Look Back at 2021: ಧಾರವಾಡ ಜನತೆಗೆ ಸಿಹಿ-ಕಹಿ ಉಣಬಡಿಸಿದ 2021..!
* ಈ ವರ್ಷ ಕಾಡಿದ ಕೋವಿಡ್‌ಗೆ ಲಸಿಕೆಯೇ ಮದ್ದು
* ವರ್ಷದಲ್ಲಿ 717 ಸೋಂಕಿತರ ಸಾವು, 39,622 ಪಾಸಿಟಿವ್ ಪ್ರಕರಣ
* ಮೇ ತಿಂಗಳಲ್ಲಿ ಲಾಕ್‌ಡೌನ್, ಮತ್ತೆ ಆರ್ಥಿಕತೆಗೆ ತೊಂದರೆ
ಬಸವರಾಜ ಹಿರೇಮಠ
ಧಾರವಾಡ(ಡಿ.31): 2020ರ ಮಾರ್ಚ್ ತಿಂಗಳಿಂದಲೇ ಶುರುವಾದ ಕೊರೋನಾ(Coronavirus) ವೈರಸ್‌ನ ವಿವಿಧ ರೂಪಾಂತರ ತಳಿಗಳು 2021ನೇ ವರ್ಷಕ್ಕೂ ಜನರನ್ನು ಎಡಬಿಡದೇ ಕಾಡಿದೆ. ವರ್ಷಪೂರ್ತಿ ಅಲ್ಲದೇ ಇದ್ದರೂ ಕಳೆದ ಏಪ್ರಿಲ್ ತಿಂಗಳಿಂದ ನಿಧಾನವಾಗಿ ಶುರುವಾಗಿ ಮೇ ತಿಂಗಳಲ್ಲಿ ಅತಿರೇಕಕ್ಕೆ ಹೋಗಿದ್ದ ಕೋವಿಡ್ ಸೋಂಕಿನ ಭಯ ಈಗ ಒಮಿಕ್ರೋನ್(Omicron) ಮೂಲಕ ಮತ್ತೆ ಜಿಲ್ಲೆಯ ಜನತೆ ನಿದ್ದೆಗೆಡಿಸಿದೆ.
2020ರ ಮೊದಲ ಅಲೆಯಲ್ಲಿ ಕೊರೋನಾ ಸೋಂಕಿತರಿಗೆ ಬೆಡ್ ಕೊರತೆ ಉಂಟಾಗಿದ್ದರೆ, 2021ರ 2ನೇ ಅಲೆಯು ಆಕ್ಸಿಜನ್, ಐಸಿಯು ಕೊರತೆ ಸೃಷ್ಟಿಸಿ ನೂರಾರು ಜನರನ್ನು ಬಲಿ(Death) ಪಡೆಯಿತು. 2020ರ ಮೊದಲ ಅಲೆಗೆ 608 ಜನರು ಬಲಿಯಾಗಿದ್ದರೆ, 2021ರ ವರ್ಷದಲ್ಲಿ ಕೋವಿಡ್(Covid19) ಸೋಂಕಿಗೆ ಬರೋಬ್ಬರಿ 717 ಜನರು ಬಲಿಯಾಗಿದ್ದಾರೆ. ಹಾಗೆಯೇ ಈ ವರ್ಷ ಧಾರವಾಡ(Dharwad) ಜಿಲ್ಲೆಯಲ್ಲಿ ಬರೋಬ್ಬರಿ 39,622 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಪ್ರಸ್ತುತ ಒಟ್ಟಾರೆ 61 ಸಾವಿರ ಗಡಿ ದಾಟಿದೆ.
Ban on MES: ಕರ್ನಾಟಕ ಬಂದ್ ಕೈಬಿಡಿ ಎಂದ ಸಿಎಂ: ಮಾಡಿಯೇ ಸಿದ್ಧ: ವಾಟಾಳ್
ಲಾಕ್‌ಡೌನ್ ಹೊಡೆತ:
ಮೊದಲ ಲಾಕ್‌ಡೌನ್(Lockdown) ಪರಿಣಾಮಗಳನ್ನು ಅರಗಿಸಿಕೊಳ್ಳಲಾಗದ ಜಿಲ್ಲೆಯ ಜನತೆಗೆ ಮೇ ತಿಂಗಳಲ್ಲಿ 2ನೇ ಅಲೆಯ ಪ್ರಭಾವದಿಂದ ಸುಮಾರು 40 ದಿನಗಳ ಕಾಲ ಮತ್ತೊಂದು ಲಾಕ್‌ಡೌನ್ ಆರ್ಥಿಕತೆಗೆ ತುಂಬ ಹೊಡೆತ ಕೊಟ್ಟಿತು. ಮತ್ತೆ ಶಾಲೆ-ಕಾಲೇಜುಗಳನ್ನು ಬಂದ್ ಮಾಡಲಾಯಿತು. ಸಿನಿಮಾ, ಹೋಟೆಲ್, ಬಾರ್, ಸಾರಿಗೆ ಹೀಗೆ ಲಾಕ್‌ಡೌನ್ ಸಮಯದಲ್ಲಿ ಇಡೀ ವ್ಯವಸ್ಥೆಯೇ ಸ್ತಬ್ಧವಾಯಿತು. ಏಪ್ರಿಲ್, ಮೇ ತಿಂಗಳಲ್ಲಿ ಅಪ್ಪಳಿಸಿದ 2ನೇ ಅಲೆಯನ್ನು ಲಾಕ್‌ಡೌನ್ ಮೂಲಕ ಸಮರ್ಥವಾಗಿ ಎದುರಿಸಿದರೂ ಅನೇಕ ಬಡಕುಟುಂಬಗಳಿಗೆ ತುಂಬ ತೊಂದರೆಯಾಯಿತು. ನಂತರ ಕೋವಿಡ್ ಕಡಿಮೆಯಾದ ಕಾರಣ ಮೊದಲಿಗೆ ಕಾಲೇಜುಗಳನ್ನು ಶುರು ಮಾಡಲಾಯಿತು. ನಂತರ ಸೆಪ್ಟಂಬರ 5ರಿಂದ 6-10 ಹಾಗೂ ಅಕ್ಟೋಬರ್ 25ರಿಂದ 1-5ನೇ ತರಗತಿ ಆರಂಭ ಮಾಡಲಾಯಿತು. ಹಂತ ಹಂತವಾಗಿ ಎಲ್ಲ ಕ್ಷೇತ್ರಗಳ ಚಟುವಟಿಕೆಗಳಿಗೆ ಮುಕ್ತ ಅವಕಾಶ ದೊರೆಯಿತು.
ಎಸ್‌ಡಿಎಂನಲ್ಲಿ ಕೋವಿಡ್ ಸ್ಫೋಟ:
ಈ ಮಧ್ಯೆ ಕೋವಿಡ್‌ನಿಂದ ಸುಧಾರಿಸಿಕೊಂಡ ಮಧುಮೇಹಿಗಳಿಗೆ ಬ್ಲಾಕ್ ಫಂಗಸ್(Black Fungus) ಸೋಂಕು ಅತಿಯಾಗಿ ಕಾಡಿತು. ಕೋವಿಡ್‌ನಲ್ಲಿ ಉಳಿದ ಹಲವರು ಬ್ಲಾಕ್ ಫಂಗಸ್‌ಗೆ ಜೀವ ತೆರಬೇಕಾಯಿತು. ಇನ್ನು, 3ನೇ ಅಲೆಯ ಆರಂಭ ಎನ್ನುವಂತೆ ನ.28ರಂದು ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಏಕಾಏಕಿ ಕೋವಿಡ್ ಸ್ಫೋಟಗೊಂಡಿತು. 2,217 ಜನರ ತಪಾಸಣೆ ನಂತರ ಕೊನೆಗೆ 306 ವಿದ್ಯಾರ್ಥಿ-ಪ್ರಾಧ್ಯಾಪಕರಿಗೆ ಪಾಸಿಟಿವ್ ಬಂದರೂ ಎಲ್ಲರೂ ಲಸಿಕೆ ಪಡೆದ ಕಾರಣ ಈ ಪ್ರಕರಣ ತಾರಕಕ್ಕೆ ಏರಲಿಲ್ಲ. ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ಒಮಿಕ್ರಾನ್ ಪ್ರಕರಣ ಪತ್ತೆಯಾಯಿದರೂ ಮಹಿಳೆ ಗುಣಮುಖರಾಗಿದ್ದಾರೆ. ಎಲ್ಲವು ಸರಿಯಾಯಿತು ಎನ್ನುವಷ್ಟರಲ್ಲಿ ಡಿಸೆಂಬರ್ ಕೊನೆ ಕೊನೆಗೆ ಒಮಿಕ್ರೋನ್ ಭಯದಿಂದ ಡಿ.28ರಿಂದ ಹತ್ತು ದಿನಗಳ ಕಾಲ ರಾತ್ರಿ ಕರ್ಫ್ಯೂ(Night Curfew) ಹೇರಲಾಗಿದೆ. ಈ ಬಾರಿಯೂ ಹೊಸ ವರ್ಷವನ್ನು ಒಮಿಕ್ರೋನ್ ಭಯದಲ್ಲಿಯೇ ಆಚರಿಸುವಂತಾಗಿದೆ.
ಕೋವಿಡ್ ಸೋಂಕಿಗೆ ಸೆಡ್ಡು ಹೊಡೆದ ಲಸಿಕೆ
ಕೋವಿಡ್ ಸೋಂಕಿನ ಪ್ರಭಾವದ ಎದುರು ಕೋವಿಡ್ ನಿರೋಧಕ ಲಸಿಕೆ ಎಷ್ಟು ಪರಿಣಾಮ ಬೀರಿತು ಎಂದವರೇ ಹೆಚ್ಚಿನವರು. ಹೀಗಾಗಿ ಆರಂಭದಲ್ಲಿ ಲಸಿಕೆ(Vaccine) ಪಡೆಯಲು ಹಿಂದೇಟು ಹಾಕಿದರು. ವಿರೋಧ ವ್ಯಕ್ತಪಡಿಸಿದರು. ಎಷ್ಟೆಲ್ಲ ವಿರೋಧಗಳಿದ್ದರೂ 2021ರ ಜನವರಿ 8ರಂದು ಪ್ರಾಯೋಗಿಕವಾಗಿ ಲಸಿಕಾಕರಣ ಶುರು ಮಾಡಿದ ಜಿಲ್ಲಾಡಳಿತವು ಜ.16ರಿಂದ ಆರಂಭದಲ್ಲಿ ಕೋವಿಡ್ ವಾರಿಯರ್ಸ್ ಮೂಲಕ ಅಭಿಯಾನ ಶುರು ಮಾಡಿತು. ನಂತರ 44 ವಯಸ್ಸಿನ ಮೇಲ್ಪಟ್ಟವರು, ತದನಂತರ 18 ರಿಂದ 44 ವಯಸ್ಸಿನವರಿಗೂ ಲಸಿಕೆ ನೀಡಲಾಯಿತು. ಆರಂಭದಲ್ಲಿ 150ರಿಂದ ಶುರುವಾಗಿ ನಿತ್ಯ ಒಂದು ಲಕ್ಷವರೆಗೂ ಲಸಿಕೆ ಹಾಕಲಾಗಿದ್ದು ಜಿಲ್ಲಾಡಳಿತ ಸಾಧನೆಯೇ ಸರಿ. ರಾಜ್ಯ ಸರ್ಕಾರ, ಜಿಲ್ಲಾಡಳಿತ ಮಾತ್ರ ಲಸಿಕಾಕರಣವನ್ನು ಯುದ್ದೋಪಾದಿಯಲ್ಲಿ ನಡೆಸಿ ಸದ್ಯಕ್ಕೆ ರಾಜ್ಯದಲ್ಲಿಯೇ(Karnataka) ಧಾರವಾಡ ಜಿಲ್ಲೆಯು ಲಸಿಕಾಕರಣದಲ್ಲಿ 3ನೇ ಸ್ಥಾನದಲ್ಲಿದೆ. ಸುಮಾರು 20 ಲಕ್ಷ ಜನರಿಗೆ ಮೊದಲ ಡೋಸ್ (ಶೇ.98) ಲಸಿಕೆ ನೀಡಲಾಗಿದೆ. 2ನೇ ಡೋಸ್ ಸಹ ಉತ್ತಮ ಪ್ರಗತಿಯಲ್ಲಿದೆ.
Karnataka Train Service : ಹೊಸ ರೈಲು ಮಾರ್ಗ ಯೋಜನೆಗೆ ವಿರೋಧ
ರೈತರಿಗೆ ಅತಿಯಾಗಿ ಕಾಡಿದ ಅತಿವೃಷ್ಟಿ
2021ನೇ ವರ್ಷ ರೈತರನ್ನು(Farmers) ಅತಿವೃಷ್ಟಿಯು ತುಸು ಅತಿಯಾಗಿಯೇ ಕಾಡಿತು. ಸಾಮಾನ್ಯವಾಗಿ ನಾಲ್ಕು ತಿಂಗಳು ಮಾತ್ರ ಮಳೆಗಾಲ ಎನ್ನುತ್ತೇವೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ 2021ರ ಇಡೀ ವರ್ಷ ಬಿಟ್ಟು ಬಿಡದೇ ಮಳೆಯಾಗಿದೆ(Rain). ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ರೈತರು ಮುಂಗಾರು ಬೆಳೆ ಕಳೆದುಕೊಂಡರು. ಬಿತ್ತುವುದೇ ತಡ ಮತ್ತೆ ಮಳೆ ಸುರಿದು ಹಿಂಗಾರು ಹಾಳಾಗಿ ರೈತರನ್ನು ಅಕ್ಷರಶಃ ಕಂಗಾಲು ಮಾಡಿದೆ.
ಜುಲೈ ತಿಂಗಳಿಂದ ಶುರುವಾದ ಮಳೆ ಮುಂದಿನ ನವೆಂಬರ್‌ವರೆಗೂ ಅಪಾರ ಪ್ರಮಾಣದಲ್ಲಿ ಸುರಿದು ತೀವ್ರ ಪ್ರಮಾಣದ ಕೃಷಿ, ತೋಟಗಾರಿಕಾ ಬೆಳೆ ಕ್ಷೇತ್ರ ಹಾಳಾಯಿತು. ಸಾವಿರಾರು ಮನೆಗಳು ಬಿದ್ದವು. ಪ್ರವಾಹ ಬಂದು ಮನೆಯಲ್ಲಿನ ಬಟ್ಟೆಬರೆ, ಕಾಳು-ಕಡಿ, ದನಕರು, ಕುರಿಗಳು ಸಹ ಕೊಚ್ಚಿ ಹೋದ ಘಟನೆಗಳೂ ನಡೆದಿವೆ. ಕೆರೆ ಕಟ್ಟೆಗಳು ಒಡೆದು ಅಪಾರ ನೀರು ಪೋಲಾಯಿತು. ಜೊತೆಗೆ ತಗ್ಗು ಪ್ರದೇಶದಲ್ಲಿನ ಬೆಳೆಗಳನ್ನು ಕೊಚ್ಚಿಕೊಂಡು ಹೋಯಿತು.
ಏಲ್ಲೆಲ್ಲಿ ಏನೇನು ಹಾನಿ?
ಅಳ್ನಾವರ ತಾಲೂಕಿನಲ್ಲಿರುವ ಹುಲಿಕೇರಿಯ ಇಂದಿರಮ್ಮನ ಕೆರೆ ಒಂದು ಭಾಗಕ್ಕೆ ನಿರ್ಮಿಸಿದ್ದ ತಡೆಗೋಡೆ ಸೋರಿಕೆಯಾಗಿ ಮತ್ತೆ ಅಳ್ನಾವರ ಪಟ್ಟಣದ 200 ಕುಟುಂಬಗಳನ್ನು ಸ್ಥಳಾಂತರ ಮಾಡಲಾಯಿತು. ನಾಲ್ಕೈದು ದಿನಗಳ ಕುಂಬಾರಗಣವಿ ರಸ್ತೆ ಸಂಪರ್ಕ ಕಡಿತವಾಯಿತು. ಹಳ್ಳಕ್ಕೆ ಪ್ರವಾಹ ಬಂದಿದ್ದರಿಂದ ನಾಲ್ಕು ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋದವು. ಅದೇ ರೀತಿ ನವಲಗುಂದ ತಾಲೂಕಿನ ಬೆಣ್ಣೆಹಳ್ಳದಲ್ಲಿ 350 ಕುರಿಗಳು ಹಾಗೂ 8 ಕುರಿಗಾಹಿಗಳು ಸಿಲುಕಿದ್ದರು. ತಕ್ಷಣ ಅಗ್ನಿಶಾಮಕ ದಳ ಅವರನ್ನು ರಕ್ಷಿಸಿತು. ಇಷ್ಟಾಗಿಯೂ 15 ಕುರಿಗಳು ನೀರಿನಲ್ಲಿ ತೇಲಿ ಹೋದವು. ಅದೇ ರೀತಿ ಕುಂದಗೋಳ ತಾಲೂಕಿನ ದೇವನೂರ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಸುಮಾರು 180 ಕುರಿಗಳನ್ನು ಸಹ ರಕ್ಷಿಸಲಾಯಿತು.
ಎರಡೂ ಹಂಗಾಮಿಗೆ ಪೆಟ್ಟು:
ಮುಂಗಾರಿನಲ್ಲಿ ಮಳೆ ಉತ್ತಮವಾಗಿದ್ದರಿಂದ ನಿರೀಕ್ಷೆಗಿಂತ ಹೆಚ್ಚು ಭೂಮಿ ಬಿತ್ತನೆಯಾಗಿತ್ತು. ಮಳೆ ಹೆಚ್ಚಿದ್ದರಿಂದ ಆರಂಭದಲ್ಲಿ 21,732 ಹೆಕ್ಟೇರ್ ಕೃಷಿ ಬೆಳೆ (ಸೋಯಾ, ಗೋವಿನಜೋಳ, ಹೆಸರು, ಶೇಂಗಾ, ಹತ್ತಿ) ಭಾಗಶಃ ಜಲಾವೃತವಾಗಿತ್ತು. ಆ ಮಳೆಗೆ ಜಿಲ್ಲೆಯ 16 ಸೇತುವೆ, 52 ಕಿ.ಮೀ. ರಸ್ತೆ ಭಾಗಶಃ ಹಾನಿ ಮತ್ತು 16 ರಸ್ತೆಗಳ ಸಂಪರ್ಕ ತಾತ್ಕಾಲಿಕ ಕಡಿತವಾಗಿದ್ದು ಇನ್ನೂ ಭಯ ತರಿಸುತ್ತಿದೆ. ಜೊತೆಗೆ ಅತಿಯಾದ ಮಳೆಯಿಂದ 16 ಗ್ರಾಮಗಳ ರಸ್ತೆ ಸಂಪರ್ಕವೇ ಬಂದ್ ಆಗಿತ್ತು. ಹಾಗೆಯೇ 2ನೇ ಬಾರಿ ನವೆಂಬರ್‌ನಲ್ಲಿ ಸತತವಾಗಿ ಮೂರು ದಿನ ಮಳೆ ಸುರಿದು 50 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಬೆಳೆ ನಾಶವಾಯಿತು(Crop Loss).
ಪರಿಹಾರವೂ ಬಂತು
ಕಳೆದ ಜುಲೈ, ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಹಾಗೂ ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ಮನೆ ಹಾನಿಯಾಗಿರುವ ಫಲಾನುಭವಿಗಳಿಗೆ ತಕ್ಷಣಕ್ಕೆ ಪರಿಹಾರ ವಿತರಿಸಲು . 14.75 ಲಕ್ಷ ಅನುದಾನ ಮಂಜೂರು ಮಾಡಲಾಯಿತು. ಜೊತೆಗೆ ಜುಲೈ ಮತ್ತು ನವಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ವಿವಿಧ ಕೃಷಿ, ತೋಟಗಾರಿಕೆ ಬೆಳೆಗಳ ಹಾನಿಗಾಗಿ 83,000 ರೈತರಿಗೆ 67.45 ಕೋಟಿ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಯಿತು ಎನ್ನುವುದೇ ರೈತರ ಪರವಾಗಿ ಒಂದು ಸಮಾಧಾನದ ಸಂಗತಿ.
ಭೀಕರ ಅಪಘಾತ
2021ರ ಆರಂಭದ ದಿನಗಳಲ್ಲಿ ಹು-ಧಾ ಬೈಪಾಸ್‌ನಲ್ಲಿ ಭೀಕರ ಅಪಘಾತವೊಂದು(accident) ಸಂಭವಿಸಿತು. ದಾವಣಗೆರೆಯ 13 ಮಹಿಳೆಯರು ಸೇರಿ 14 ಜನರು ಸ್ಥಳದಲ್ಲಿಯೇ ಅಸುನೀಗಿದ್ದು ಧಾರವಾಡ ಪಾಲಿಗೆ ಅತಿ ದೊಡ್ಡ ಕಹಿ ನೆನಪು. ದಾವಣೆಗೆರೆಯಿಂದ ಗೋವಾ ಪ್ರವಾಸಕ್ಕೆ ಇವರೆಲ್ಲರೂ ತೆರಳುತ್ತಿದ್ದಾಗ ನಸುಕಿನ ವೇಳೆ ಮರಳು ಲಾರಿಯೊಂದು ಟೆಂಪೋಗೆ ಮುಖಾಮುಖಿ ಡಿಕ್ಕಿಯಾಗಿತ್ತು.
ವಿನಯ ಕುಲಕರ್ಣಿಗೆ ಜಾಮೀನು
ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ(Yogeeshgouda Murder Case) ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ(Vinay Kulkarni) ಎಂಟು ತಿಂಗಳ ಬಳಿಕ ಕಳೆದ ಆ.20ರಂದು ನ್ಯಾಯಾಲಯದಿಂದ ಜಾಮೀನು(Bail) ದೊರೆಯಿತು. ಸಾಕ್ಷಿ ನಾಶದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಪ್ರವೇಶ ನಿಷೇಧಿಸಿ ಜಾಮೀನು ನೀಡಲಾಯಿತು. ಈ ಮೊದಲು ಜಾಮೀನಿಗಾಗಿ ವಿನಯ ಅವರು ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಜನಪ್ರತಿನಿಧಿಗಳ ನ್ಯಾಯಾಲಯ ಸೇರಿದಂತೆ ಸುಪ್ರಿಂ ಕೋರ್ಟ್ ಮೆಟ್ಟಿಲು ಏರಿದ್ದರು.
ಬೆಲ್ಲದ ಸಿಎಂ ಉಹಾಪೋಹ
ಬಿ.ಎಸ್. ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವುದು ತಡವೇ ಕೇಂದ್ರದಲ್ಲಿ ಹೈಕಮಾಂಡ್ ವಿಶ್ವಾಸ ಗಳಿಸಿದ್ದಾರೆ ಎನ್ನಲಾದ ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ(Arvind Bellad) ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಉಹಾಪೋಹಗಳು ಕೇಳಿ ಬಂದವು. ಆದರೆ, ಅದು ನಿಜವಾಗಲಿಲ್ಲ. ಕೊನೆಗೆ ಮಂತ್ರಿ ಸ್ಥಾನವಾದರೂ ಸಿಗಲಿದೆ ಎಂದೇ ತಿಳಿಯಲಾಗಿತ್ತು. ಆದರೆ, ಯಾವ ಸ್ಥಾನ ಸಿಗದೇ ಬೆಲ್ಲದ ಅವರು ತೀವ್ರ ನಿರಾಸೆಗೆ ಒಳಗಾಗಬೇಕಾಯಿತು.
ಭಯ ಹುಟ್ಟಿಸಿದ ಚಿರತೆ
ಅರೆ ಮಲೆನಾಡು ಧಾರವಾಡದಲ್ಲಿ ಆಗಾಗ ಕಾಡು ಪ್ರಾಣಿಗಳು ನಾಡಿಗೆ ಬರುತ್ತವೆ. ಅಂತೆಯೇ ಸೆಪ್ಟಂಬರ್ ತಿಂಗಳಲ್ಲಿ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಬಳಿ ಕಾಣಿಸಿಕೊಂಡ ಗಂಡು ಚಿರತೆಯೊಂದು(Leopard) ಸುಮಾರು 12 ದಿನಗಳ ಕಾಲ ಅವಳಿ ನಗರದ ಜನತೆಯನ್ನು ಕಾಡಿತು. ಎರಡು-ಮೂರು ದಿನ ನೃಪತುಂಗದ ಬೆಟ್ಟದ ಬಳಿ ಇದ್ದು ನಂತರ ಅಲ್ಲಿಂದ ಕವಲಗೇರಿಯ ಕಬ್ಬಿನ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಿತು. ಕೊನೆಗೂ ಚಿರತೆಯನ್ನು ಬೋನಿಗೆ ಬೀಳಿಸಿ ದಾಂಡೇಲಿಯ ಅರಣ್ಯಕ್ಕೆ ಬಿಟ್ಟು ಬರಲಾಯಿತು.
