ಮಲ್ನಾಡು ಅರಣ್ಯವೆಲ್ಲವೂ ಈಗ ತೋಟ

ಮಲೆನಾಡಿನ ಅರಣ್ಯ ಪ್ರದೇಶ ಇದೀಗ ತೋಟಗಳಾಗಿ ಪರಿವರ್ತನೆಯಾಗುತ್ತಿದೆ. ಅಲ್ಲದೇ ಕೃಷಿ ಭೂಂಇಯಾಗಿ ಮಾರ್ಪಡಿಸಲಾಗುತ್ತಿದೆ. 

Malenadu Forest Land Converted To Agriculture Land

ಚಿಕ್ಕಮಗಳೂರು [ಮಾ.05]:  ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಹಿಂದೆ ಕಾಡಾಗಿದ್ದ ಪ್ರದೇಶಗಳು ಈಗ ಒತ್ತುವರಿದಾರರ ಕೈ ಚಳಕದಿಂದ ತೋಟಗಳಾಗಿ ಪರಿವರ್ತನೆಯಾಗುವ ಹಂತ ತಲುಪಿವೆ. ಇದನ್ನು ತಡೆಗಟ್ಟಲು ಕಂದಾಯ ಇಲಾಖೆಯಾಗಲಿ ಅರಣ್ಯಇಲಾಖೆಯಾಗಲಿ ಮುಂದಾಗುತ್ತಿಲ್ಲ ಎಂದು ಪರಿಸರಾಸಕ್ತರು ಆರೋಪಿಸಿದ್ದಾರೆ.

ಮೂಡಿಗೆರೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಇತ್ತೀಚಿಗೆ ಮಾಡಿರುವ ಒತ್ತುವರಿ ಇದಕ್ಕೆ ಉದಾಹರಣೆಯಾಗಿದೆ. ಮೊದಲು ದಟ್ಟಕಾಡಿನಂತಿದ್ದ ಪ್ರದೇಶಗಳಲ್ಲಿ ಇದ್ದಕ್ಕಿದ್ದಹಾಗೆ ಸಣ್ಣ ಪುಟ್ಟಮರಗಳನ್ನು ತೆಗೆದು ಹಾಗು ಕೆಲವು ಕಡೆ ಬೇಲಿ ಹಾಕಿ ಹಾಗೆ ಬಿಟ್ಟಿರುವ ಪ್ರಕರಣಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ಇದೆ ರೀತಿ ಅಲ್ದೂರು, ಕೊಪ್ಪ, ತರೀಕೆರೆಯಲ್ಲೂ ಈ ರೀತಿ ಒತ್ತುವರಿಗಳು ನಡೆಯುತ್ತಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯರಾದ ಸ.ಗಿರಿಜಾಶಂಕರ್‌, ಭದ್ರ ವೈಲ್ಡ್‌ಲೈಫ್‌ ಕನ್ಸರ್ವೇಷನ್‌ ಟ್ರಸ್ಟ್‌ನ ಡಿ.ವಿ. ಗಿರೀಶ್‌, ವೈಲ್ಡ್‌ ಕ್ಯಾಟ್‌- ಸಿ ಸಂಸ್ಥೆಯ ಶ್ರೀದೇವ್‌ ಹುಲಿಕೆರೆ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಮುತ್ತೋಡಿ ಸಮೀಪದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಯಲ್ಲೂ ದಟ್ಟಕಾಡು ಈಗ ತೆಳುವಾಗುತ್ತ ಒತ್ತುವರಿ ಭೂಮಿ ಎಂದು ಹೇಳಿ ಆ ಭೂಮಿಯನ್ನು ಕೃಷಿ ಭೂಮಿಯಾಗಿಸುವ ಪ್ರಯತ್ನಗಳು ನಡೆದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಂದಾಯ ಹಾಗು ಡೀಮ್‌್ಡ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಆ ನಂತರ ಆ ಭೂಮಿಯನ್ನು ಸರ್ಕಾರದ ವಿಭಿನ್ನ ಆದೇಶಗಳನ್ನು ಬಳಸಿಕೊಂಡು ಮಂಜೂರಾತಿ ಮಾಡಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆ ಪ್ರದೇಶದ ಜನ ಸಹ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅನೇಕ ಕಡೆ ಒತ್ತುವರಿ ಮಾಡುವ ಸಲಹೆ ಹಾಗೂ ಮಾರ್ಗದರ್ಶನ ಕಂದಾಯ ಮತ್ತು ಅರಣ್ಯ ಇಲಾಖೆಯ ಕೆಳಗಿನ ಹಂತದ ಅಧಿಕಾರಿ, ಸಿಬ್ಬಂದಿಯಿಂದಲೇ ಬರುತ್ತಿದ್ದು, ಒತ್ತುವರಿ ಮಾಡುವವರಿಗೆ ಅವರು ಒಂದೆರಡು ಎಕರೆ ಒತ್ತುವರಿ ಮಾಡು, ಆಮೇಲೆ 3- 4 ಲಕ್ಷ ಖರ್ಚು ಮಾಡಿದರೆ ಭೂಮಿ ನಿನ್ನದೇ ಆಗುತ್ತದೆ ಎಂಬ ಮಾರ್ಗೋಪಾಯಗಳನ್ನು ಹೇಳಿಕೊಡುತ್ತಿದ್ದರು ಎಂಬ ಮಾತು ಸಹ ಪ್ರಚಲಿತವಾಗಿದೆ.

ಭೂಮಿ ಒತ್ತುವರಿಗೆ ಸಲಹೆ ವಿವಿಧ ರೀತಿಯಲ್ಲಿ ದೊರಕುತ್ತದೆ. ಭೂಮಿ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಲ್ಲಿ ಆನಂತರ ಅದನ್ನು ತೆರವುಗೊಳಿಸಲು ಮುಂದಾದಾಗ ಯಾವುದಾದರು ರೀತಿಯಲ್ಲಿ ಪ್ರಭಾವ ಬೀರಿ ಉಳಿಸಿಕೊಳ್ಳಬಹುದು ಎಂಬ ಸಲಹೆ ಸಹ ಕೆಲವು ಸಿಬ್ಬಂದಿಯಿಂದ ಬರುತ್ತಿದೆ. ಅದನ್ನು ಅಕ್ರಮ ಒತ್ತುವರಿದಾರರು ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಕೆಲವು ಕಡೆ ಕಾಡಿನ ಕೆಳಹಂತದ ಗಿಡಗಳನ್ನು ಸಣ್ಣ ಮರಗಳನ್ನು ಸವರಿ ಅದು ಬೇಸಿಗೆ ಕಾಲದಲ್ಲಿ ಚೆನ್ನಾಗಿ ಒಣಗಿರುತ್ತದೆ. ಆನಂತರ ಮಳೆಗಾಲ ಶುರುವಾದಾಕ್ಷಣ ಕಾಫಿ ಸಿಲ್ವರ್‌ ಗಳಂತಹ ಗಿಡಗಳನ್ನು ನೆಟ್ಟು ತಮ್ಮ ಸ್ವಂತ ಭೂಮಿ ಎಂಬಂತೆ ತೋರಿಸಿ ಅದನ್ನು ಮಂಜೂರು ಮಾಡಿಸಿಕೊಳ್ಳುವ ಪ್ರಯತ್ನಗಳು ನಡೆದಿದೆ.

ರಾತ್ರಿ ಹೆಡ್‌ಲೈಟ್‌ ಇಲ್ಲದ ಆ್ಯಂಬುಲೆನ್ಸ್‌ 190 ಕಿ.ಮೀ ಚಾಲನೆ : ಚಾಲಕನಿಗೆ ಭಾರಿ ಮೆಚ್ಚುಗೆ...

ಕಳೆದ ಆಗಸ್ಟ್‌ನಲ್ಲಿ ಬಂದ ಮಹಾಮಳೆಯಿಂದ ಮೂಡಿಗೆರೆ ತಾಲೂಕು ಸೇರಿದಂತೆ ಮಲೆನಾಡಿನಲ್ಲಿ ಸಂಭವಿಸಿದ ತೀವ್ರ ಭೂಕುಸಿತಗಳ ನಂತರ ಜಿಲ್ಲಾಡಳಿತ ಸೇರಿದಂತೆ ಆ ಪ್ರದೇಶದ ಜನ ಆದಷ್ಟುಕಾಡುಗಳನ್ನು ಉಳಿಸಿಕೊಳ್ಳುವ ಆಲೋಚನೆಗೆ ಮುಂದಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಅಂಕಿ ಅಂಶಗಳು ಹೇಳುವಂತೆ ಚಿಕ್ಕಮಗಳೂರು ಮಲೆನಾಡು ಜಿಲ್ಲೆಯಾದರೂ ಈ ಜಿಲ್ಲೆಯಲ್ಲೂ ಶೇ.33ರಷ್ಟುಅರಣ್ಯ ಉಳಿದುಕೊಂಡಿಲ್ಲ. ಕಳೆದ ವರ್ಷದ ಬೇಸಿಗೆಯ ಬಿಸಿ ನೋಡಿದಾಗ ಹೆಚ್ಚು ಗಿಡಮರಗಳು ಇದ್ದಿದ್ದರೆ ವಾತಾವರಣದಲ್ಲಿರುವ ಇಂಗಾಲವನ್ನು ಹೀರಿಕೊಳ್ಳುತ್ತಿದ್ದವು. ಆದರೆ ಅರಣ್ಯ ನಾಶದಿಂದ ಹೆಚ್ಚು ಇಂಗಾಲ ವಾತಾವರಣ ಸೇರುವಂತೆ ಮಾಡಿರುವುದರ ಅರಿವು ಆಗುತ್ತಿಲ್ಲ. ಇದರ ಜೊತೆಗೆ ಅರಣ್ಯ ಪ್ರದೇಶವೂ ಸೇರಿದಂತೆ ಎಲ್ಲ ಕಡೆ ಕಟ್ಟಡಗಳನ್ನು ನಿರ್ಮಿಸುವ ಆಲೋಚನೆ ಸಹ ಕಾಡು ತೆಳುವಾಗಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ಅರಣ್ಯ ಹಾಗೂ ಕಂದಾಯ ಇಲಾಖೆಗೆ ಸೇರಿದ ದಟ್ಟಅರಣ್ಯಗಳನ್ನು ಹೊಂದಿರುವ ತಾಲೂಕಿನಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ಖಾಲಿ ಇದೆ. ಅರಣ್ಯವನ್ನು ರಕ್ಷಿಸಲು ಹೆಚ್ಚಿನ ಗಮನ ಹರಿಸಬೇಕಾದ ವಲಯಾರಣ್ಯಾಧಿಕಾರಿ ಇದ್ದು ಇಲ್ಲದಂತಹ ಪರಿಸ್ಥಿತಿ ಇದೆ. ಮುತ್ತೋಡಿ ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ಕಾಯಂ ವಲಯಾರಣ್ಯಾಧಿಕಾರಿಯ ಹುದ್ದೆ ಕಳೆದ ಎರಡು ವರ್ಷಗಳಿಂದ ಖಾಲಿ ಇದೆ. ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಲಯದಲ್ಲಿಯೂ ವಲಯಾರಣ್ಯಾಧಿಕಾರಿ ಹುದ್ದೆ ಖಾಲಿ ಇದೆ. ಇದಕ್ಕೆ ಕಾರಣ ಕೇಳಿದರೆ ಇಲಾಖೆಯ ಕೆಲವು ಸಿಬ್ಬಂದಿಯಿಂದಲೇ ಈ ವಲಯದಲ್ಲಿ ಇದ್ದಾರೆ ಪರ್ಸೆಂಟೇಜ್‌ ವ್ಯವಸ್ಥೆಗೆ ಸಿಕ್ಕು ಬಳಲುವುದಕ್ಕಿಂತ ಇಲ್ಲಿಲ್ಲದಿರುವುದೇ ಲೇಸು ಎಂದು ಭಾವಿಸಿ ಈ ವಲಯಕ್ಕೆ ಯಾರು ಬರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತವೆ.

ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಜಿಲ್ಲೆಯ ಅರಣ್ಯಗಳ ಪರಿಸ್ಥಿತಿ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡು ಕೂಲಂಕಷ ಪರಿಶೀಲನೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios