Asianet Suvarna News Asianet Suvarna News

ಬಾದಾಮಿ: ಕೊರೋನಾಗೆ ಕೊಚ್ಚಿ ಹೋದ ಕುಂಚಿಕೊರವರ ಬದುಕು

ಶಿವಪುರ ಗ್ರಾಮದಲ್ಲಿರುವ ಪೊರಕೆ, ಕೂದಲು ಮಾರುವವರ ಸ್ಥಿತಿ ಹೇಳತೀರದು| 100 ಕುಟುಂಬಗಳ ಬದುಕು ಈಗ ಅತಂತ್ರ| ಕೊರೋನಾ ರೋಗದಿಂದ ಹೊರಗಡೆ ಹೋಗಲು ಅವಕಾಶ ಇಲ್ಲದೆ ಇಷ್ಟುದಿನ ಮನೆಯಲ್ಲಿ ಇದ್ದೇವೆ ಬದಕು ಸಾಗಿಸುವುದು ಕಷ್ಟ|

Kunchikorawara Community Faces problems due to Lockdown in Bagalkot
Author
Bengaluru, First Published May 25, 2020, 11:40 AM IST

ಶಂಕರ ಕುದರಿಮನಿ 

ಬಾದಾಮಿ(ಮೇ.25): ಕೊರೋನಾ ಸಾಕಷ್ಟು ಸಮಾಜದ ನಾನಾ ಸ್ತರದ ಜನರ ಮೇಲೆ ಪರಿಣಾಮ ಬೀರಿದೆ. ಅಂತಹ ಪರಿಣಾಮವನ್ನು ಬಡವ, ಬಲ್ಲಿದ ಎನ್ನದೇ ಎಲ್ಲರೂ ಅದರಿಂದಾದ ಸಂಕಷ್ಟವನ್ನು ಅನುಭವಿಸಿದ್ದಾರೆ. ಅದೇ ರೀತಿ ನಿತ್ಯ ಕೂಲಿ ಕೆಲಸ ಮಾಡುವವರು, ಪೊರಕೆ ಮಾರುವವರ ಬದುಕು ಕೂಡ ತೀರಾ ದುಸ್ತರವಾಗಿದೆ.

ಅದರಂತೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಪುರ ಗ್ರಾಮದಲ್ಲಿರುವ ಕುಂಚಿಕೊರವ ಸಮುದಾಯ ಕೂಡ ಕೊರೋನಾದಿಂದ ತತ್ತರಿಸಿ ಹೋಗಿದೆ. ಬಾದಾಮಿ ನಗರದ ಸವಿತಾ ಪೆಟ್ರೋಲ್‌ ಬಂಕ್‌ ಹತ್ತಿರವಿರುವ ಹಾಗೂ 100ಕ್ಕೂ ಅಧಿಕ ಕುಟುಂಬಗಳು ಇಲ್ಲಿದ್ದು ಕೊರೋನಾದಿಂದಾಗಿ ಯಾವ ಕಾಯಕವೂ ಇಲ್ಲದೆ, ಸರಿಯಾದ ಆಹಾರದ ಸಾಮಗ್ರಿಗಳೂ ಇಲ್ಲದೆ ಬದುಕುವಂತಹ ಪರಿಸ್ಥಿತಿ ಈಗ ಬಂದೊದಗಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶಿವಪುರ ಗ್ರಾಮದಲ್ಲಿರುವ ಕುಂಚಿಕೊರವ ಕುಟುಂಬಗಳು ತಾವು ಮಾರಾಟ ಮಾಡುತ್ತಿದ್ದ ಕೂದಲು, ಪೊರಕೆಯನ್ನು ಮಾರದಂತಹ ಪರಿಸ್ಥಿತಿ ಇದೆ. ನಿತ್ಯ ಇವುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿಯೇ ಅವರು ಜೀವನ ನಡೆಸಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಅವರ ಬದುಕಿನ ಭಾಗವಾಗಿದ್ದ ಈ ಎಲ್ಲ ಚಟುವಟಿಕೆಗಳು ಒಮ್ಮೆಲೆ ಸ್ತಬ್ಧಗೊಂಡಿವೆ. ನಿತ್ಯ ಚಿಕ್ಕ ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು ಊರೂರು ತಿರುಗುತ್ತ ಪೊರಕೆಗಳನ್ನು ಮಾರುವುದು, ಕೂದಲು ಸಂಗ್ರಹಿಸುವಿಕೆಯಲ್ಲಿ ತೊಡಗುತ್ತಿದ್ದ ಈ ಸಮುದಾಯದ ಜನಕ್ಕೆ ಕೊರೋನಾ ಬರೆ ಎಳೆದಿದೆ.

ಹುನಗುಂದ: ಕೈಯಲ್ಲಿ ನಯಾಪೈಸೆ ಇಲ್ಲ: 2 ಸಾವಿರ ಕಿಮೀ ನಡೆದು ಬಿಹಾರಕ್ಕೆ ಹೊರಟ ಕಾರ್ಮಿಕರು!

ನಾಯಕರು ಇತ್ತ ಗಮನ ಹರಿಸುತ್ತಾರೆಯೇ?:

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಜನರಿಗೆ ಕಿಟ್‌ ವಿತರಣೆ ಮಾಡುತ್ತಿರುವ ನಾನಾ ಸಂಘ ಸಂಸ್ಥೆಗಳು, ನಾಯಕರು, ಜನಪ್ರತಿನಿಧಿಗಳು ಇವರತ್ತಲೂ ಗಮನಹರಿಸಬೇಕು ಎಂಬುವುದು ಸಾರ್ವಜನಿಕರ ಆಗ್ರಹ. ಸರಿಯಾದ ಕೆಲಸವಿಲ್ಲದೆ ಈ ಸಮುದಾಯದ ಜನರ ಬದುಕು ಬೀದಿಗೆ ಬಂದಿರುವುದರಿಂದ ಅವರ ಬದುಕಿಗೊಂದು ಆಸರೆ ಬೇಕಿದೆ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನಹರಿಸಿದರೆ ನಮ್ಮ ನೋವು ಸ್ವಲ್ಪ ಪ್ರಮಾಣದಲ್ಲಿಯಾದರೂ ನಿವಾರಣೆ ಮಾಡಬಹುದು ಎಂದು ಅಳಲನ್ನು ತೋಡಿಕೊಳ್ಳುತ್ತಾರೆ ಅವರು.

ಲಾಕ್‌ಡೌನ್‌ ಘೋಷಣೆ ಆದಾಗಿನಿಂದ ಈ ಸಮುದಾಯದ ಜನರು ಹೊರಗೆ ಬಂದಿಲ್ಲ. ಮಾತ್ರವಲ್ಲ, ಅಧಿಕಾರಿಗಳಿಂದ ಯಾವ ಸ್ಪಂದನೆಯಾಗಲಿ, ಸೌಲಭ್ಯಗಳಾಗಲಿ ಇದುವರೆಗೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಕೆಲವರು ಬಂದು ಒಂದೆರಡು ದಿನದ ಮಟ್ಟಿಗೆ ತರಕಾರಿ ಮಾತ್ರ ನೀಡಿದ್ದಾರೆ. ಆದರೆ, ಎಷ್ಟುದಿನಗಳವರೆಗೆ ಅದನ್ನೇ ಬಳಸಲು ಸಾಧ್ಯ ಎಂಬ ಪ್ರಶ್ನೆ ಅವರದ್ದು.

ಇವರ ಕಸುಬು ಇಲ್ಲದೆ ಆರ್ಥಿಕವಾಗಿ ತೀರಾ ಝರ್ಜರಿತರಾಗಿದ್ದಾರೆ. ಜತೆಗೆ ಯಾವುದೆ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಲಾಕ್‌ಡೌನ್‌ ಸಡಿಲವಾಗಿರುವ ಇಂತಹ ಸಂದರ್ಭದಲ್ಲಿ ಅಗತ್ಯ ಕೆಲಸವನ್ನು ಅವರು ನೀಡಲಿ ಎಂಬ ಆಶಯ ಈ ಸಮುದಾಯದವರದ್ದು. ಆದರೆ, ಇದಕ್ಕೆ ಅಧಿಕಾರಿಗಳಿಂದ ಯಾವ ರೀತಿ ಸ್ಪಂದನೆ ಸಿಗುತ್ತದೆ ಎಂಬುವುದು ಕುತೂಹಲದ ವಿಚಾರ.

ತಾಲೂಕಿನ ವಿವಿಧ ಗ್ರಾಮಗಳಿಗೆ ಕಾಲ್ನಡಿಗೆಯ ಮೂಲಕ ಸಂಚರಿಸಿ ಮನೆ-ಮನೆಗೆ ತರಳಿ ಕೂದಲನ್ನು ಸಂಗ್ರಹ ಮಾಡುತ್ತಿದ್ದೆವು. ಅವುಗಳನ್ನು ಕೊಪ್ಪಳದಿಂದ ಏಜೆಂಟರು ಬಂದು ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದ ನಮ್ಮ ಉಪಜೀವನ ನಡೆಯುತ್ತಿತ್ತು. ಕೊರೋನಾ ರೋಗದಿಂದ ಹೊರಗಡೆ ಹೋಗಲು ಅವಕಾಶ ಇಲ್ಲದೆ ಇಷ್ಟುದಿನ ಮನೆಯಲ್ಲಿ ಇದ್ದೇವೆ ಬದಕು ಸಾಗಿಸುವುದು ಕಷ್ಟವಾಗುತ್ತಿದೆ ಎಂದು ದ್ಯಾಮವ್ವ ಪೂಜಾರ, ಮಲ್ಲವ್ವ ಪೂಜಾರ, ಶಿವಪುರ ಅವರು ಹೇಳಿದ್ದಾರೆ. 

ಮೊದಲಿನಿಂದಲೂ ನಮ್ಮ ಮೂಲ ಕಸುಬು ನಗರದಲ್ಲಿರುವ ಹಂದಿಯನ್ನು ಹಿಡಿಯುವುದಾಗಿತ್ತು. ನಂತರ ಅವುಗಳನ್ನು ಮಂಗಳೂರು, ಗೋವಾ, ಬೆಂಗಳೂರು, ಹಾಸನಗಳಿಗೆ ಸಾಗಾಣಿಕೆ ಮಾಡುವುದರ ಮೂಲಕ ನಮ್ಮ ಜೀವನ ನಡೆಸುತ್ತಿದ್ದೆವು. ಆದರೆ, ಲಾಕ್‌ಡೌನ್‌ ಆದಮೇಲೆ ಹೊರಗಡೆ ಹೋಗಲು ಸಾಧ್ಯವಾಗದ ಕಾರಣ, ಕೆಲಸ ಇಲ್ಲದಂತಾಗಿದೆ. ಈಗ ನಮ್ಮ ಕುಟುಂಬವನ್ನು ಸಾಗಿಸುವುದು ಬಹಳಷ್ಟು ಕಷ್ಟವಾಗುತ್ತದೆ ಎಂದು ಬಾಗಲಕೋಟೆಯ  ಅಶೋಕ ಪೂಜಾರ, ಶೇಕರ್‌ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios