ಮಡಿಕೇರಿ ರಾಜಾಸೀಟಿನಲ್ಲೊಂದು ಹೂವಿನ ಲೋಕ, ಹಣ್ಣು ತರಕಾರಿಗಳಲ್ಲಿ ಅರಳಿದ ರಾಷ್ಟ್ರ ನಾಯಕರು
ಪ್ರವಾಸಿಗರ ಹಾಟ್ ಸ್ಪಾಟ್ ಮಡಿಕೇರಿಯ ರಾಜಾಸೀಟಿನಲ್ಲಿ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಫ್ಲವರ್ ಷೋನಲ್ಲಿ ಕೂಡ ಹೂವಿನ ಲೋಕವೇ ಸೃಷ್ಟಿಯಾಗಿದೆ.
ವರದಿ:ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.3): ಹೂವಿನ ಸೌಂದರ್ಯಕ್ಕೆ ಮನಸೋಲದವರುಂಟೆ. ಹೂವೆ ಹಾಗೆ ಎಂತವರನ್ನಾದರೂ ಸೆಳೆದು ಬಿಡುತ್ತದೆ. ಹೀಗಿರುವಾಗ ಸೌಂದರ್ಯದ ಹೂವುಗಳ ರಾಶಿಯಿಂದ ಬಗೆ ಬಗೆಯ ಕಲಾಕೃತಿಗಳನ್ನು ಮಾಡಿದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಹೂವು ಚೆಲುವೆಲ್ಲಾ ನನದೆಂದಿತು. ಹೆಣ್ಣೂ ಚೆಲುವೆ ನನದೆಂತಿತು. ಕನ್ನಡ ಸಿನಿಮಾದ ಈ ಗೀತೆ ಹೂವಿನ ಸೌಂದರ್ಯವನ್ನು ಸಾರುತ್ತದೆ. ಅಷ್ಟಕ್ಕೂ ಪ್ರವಾಸಿಗರ ಹಾಟ್ ಸ್ಪಾಟ್ ಮಡಿಕೇರಿಯ ರಾಜಾಸೀಟಿನಲ್ಲಿ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಫ್ಲವರ್ ಷೋನಲ್ಲಿ ಕೂಡ ಹೂವಿನ ಲೋಕವೇ ಸೃಷ್ಟಿಸಿದೆ.
ಬಣ್ಣ ಬಣ್ಣದ ಹೂವುಗಳಿಂದ ಸಿಂಗಾರಗೊಂಡು ಹೂವಿನಿಂದಲೇ ಸಿದ್ದವಾಗಿರುವ ಕೊಡಗಿನ ಹಾಲೇರಿ ರಾಜವಂಶಸ್ಥರ ಕಾಲದ ನಾಲ್ಕು ನಾಡು ಅರಮನೆ. ಕೆಂಪು ಹಳದಿ ಹೂವಿನಿಂದಲೇ ಸಿಂಗರಿಸಿಕೊಂಡು ನಿಂತಿರುವ ನಾವ್ ಮೆಟ್ಟುವ ನೆಲ ಕನ್ನಡ ನಾಡಿನ ಭೂಪಟ. ಪಕ್ಕದಲ್ಲಿಯೇ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮತದಾನದ ಜಾಗೃತಿ ಮೂಡಿಸಲು ರೆಡಿಯಾಗಿರುವ ಓಟಿಂಗ್ ಮೆಷಿನ್. ಪಕ್ಕದಲ್ಲಿಯೇ ಮಾವಿನ ಹಣ್ಣಿನ ಫೋಟೋ ಫ್ರೇಂ, ಮತ್ತೊಂದೆಡೆ ದಪ್ಪಮೆಣಸಿನ ಕಾಯಿಯಿಂದ ರೆಡಿಯಾಗಿರುವ ದಪ್ಪ ಮೆಣಸಿನಕಾಯಿ ಆಕೃತಿಯ ಫೋಟೋ ಫ್ರೇಂ. ಎದುರಿಗೆ ಇರುವ ವರ್ಲ್ಡ್ ಕಪ್. ಹೂವಿನಿಂದಲೇ ಅಲಂಕಾರಗೊಂಡು ಎಲ್ಲರ ಕಣ್ಮನ ಸೆಳೆಯುತ್ತಿರುವ ಸಿಂಡ್ರೆಲ್ಲಾ. ಅವುಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡು, ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡುತ್ತಾ ಹೂವಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿರುವ ಜನರು. ಅಯ್ಯೋ ಒಂದಾ ಎರಡಾ.? ಸೇವಂತಿ, ಗುಲಾಬಿ ಸೇರಿದಂತೆ ವಿವಿಧ ಬಗೆಯ ಬರೋಬ್ಬರಿ 40 ಲಕ್ಷ ಹೂವುಗಳಿಂದ ಅಲಂಕೃತಗೊಂಡಿರುವ ರಾಜಾಸೀಟ್ ಎಲ್ಲರನ್ನು ಹೂವಿನ ಲೋಕಕ್ಕೆ ಕರೆದೊಯುತ್ತಿದೆ ಎನ್ನುತ್ತಾರೆ ಪ್ರವಾಸಿ ಚೈತ್ರಶ್ರೀ ಮತ್ತು ಲಾವಣ್ಯ.
Kodagu: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಒಡೆದವರ ಗಡಿಪಾರು: ಕೋರ್ಟ್ ನೋಟಿಸ್ ಜಾರಿ
ವಿಶಾಲವಾದ ರಾಜಾಸೀಟಿನಲ್ಲಿ ಹೂವಿನಿಂದ ವಿವಿಧ ಕಲಾಕೃತಿಗಳು ಅರಳಿದ್ದರೆ, ರಾಜಾಸೀಟಿನಲ್ಲಿಯೇ ಬೆಳೆಸಿರುವ ಡೇರೆ, ಬೆಟ್ಟದಾವರೆ, ಸೇವಂತಿಗೆ ಸೇರಿದಂತೆ ನಾನಾ ರೀತಿಯ ಹೂವುಗಳು ಸಹಜವಾಗಿಯೇ ಗಿಡದಲ್ಲಿ ಬೆಳೆದು ಅರಳಿ ಹೂವಿನ ಲೋಕವನ್ನೇ ಸೃಷ್ಟಿಸಿವೆ. ಮಗದೊಂದೆಡೆ ಹಣ್ಣು ತರಕಾರಿಗಳಿಂದ ಸಿದ್ಧಗೊಳಿಸಿರುವ ಕಲಾಕೃತಿಗಳು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಅದರಲ್ಲೂ ಬೆಂಗಳೂರಿನ ಕಲಾವಿದ ಭರತ್ ಎಂಬುವವರು ಕಲ್ಲಂಗಡಿ ಹಣ್ಣಿನಲ್ಲಿ ಅರಳಿಸಿರುವ ರಾಷ್ಟ್ರಕವಿ ಕುವೆಂಪು, ಪ್ರಧಾನಿ ಮೋದಿ, ಭಗತ್ ಸಿಂಗ್, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರಬೋಸ್ ಸೇನಾ ಮಹಾ ದಂಡನಾಯಕರಾಗಿದ್ದ ಜನರಲ್ ತಿಮ್ಮಯ್ಯ ಅವರ ಭಾವಚಿತ್ರಗಳು ಎಲ್ಲರ ಕಣ್ಮನ ಸೆಳೆಯುತ್ತಿದ್ದವು. ಅಷ್ಟೇ ಏಕೆ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಕಾಂತಾ ಸಿನಿಮಾದ ಭಾವಚಿತ್ರವೂ ಕಲ್ಲಂಗಡಿಯ ಮೇಲೆ ಅರಳಿದ್ದು ವಿಶೇಷ.
BIG 3ಸಾರಿಗೆ ವ್ಯವಸ್ಥೆ ಇಲ್ಲದೆ ಶಾಲೆ ಬಿಟ್ಟ 14 ಮಕ್ಕಳು: ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?
ಒಟ್ಟಿನಲ್ಲಿ ಕೊಡಗಿನ ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ರಾಜ್ಯ ಹೊರ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವುದಕ್ಕಾಗಿ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆಗಳು ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಎಲ್ಲರ ಮನಸೂರೆಗೊಳ್ಳುತ್ತಿದೆ. ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಈ ಫಲಪುಷ್ಪ ಪ್ರದರ್ಶನದಲ್ಲಿ ವಾರಾಂತ್ಯವಾಗಿರುವುದರಿಂದ ನಿತ್ಯ ಕನಿಷ್ಠ 25 ರಿಂದ 30 ಸಾವಿರ ಪ್ರವಾಸಿಗರು ಭಾಗವಹಿಸುವ ಸಾಧ್ಯತೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಮೋದ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ರಾಜಾಸೀಟಿನಲ್ಲಿ ಹೂವಿನ ಲೋಕ ಸೃಷ್ಟಿಯಾಗಿದ್ದು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವುದು ಸುಳ್ಳಲ್ಲ. ಈ ವಾರ ಕೊಡಗಿಗೆ ಪ್ರವಾಸಕ್ಕೆ ಆಗಮಿಸುತ್ತಿದ್ದರೆ, ರಾಜಾಸೀಟಿಗೆ ಭೇಟಿ ನೀಡುವುದನ್ನು ಮಿಸ್ ನೀವು ಮಾಡ್ಕೋಬೇಡಿ.