ಶಿಕ್ಷಕ ವೃತ್ತಿಯೊಂದಿಗೆ ಕೃಷಿಕರಾಗಿಯೂ ಲಕ್ಷ ಲಕ್ಷ ಆದಾಯ

ಶಿಕ್ಷರೋರ್ವರು ಶಿಕ್ಷಕ ವೃತ್ತಿಯೊಂದಿಗೆ ಕೃಷಿಯಲ್ಲಿಯೂ ದೊಡ್ಡ ಸಾಧನೆ ಮಾಡಿದ್ದು ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ. ಮಾವು ಬೆಳೆಯಿಂದ ಬಂಪರ್ 

Magadi Teacher Success in Agriculture

-ಮಾದೇಶ್‌ ಎಚ್‌.ಆರ್‌.

ಮಾಗಡಿ [ಜ.24]:  ಶಿಕ್ಷಕ ವೃತ್ತಿಯಲ್ಲಿದ್ದರೂ ಸಹ ಯಶಸ್ವಿ ರೈತನಾಗಿ ಪ್ರತಿ ವರ್ಷ ಲಕ್ಷಾಂತರ ರೂ.ಗಳನ್ನು ದುಡಿಯುತ್ತಿದ್ದಾರೆ ಹೂಜಗಲ್‌ ನಾಗರಾಜ್‌.

ತಾಲೂಕಿನ ಕಸಬಾ ಹೋಬಳಿಯ ಹೂಜಗಲ್‌ ನಾಗರಾಜ್‌ ಅವರದು ರೈತಾಪಿ ಕುಟುಂಬವಾಗಿದ್ದು, ಇವರಿಗೆ ಸುಮಾರು 24 ಎಕರೆ ಜಮೀನು ಇದೆ. ಇದರಲ್ಲಿ 8 ಎಕರೆ ಜಮೀನಿನಲ್ಲಿ ಮಾವಿನ ಬೆಳೆ ಬೆಳೆದಿದ್ದು ಇದರಿಂದ ಸಾಕಷ್ಟುಆದಾಯ ಗಳಿಸುತ್ತಿದ್ದಾರೆ.

ಹೂಜಗಲ್‌ ನಿವಾಸಿ ಶಿಕ್ಷಕ ನಾಗರಾಜ್‌ ಅವರು ಸುಮಾರು 18 ವರ್ಷಗಳ ಹಿಂದೆ ಕನಕಪುರ ತಾಲೂಕಿನ ದೊಡ್ಡಅಲಹಳ್ಳಿಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ತೋಟದ ಮೇಲ್ವಿಚಾರಣೆ ನಡೆಸುತ್ತಿದ್ದ ಒಬ್ಬ ವ್ಯಕ್ತಿಯ ಪರಿಚಯವಾಗಿದ್ದು, ನಿಮ್ಮ ಜಮೀನಿನಲ್ಲಿ ಮಾವಿನ ಸಸಿಗಳನ್ನು ನೆಟ್ಟರೆ ಒಳ್ಳೆಯ ಅದಾಯ ಬರುತ್ತದೆ ಎಂದು ತಿಳಿಸಿದ್ದರು.

ಸಸಿ ನೆಟ್ಟರು: ಆ ಸಮಯದಲ್ಲಿ ಕಲ್ಯಾ ಗ್ರಾಪಂ ವ್ಯಾಪ್ತಿಯಲ್ಲಿ ಯಾರೊಬ್ಬರು ಸಹ ಮಾವಿನ ತೋಟವನ್ನು ಮಾಡಿರಲಿಲ್ಲ. ಶಿಕ್ಷಕ ನಾಗರಾಜ್‌ ಅವರು ಪ್ರಪಥಮ ಬಾರಿಗೆ ತಮ್ಮ 8 ಎಕರೆ ಜಮೀನಿನಲ್ಲಿ ಸುಮಾರು 800 ಕ್ಕೂ ಹೆಚ್ಚು ರತ್ನಗಿರಿ ಮಾವಿನ ಸಸಿಗಳನ್ನು ತರಿಸಿದ್ದರು. ಇವರ ಈ ಕಾರ್ಯವನ್ನು ನೋಡಿ ಅಕ್ಕ ಪಕ್ಕದ ಜಮೀನಿನವರು ಆಡಿಕೊಂಡು ನಕ್ಕರು. ಇಲ್ಲಿ ಮಾವಿನ ಬೆಳೆ ಬೆಳೆಯಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾಗ ನಾಗರಾಜ್‌ ತಮ್ಮ ಜಮೀನಿನಲ್ಲಿ ಸುಮಾರು 800ಕ್ಕೂ ಹೆಚ್ಚು ಮಾವಿನ ಸಸಿಗಳನ್ನು ನೆಟ್ಟಿದ್ದು, ಇವರ ತಂದೆ ಹಾಗೂ ತಾಯಿ ಮಾವಿನ ಸಸಿಗಳನ್ನು ಬೆಳೆಸಲು ನೆರವು ನೀಡಿದ್ದರು.

ಹುಣಸೆ, ಲಿಂಬು ಬೆಳೆದ ರಾಮದುರ್ಗ ರೈತನ ಕೈ ಸೇರಿತು ಕೋಟಿ ಸಂಪಾದನೆ...

ಶಿಕ್ಷಕ ನಾಗರಾಜ್‌ ಅವರ ಮಾವಿನ ತೋಟದಲ್ಲಿ ಸುಮಾರು 920ಕ್ಕೂ ಹೆಚ್ಚು ಮಾವಿನ ಮರಗಳಿದ್ದು, ರತ್ನಗಿರಿ ಬಾದಮಿ 900, ರಸಪುರಿ, ಮಲಗೊಬ ಸೇರಿದಂತೆ ಹಲವಾರು ತಳಿಯ ಮಾವಿನ ಫಸಲನ್ನು ಪ್ರತಿವರ್ಷ .5 ಲಕ್ಷಕ್ಕೂ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವನ್ನು ಗಳಿಸುತ್ತಿದ್ದಾರೆ.

ಕಡಿಮೆ ನೀರಿನಲ್ಲಿ ಬೆಳೆಯಬಹುದು:

ರೈತರು ತಮ್ಮ ಜಮೀನಿನಲ್ಲಿ ಮಾವನ್ನು ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು, ಮಾವಿನ ಸಸಿಗಳನ್ನು 2 ವರ್ಷ ಜೋಪಾನವಾಗಿ ರಕ್ಷಿಸಬೇಕು. ಅನಂತರ ಮಳೆಯ ನೀರು ಸಾಕಾಗುತ್ತದೆ, ಹೆಚ್ಚುವರಿಯಾಗಿ ನೀರು ಬೇಕಾಗಿಲ್ಲ. ಅದರೆ ತೆಂಗು ಹಾಗೂ ಅಡಿಕೆ ಮರಗಳಿಗೆ ಪದೇ ಪದೇ ನೀರನ್ನು ಹಾಯಿಸುತ್ತಿರಬೇಕು. ಇದಲ್ಲದೆ ವರ್ಷಕ್ಕೆ ಎರಡು ಬಾರಿ ಜಮೀನನಲ್ಲಿ ಕಳೆ ತೆಗೆದರೆ ಸಾಕಾಗುತ್ತದೆ ಎಂಬುದು ನಾಗರಾಜ್‌ ಅವರ ಅನುಭವದ ಮಾತು.

ನಾಟಿ ವೈದ್ಯ ಕುಟಂಬ:

ತಲಾ ತಲಾಂತರದಿಂದ ಹೂಜಗಲ್‌ ಗ್ರಾಮದಲ್ಲಿ ವಾಸಿಸುತ್ತಿರುವ ಶಿಕ್ಷಕ ನಾಗರಾಜ್‌ ಅವರ ತಂದೆ, ತಾತ, ಮತ್ತಾತಂದಿರು ನಾಟಿ ವೈದ್ಯದಲ್ಲಿಯೂ ಹೆಸರುವಾಸಿಯಾಗಿದ್ದು, ಹಾವು ಕಡಿತ, ದನಗಳಿಗೆ ಕೆಚ್ಚಲು ಬಾವು ಸೇರಿದಂತೆ ಹಲವಾರು ಕಾಯಿಲೆಗಳಿಗೆ ಔಷಧಿಯನ್ನು ಕೊಡುತ್ತಿದ್ದು, ಸುತ್ತಮುತ್ತಲ ಗ್ರಾಮಸ್ಥರು ಇವರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ, ಶಿಕ್ಷಕ ನಾಗರಾಜ್‌ ಸಹ ನಾಟಿ ವæೖದ್ಯರಾಗಿದ್ದಾರೆ.