Electrification: ಇದೇ ಮೊದಲ ಬಾರಿಗೆ ಮೈಸೂರು- ಹುಬ್ಬಳ್ಳಿ ನಡುವೆ ವಿದ್ಯುತ್ ರೈಲು ಸಂಚಾರ
ಚುನಾವಣೆ:
ನಾಡಿನ ಕನ್ನಡದ ಅಸ್ಮಿತೆ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗಳೂ ಕಳೆದ ನವೆಂಬರ್ ತಿಂಗಳಲ್ಲಿ ನಡೆದವು. ನ.28ರಂದು ನಡೆದ ಚುನಾವಣೆಯಲ್ಲಿ ನಾಡೋಜ ಪಾಟೀಲ ಪುಟ್ಟಪ್ಪ ಅವರ ನಂತರ ಮೊದಲ ಅಧ್ಯಕ್ಷರಾಗಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧಿಕಾರ ವಹಿಸಿಕೊಂಡರು. 15 ಪದಾಧಿಕಾರಿಗಳ ತಂಡವು ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮುಂಚೆ ನ.21ರಂದು ನಡೆದ ಕಸಾಪ ಚುನಾವಣೆಯಲ್ಲಿ ಇನ್ನೇನು ರಾಮು ಮೂಲಗಿ ಗೆದ್ದರು ಎನ್ನುವಷ್ಟರಲ್ಲಿ ಹುಬ್ಬಳ್ಳಿ ಮತಗಟ್ಟೆಯೊಂದರಲ್ಲಿ ಹೆಚ್ಚುವರಿ 24 ಮತಗಳನ್ನು ಪಡೆದು ಡಾ.ಲಿಂಗರಾಜ ಅಂಗಡಿ ಸತತ ಮೂರನೇ ಬಾರಿಗೆ ಗೆಲವು ಸಾಧಿಸಿದರು.
ಅಮೃತ ಮಹೋತ್ಸವ
ಭಾರತಕ್ಕೆ ಸ್ವಾತಂತ್ರ್ಯ ದೊರೆತು 2021ರ ಆಗಸ್ಟ್ 15ಕ್ಕೆ 75 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಇಡೀ ವರ್ಷ ಆಜಾದಿ ಕಾ ಅಮೃತ ಮಹೋತ್ಸವ ಹೆಸರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ಸರ್ಕಾರದ ಎಲ್ಲ ಇಲಾಖೆಗಳು ವಿನೂತನ ಕಾರ‍್ಯಕ್ರಮಗಳನ್ನು ಆಯೋಜಿಸಿದ್ದು ವಿಶೇಷ. ಕಲೆ. ಸಾಹಿತ್ಯ, ಹೋರಾಟ, ರಂಗಭೂಮಿ ಹೀಗೆ ಅನೇಕ ರೀತಿಯಲ್ಲಿ ಕಾರ್ಯಕ್ರಮಗಳು ಜರುಗಿದವು.
ಮೂರು ದಿನ ಆರೆಸ್ಸೆಸ್ ಬೈಠಕ್
ಹಲವು ವರ್ಷಗಳ ಬಳಿಕ ಅಕ್ಟೋಬರ್ 28 ಮೂರು ದಿನಗಳ ಕಾಲ ಗರಗ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ನಡೆಸಲಾಯಿತು. ಸರಸಂಘಚಾಲಕ ಡಾ.ಮೋಹನ್ ಭಾಗವತ್ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ದೇಶದ ಸುಮಾರು 350 ಪ್ರತಿನಿಧಿಗಳು ಭಾಗವಹಿಸಿದ್ದರು. ಬಾಂಗ್ಲಾ ದೇಶದಲ್ಲಿ ದುರ್ಗಾಪೂಜಾ ಸಂದರ್ಭದಲ್ಲೇ ಹಿಂದೂಗಳ ಮೇಲೆ ದಾಳಿ, ಆರೆಸ್ಸೆಸ್ ಶತಮಾನೋತ್ಸವ ಹಾಗೂ ಸಂಘವನ್ನು ಗಟ್ಟಿಗೊಳಿಸುವ ಕುರಿತು ಚರ್ಚೆಗಳು ನಡೆದವು.