Asianet Suvarna News Asianet Suvarna News

ಮಲೆನಾಡಿನಲ್ಲಿ ಬೆಂಬಿಡದ ಗಾಂಜಾ ಘಮಲು : ನಿಯಂತ್ರಣಕ್ಕೂ ಸಿಗುತ್ತಿಲ್ಲ!

ಎಲ್ಲೆಡೆ ಗಾಂಜಾ ಘಾಟು ಜೋರಾಗಿದೆ. ಡ್ರಗ್ ಮಾಫಿಯಾದ್ದೇ ಸದ್ದು ಕೇಳಿ ಬರುತ್ತಿದೆ. ಇದೇ ವೇಳೆ ಮಲೆನಾಡು ರೈತರೂ ತಮಗೆ ತಿಳಿದೋ ತಿಳಿಯದೆಯೋ ಗಾಂಜಾ ಜಾಲದಲ್ಲಿ ಸಿಲುಕುತ್ತಿದ್ದಾರೆ.

Malnad Farmers involved in Ganja Cropping
Author
Bengaluru, First Published Sep 7, 2020, 3:30 PM IST

ಶಿವಮೊಗ್ಗ (ಸೆ.07):  ಇಡೀ ರಾಜ್ಯಾದ್ಯಂತ ಇದೀಗ ಡ್ರಗ್ಸ್‌ ಘಮಲು ಆವರಿಸುತ್ತಿದೆ. ಆದರೆ ಮಲೆನಾಡಿನ ದಟ್ಟಕಾಡುಗಳಲ್ಲಿ ಕಳೆದ ಎರಡು ದಶಕದಿಂದ ದಂಧೆಯಾಗಿ ವಿಸ್ತರಿಸುತ್ತಿರುವ ಗಾಂಜಾ ಘಮಲನ್ನು ಮಾತ್ರ ಇನ್ನೂ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ.

ಮಲೆನಾಡಿಗೆ ಗಾಂಜಾ ಹೊಸದೇನಲ್ಲ. ಅಲ್ಲಲ್ಲಿ ಲಾಗಾಯ್ತಿನಿಂದಲೂ ಇದರ ಬಳಕೆಯಿತ್ತು. ಆದರೆ ಅತ್ಯಂತ ಖಾಸಗಿ ಮತ್ತು ಸೀಮಿತವಾಗಿ ಇದರ ಬಳಕೆಯಾಗುತ್ತಿತ್ತು. ಆದರೆ ಕಳೆದ ಎರಡು ದಶಕಗಳಿಂದ ಇದಕ್ಕೊಂದು ವಾಣಜ್ಯ ಸ್ವರೂಪ ದೊರೆತಿದ್ದು, ಮಲೆನಾಡಿನ ರೈತರು ಅರಿವಿದ್ದೋ, ಅರಿವಿಲ್ಲದೆ ಹಣದಾಸೆಗೋ ಈ ಜಾಲದಲ್ಲಿ ಸಿಕ್ಕು ಜೈಲು ಸೇರುತ್ತಿದ್ದಾರೆ.

ಮುಖ್ಯವಾಗಿ ಮಲೆನಾಡಿನ ಹೊಲ, ತೋಟಗಳಲ್ಲಿ ಉಪ ಬೆಳೆಯಂತೆ ಈ ಗಾಂಜಾ ಬೆಳೆಯಲಾಗುತ್ತಿದೆ. ಹತ್ತಿಪ್ಪತ್ತು ಗಿಡದಿಂದ ಹಿಡಿದು ನೂರಾರು ಗಿಡಗಳವರೆಗೆ ಬೆಳೆಯಲಾಗುತ್ತಿದೆ. ಈ ಬೆಳೆಯ ಹಿಂದೆ ವ್ಯವಸ್ಥಿತ ಜಾಲವೇ ಇದ್ದು, ಪೊಲೀಸ್‌ ಮತ್ತು ಅಬಕಾರಿ ಇಲಾಖೆಯವರು ರೈತರನ್ನು ಬಂಧಿಸುತ್ತಿದ್ದಾರೆಯೇ ವಿನಃ ಇದರ ಮೂಲಕ್ಕೆ ಹೋದಂತೆ ಕಾಣುತ್ತಿಲ್ಲ.

ರಾಮನಗರದಲ್ಲಿ ಬರೋಬ್ಬರಿ 11 ಲಕ್ಷದ 91 ಕೆಜಿ ಗಾಂಜಾ ಸೀಜ್ ..

ಮಲೆನಾಡಿನ ಕಾಡಿನಂಚಿನಲ್ಲಿರುವ, ಬಡ ರೈತರನ್ನು ಗುರುತಿಸುವ ಕೆಲ ಬ್ರೋಕರ್‌ಗಳು ಗಾಂಜಾ ಬೀಜವನ್ನು ಬೈಬ್ಯಾಕ್‌ ಮಾದರಿಯಲ್ಲಿ ಇದನ್ನು ನೀಡುತ್ತಾರೆ. ಗಾಂಜಾ ಬೆಳೆದ ಬಳಿಕ ತಾವೇ ಕೊಳ್ಳುವುದಾಗಿಯೂ ನಂಬಿಸಿ ರೈತರನ್ನು ಏಮಾರಿಸುತ್ತಾರೆ. ಕಾಸಿನಾಸೆಗೆ ಮುಂದಾಗುವಾಗ ಭವಿಷ್ಯದಲ್ಲಿ ಎದುರಾಗಬಹುದಾದ ಅನಾಹುತದ ಯೋಚನೆಗೆ ಇಳಿಯದ ಕೆಲವು ರೈತರು ಗುಡ್ಡ ಪ್ರದೇಶಗಳಲ್ಲಿ, ಶುಂಠಿ ಹೊಲಗಳಲ್ಲಿ, ಮೆಕ್ಕೆಜೋಳದ ನಡುವಿನಲ್ಲಿ ಗುಟ್ಟಾಗಿ ಇದನ್ನು ಬೆಳೆಯುತ್ತಾರೆ. ಕೆಲವೊಮ್ಮೆ ಯಾರ ಕಣ್ಣಿಗೂ ಸಿಗದೆ ವ್ಯವಹಾರ ಪೂರೈಸಿಕೊಂಡು ಕಾಸು ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಅಬಕಾರಿ ಇಲ್ಲವೇ ಪೊಲೀಸರ ಕೈಗೆ ಸಿಕ್ಕು ಬಿದ್ದು ಜೀವಮಾನವಿಡೀ ವಿಲ ವಿಲ ಒದ್ಡಾಡುತ್ತಾರೆ. ತಮ್ಮನ್ನೇ ನಂಬಿಕೊಂಡ ಕುಟುಂಬವನ್ನು ಬೀದಿ ಪಾಲು ಮಾಡುತ್ತಾರೆ.

ಡ್ರೋಣ್‌ ಮೂಲಕ ಪತ್ತೆ:

ಕಳೆದ ವರ್ಷ ಅಬಕಾರಿ ಇಲಾಖೆ ಡ್ರೋಣ್‌ ಮೂಲಕ ಗಾಂಜಾ ಬೆಳೆಯನ್ನು ಪತ್ತೆ ಹಚ್ಚಲು ವಿಶೇಷ ಪ್ರಯತ್ನ ನಡೆಸಿತು. ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಯಿತು. ಅನೇಕ ಬಂಧನವಾಯಿತು. ಆದರೂ ಈ ದಂಧೆ ಮಾತ್ರ ಇನ್ನೂ ನಿಂತಿಲ್ಲ.

ಸುಶಾಂತ್ ಸಿಂಗ್ ಸಾವು ಪ್ರಕರಣ, ಶಾಕಿಂಗ್ ಮಾಹಿತಿ ಬಾಯ್ಬಿಟ್ಟ ರಿಯಾ!

ಕಳೆದ ಕೆಲ ವರ್ಷಗಳ ಹಿಂದಿನಿಂದ ಪೊಲೀಸರು ಕೂಡ ಗಂಭೀರ ಪ್ರಯತ್ನ ನಡೆಸಿ ಗಾಂಜಾ ನಿಯಂತ್ರಣಕ್ಕೆ ಇನ್ನಿಲ್ಲದ ಯತ್ನ ನಡೆಸಿದರು. ಅನೇಕ ರೈಡ್‌ಗಳು ನಡೆದವು. ಕೆಲವು ತಿಂಗಳ ಹಿಂದೆ ಈ ಗಾಂಜಾ ಹಾವಳಿ ಕುರಿತು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಅವರು ಗುಟುರು ಹಾಕಿದ್ದನ್ನು ಜನ ಮರೆತಿಲ್ಲ. ಪೊಲೀಸ್‌ ಇಲಾಖೆಗೆ ಖಡಕ್‌ ಎಚ್ಚರಿಕೆ ನೀಡಿ, ಒಂದೋ ಕೆಲಸ ಮಾಡಿ, ಇಲ್ಲವೇ ಊರು ಬಿಡಿ ಎಂದಿದ್ದರು. ಆ ಬಳಿಕ ಪೊಲೀಸರು ಬಿಗಿಯಾದ ಕ್ರಮ ಜರುಗಿಸಿದರು.