18 ವರ್ಷಗಳ ಹಿಂದೆ ನನ್ನ ಜಮೀನಿನಲ್ಲಿ ರತ್ನಗಿರಿ ಮಾವಿನ ಸಸಿಗಳನ್ನು ನೆಟ್ಟಾಗ ಜಮೀನಿನಲ್ಲಿ ಕೊಳವೆ ಬಾವಿ ಇರಲಿಲ್ಲ, ನನ್ನ ತಾಯಿ ಮತ್ತು ತಂದೆ ಜತೆಗೂಡಿ ದೂರದಿಂದ ನೀರು ತಂದು ಗಿಡಗಳನ್ನು ಬೆಳೆಸಿದ್ದೇನೆ. ಈಗ ವರ್ಷಕ್ಕೆ 5 ಲಕ್ಷ ರು. ಹಣ ಪಡೆಯುತ್ತಿದ್ದೇನೆ. ಅಡಿಕೆ, ತೆಂಗು, ಬಾಳೆ ಮೊದಲಾದ ಬೆಳೆಗಳಿಗೆ ಹೋಲಿಕೆ ಮಾಡಿದರೆ ಮಾವು ಬೆಳೆ ಉತ್ತಮ ಮತ್ತು ರೈತರಿಗೆ ಲಾಭದಾಯಕ.

- ನಾಗರಾಜು, ಮಾವು ಬೆಳೆಯುತ್ತಿರುವ ಶಿಕ್ಷಕ

ನಮ್ಮ ತೋಟದಲ್ಲಿ ರತ್ನಪುರಿ ಬಾದಮಿ ತಳಿಯ ಸುಮಾರು 900 ಮಾವಿನ ಮರಗಳಿದ್ದು, ಇದರಲ್ಲಿ ಉತ್ಕೃಷ್ಠ ದರ್ಜೆಯ ಮಾವಿನ ಹಣ್ಣುಗಳು ಬೆಳೆಯುತ್ತವೆ. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ನಾವು 2 ವರ್ಷ ಕಷ್ಟಪಟ್ಟು ದೂರದ ಬಾವಿಯಿಂದ ನೀರು ತಂದು ಹಾಕಿ ಸಸಿಗಳನ್ನು ಸಲುಹಿದ್ದು, ಈಗ ಮಾವಿನ ಮರಗಳು ನಮ್ಮನ್ನು ಸಾಕುತ್ತಿವೆ.

- ನಿಂಗಮ್ಮ. ಶಿಕ್ಷಕ ನಾಗರಾಜ್‌ ತಾಯಿ.

ಶಿಕ್ಷಕ ಹಾಗೂ ರೈತ ನಾಗರಾಜ್‌ ಅವರ ತೋಟದಲ್ಲಿ ಉತ್ತಮ ತಳಿಯ ಮಾವಿನ ಮರಗಳಿದ್ದು, ಪ್ರತಿವರ್ಷ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಈ ಬಾರಿಯೂ ಸಹ ಪ್ರತಿಯೊಂದು ಮರದಲ್ಲಿಯೂ ಸಹ ಹೂ ಬಿಟ್ಟಿದ್ದು, ನೋಡಲು ಕಣ್ಣಿಗೆ ಹಬ್ಬವಾಗುವಂತಿದೆ.

- ನಾಗರಾಜ್‌ ತೋಟಗಾರಿಕೆ ಸಹಾಯಕ ನಿರ್ದೇಶಕ.

Latest Videos
Follow Us:
Download App:
  • android
  • ios