Asianet Suvarna News Asianet Suvarna News

Mandya News: ಇಂದಿನಿಂದ ಮೈಷುಗರ್‌ ಕಾರ್ಯಾರಂಭ

  • ಇಂದಿನಿಂದ ಮೈಷುಗರ್‌ ಕಾರ್ಯಾರಂಭ
  • ನಾಲ್ಕು ವರ್ಷಗಳ ಬಳಿಕ ಕಬ್ಬು ಅರೆಯುವಿಕೆ ಶುರು
  •  ಪುನಶ್ಚೇತನ ಕಾಣುವುದೇ ಮಹಾರಾಜರ ಕಂಪನಿ
Mysugar factory is starting today Mandya rav
Author
First Published Aug 31, 2022, 5:00 AM IST

ಮಂಡ್ಯ (ಆ.31) : ನಾಲ್ಕು ವರ್ಷಗಳಿಂದ ಸ್ಥಗಿತಗೊಂಡು ತುಕ್ಕು ಹಿಡಿದಿದ್ದ ಮೈಷುಗರ್‌ ಚಕ್ರಗಳು ಗಣೇಶ ಚತುರ್ಥಿಯ ದಿನವಾದ ಬುಧವಾರ (ಆ.31)ದಿಂದ ಮತ್ತೆ ತಿರುಗಲು ಸಜ್ಜಾಗಿವೆ. ಆರ್ಥಿಕ ಜೀವನಾಡಿಯಾಗಿರುವ ಮೈಷುಗರ್‌ ಹದಿನೆಂಟು ವರ್ಷಗಳಿಂದ ನಷ್ಟದ ಸುಳಿಯೊಳಗೆ ಸಿಲುಕಿದೆ. ರಕ್ಷಣೆ ಮಾಡುವವರಿಲ್ಲದೆ ಅನಾಥವಾಗಿದ್ದ ಕಾರ್ಖಾನೆಗೆ ಹೊಸ ದಿಕ್ಕು ತೋರಿಸುವ ಪ್ರಯತ್ನ ಇದೀಗ ನಡೆದಿದೆ. ಮಹಾರಾಜರು ಸ್ಥಾಪಿಸಿದ ಕಾರ್ಖಾನೆ ಇನ್ನು ಮುಂದಾದರೂ ಹೊಸತನದೊಂದಿಗೆ ಪುನಶ್ಚೇತನ ಕಾಣುವುದೇ ಎನ್ನುವುದನ್ನು ಕಾದುನೋಡಬೇಕಿದೆ.

ಆ.31ಕ್ಕೆ ಮೈಷುಗರ್‌ ಪ್ರಾಯೋಗಿಕ ಕಾರ್ಯಾರಂಭ: ಸಚಿವ ಶಂಕರ ಮುನೇನಕೊಪ್ಪ

ಆ.11ರಂದು ಮೈಸೂರು ಸಕ್ಕರೆ ಕಾರ್ಖಾನೆ(Mysore Sugar Factory)ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಯಿತಾದರೂ 20 ದಿನಗಳು ತಡವಾಗಿ ಕಬ್ಬು ಅರೆಯುವಿಕೆಗೆ ಪ್ರಾಯೋಗಿಕ ಚಾಲನೆ ನೀಡಲಾಗುತ್ತಿದೆ. ಕಾರ್ಖಾನೆಗೆ ಮರು ಜೀವ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ.10ರಂದು ಕಬ್ಬು ನುರಿಸುವುದಕ್ಕೆ ಅಧಿಕೃತ ನಿಶಾನೆ ತೋರುವರು.

ಪುಣೆಯ ಆರ್‌.ಬಿ.ಟೆಕ್ನೋಕ್ರೇಟ್ಸ್‌ ಅಂಡ್‌ ರೀಕ್ಲೈಮ​ರ್‍ಸ್ ಪ್ರೈವೇಟ್‌ ಲಿಮಿಟೆಡ್‌(R B Technocrats And Reclaimers Pvt. Ltd.} ಹಾಗೂ ಹೈದರಾಬಾದ್‌ನ ಎಸ್ಸೆನ್ನಾರ್‌ ಪವರ್‌ಟೆಕ್‌ ಸರ್ವಿಸ್ ಸಂಸ್ಥೆಯ(Essennar Powertech Services )  ಮೈಷುಗರ್‌ ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ತಿ ಮತ್ತು ಓವರ್‌ಹಾಲಿಂಗ್‌ ಕೆಲಸ ನಿರ್ವಹಿಸಿದ್ದಾರೆ. ಕಂಪನಿಯ ಸಕ್ಕ್ರೆ ಘಟಕ, ಸಹ-ವಿದ್ಯುತ್‌ ಘಟಕಕ್ಕೆ 13.92 ಲಕ್ಷ ರು. ಹಾಗೂ ಸಹ ವಿದ್ಯುತ್‌ ಘಟಕ ಟರ್ಬೈನ್‌, ವಿದ್ಯುತ್‌ ಉತ್ಪಾದನೆ, ವಿತರಣೆ ಮತ್ತು ಪ್ರಸರಣ ವಿಭಾಗವನ್ನು 2.80 ಲಕ್ಷ ರು. ವೆಚ್ಚದಲ್ಲಿ ನವೀಕರಿಸಲಾಗಿದೆ. ಕಾರ್ಖಾನೆಯ ಎಲ್ಲಾ ಘಟಕಗಳು ಸುಗಮವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವುದಾಗಿ, ಮುಂದೆಂದೂ ನಿಲ್ಲದೆ ನಿರಂತರ ಕಾರ್ಯಾಚರಣೆ ನಡೆಸುವುದಾಗಿ ಕಾರ್ಖಾನೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಹಣಕಾಸು ನೆರವಿಗೆ ಮೀನಮೇಷ:

ಮೈಷುಗರ್‌ ಪುನಶ್ಚೇತನ ವಿಚಾರವನ್ನು ಬಾಯಿಮಾತಿನಲ್ಲಷ್ಟೇ ಹೇಳುವ ಮುಖ್ಯಮಂತ್ರಿಗಳು ಹಾಗೂ ಸಚಿವರು ಕಾರ್ಖಾನೆಗೆ ಅಗತ್ಯವಿರುವ ಹಣಕಾಸಿನ ನೆರವು ನೀಡುವುದಕ್ಕೆ ಮೀನಮೇಷ ಎಣಿಸುವುದು ಸಾಮಾನ್ಯವಾಗಿದೆ. ಕಳೆದ ಬಜೆಟ್‌ನಲ್ಲಿ 50 ಕೋಟಿ ರು. ಹಣವನ್ನು ಸರ್ಕಾರ ಘೋಷಿಸಿದ್ದರೂ ಇದುವರೆಗೆ 30 ಕೋಟಿ ರು. ಹಣವನ್ನು ಮಾತ್ರ ಬಿಡುಗಡೆ ಮಾಡಿದೆ. ಕಾರ್ಖಾನೆ ತಡವಾಗಿ ಆರಂಭವಾಗುವುದಕ್ಕೆ ಆರ್ಥಿಕ ನೆರವಿನಲ್ಲಿ ತೋರಿದ ವಿಳಂಬ ಧೋರಣೆಯೂ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

ಆರ್ಥಿಕ ನೆರವು ನೀಡುವಲ್ಲಿ ಆದ ವಿಳಂಬದಿಂದ ಬಗಾಸ್‌ ಖರೀದಿ, ಯಂತ್ರೋಪಕರಣಗಳ ದುರಸ್ತಿ, ವಿದ್ಯುತ್‌ ಬಾಕಿ ಪಾವತಿಸಿ ಮರು ಸಂಪರ್ಕ ಪಡೆಯುವುದು ಸೇರಿದಂತೆ ಎಲ್ಲಾ ಕೆಲಸಗಳು ನಿಧಾನಗತಿಯಲ್ಲಿ ಸಾಗಿ ಇದೀಗ ಎಲ್ಲವೂ ಅಂತಿಮಗೊಂಡಿದೆ.

ಒ ಅಂಡ್‌ ಎಂ ವಿಧಾನ:

ಮೈಷುಗರ್‌ ಕಾರ್ಖಾನೆ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ. ಕಾರ್ಖಾನೆ ಆಸ್ತಿ, ಅದರ ಮಾಲೀಕತ್ವ ಸರ್ಕಾರದ ಒಡೆತನದಲ್ಲೇ ಇರುತ್ತದೆ. ಕಬ್ಬು ಅರೆಯುವಿಕೆ, ಸಕ್ಕರೆ ಉತ್ಪಾದನೆ, ವಿದ್ಯುತ್‌ ಉತ್ಪಾದನೆಯಷ್ಟೇ ಖಾಸಗಿಯವರ ಜವಾಬ್ದಾರಿಯಾಗಿರಲಿದೆ. ಇಷ್ಟುದಿನಗಳವರೆಗೆ ಕಾರ್ಖಾನೆ ನಿಂತು ನಿಂತು ಓಡುತ್ತಿರುವುದಕ್ಕೆ ಅಧಿಕಾರಿಗಳು ಹಾಗೂ ಕಾರ್ಮಿಕರು ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪದಲ್ಲಿ ತೊಡಗುತ್ತಿದ್ದರು. ಇದೀಗ ಕಾರ್ಖಾನೆಯ ಅಧಿಕಾರಿಗಳು, ನೌಕರರೆಲ್ಲರೂ ಬದಲಾಗಿದ್ದಾರೆ. ಹೊಸ ಅಧಿಕಾರಿ ವರ್ಗ, ಖಾಸಗಿಯವರ ನೌಕರರ ನೇತೃತ್ವದಲ್ಲಿ ಕಾರ್ಖಾನೆ ಕಬ್ಬು ಅರೆಯುವಿಕೆ ಹೇಗಿರಲಿದೆ ಎನ್ನುವುದು ಸದ್ಯದ ಕುತೂಹಲವಾಗಿದೆ.

ಎಲೆಕ್ಷನ್‌ ಗಿಮಿಕ್‌ ಆಗದಿರಲಿ..!

ಜಿಲ್ಲಾ ಕೇಂದ್ರದೊಳಗೆ ಕೈಗಾರಿಕೆ ಎನ್ನುವುದೇನಾದರೂ ಇದ್ದರೆ ಅದು ಮೈಷುಗರ್‌ ಕಂಪನಿ ಮಾತ್ರ. ಅದರ ಉಳಿವು-ಬೆಳವಣಿಗೆ ಅಗತ್ಯ, ಅನಿವಾರ್ಯ. ಸಾವಿರಾರು ರೈತರು ಕಾರ್ಖಾನೆಯನ್ನು ನಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಸುಮಾರು 7 ರಿಂದ 8 ಲಕ್ಷ ಟನ್‌ ಕಬ್ಬು ಬೆಳೆಯುವ ಪ್ರದೇಶ ಮೈಷುಗರ್‌ನ್ನೇ ಅವಲಂಬಿಸಿದೆ. ಮಹಾರಾಜರು ಕೊಟ್ಟಿರುವ ಅಮೂಲ್ಯ ಕೊಡುಗೆಯನ್ನು ಸಮರ್ಥವಾಗಿ ಬೆಳೆಸುವ ಇಚ್ಛಾಶಕ್ತಿಯನ್ನು ಆಡಳಿತ ನಡೆಸುವ ನಾಯಕರು ಪ್ರದರ್ಶಿಸಬೇಕಿದೆ. ಮೈಸೂರು ಸಕ್ಕರೆ ಕಾರ್ಖಾನೆ ಪುನಶ್ಚೇತನ ಬಿಜೆಪಿ ನಾಯಕರ ಎಲೆಕ್ಷನ್‌ ಗಿಮಿಕ್‌ ಆಗಬಾರದು.

ಚುನಾವಣೆ ಇನ್ನು ಏಳೆಂಟು ತಿಂಗಳಿರುವುದರಿಂದ ಕಾರ್ಖಾನೆಯನ್ನು ಆರಂಭಿಸಿದಂತೆ ಮಾಡಿ ಜನರ ವಿಶ್ವಾಸ ಗಳಿಸುವುದು ಆಡಳಿತ ನಡೆಸುವವರ ಮೂಲ ಗುರಿಯಾಗಬಾರದು. ರಾಜಕೀಯ ಪಕ್ಷಗಳು ಚುನಾವಣೆಗೆ ದಾಳವಾಗಿ ಮೈಷುಗರ್‌ ಬಳಸಿಕೊಳ್ಳದೆ ಪ್ರಗತಿಯಲ್ಲಿ ಹೊಸ ಆಯಾಮವನ್ನು ನೀಡಿದಾಗ ಜಿಲ್ಲಾ ಕೇಂದ್ರದ ಆರ್ಥಿಕತೆಗೆ ಶಕ್ತಿ ತುಂಬಿದಂತಾಗುತ್ತದೆ ಎನ್ನುವುದು ಜನರ ಆಶಯವಾಗಿದೆ.

ಮೈಷುಗರ್ ಸಕ್ಕರೆ ಕಾರ್ಖಾನೆ ಖಾಸಗಿಗೆ ಕೊಡಬೇಡಿ; ಸಿಎಂಗೆ ಎಚ್‌ಡಿಕೆ ಮನವಿ

ಮೈಷುಗರ್‌ ಕಾರ್ಖಾನೆಯಲ್ಲಿ ಡಿಸ್ಟಿಲರಿ, ಎಥೆನಾಲ್‌ ಘಟಕ ಸೇರಿದಂತೆ ಇತರ ಉಪ ಉತ್ಪನ್ನ ಘಟಕಗಳ ಸ್ಥಾಪನೆಗೆ ಪೂರಕ ಅವಕಾಶಗಳಿವೆ. ಅವೆಲ್ಲವನ್ನೂ ಹಂತ ಹಂತವಾಗಿ ಜಾರಿಗೊಳಿಸಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗೆ ಚೈತನ್ಯಶಕ್ತಿ ತುಂಬುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕು. ಎರಡು ವರ್ಷಗಳ ಕಾಲ ಕಾರ್ಖಾನೆಯನ್ನು ನಡೆಸಿದಂತೆ ಮಾಡಿ ಆನಂತರ ನಿರ್ಲಕ್ಷ್ಯ ಮಾಡಿದರೆ ಅದು ಜನರಿಗೆ ಬಗೆಯುವ ದ್ರೋಹವಾಗುತ್ತದೆ. ಸರ್ಕಾರ ಈಗಲೇ ಕಾರ್ಖಾನೆ ಬೆಳವಣಿಗೆಗೆ ಏನೆಲ್ಲಾ ಸಹಕಾರ ನೀಡಬೇಕೋ ಅದೆಲ್ಲವನ್ನೂ ನೀಡಿ ಸುಭದ್ರ ಬುನಾದಿ ಹಾಕಿಕೊಟ್ಟರೆ ಕಾರ್ಖಾನೆಗೆ ಗತವೈಭವ ಮರಳುವುದರಲ್ಲಿ ಯಾವ ಸಂಶಯವೂ ಇಲ್ಲ.

  • ಕಾರ್ಖಾನೆ ಆರಂಭಕ್ಕೆ ಎಚ್‌ಡಿಕೆ-ಬಿಎಸ್‌ವೈ ನಿರ್ಲಕ್ಷ್ಯ
  •  ಉದಾರಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  •  ರೈತ-ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಜಯ

2018ರಲ್ಲಿ ಸ್ಥಗಿತಗೊಂಡಿದ್ದ ಮೈಷುಗರ್‌ ಕಾರ್ಖಾನೆ ಆರಂಭಕ್ಕೆ ಯಾರೂ ಸಹ ಹೆಚ್ಚಿನ ಆಸಕ್ತಿಯನ್ನೇ ತೋರಿಸಲಿಲ್ಲ. ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಸ್ಥಾನಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿತು. ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದರೂ ಕಾರ್ಖಾನೆ ಆರಂಭವಾಗಲಿಲ್ಲ. ಹೊಸ ಕಾರ್ಖಾನೆಯನ್ನು ಸ್ಥಾಪಿಸುವ ಮಾತು ಮಾತಾಗಿಯೇ ಉಳಿಯಿತು. ಅದಕ್ಕಾಗಿ ಮೀಸಲಿಟ್ಟ100 ಕೋಟಿ ರು. ಏನಾಯಿತೋ ಯಾರಿಗೂ ಗೊತ್ತಾಗಲಿಲ್ಲ. ಆನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ತವರಿನ ಮಗ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತರೂ ಎರಡು ವರ್ಷಗಳ ಕಾಲ ಕಾರ್ಖಾನೆಗೆ ಬಜೆಟ್‌ನಲ್ಲಿ ನಯಾ ಪೈಸೆಯನ್ನೂ ನೀಡದೆ ನಿರ್ಲಕ್ಷಿಸಿದರು.

ಕಾರ್ಖಾನೆಯನ್ನು ಒ ಅಂಡ್‌ ಎಂ ನೀಡುವುದು ಸಾಧ್ಯವಾಗದಿದ್ದಾಗ ಖಾಸಗೀಕರಣಕ್ಕೆ ಮುಂದಾದರು. ನೌಕರರೆಲ್ಲರಿಗೂ ಸ್ವಯಂ ನಿವೃತ್ತಿ ಯೋಜನೆ ತಂದು ಮನೆಗೆ ಕಳುಹಿಸಲಾಯಿತು. ಮೈಷುಗರ್‌ ಖಾಸಗೀಕರಣದ ವಿರುದ್ಧ ರೈತರು-ಪ್ರಗತಿಪರ ಸಂಘಟನೆಗಳಿಂದ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಯಿತು. ಮೈಸೂರು ದಸರಾಗೆ ಅಡ್ಡಿಪಡಿಸುವ ಬೆದರಿಕೆ ಹಾಕಿದರು. ಆ ವೇಳೆ ರೈತ ಮುಖಂಡರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವುದಿಲ್ಲವೆಂಬ ಅಭಯ ನೀಡಿದರು. ಎರಡು ವರ್ಷಗಳ ಕಾಲ ಪ್ರಾಯೋಗಿಕವಾಗಿ ನಡೆಸುವ ನಿರ್ಧಾರ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 50 ಕೋಟಿ ರು. ಹಣ ಘೋಷಿಸಿ ಕಾರ್ಖಾನೆ ಯಂತ್ರೋಪಕರಣಗಳ ದುರಸ್ತಿಗೆ ಚಾಲನೆ ದೊರಕಿಸಿಕೊಟ್ಟು, ಈಗ ಕಾರ್ಯಾಚರಣೆಗೆ ಅಣಿಗೊಳಿಸಿದ್ದಾರೆ.

Follow Us:
Download App:
  • android
  • ios