ಪ್ರಧಾನಿ ಮೋದಿ ಕೊಟ್ಟ ಮಾತು ಉಳಿಸಿಕೊಳ್ತಾರಾ?

ನೀರಾವರಿ ಯೋಜನೆಗೆ ಕೇಂದ್ರದಿಂದ ಬರುವುದೇ ಸಾವಿರ ಕೋಟಿ ರೂ.?| ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಕೊಟ್ಟಿದ್ದ ಭರವಸೆ| ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಕಳುಹಿಸಬೇಕು| ಕೊಪ್ಪಳ ಏತ ನೀರಾವರಿ ಯೋಜನೆ ಮಹತ್ವಾಕಾಂಕ್ಷಿ ಯೋಜನೆ| ಸಮರ್ಪಕವಾಗಿ ಜಾರಿ ಮಾಡುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಲೇ ಇಲ್ಲ| 

Koppal District Farmers Faces Problems

ಕೊಪ್ಪಳ: (ಸೆ.23) ಲೋಕಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಗಂಗಾವತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು ತುಂಗಭದ್ರಾ ಜಲಾಶಯ ಸೇರಿದಂತೆ ಈ ಭಾಗದ ನೀರಾವರಿ ಯೋಜನೆಗಳಿಗಾಗಿ 1 ಸಾವಿರ ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಈಗ ಈ ಭರವಸೆಗೆ ರೆಕ್ಕೆಪುಕ್ಕ ಬಂದಿವೆ.

ಪದೇ ಪದೇ ಬರಕ್ಕೆ ತುತ್ತಾಗುತ್ತಿರುವ ಹಾಗೂ ಜಲಾಶಯದಲ್ಲಿ ನೀರು ಸಂಗ್ರಹವಾದರೂ ಎರಡನೇ ಬೆಳೆಗೆ ನೀರು ಬರದಿರುವುದು ಸೇರಿದಂತೆ ಮೊದಲಾದ ಸಮಸ್ಯೆಗಳಿವೆ. ಇದೆಲ್ಲಕ್ಕಿಂತ ಮಿಗಿಲಾಗಿ ಕೆಲವೊಂದು ನೀರಾವರಿ ಯೋಜನೆಗಳು ಕಳೆದ 10 ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ ಸಾಗಿವೆ. ಹೀಗಾಗಿ ನೀರಾವರಿಗೆ ವಿಫುಲ ಅವಕಾಶ ಇದ್ದು, 1 ಸಾವಿರ ಕೋಟಿ ರೂ. ನೀಡುವುದಾಗಿ ಅಂದು ತಮ್ಮ ಭಾಷಣದಲ್ಲಿ ಭರವಸೆ ನೀಡಿದ್ದರು. 

ಈಗ ಅಂದುಕೊಂಡಂತೆ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯೇ ಗೆದ್ದಿದ್ದು, ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ, ಈ ಭರವಸೆಗೆ ಇಂಬು ಬಂದಿದೆ.

ಏನೇನು ಮಾಡಬಹುದು?:

ಜಿಲ್ಲೆಯ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾವಿರ ಕೋಟಿ ರೂಪಾಯಿ ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ, ಕೇಂದ್ರ ಸರ್ಕಾರ ವಿಶೇಷ ಅನುದಾನವನ್ನು ನೀಡಿದರೆ ಮಾತ್ರ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಾಗುತ್ತದೆ. ಹೂಳು ತುಂಬಿರುವ ತುಂಗಭದ್ರಾ ಜಲಾಶಯದಿಂದ ನೀರು ಸಂಗ್ರಹಣಾ ಸಾಮರ್ಥ್ಯ ಸಹಜವಾಗಿಯೇ ಕುಸಿದಿದೆ. ಹೀಗಾಗಿ, ಹೂಳನ್ನಾದರೂ ತೆಗೆಯಬೇಕು ಇಲ್ಲವೇ ಪರ್ಯಾಯ ಸಮಾನಾಂತರ ಜಲಾಶಯವನ್ನಾದರೂ ನಿರ್ಮಾಣ ಮಾಡಬೇಕು. ಇದರಿಂದ ಮಳೆಗಾಲದಲ್ಲಿ ಅನಾಯಾಸವಾಗಿ ನೀರು ಹರಿದುಹೋಗುವುದನ್ನು ತಡೆದು, ಸಂಗ್ರಹಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರತಿ ವರ್ಷ ಸರಾಸರಿ ಸುಮಾರು 90 ಟಿಎಂಸಿ ನೀರು ಹರಿದು ಹೋಗುತ್ತದೆ. ಇಂಥ ಸ್ಥಿತಿಯಲ್ಲಿ ಇದನ್ನು ಸದ್ಬಳಕೆ ಮಾಡಿಕೊಂಡರೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯೇ ನೀಗುತ್ತದೆ ಮತ್ತು ಎರಡನೇ ಬೆಳೆಯೂ ಬರುತ್ತದೆ. ಈಗಲೂ ಎಡದಂಡೆ ನಾಲೆ ಪದೇ ಪದೇ ಒಡೆಯುತ್ತಲೇ ಇರುತ್ತದೆ. ಇದರಿಂದ ಬಹುದೊಡ್ಡ ಸಮಸ್ಯೆಯಾಗುತ್ತದೆ. ಸುಮಾರು 75 ವರ್ಷಗಳಾಗುತ್ತಾ ಬಂದಿರುವುದರಿಂದ ಅದನ್ನು ಪುನರ್‌ ನಿರ್ಮಾಣ ಮಾಡುವ ಅಗತ್ಯವಿದೆ ಎನ್ನುವ ಕೂಗು ಕೇಳಿ ಬರುತ್ತಿದೆ. ಇಲ್ಲವೇ ನೂತನ ತಂತ್ರಜ್ಞಾನದ ಮೂಲಕ ಶಾಶ್ವತ ದುರಸ್ತಿ ಕಾರ್ಯವನ್ನು ಮಾಡಬೇಕಾಗಿದೆ. ಈ ಹಿಂದೆ ಈ ಪ್ರಯತ್ನ ನಡೆಯಿತಾದರೂ ಪರಿಪೂರ್ಣವಾಗಿಲ್ಲ.

ಲೋಕಾರ್ಪಣೆಗೊಂಡರೂ ಕೊಪ್ಪಳ ಭಾಗಕ್ಕೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ನೀರು ಬಂದಿಲ್ಲ. ಏತ ನೀರಾವರಿ ಯೋಜನೆ ಜಾರಿಯಾಗಿದ್ದು, ಕೇವಲ ಕಾಲುವೆ ಮತ್ತು ಪೈಪ್‌ಲೈನ್‌ ಮಾಡಲು ಆಗಿಲ್ಲ. ಹೀಗಾಗಿ, ಲಕ್ಷಾಂತರ ಎಕರೆಗೆ ನೀರುಣಿಸುವ ಯೋಜನೆ ಅನುಷ್ಠಾನವಾಗುತ್ತಿಲ್ಲ.

ಕೊಪ್ಪಳ ಏತ ನೀರಾವರಿ ಯೋಜನೆ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದನ್ನು ಸಮರ್ಪಕವಾಗಿ ಜಾರಿ ಮಾಡುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಲೇ ಇಲ್ಲ. ಕಾಂಗ್ರೆಸ್‌ನವರು ಕೃಷ್ಣೆಯ ಕಡೆಗೆ ನಮ್ಮ ನಡಿಗೆ ಎಂದು ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದರೂ ಅದನ್ನು ಪೂರ್ಣಗೊಳಿಸಲಿಲ್ಲ. ಈಗ ಬಿಜೆಪಿ ಸರ್ಕಾರದಲ್ಲಿಯೂ ಅದು ನಿರೀಕ್ಷಿತ ಪ್ರಮಾಣದಲ್ಲಿ ಜಾರಿಯಾಗುವ ಯಾವುದೇ ಲಕ್ಷಣಗಳು ಕಾಣುತ್ತಲೇ ಇಲ್ಲ. ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಬರಪೀಡಿತ ಪ್ರದೇಶಗಳಿಗೆ ನೀರುಣಿಸುವ ಯೋಜನೆ ಇದ್ದು, ಇದಕ್ಕೂ ಹಣಕಾಸಿನ ನೆರವಿನ ಅಗತ್ಯವಿದೆ.

ಕೊಟ್ಟಮಾತು ಉಳಿಸಿಕೊಳ್ಳುವರೇ?:

ಪ್ರಧಾನಿ ನರೇಂದ್ರ ಮೋದಿ ಕೊಟ್ಟಮಾತಿನಂತೆ 1 ಸಾವಿರ ರೂ. ಕೋಟಿಯನ್ನು ಈ ಭಾಗಕ್ಕೆ ನೀಡುವ ಮೂಲಕ ತಮ್ಮ ಉಳಿಸಿಕೊಳ್ಳುವರೇ ಎನ್ನುವುದನ್ನು ಕಾದು ನೋಡಬೇಕು. ಇದಕ್ಕಾಗಿ ಅವರ ಮನವೊಲಿಸುವ ಪ್ರಯತ್ನವನ್ನು ಜಿಲ್ಲೆಯ ನಾಯಕರು ಮಾಡುವರೇ? ರಾಜ್ಯ ನಾಯಕರು ಅವರ ಭರವಸೆಯನ್ನು ಪ್ರಧಾನಿ ಮೋದಿ ಗಮನಕ್ಕೆ ತರುವರೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಈ ಬಗ್ಗೆ ಮಾತನಾಡಿದ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು, ಈಗ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಇರುವ ಬಹುದೊಡ್ಡ ಅವಕಾಶ ನಮಗೆ ಇದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಇರುವುದರಿಂದ ಅಡೆತಡೆಗಳು ತೀರಾ ಕಡಿಮೆ. ಹೀಗಾಗಿ, ಕೊಪ್ಪಳ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವ ಕಾರ್ಯ ಆಗಬೇಕಾಗಿದೆ ಎಂದರು. 

ಪ್ರಧಾನಿ ನರೇಂದ್ರ ಮೋದಿ ಅವರು 1 ಸಾವಿರ ಕೋಟಿ ರೂ. ಕೊಡುವ ಭರವಸೆ ನೀಡಿದ್ದು ನಿಜ. ಆದರೆ, ಕೇವಲ ಸಾವಿರ ಕೋಟಿ ರೂಪಾಯಿ ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ, ನವಲಿ ಜಲಾಶಯ ನಿರ್ಮಾಣ ಸೇರಿದಂತೆ ನೀರಾವರಿ ಯೋಜನೆಗಳಿಗೆ ಬೇಕಾಗುವ 6665 ಕೋಟಿ ರೂ. ನೀಡುವಂತೆ ಈ ಭಾಗದ ಸಂಸದರ ನೇತೃತ್ವದಲ್ಲಿ ನಿಯೋಗ ತೆರಳುವ ಸಿದ್ಧತೆ ನಡೆದಿದೆ ಎಂದು ರೈತಮೋರ್ಚಾ ಬಿಜೆಪಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಅವರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios