ಕೊಪ್ಪಳ ಜಿಲ್ಲಾಸ್ಪತ್ರೆ ಪೂರ್ತಿ ICU ವಾರ್ಡಾಗಿ ಪರಿವರ್ತನೆ
* ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದಾದ ಸಮಸ್ಯೆಗನುಗುಣವಾಗಿ ತಯಾರಿ
* ಆಕ್ಸಿಜನ್ ಪೂರೈಕೆಗನುಗುಣವಾಗಿ ಆಕ್ಸಿಜನ್ ಬೆಡ್‌ಗಳು: ಡಿಸಿ ವಿಕಾಸ್
* ಕೊಪ್ಪಳ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೂ ಮೃತಪಟ್ಟಿಲ್ಲ
ಕೊಪ್ಪಳ(ಮೇ.15): ಕೋವಿಡ್ ಮಾಹಾಮಾರಿ ಹೆಚ್ಚಳವಾಗುತ್ತಲೇ ಇರುವುದರಿಂದ ರೋಗಿಗಳಿಗೆ ಸೌಲಭ್ಯಗಳನ್ನು ಹೆಚ್ಚಿಸಬೇಕಾಗಿದೆ. ಹೀಗಾಗಿ, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿನ ಕೋವಿಡ್ ಬೆಡ್‌ಗಳನ್ನು ಸಂಪೂರ್ಣ ಐಸಿಯು ಬೆಡ್‌ಗಳನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ಡಿಸಿ ವಿಕಾಸ್ ಕಿಶೋರ್ ಹೇಳಿದ್ದಾರೆ.
ನಗರದ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗವಿಮಠ ಹಾಗೂ ಮುನಿರಾಬಾದ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಆಕ್ಸಿಜನ್ ಬೆಡ್‌ಗಳನ್ನು ಆರಂಭಿಸಲಾಗಿದೆ. ಗವಿಮಠದ ಆಸ್ಪತ್ರೆಯಲ್ಲಿ ರೋಗಿಗಲಿಗೆ ನೇರವಾಗಿ ಪ್ರವೇಶವಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರ ಲಭ್ಯತೆ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಪೂರ್ಣ ಐಸಿಯು ಆಸ್ಪತ್ರೆಯನ್ನಾಗಿಸಿ, ಸೋಂಕಿತರು ಸಾಮಾನ್ಯ ಸ್ಥಿತಿಗೆ ಬಂದು, ಇನ್ನೆರಡು ದಿನ ಆಕ್ಸಿಜನ್ ಅವಶ್ಯಕತೆಯಿದೆ ಎನ್ನುವಂತವರನ್ನು ಗವಿಮಠ ಆಸ್ಪತ್ರೆಗೆ ವರ್ಗಾಯಿಸುತ್ತಿದ್ದೇವೆ ಎಂದರು.
"
ಜಿಲ್ಲೆಯಲ್ಲಿ ನಿತ್ಯ 400ರಿಂದ 500 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಮಧ್ಯೆಯೂ ಶೇ. 50ರಷ್ಟುಜನರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ತೆರಳುತ್ತಿದ್ದಾರೆ. ಶೇ. 5ರಿಂದ 10ರಷ್ಟುಸೋಂಕಿತರು ಮರಣ ಹೊಂದುತ್ತಿದ್ದಾರೆ. ಶೇ. 5ರಿಂದ 10ರಷ್ಟುಬೆಡ್‌ಗಳು ಖಾಲಿ ತೋರಿಸುತ್ತಿದೆ. ಬಾರ್‌ಕೋಡ್‌ನ ಆಧಾರದಲ್ಲಿ ಜಿಲ್ಲೆಯಲ್ಲಿನ ಆಸ್ಪತ್ರೆಗಳ ಬೆಡ್‌ಗಳ ಲಭ್ಯತೆ ಭರ್ತಿಯ ಕುರಿತು ಮಾಹಿತಿ ದೊರೆಯಲಿದೆ ಎಂದರು.
ಗವಿಮಠದಿಂದ ಕೋವಿಡ್ ಸೋಂಕಿತ ಮಹಿಳೆ ಅಂತ್ಯ ಸಂಸ್ಕಾರ
ಜಿಲ್ಲೆಯಲ್ಲಿ 100-150 ಬೆಡ್‌ಗಳು ಲಭ್ಯವಿದ್ದು, ಆದರೆ ಜಿಲ್ಲೆಗೆ ಹಂಚಿಕೆಯಾದ ಆಕ್ಸಿಜನ್ ಪ್ರಮಾಣದ ಮೇಲೆ ನಾವು ಬೆಡ್‌ಗಳ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಹೆಚ್ಚು ಬೆಡ್‌ಗಳನ್ನು ವ್ಯವಸ್ಥೆ ಮಾಡಿದರೆ ನಮಗೆ ಆಕ್ಸಿಜನ್ ಕೊರತೆ ಕಾಡಲಿದೆ. ಕೆಕೆಆರ್‌ಡಿನಿಂದ 3 ಆಕ್ಸಿಜನ್ ಜನರೇಷನ್ ಪ್ಲ್ಯಾಂಟ್ ಅನುಮತಿ ಸಿಕ್ಕಿದೆ. ಕೇಂದ್ರ ಸರ್ಕಾರದಿಂದಲೂ ಒಂದು ಆಕ್ಸಿಜನ್ ಪ್ಲ್ಯಾಂಟ್ ಅನುಮತಿ ಸಿಕ್ಕಿದೆ. ಪ್ಲ್ಯಾಂಟ್ ಸಿದ್ಧವಾದಾಗ ನಾವು ಹೆಚ್ಚಿನ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶವಾಗಲಿದೆ. ಜಿಲ್ಲೆಗೆ 11 ಕೆ.ಎಲ್. ಸಾಮರ್ಥ್ಯದಷ್ಟುಆಕ್ಸಿಜನ್ ಪೂರೈಕೆಯ ಪ್ರಮಾಣ ಹಂಚಿಕೆಯಾಗಿದ್ದು, ಅಷ್ಟರೊಳಗೆ ಬೆಡ್‌ಗಳ ವ್ಯವಸ್ಥೆ ನಿರ್ವಹಿಸಲು ರಾಜ್ಯದಿಂದ ಸೂಚನೆಯಿದೆ ಎಂದರು.
2ನೇ ಅಲೆಗೆ 116 ಜನರ ಸಾವು:
ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ 116 ಜನರು ಸೋಂಕಿನಿಂದ ಬಳಲಿ ಮೃತಪಟ್ಟಿದ್ದಾರೆ. ಕುಷ್ಟಗಿ-10, ಯಲಬುರ್ಗಾ-16, ಕೊಪ್ಪಳ 39, ಗಂಗಾವತಿಯಲ್ಲಿ 51 ಜನರು ಮೃತಪಟ್ಟಿದ್ದಾರೆ. ಈ ಎಲ್ಲ ಸಾವುಗಳು ಜಿಲ್ಲಾಸ್ಪತ್ರೆಯಲ್ಲಿಯೇ ಸಂಭವಿಸುತ್ತಿವೆ. ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿತರು ವೆಂಟಿಲೇಟರ್ ಸೇರಿ ಇತರೆ ಸೌಲಭ್ಯ ಇಲ್ಲವೆಂದಾಗ ಅವರು ಸರ್ಕಾರಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಅಲ್ಲದೇ, ಜಿಲ್ಲೆಯಲ್ಲೂ ಸೋಂಕಿತರು ಕೊನೆಯ ಹಂತಕ್ಕೆ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದ ಸಾವು ನೋವು ಸಂಭವಿಸುತ್ತಿವೆ. ಮೇ 13ರಂದು ಶೇ. 3ರಷ್ಟುಸಾವು ಸಂಭವಿಸಿವೆ. ಸೋಂಕಿನ ಲಕ್ಷಣ ಕಂಡಾಕ್ಷಣ ಆಸ್ಪತ್ರೆಗೆ ಆಗಮಿಸುವಂತೆ ನಾವು ಹೇಳುತ್ತಿದ್ದೇವೆ ಎಂದರು. ರಾಜ್ಯದಲ್ಲಿ ಹೆಚ್ಚು ಆಕ್ಸಿಜನ್ ಉತ್ಪಾದನೆಯಾಗುತ್ತಿಲ್ಲ. ಉತ್ಪಾದನೆಗೆ ತಕ್ಕಂತೆ ಆಕ್ಸಿಜನ್ ಪೂರೈಕೆಯಾಗುತ್ತಿದೆ.
ಕೊಪ್ಪಳ: ಕೋವಿಡ್ ಆಸ್ಪತ್ರೆ ಕಸಗೂಡಿಸಿದ ಗವಿಸಿದ್ಧೇಶ್ವರ ಶ್ರೀ
ರುಕ್ಮಿಣಿ ಗ್ಯಾಸ್ ಆಕ್ಸಿಜನ್:
ಜಿಲ್ಲೆಗೆ ಪೂರೈಕೆಯಾಗುವ ಆಕ್ಸಿಜನ್ ಸ್ಥಿತಿಗತಿಯ ಕುರಿತು ಅವಲೋಕಿಸಿ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಜಿಲ್ಲೆಯಲ್ಲಿ 244220 ಜನರಿಗೆ ಲಸಿಕೆ ಹಾಕಲಾಗಿದೆ. ಸದ್ಯ ಕೋವಿಶೀಲ್ಡ್ 8040, ಕೋ ವ್ಯಾಕ್ಸಿನ್ 3360 ಇದೆ. 18ರಿಂದ 44 ವರ್ಷದ ಜನರಿಗೆ ಲಸಿಕೆ ಕೊಡುವುದನ್ನು ಸ್ಥಗಿತ ಮಾಡಿದ್ದೇವೆ. 40 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೂ ಮೃತಪಟ್ಟಿಲ್ಲ. ಬೇರೆ ಬೇರೆ ಕಾರಣಕ್ಕೆ ಮೃತಪಟ್ಟಿದಾರೆ ಎಂದರು.
ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಮುಂದೆ ಬಂದರೆ ನಾವು ಅವಕಾಶ ಕೊಡಲಿದ್ದೇವೆ. ಒಂದು ವೇಳೆ ಬರದಿದ್ದರೆ ನಿಯಮಾನುಸಾರ ನಾವೇ ಮಾಡಲಿದ್ದೇವೆ. ಜಿಲ್ಲೆಯಲ್ಲಿ ಕೆಲವು ಎನ್‌ಜಿಒಗಳೂ ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರದ ಹೊಣೆಯನ್ನು ಸಂಪೂರ್ಣ ನಿರ್ವಹಿಸುವ ಕುರಿತು ಕೇಳಿಕೊಂಡಿದ್ದರು. ನಾವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕಿತ ವ್ಯಕ್ತಿಗಳ ಮನೆ ಪಕ್ಕದ ಜನರು ಅವರನ್ನು ನೋಡುವ ದೃಷ್ಟಿಕೋನ ಬದಲಾಗಲಿ ಎಂದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona