ಹಾವೇರಿ(ಮೇ.30): ಪರವಾನಗಿ ಪಡೆಯದೆ ಬಸ್‌, ಟ್ರ್ಯಾಕ್ಸ್‌, ಟೆಂಪೋಟ್ರಾವೆಲ್ಸ್‌ ಓಡಾಟಕ್ಕೆ ಕಡಿವಾಣ ಹಾಕಬೇಕು. ಇಂತಹ ವಾಹನಗಳ ಪರಿವಾನಗಿ ರದ್ದು ಮಾಡಿ ಮೊಕದ್ದಮೆ ದಾಖಲಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ಸೂಚನೆ ನೀಡಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣ 500 ಮೀಟರ್‌ ವ್ಯಾಪ್ತಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು, ಇಳಿಸುವುದು ಹಾಗೂ ಸಾಮರ್ಥ್ಯಕ್ಕೆ ಮೀರಿ ಪ್ರಯಾಣಿಕರನ್ನು ಕರೆದೊಯ್ಯುವುದನ್ನು ತಡೆಯಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಹಾಗೂ ವಾಯವ್ಯ ಸಾರಿಗೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಮಾಡಿ ಇವುಗಳಿಗೆ ಕಡಿವಾಣ ಹಾಕಿದರೆ ನಷ್ಟ ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಲಾಕ್‌ಡೌನ್‌ ಸಡಿಲ: ಎರಡು ತಿಂಗಳ ಬಳಿಕ ಬ್ಯಾಡಗಿ APMC ವಹಿವಾಟು ಆರಂಭ

ಕೊರೋನಾ ಲಾಕ್‌ಡೌನ್‌ ಸಡಿಲಿಕೆ ನಂತರ ತ್ರೈಮಾಸಿಕ ಯೋಜನೆಗಳನ್ನು ರೂಪಿಸಿಕೊಂಡು ಸಾರಿಗೆ ನಷ್ಟವನ್ನು ಸರಿದೂಗಿಸಿ ಲಾಭ ತರುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಕ್ರಿಯಾ ಯೋಜನೆಗಳನ್ನು ಸಿದ್ಧಮಾಡಿಕೊಳ್ಳಬೇಕು. ಉತ್ತಮ ಸೇವೆ ಜತೆಗೆ ಸಾರಿಗೆ ನಷ್ಟತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸುವ ನಿಟ್ಟಿನಲ್ಲಿ ಕಾರ್ಯಕೈಗೊಳ್ಳಬೇಕು. ಜಿಲ್ಲೆಯಲ್ಲಿ ಯಾವ ಮಾರ್ಗದಲ್ಲಿ ಸಾರಿಗೆ ಬಸ್‌ಗಳು ಓಡಾಡುತ್ತಿವೆ, ಈ ಪೈಕಿ ಯಾವ ರೂಟ್‌ಗಳು ಲಾಭದಾಯಕ, ಯಾವ ಮಾರ್ಗಗಳಲ್ಲಿ ನಷ್ಟ ಉಂಟಾಗುತ್ತಿದೆ, ಯಾವ ಮಾರ್ಗದಲ್ಲಿ ಹೆಚ್ಚುವರಿ ಬಸ್‌ಗಳು ಓಡಾಡುತ್ತವೆ ಎಂಬುದನ್ನು ವಿಭಾಗವಾರು ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಮಾರ್ಗಗಳಲ್ಲಿ ಲಾಭ ತರುವ ನಿಟ್ಟಿನಲ್ಲಿ ಯೋಜನೆಯನ್ನು ತಯಾರಿಸಿ. ಪ್ರತಿ ಮೂರು ತಿಂಗಳಿಗೊಮ್ಮೆ ಪ್ಲಾನ್‌ ಮಾಡಿ ಸ್ಥಳೀಯ ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕ್ರಮವಹಿಸಿ ಎಂದು ಸೂಚನೆ ನೀಡಿದರು.

ನಷ್ಟದಲ್ಲಿರುವ ಮಾರ್ಗಗಳು ಯಾವ ಕಾರಣಕ್ಕೆ ಆದಾಯ ಬರುವುದಿಲ್ಲ ಎಂಬುದನ್ನು ಪತ್ತೆಮಾಡಿ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಿ ಲಾಭ ತರುವ ಮಾರ್ಗಗಳಾಗಿ ಪರಿವರ್ತಿಸುವಂತೆ ಸಲಹೆ ನೀಡಿದರು. ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಬೇಕು, ಸವಕಳಿ ವೆಚ್ಚವನ್ನು ಕಡಿಮೆ ಮಾಡಬೇಕು, ಆದಾಯ ಸೋರಿಕೆ ತಡೆಯಬೇಕು. ರಸ್ತೆ ಸಾರಿಗೆ ಸಂಸ್ಥೆಗಳಿಗೆ ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಸ್ವಚ್ಛತೆ, ಸಮಯಕ್ಕೆ ಸರಿಯಾಗಿ ವಾಹನ ಓಡಿಸುವ ಕೆಲಸವನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಹೊಸ ಬಸ್‌ ಬೇಡಿಕೆ:

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಜಿಲ್ಲೆಯ ರಸ್ತೆ ಸಾರಿಗೆ ಸಂಸ್ಥೆಯ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕನಿಷ್ಠ 100 ರಿಂದ 150 ಹೊಸ ಬಸ್‌ಗಳನ್ನು ಏಕ ಕಾಲದಲ್ಲಿ ನೀಡಬೇಕು. ಜಿಲ್ಲೆಯಲ್ಲಿ ಅವಶ್ಯವಿರುವ ಬಸ್‌ ನಿಲ್ದಾಣ, ಸಾರಿಗೆ ಡಿಪೋಗಳ ಉನ್ನತೀಕರಣ ಕಾಮಗಾರಿ, ನವೀಕರಣಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಅರುಣಕುಮಾರ ಗುತ್ತೂರ ತಮ್ಮ ಕ್ಷೇತ್ರದ ರಸ್ತೆ ಸಾರಿಗೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಹಾಗೂ ಬೇಡಿಕೆಗಳನ್ನು ಸಲ್ಲಿಸಿದರು. ರಾಣಿಬೆನ್ನೂರು ಬಸ್‌ ನಿಲ್ದಾಣವನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರಿಸಬೇಕು. ಸವಣೂರು ಬಸ್‌ ನಿಲ್ದಾಣ, ಗುತ್ತಲ ಬಸ್‌ ನಿಲ್ದಾಣ ನವೀಕರಣ, ಹಾವೇರಿ ಬಸ್‌ ನಿಲ್ದಾಣದ ವಿಸ್ತರಣೆ ಹಾಗೂ ಕದರಮಂಡಲಗಿಗೆ ಹೊಸ ಬಸ್‌ ನಿಲ್ದಾಣ ನಿರ್ಮಾಣ, ಸವಣೂರು ಹೊಸ ಬಸ್‌ ಡಿಪೋ, ಹಾವೇರಿ ಕೇಂದ್ರೀಯ ವಿದ್ಯಾಲಯ ಸೇರಿದಂತೆ ಜಿಲ್ಲೆಯ ಸಾರಿಗೆ ಸಂಪರ್ಕವಿಲ್ಲದ ಮಾರ್ಗಗಳಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸುವುದು, ಲಾಕ್‌ಡೌನ್‌ ಮುಗಿಯುವವರೆಗೂ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಟೋಲ್‌ ಫೀ ಸಂಗ್ರಹಿಸದಂತೆ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಸಾರಿಗೆ ಸಚಿವರ ಗಮನ ಸೆಳೆದರು.

ಈ ಕುರಿತಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಾರಿಗೆ ಸಚಿವರು, ಆಯಾ ಕ್ಷೇತ್ರದ ಶಾಸಕರ ಬೇಡಿಕೆ ಹಾಗೂ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಬೇಕು. ಹೊಸ ಕಟ್ಟಡ ಮತ್ತು ನವೀಕರಣಕ್ಕೆ ಕ್ರಿಯಾ ಯೋಜನೆ ರೂಪಿಸಿ. ಈ ಕಾಮಗಾರಿಗಳಿಗೆ ಅಗತ್ಯ ಅನುದಾನವನ್ನು ಒದಗಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಕ ಜಗದೀಶ್‌ ಅವರು ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ 544 ಬಸ್‌ಗಳಿವೆ. ನಿತ್ಯ 503 ಅನುಸೂಚಿ ಕಾರ್ಯಾಚರಣೆ ಮಾಡಲಾಗುತ್ತದೆ. ಪ್ರತಿದಿನ 1.82 ಲಕ್ಷ ಕಿ.ಮೀ. ವಾಹನಗಳು ಕ್ರಮಿಸುತ್ತವೆ. ನಿತ್ಯ 52.30 ಲಕ್ಷ ಆದಾಯ ಬರುತ್ತದೆ. 2312 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 2019-20ನೇ ಸಾಲಿನಲ್ಲಿ 52 ಹೊಸ ಬಸ್‌ಗಳು ಬಂದಿವೆ, 39 ಹಳೆಯ ಬಸ್‌ಗಳನ್ನು ತೆಗೆದುಹಾಕಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಮಾ. 22ರಿಂದ ಮೇ 3ರ ವರೆಗೆ ಸರ್ಕಾರದ ಆದೇಶದಂತೆ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮೇ 4ರಿಂದ 18ರ ವರೆಗೆ ಬಸ್‌ ಸಂಚಾರ ಆರಂಭಿಸಿ 61 ಅನುಸೂಚಿಗಳನ್ನು ಮಾತ್ರ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಅವಧಿಯಲ್ಲಿ . 5.91 ಲಕ್ಷ ಗಳಿಕೆಯಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಬಸ್‌ ಸಂಚಾರ ಆರಂಭಿಸಿದ ಕಾರಣ ಪ್ರತಿ ಕಿಮೀ . 20.62 ಗಳಿಸಿದೆ. ವಾಸ್ತವವಾಗಿ ಪ್ರತಿ ಕಿ.ಮೀ 46 ವೆಚ್ಚವಾಗುತ್ತದೆ. ಈ ಅವಧಿಯಲ್ಲಿ ಪ್ರತಿ ಕಿ.ಮೀ.ಗೆ 35.28 ನಷ್ಟಸಂಸ್ಥೆಗೆ ಉಂಟಾಗಿದೆ. ಲಾಕ್‌ಡೌನ್‌ನಿಂದ ಮಾ. 22 ರಿಂದ ಈವರೆಗೆ 41.15 ಕೋಟಿ ಆದಾಯ ಗಳಿಕೆ ಕಡಿಮೆಯಾಗಿದೆ ಎಂದು ವಿವರಿಸಿದರು.

ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್‌. ಪಾಟೀಲ, ಜಿಪಂ ಸದಸ್ಯ ಸಿದ್ಧರಾಜ ಕಲಕೋಟಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಎಸ್ಪಿ ಕೆ.ಜಿ. ದೇವರಾಜ, ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ ಇದ್ದರು.