ಚಿಕ್ಕಮಗಳೂರು: 20ರ ನಂತರ ಲಾಕ್‌ ಡೌನ್‌ ವಿನಾಯಿತಿ

ಮೊದಲ ಹಂತದ ಲಾಕ್‌ ಡೌನ್‌ ಏ.20 ರವರೆಗೆ ಮುಂದುವರಿಯಲಿದ್ದು, ನಂತರ ಸರ್ಕಾರ ಕೆಲವು ವಿನಾಯಿತಿ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

Lockdown rules to be change after April 20th

ಚಿಕ್ಕಮಗಳೂರು(ಏ.16): ಮೊದಲ ಹಂತದ ಲಾಕ್‌ ಡೌನ್‌ ಏ.20 ರವರೆಗೆ ಮುಂದುವರಿಯಲಿದ್ದು, ನಂತರ ಸರ್ಕಾರ ಕೆಲವು ವಿನಾಯಿತಿ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆ ನಡೆದ ಲಾಕ್‌ ಡೌನ್‌ ಪರಿಸ್ಥಿತಿ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಏ.21ರಂದು ಅಧಿಕಾರಿಗಳ ಸಭೆ ನಡೆಸಿ, ಸರ್ಕಾರದ ಮಾರ್ಗದರ್ಶನ ಅನುಸರಿಸಿ ಅಥವಾ ಜಿಲ್ಲಾಡಳಿತವೇ ಯಾವ ರೀತಿ ಜಿಲ್ಲೆಯಲ್ಲಿ ನಿರ್ಬಂಧಗಳನ್ನು ಸಡಿಲಿಸಬೇಕೆಂಬ ಬಗ್ಗೆ ಆಲೋಚಿಸುತ್ತದೆ ಎಂದರು.

ಪೊಲೀಸರ ಮೇಲೆಯೇ ಮಾರಕಾಸ್ತ್ರದಿಂದ ಹಲ್ಲೆ: ಆರೋಪಿ ಮೇಲೆ ಫೈರಿಂಗ್‌

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾತನಾಡಿ, ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ನಡೆದ ವೀಡಿಯೋ ಕಾನ್ಪರೆನ್ಸ್‌ನಲ್ಲಿ ಏ.20ರವರೆಗೂ ಜಿಲ್ಲೆಯಲ್ಲಿ ಈಗಿರುವ ನಿರ್ಬಂಧಗಳನ್ನೇ ಕಟ್ಟುನಿಟ್ಟಾಗಿ ಪಾಲಿಸಿದರೆ ಜಿಲ್ಲೆ ಕೆಲವು ವಿನಾಯ್ತಿಗಳನ್ನು ಏ.21 ರಿಂದ ನೀಡುವ ಭರವಸೆ ಮುಖ್ಯ ಕಾರ್ಯದರ್ಶಿಗಳಿಂದ ದೊರೆತಿದೆ ಎಂದು ಹೇಳಿದರು.

ಸಭೆಯಲ್ಲಿ ವಿವಿಧ ಪಕ್ಷ ಹಾಗೂ ರೈತಸಂಘದ ಮುಖಂಡರ ಮತ್ತು ಶಾಸಕರ ಸಲಹೆಯನ್ನು ಎರಡನೇ ಹಂತದ ಲಾಕ್‌ಡೌನ್‌ ನಿರ್ವಹಣೆ ಬಗ್ಗೆ ಸಚಿವರು ಕೇಳಿದಾಗ, ಮೊದಲು ಮಾತನಾಡಿದ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌.ಎಚ್‌. ದೇವರಾಜ್‌, ಮೊದಲ ಹಂತದ ಲಾಕ್‌ ಡೌನ್‌ ಘೋಷಣೆಯಾದ ನಂತರ ಪಾಸ್‌ ನೀಡುವಲ್ಲಿ ಬಹಳಷ್ಟುಗೊಂದಲವಾಗಿದೆ. ನಕಲಿ ಪಾಸ್‌ ಮುದ್ರಿಸಿ ನೀಡಿದ ಪ್ರಕರಣದಲ್ಲಿ ಅದರ ಮುಖ್ಯ ಆರೋಪಿಯ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಗಮನಹರಿಸಬೇಕೆಂದರು.

ಸಿಪಿಐ ಮುಖಂಡ ಎಚ್‌.ಎಂ. ರೇಣುಕಾರಾಧ್ಯ ಮಾತನಾಡಿ, ಹಾಲು ವಿತರಣೆ ನಗರದಲ್ಲಿ ಬಿಜೆಪಿ ಪಕ್ಷದ ಮೇಲ್ವಿಚಾರಣೆಯಲ್ಲಿ ನಡೆದಿದೆ. ಎಲ್ಲ ಬಿಪಿಎಲ್‌ ಕಾರ್ಡ್‌ದಾರರಿಗೆ ಹಾಲು ನೀಡುವ ವ್ಯವಸ್ಥೆಯಾಗಬೇಕು. ರೈತರ ಓಡಾಟಕ್ಕೆ ಅವರು ಜಮೀನಿಗೆ ಹೋಗಲು ಸಮಯ ನಿಗದಿ ಮಾಡಿ. ಪಹಣಿ ತೋರಿಸಿದರೆ ಜಮೀನಿಗೆ ಹೋಗಲು ಬಿಡಿ. ನಗರದ ಔಷಧಿ ಅಂಗಡಿಗಳಲ್ಲಿ ಪ್ರಾಣ ಉಳಿಸುವ ಔಷಧಗಳು ದೊರಕುತ್ತಿಲ್ಲ ಎಂದು ತಿಳಿಸಿದರು.

ಮುಂಬೈನಿಂದ ಔಷಧಿ ತರಿಸಿಕೊಡಿ: ಸಿಎಂಗೆ ವಿಡಿಯೋ ಮೂಲಕ ಮನವಿ

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಅಂಶುಮಂತ್‌ ಮಾತನಾಡಿ, ಜಿಲ್ಲೆಯಲ್ಲಿ ಅನಾರೋಗ್ಯದ ತುರ್ತು ಕಾಡಿದರೆ ಇಲ್ಲಿಂದ ಶಿವಮೊಗ್ಗ, ಮಂಗಳೂರು ಹಾಗೂ ಮಣಿಪಾಲಕ್ಕೆ ಹೋಗುವವರ ಸಂಖ್ಯೆ ಬಹಳಷ್ಟಿದೆ. ಅಂತರ ಜಿಲ್ಲಾ ಓಡಾಟಕ್ಕೆ ಒಂದು ಸಮನ್ವಯತೆ ಬೇಕು. ಈ ಬಗ್ಗೆ ಸರ್ಕಾರಕ್ಕೆ ಅಂತರ ಜಿಲ್ಲಾ ಸಮನ್ವಯ ಸಮಿತಿ ರಚಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಬೇಕೆಂದರು.

ವಿಧಾನ ಪರಿಷತ್ತು ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ಜಿಲ್ಲಾಡಳಿತ ವೆಂಟಿಲೇಟರ್‌ಗಳನ್ನು ಸಾಕಷ್ಟುಪ್ರಮಾಣದಲ್ಲಿ ಇಟ್ಟುಕೊಳ್ಳಬೇಕು. ಹಣ್ಣು, ಹೂವು, ತರಕಾರಿ ಬೇಗ ನಾಶವಾಗುವ ವಸ್ತುಗಳು. ಅವುಗಳು ಮಾರಾಟವಾಗುವಂತೆ ಪರಿಶೀಲಿಸಬೇಕು. ಈಗಾಗಲೇ ನಷ್ಟಅನುಭವಿಸಿರುವ ಬೆಳೆಗಾರರಿಗೆ ನಷ್ಟದ ಅಂದಾಜನ್ನು ತೋಟಗಾರಿಕೆ ಇಲಾಖೆ ಕೈಗೊಳ್ಳಬೇಕು ಎಂದು ಹೇಳಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಈಗಾಗಲೇ ಮನೆಯಲ್ಲೇ ನಿಗಾದಲ್ಲಿರುವವರ ಅವಧಿ ಮುಗಿದಿದೆ. ಅವರು ಮುಂದೇನು ಮಾಡಬೇಕು ಹಾಗೂ ಅವರ ಮನಸ್ಥಿತಿಯ ಬಗ್ಗೆ ಜಿಲ್ಲಾಡಳಿತ ಯೋಚಿಸಬೇಕು. ಅವರುಗಳಿಗೆ ಕೆಲಸವನ್ನಾದರೂ ನೀಡಬೇಕು ಎಂದರು.

ಹೊಸದುರ್ಗದಲ್ಲಿದೆ ಪ್ಲೇಗಮ್ಮನ ದೇಗುಲ

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕೂಲಿ ಮಾಡಿ ಜೀವಿಸುವವರಿಗೆ ಎರಡು ತಿಂಗಳ ದಿನಸಿ ಸಿಗುವಂತೆ ಅವಕಾಶವಿರಬೇಕು. ಹಿಂಸೆಯಾಗಬಾರದು. ಅನೇಕ ಕಡೆ ಮದುವೆ ನಿಶ್ಚಯವಾಗಿದ್ದರೂ ಹೆಣ್ಣನ್ನು ಕರೆತರಲು ಬಿಡುತ್ತಿಲ್ಲ ಎಂದು ಹೇಳಿದರು.

ಸಭೆಯಲ್ಲಿ ವಿಧಾನಪರಿಷತ್ತು ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ, ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ವಿಜಯಕುಮಾರ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂವಿತಾ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios