ಸಿನ ವ್ಯಕ್ತಿಗಳು ಪ್ರತಿ ವರ್ಷವೂ 50ಕ್ಕೂ ಅಪಘಾತಗಳಲ್ಲಿ ಭಾಗಿಯಾಗುತ್ತಿರುವುದು ಅತ್ಯಂತ ಆತಂಕಕಾರಿ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಬ್ರಿಟನ್, ಜರ್ಮನಿಯಲ್ಲಿ ಕಠಿಣ ‘ಲಾಕ್‌ಡೌನ್ 3.0’!
ಸ್ವಯಂ ಅಪಘಾತದಲ್ಲೂ ಪುರುಷರೇ ಹೆಚ್ಚಾಗಿ ಬಲಿಯಾಗಿದ್ದಾರೆ. ಪ್ರೌಢಶಿಕ್ಷಣ ಪಡೆದವರು ಹೆಚ್ಚಾಗಿ ಅಪಘಾತದಲ್ಲಿ ಮೃತಪಟ್ಟಿರುವುದು ಅಂಕಿ-ಅಂಶಗಳಿಂದ ಕಂಡು ಬಂದಿದೆ. ಪ್ರೌಢ ಶಿಕ್ಷಣದ ವೇಳೆಗೆ ವಿದ್ಯಾಭ್ಯಾಸ ಕ್ರಮದಲ್ಲಿ ಸಂಚಾರ ಅರಿವಿನ ಕಾರ್ಯಕ್ರಮವನ್ನು ಹೆಚ್ಚಾಗಿ ರೂಪಿಸುವ ಅಗತ್ಯವಿದೆ ವಿಮರ್ಶೆಯಲ್ಲಿ ಹೇಳಲಾಗಿದೆ.
ವಿದ್ಯಾವಂತರ ಸಾವು ಕಮ್ಮಿ:
ಸ್ನಾತಕೋತ್ತರ, ವೈದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣ ಪಡೆದವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ವಿರಳ. ಉನ್ನತ ಶಿಕ್ಷಣ ಪಡೆದಂತೆಲ್ಲಾ ಹೆಚ್ಚು ಜಾಗೃತರಾಗಿ ರಸ್ತೆಗಳನ್ನು ಬಳಕೆ ಮಾಡುವುದು ಇದಕ್ಕೆ ಕಾರಣವಿರಬಹುದು ಎಂದು ವಿಮರ್ಶೆಯಲ್ಲಿ ಹೇಳಲಾಗಿದೆ.
2018ರಲ್ಲಿ, 2019ರಲ್ಲಿ ಒಟ್ಟು ಮಾರಣಾಂತಿಕ ಅಪಘಾತಗಳಲ್ಲಿ ಸಂಭವಿಸಿದ ಸಾವಿನಲ್ಲಿ ಪಾದಚಾರಿಗಳ ಸಾವು ಶೇ.32, 2020ರಲ್ಲಿ ಶೇ.24ರಷ್ಟಿದೆ. ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿರುವ ಅಪಘಾತಗಳನ್ನು ಗಮನಿಸಿದರೆ 2020ನೇ ಸಾಲಿನಲ್ಲಿ 164 ಕನಿಷ್ಠ ಪ್ರಮಾಣದ ಸಾವು ಸಂಭವಿಸಿದ್ದು, ಇದಕ್ಕೆ ಕೊರೋನಾ ಲಾಕ್‌ಡೌನ್ ಕಾರಣವಾಗಿಯೂ ಇರಬಹುದು. 2018ರಲ್ಲಿ 285 ಹಾಗೂ 2019ರಲ್ಲಿ 273 ಮಂದಿ ಸಾವನ್ನಪ್ಪಿದ್ದಾರೆ. ಆಟೋ ರಿಕ್ಷಾಗಳಿಂದ ಉಂಟಾಗುವ ಅಪಘಾತಗಳ ಸಂಖ್ಯೆ ಕಡಿಮೆ ಇದೆ ಎಂದು ಅಂಕಿ-ಅಂಶ ಮಾಹಿತಿ ನೀಡಿದೆ.
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಅಪಘಾತದಿಂದ 2018ರಲ್ಲಿ 76 ಮಂದಿ, 2019ರಲ್ಲಿ 68 ಹಾಗೂ 2020ರಲ್ಲಿ 44 ಮಂದಿ ಮೃತಪಟ್ಟಿದ್ದಾರೆ. ಬಿಎಂಟಿಸಿ ಬಸ್‌ಗಳಿಗೆ ಹೋಲಿಸಿದರೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳಿಂದ ಸಂಭವಿಸುತ್ತಿರುವ ಅಪಘಾತಗಳು ಕಡಿಮೆ ಆಗಿವೆ.
ಭಾನುವಾರವೇ ಹೆಚ್ಚು ಆಕ್ಸಿಡೆಂಟ್
ಇನ್ನು ವಾರದ ರಜೆ ಭಾನುವಾರ ಹೆಚ್ಚು ಅಪಘಾತ ಸಂಭವಿಸಿರುವುದು ಬೆಳಕಿಗೆ ಬಂದಿದೆ. 2019-20ರಲ್ಲಿ ಕ್ರಮವಾಗಿ 157 ಮತ್ತು 153 ಅಪಘಾತ ಭಾನುವಾರವೇ ಸಂಭವಿಸಿದೆ. ಶನಿವಾರದ ದಿನ ಕಡಿಮೆ ಅಪಘಾತ ಸಂಖ್ಯೆಗಳಿವೆ ಎಂದು ವರದಿಯಾಗುತ್ತಿವೆ. 2018-19ರಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಕ್ರಮವಾಗಿ 269 ಹಾಗೂ 2020ರಲ್ಲಿ 194 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 2018ರಲ್ಲಿ 81, 2019ರಲ್ಲಿ 90 ಹಾಗೂ ಕಳೆದ ವರ್ಷ 63 ಪ್ರಕರಣಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಹೆಲ್ಮೆಟ್ ಧರಿಸದೆ ಮೃತಪಟ್ಟವರ ಸಂಖ್ಯೆ
ವರ್ಷ 2018 2019 2020
ಮೃತರು 137 137 103
ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ
ವರ್ಷ 2018 2019 2020
ಒಟ್ಟು ಪ್ರಕರಣ 846 810 632
ಮೃತರು 870 832 657