chikkaballapura 24 ಸೇತುವೆ, 28 ಮನೆ ಕುಸಿತ, 360 ಮನೆಗೆ ಭಾಗಶಃ ಹಾನಿ
- ನವೆಂಬರ್‌ನಲ್ಲಿ ವಾಡಿಕೆ ಮಳೆಗಿಂತ ಶೇ.10 ಪಟ್ಟು ಹೆಚ್ಚಿಗೆ ಮಳೆ
- ಹಲವು ಕೆರೆ ಕುಂಟೆ ಕಾಲುವೆಗಳು ತುಂಬಿ ಹರಿಯುತ್ತಿವೆ
ಚಿಕ್ಕಬಳ್ಳಾಪುರ (ನ.20): ನವೆಂಬರ್‌ನಲ್ಲಿ ವಾಡಿಕೆ ಮಳೆಗಿಂತ ಶೇ.10 ಪಟ್ಟು ಹೆಚ್ಚಿಗೆ ಮಳೆಯಾಗಿದೆ, ಜಿಲ್ಲೆಯಲ್ಲಿ ಹಲವು ಕೆರೆ ಕುಂಟೆ ಕಾಲುವೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ 157 ಗ್ರಾಮ ಪಂಚಾಯಿತಿಗಳ ಪೈಕಿ 80 ಗ್ರಾಮ ಪಂಚಾಯಿತಿಗಳಲ್ಲಿ ನೆನ್ನೆ ಒಂದೇ ದಿನ ಸುಮಾರು 56 ಮಿ.ಮೀ ಮಳೆಯಾಗಿದೆ. ಈವರೆಗೆ ಬಾರೀ ಮಳೆಯಿಂದಾಗಿ (rain) ಜಿಲ್ಲೆಯಾದ್ಯಂತ 28 ಮನೆಗಳು ಬಿದ್ದು ಹೋಗಿ ಸಂಪೂರ್ಣವಾಗಿ ಹಾನಿಯಾಗಿವೆ. 360 ಮನೆಗಳು ಭಾಗಶಃ ಹಾನಿಯಾಗಿವೆ. ಇದಲ್ಲದೇ 24 ಸೇತುವೆಗಳು ಹಾನಿಯಾಗಿವೆ.
ಇದು ಜಿಲ್ಲಾದ್ಯಂತ ಸತತ ಒಂದು ವಾರದಿಂದ ತೀವ್ರ ಮಳೆಯಿಂದಾಗಿ ಸದ್ಯಕ್ಕೆ ಜಿಲ್ಲೆಯಲ್ಲಿ ಜನ ವಾಸ ಇರುವ ಮನೆಗಳು (house), ಸಾರ್ವಜನಿಕರು ಓಡಾಡುವ ಸೇತುವೆ, ಮನೆಗಳಿಗೆ ಹಾಗಿರುವ ಹಾನಿಯ ಲೆಕ್ಕಾಚಾರದ ಕುರಿತು ಜಿಲ್ಲಾಧಿಕಾರಿ ಶುಕ್ರವಾರ ನೀಡಿರುವ ಅಂಕಿ, ಅಂಶ ಇದು. ಜನ ಜೀವನದ ಸುರಕ್ಷತಾ ದೃಷ್ಟಿಯಿಂದ ಜಿಲ್ಲೆಯಲ್ಲಿ 31 ಕಾಳಜಿ ಕೇಂದ್ರಗಳನ್ನು ಈಗಾಗಲೇ ಸ್ಥಾಪಿಸಲಾಗಿದ್ದು ಈ ಪೈಕಿ ಗೌರಿಬಿದನೂರಿನ 5 ಕಾಳಜಿ ಕೇಂದ್ರಗಳಲ್ಲಿ 1015 ಜನರಿಗೆ ಆಶ್ರಯ ನೀಡಲಾಗಿದೆ ಎಂದರು.
ಉತ್ತರ ಪಿನಾಕಿನಿ ಹುಕ್ಕಿ ಹರಿಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮುಂದಾಗುವ ಅವಗಡಗಳನ್ನು ತಪ್ಪಿಸಲು ಉತ್ತರ ಪಿನಾಕಿನಿ ನದಿ ಪಾತ್ರದ 200 ಕುಟುಂಬಗಳ 1015 ಜನರನ್ನು 5 ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ ಊಟ, ವಸತಿ ಸಹಿತ ಕನಿಷ್ಠ ಮೂಲ ಸೌಕರ್ಯಗಳೊಂದಿಗೆ ಆಶ್ರಯ ನೀಡಲಾಗಿದೆ ಅಲ್ಲದೆ ಅಪಾಯದ ಹಂಚಿನಲ್ಲಿರುವ ಮನೆಗಳಲ್ಲಿರುವವರನ್ನು ಗುರ್ತಿಸಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯ ಪ್ರವೃತ್ತ ರಾಗಿದ್ದಾರೆ. ಬೆಳೆ ನಷ್ಟದ ಅಂದಾಜಿನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಆದಷ್ಟುಶೀಘ್ರ ಸಲ್ಲಿಸಿ ಪರಿಹಾರೋಪಾಯಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ (Chikkaballapura) ನಗರಸಭಾ ಅಧ್ಯಕ್ಷ ಆನಂದರೆಡ್ಡಿ ಬಾಬು, ಪೌರಾಯುಕ್ತ ಮಹಂತೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ರೈತರಿಗೆ ಬೆಳೆ ಕಳೆದುಕೊಳ್ಳುವ ಆತಂಕ : ಸಾಂಕ್ರಾಮಿಕ ರೋಗಗ ಭೀತಿ
ನಾಲ್ಕೈದು ಮಂದಿ ನದಿಪಾಲು: ಈಗಾಗಲೇ ಜಿಲ್ಲಾದ್ಯಂತ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳಾದ ಪಾಲಾರ್, ಪಾಪಾಗ್ನಿ, ಕುಶವಾತಿ, ಚಿತ್ರಾವತಿ ನದಿಗಳು ಸೇರಿದಂತೆ ನೂರಾರು ಕೆರೆ, ಕುಂಟೆಗಳು ಅಪಾಯ ಮಟ್ಟ ತುಂಬಿ ಹರಿಯುತ್ತಿವೆ. ಈಗಾಗಲೇ ಗುಡಿಬಂಡೆ (Gudibande), ಚಿಂತಾಮಣಿ (chintamani) ತಾಲೂಕುಗಳಲ್ಲಿ ಹರಿಯುತ್ತಿದ್ದ ನದಿಗಳಲ್ಲಿ ನಾಲ್ಕೈದು ಮಂದಿ ಕೊಚ್ಚಿ ಹೋಗಿದ್ದಾರೆ. ಗುಡಿಬಂಡೆ ತಾಲೂಕಿನಲ್ಲಿಯೆ ಗ್ರಾಪಂ ಸದಸ್ಯ ಸೇರಿ ಇಬ್ಬರು ಅಸು ನೀಗಿದ್ದಾರೆ. ಅಲ್ಲದೆ ಮಳೆಯಿಂದಾಗಿ ಕೃಷಿ (agriculture), ತೊಟಗಾರಿಕಾ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿ ರೈತರು (farmers) ಕಣ್ಣೀರು ಸುರಿಯುತ್ತಿದ್ದಾರೆ.
905 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶ
ಜಿಲ್ಲೆಯಲ್ಲಿ ಮಹಾ ಮಳೆಗೆ ಬರೋಬ್ಬರಿ 905.25 ಹೆಕ್ಟೇರ್ ಪ್ರದೇಶದಲ್ಲಿ ಹೂ, ಹಣ್ಣು, ತರಕಾರಿ ಸೇರಿದಂತೆ ಒಟ್ಟು ತೋಟಗಾರಿಕಾ ಬೆಳೆಗಳು ಇಡೀ ಜಿಲ್ಲಾದ್ಯಂತ ನಾಶವಾಗಿದ್ದು ಒಟ್ಟು 1,972.92 ಲಕ್ಷ ರು, ಪರಿಹಾರ ಬೇಕಿದೆ. 814.74 ಹೆಕ್ಟೇರ್‌ನಲ್ಲಿ ತರಕಾರಿ ನಾಶವಾದರೆ 90.51 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣು, ಹೂ ನಾಶವಾಗಿದೆ. ಸುಮಾರು ಒಟ್ಟು 1,283 ರೈತರು ಮಳೆಗೆ ತಮ್ಮ ಅಪಾರ ಪ್ರಮಾಣದ ಬೆಳೆ ಕಳೆದುಕೊಂಡಿದ್ದಾರೆಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
3,754 ಹೆಕ್ಟೇರ್‌ನಲ್ಲಿ ಕೃಷಿ ಬೆಳೆ
ಜಿಲ್ಲಾದ್ಯಂತ ಈ ಬಾರಿ 1,45,033 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದ್ದು ಆ ಪೈಕಿ ತೀವ್ರ ಮಳೆಯಿಂದ ಶೇ.33ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಗೆ ರಾಗಿ, ಶೇಂಗಾ ಸೇರಿದಂತೆ ವಿವಿಧ ಕೃಷಿ ಬೆಳೆಗಳು ಒಟ್ಟು 3,754 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದೆ. ಚಿಕ್ಕಬಳ್ಳಾಫುರದಲ್ಲಿ 918, ಗೌರಿಬಿದನೂರು 307, ಗುಡಿಬಂಡೆ 233,ಬಾಗೇಫಲ್ಲಿ 326, ಚಿಂತಾಮಣಿ 783 ಹಾಗೂ ಶಿಡ್ಲಘಟ್ಟದಲ್ಲಿ 1,532 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಠವಾಗಿದೆ. ಒಟ್ಟು 266.36 ಲಕ್ಷ ಪರಿಹಾರ ಬೇಕಿದೆ.