ನಗರದಲ್ಲಿ ಮಾರಾಟ ಜಾಲ:

ಒಂದೆಡೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಬೆಳೆಯ ನಡುವೆ ಗಾಂಜಾ ಬೆಳೆಯುವ ದಂಧೆಯಾದರೆ, ಇನ್ನೊಂದೆಡೆ ನಗರ ಪ್ರದೇಶದಲ್ಲಿ ಇದಕ್ಕೆ ಮಾರುಕಟ್ಟೆಮಾಡುವ ವ್ಯವಸ್ಥಿತ ಯತ್ನ ನಡೆಯುತ್ತಲೇ ಇದೆ. ಸಹ್ಯಾದ್ರಿ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು ಸೇರಿದಂತೆ ಅನೇಕ ಕಾಲೇಜುಗಳ ಬಳಿ ಇದರ ಮಾರಾಟ ನಡೆಯುತ್ತಿದೆ. ನಗರದ ಹಲವು ಪ್ರದೇಶಗಳಲ್ಲಿ ಕೂಡ ಇದು ನಡೆಯುತ್ತಿದೆ. ಆಗಾಗ್ಗೆ ನಡೆದ ದಾಳಿಯಲ್ಲಿ ಆರೋಪಿಗಳು ಸಿಕ್ಕು ಬೀಳುತ್ತಲೂ ಇದ್ದಾರೆ.

ನಗರ ಪ್ರದೇಶದಲ್ಲಿ ಇತ್ತೀಚೆಗೆ ಯುವಕರು ಹೆಚ್ಚು ಹೆಚ್ಚು ಇದರ ದಾಸರಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಪೋಷಕರು ಆತಂಕದಲ್ಲಿದ್ದಾರೆ.

ಕ್ರೈಂ ಜೊತೆ ನಂಟು ಬೆಳೆಸಿರುವ ಗಾಂಜಾ:

ಇತ್ತೀಚೆಗೆ ನಗರದಲ್ಲಿ ನಡೆದ ಅನೇಕ ಪ್ರಕರಣಗಳಲ್ಲಿ ಆರೋಪಿಗಳು ಗಾಂಜಾ ಮತ್ತಿನಲ್ಲಿದ್ದರು ಎಂಬ ಅಂಶ ಗಂಭೀರವಾಗಿ ಪರಿಗಣಿಸಬೇಕು. ಗಾಂಜಾ ಮತ್ತಿನಲ್ಲಿ ಆರೋಪಿಗಳು ಹಲ್ಲೆ, ಕೊಲೆ, ಪೊಲೀಸರ ಮೇಲೆಯೇ ಹಲ್ಲೆ ನಡೆಸುವ ಯತ್ನ ಎಲ್ಲವನ್ನೂ ಮಾಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿನ ಪ್ರಕರಣಗಳು:

1) 2018 ನೇ ಸಾಲಿನಲ್ಲಿ ಒಟ್ಟು 70 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 138 ಜನ ಆರೋಪಿತರನ್ನು ಬಂಧಿಸಲಾಗಿದೆ. ಇವರಿಂದ ಒಟ್ಟು 295 ಕೆಜಿ ಹಸಿ ಗಾಂಜಾ ಗಿಡಗಳು ಮತ್ತು 19 ಕೆ.ಜಿ. ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

2) 2019 ನೇ ಸಾಲಿನಲ್ಲಿ ಒಟ್ಟು 52 ಪ್ರಕರಣಗಳನ್ನು ದಾಖಲಿಸಿದ್ದು, 115 ಜನ ಆರೋಪಿತರನ್ನು ಬಂಧಿಸಿದ್ದು, ಅವರಿಂದ 139 ಕೆ.ಜಿ. ಹಸಿ ಗಾಂಜಾ ಮತ್ತು 25 ಕೆ.ಜಿ. ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

3) 2020ನೇ ಸಾಲಿನಲ್ಲಿ ಆ. 31 ರವರೆಗೆ ಒಟ್ಟು 45 ಪ್ರಕರಣಗಳನ್ನು ದಾಖಲಿಸಿ, 99 ಜನ ಆರೋಪಿತರನ್ನು ಬಂಧಿಸಲಾಗಿದೆ. ಇವರಿಂದ 41 ಕೆ. ಜಿ. ಹಸಿ ಗಾಂಜಾ ಗಿಡಗಳು ಮತ್ತು 19 ಕೆ. ಜಿ. ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 

Follow Us:
Download App:
  • android
  • ios