ನಾರಾಯಣ ಹೆಗಡೆ

ಹಾವೇರಿ(ಜೂ. 27):  ಕೊರೋನೋತ್ತರ ಪರಿಸ್ಥಿತಿಯಲ್ಲಿ ಕೃಷಿಗೆ ಮತ್ತೆ ಪ್ರಾಧಾನ್ಯತೆ ದೊರೆಯುವ ಸಾಧ್ಯತೆಯನ್ನು ಎನ್‌ಕ್ಯಾಶ್‌ ಮಾಡಿಕೊಳ್ಳಲು ಅವಕಾಶವಿದ್ದರೂ ಕೃಷಿ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯು ಕೈಕಟ್ಟಿಹಾಕಿದಂತಾಗಿದೆ. ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಕೃಷಿ ಇಲಾಖೆಯೇ ಸಿಬ್ಬಂದಿ ಕೊರತೆಯಿಂದ ಸೊರಗುತ್ತಿದೆ. ಇದರಿಂದ ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳುವುದು ರೈತರಿಗೆ ದೂರದ ಮಾತಾಗಿದೆ.

ಕೃಷಿ ಕ್ಷೇತ್ರದ ಸುಧಾರಣೆಗೆ ಜಿಲ್ಲೆಯವರೇ ಆಗಿರುವ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ತೀವ್ರ ಆಸಕ್ತಿ ಹೊಂದಿದ್ದಾರೆ. ಅನ್ನದಾತರಿಗೆ ಎಲ್ಲ ರೀತಿಯ ನೆರವು ನೀಡುವುದರೊಂದಿಗೆ ಕೃಷಿಯನ್ನು ಉದ್ಯಮವಾಗಿಸುವುದು, ವೈಜ್ಞಾನಿಕ ಬೆಲೆ ಒದಗಿಸುವುದು, ಉತ್ಪಾದನೆ ದ್ವಿಗುಣಗೊಳಿಸುವುದು ಸೇರಿದಂತೆ ರೈತರಿಗೆ ಅನುಕೂಲ ಕಲ್ಪಿಸಲು ಸಚಿವರು ಯೋಜನೆ ರೂಪಿಸುತ್ತಿದ್ದಾರೆ. ಬದಲಾದ ಪರಿಸ್ಥಿತಿಯಲ್ಲಿ ನಗರದಲ್ಲಿ ಉದ್ಯೋಗ ಕಡಿತವಾಗುತ್ತಿದ್ದು, ಹಳ್ಳಿಗಳತ್ತ ಯುವಕರು ಹೆಜ್ಜೆ ಹಾಕುತ್ತಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು ಕೃಷಿಯ ಬಗ್ಗೆ ಯುವಕರಿಗೆ ಒಲವು ಮೂಡಿಸುವ ಅವಕಾಶವಿದೆ. ಆದರೆ, ಕೃಷಿ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಹುದ್ದೆ ಖಾಲಿ ಬಿದ್ದಿವೆ. ಇದರಿಂದ ರೈತರಿಗೆ ಕೃಷಿಯಲ್ಲಿನ ಸಂಶೋಧನೆ, ತಾಂತ್ರಿಕ ಸಲಹೆ ಮಾಹಿತಿಗಳು ಸಮರ್ಪಕವಾಗಿ ತಲುಪದಂತಾಗಿದೆ.

'ಪ್ರಧಾನಿ ಮೋದಿ ಬಿಜೆಪಿ ಸರ್ಕಾರದಿಂದ ದೇಶದಲ್ಲಿ ಐತಿಹಾಸಿಕ ಬದಲಾವಣೆ'

ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ, ರೈತರಿಗೆ ತಾಂತ್ರಿಕ ಸಲಹೆ ನೀಡುವುದು, ಪ್ರಾತ್ಯಕ್ಷಿಕೆ, ಕೀಟಬಾಧೆ ಬಗ್ಗೆ ಮಾಹಿತಿ, ಉತ್ಪನ್ನ ಹೆಚ್ಚಳಕ್ಕೆ ಮಾರ್ಗದರ್ಶನ, ನಷ್ಟತಗ್ಗಿಸಲು ಯಾವ ಬೆಳೆ ಸೂಕ್ತ, ಮಣ್ಣಿನ ಮಾದರಿ ಪರೀಕ್ಷೆ ಮಾಡಿ ರೈತರಿಗೆ ಮಾಹಿತಿ ನೀಡುವುದು, ಹವಾಮಾನ ಹಾಗೂ ಮಣ್ಣಿನ ಗುಣಕ್ಕೆ ತಕ್ಕಂತೆ ಯಾವ ಬೆಳೆ ಬೆಳೆಯಬೇಕು. ಹೀಗೆ ಪ್ರತಿ ಹಂತದಲ್ಲೂ ಕೃಷಿ ಇಲಾಖೆಯು ರೈತರೊಂದಿಗೆ ಇದ್ದು ಮಾಹಿತಿ ನೀಡಬೇಕಾಗುತ್ತದೆ. ಇದಲ್ಲದೇ ಬೆಳೆ ನಷ್ಟವಾದರೆ ಇದೇ ಇಲಾಖೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕಾಗುತ್ತದೆ. ಸ್ವಲ್ಪ ತಪ್ಪಿದರೂ ಸಮಸ್ಯೆ ಎದುರಾಗುತ್ತದೆ. ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಒಟ್ಟು 262 ಹುದ್ದೆಗಳು ಮಂಜೂರಾಗಿದ್ದು, 120 ಹುದ್ದೆ ಭರ್ತಿಯಾಗಿದ್ದು, 142 ಹುದ್ದೆಗಳು ಖಾಲಿ ಇವೆ.

142 ಹುದ್ದೆ ಖಾಲಿ

ಕೃಷಿ ಇಲಾಖೆಯಲ್ಲಿ ರೈತರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿರಬೇಕಾಗುತ್ತದೆ. ಆದರೆ ಜಿಲ್ಲೆಯಲ್ಲಿ ಈ ಎರಡು ಹುದ್ದೆಗಳಲ್ಲಿ ಬಹುತೇಕವು ಖಾಲಿಯಿವೆ. ಮಂಜೂರಾಗಿರುವ 45 ಕೃಷಿ ಅಧಿಕಾರಿ ಹುದ್ದೆಗಳ ಪೈಕಿ 17 ಹುದ್ದೆ ಖಾಲಿ ಉಳಿದಿವೆ. ಸಹಾಯಕ ಕೃಷಿ ಅಧಿಕಾರಿಯ 83 ಹುದ್ದೆಗಳಲ್ಲಿ ಬರೋಬ್ಬರಿ 62 ಹುದ್ದೆಗಳು ಖಾಲಿಯಿದ್ದು, ಕೇವಲ 21 ಹುದ್ದೆಗಳು ಭರ್ತಿಯಾಗಿವೆ. 13 ಸಹಾಯಕ ಕೃಷಿ ನಿರ್ದೇಶಕರ ಹುದ್ದೆಗಳಲ್ಲಿ 5 ಹುದ್ದೆ ಖಾಲಿಯಿವೆ. ಒಟ್ಟಾರೆ ತಾಂತ್ರಿಕ ವಿಭಾಗದ 146 ಹುದ್ದೆಗಳಲ್ಲಿ 61 ಹುದ್ದೆಗಳಷ್ಟೇ ಭರ್ತಿಯಾಗಿದ್ದು, 85 ಹುದ್ದೆಗಳು ಖಾಲಿ ಉಳಿದಿವೆ.

ಸಿಬ್ಬಂದಿಯೂ ಇಲ್ಲ

ಇನ್ನು ಕೃಷಿ ಇಲಾಖೆಯ ಕಚೇರಿಗಳಲ್ಲೂ ಸಿಬ್ಬಂದಿ ಕೊರತೆಯಿದೆ. ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ಮಂಜೂರಾಗಿರುವ 116 ಹುದ್ದೆಗಳಲ್ಲಿ 59 ಹುದ್ದೆ ಭರ್ತಿಯಾಗಿದ್ದು, 57 ಹುದ್ದೆಗಳು ಖಾಲಿಯಿವೆ. ಇದರಿಂದ ಕಚೇರಿಗಳಲ್ಲಿ ಸಮರ್ಪಕವಾಗಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಇರುವ ಸಿಬ್ಬಂದಿಯಲ್ಲೇ ಎಲ್ಲ ಕೆಲಸ-ಕಾರ್ಯಗಳನ್ನು ಮುಗಿಸುವ ಹೊರೆ ಬೀಳುತ್ತಿದೆ. ಕೃಷಿ ಪ್ರಧಾನ ಜಿಲ್ಲೆಯಲ್ಲೇ ಈ ಪರಿಸ್ಥಿತಿಯಿರುವುದು ವಿಪರ್ಯಾಸವಾಗಿದೆ.

ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಆದರೂ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ರೈತರಿಗೆ ತಾಂತ್ರಿಕ ಸಲಹೆ, ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಸೇರಿದಂತೆ ಎಲ್ಲ ಮಾಹಿತಿಯನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹುದ್ದೆ ಭರ್ತಿಯಾದರೆ ಅನುಕೂಲವಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್‌ ಅವರು ಹೇಳಿದ್ದಾರೆ.