* ಕೋಲಾರದ ಬೆಮೆಲ್ ಕಾರ್ಖಾನೆ ಖಾಸಗಿಯವರಿಗೆ ಹಸ್ತಾಂತರ ಇಲ್ಲ* ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಸ್ಪಷ್ಟನೆ* ಕೈಗಾರಿಕಾ ಉದ್ದೇಶಕ್ಕೆ ಮೂರುವರೆ ಸಾವಿರ  ಎಕರೆ ಜಮೀನು ಬಳಕೆ* ಈ ಸಂಬಂಧ ಮಾ.10ರಂದು ದೆಹಲಿಯಲ್ಲಿ ಕೇಂದ್ರ ಗಣಿ ಸಚಿವರ ಜತೆ ಮಾತುಕತೆ

ಬೆಂಗಳೂರು, (ಮಾ.8): ಕೋಲಾರದಲ್ಲಿರುವ ಬಿಇಎಂಎಲ್ (Kolar BEML) ಕಾರ್ಖಾನೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವುದಿಲ್ಲ. ಇದು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು ಈ ಬಗ್ಗೆ ವದಂತಿಗಳಿಗೆ ಕಿವಿಗೊಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ (Murugesh Nirani) ಮನವಿ ಮಾಡಿದರು. 

 ಜೆಡಿಎಸ್‍ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ವಿಧಾನಪರಿಷತ್‍ನಲ್ಲಿ ಮಂಗಳವಾರ ಉತ್ತರಿಸಿದ ಸಚಿವ ನಿರಾಣಿಯವರು, "ಬೆಮೆಲ್ ಕಾರ್ಖಾನೆ 16 ಸಾವಿರ ಎಕರೆ ಜಾಗದಲ್ಲಿ 12,500 ಎಕರೆ ಖಾತೆ ಆಗಿದೆ. 3500 ಎಕರೆಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ರಾಜ್ಯ ಸರ್ಕಾರಕ್ಕೆ ಬಿಟ್ಟು ಕೊಡಲು ನಿರ್ಧರಿಸಿದೆ. ಮತ್ತೊಮ್ಮೆ ಆ ಭಾಗದಲ್ಲಿ ಡ್ರೋಣ್ ಸರ್ವೆ ನಡೆಸಲಾಗಿದ್ದು, ಎರಡು ದಿನಗಳಲ್ಲಿ ಕೇಂದ್ರ ಸಚಿವರಿಗೆ ವರದಿಯನ್ನು ಸಲ್ಲಿಸಲಾಗುತ್ತದೆ. ಇದೇ ಮಾರ್ಚ್‌ 10 ರಂದು ದೆಹಲಿಗೆ ತೆರಳಿ ಗಣಿ ಸಚಿವರ ಜತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು," ಎಂದು ಹೇಳಿದರು.

BEML Protest: ಕೆಜಿಎಫ್ ಬೆಮೆಲ್‌ ಖಾಸಗೀಕರಣಕ್ಕೆ ಕಾರ್ಮಿಕರ ವಿರೋಧ, ಗೇಟ್ ಮುಚ್ಚಿ ಪ್ರೊಟೆಸ್ಟ್

"ಬಿಇಎಂಎಲ್‍ನಲ್ಲಿ 1149 ಎಕರೆ ಭೂಮಿ ಇದೆ. ಈ ಮೊದಲು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಕಾರ 979 ಎಕರೆಯನ್ನು ಬೆಮೆಲ್‍ಗೆ ನೀಡಿದ್ದು, ಅದು ಬಳಕೆಯಾಗದೆ ತಟಸ್ಥವಾಗಿರುವುದರಿಂದ ಹಿಂಪಡೆದು ಅಲ್ಲಿ ಖಾಸಗಿ ಕೈಗಾರಿಕೆಗಳ ಸ್ಥಾಪೆನೆಗೆ ಅವಕಾಶ ಮಾಡಿಕೊಡಲಾಗುವುದು. ಕೈಗಾರಿಕಾ ನಿವೇಶನಗಳ ಹಂಚಿಕೆಯಲ್ಲಿ ಎಸ್ಸಿ-ಎಸ್ಟಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡಲಾಗುವುದು," ಎಂದು ನಿರಾಣಿ ಭರವಸೆ ನೀಡಿದರು.

"ಕೇಂದ್ರದ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಖಾನೆಯನ್ನು ಮುಚ್ಚದೆ ಮುಂದುವರಿಸಿಕೊಂಡು ಹೋಗಲು ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವುದರಿಂದ ಕೇಂದ್ರ ತೆಗೆದುಕೊಳ್ಳುವ ನಿಯಮಗಳಿಗೆ ಬದ್ಧರಾಗಬೇಕಾಗುತ್ತದೆ," ಎಂದು ಅವರು ಹೇಳಿದರು.

"ಕಾರ್ಖಾನೆಯಲ್ಲಿರುವ ಹೆಚ್ಚುವರಿ ಭೂಮಿಯನ್ನು ಹಿಂಪಡೆಯಲಾಗುತ್ತದೆ. ಕೇಂದ್ರ ಸರ್ಕಾರದ ಸಂಸದೀಯ ಆರ್ಥಿಕ ಸಮಿತಿ 2016ರಲ್ಲಿ ನಿರ್ಣಯ ತೆಗೆದುಕೊಂಡು ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಿಂದ ಬಂಡವಾಳ ಹಿಂತೆಗೆತಕ್ಕೆ ತೀರ್ಮಾನಿಸಿದೆ. ಹೀಗಾಗಿ ಹಂತ ಹಂತವಾಗಿ ಸರ್ಕಾರಿ ಬಂಡವಾಳವನ್ನು ವಾಪಸ್ ತೆಗೆಯಲಾಗುವುದು. ಬೆಮೆಲ್‍ನಲ್ಲಿ ಪ್ರಸ್ತುತ ಶೇ.47ರಷ್ಟು ಬಂಡವಾಳ ಇದೆ. ಅದನ್ನು ಸದ್ಯಕ್ಕೆ ಮುಂದುವರಿಸಲಾಗುತ್ತದೆ ಎಂದು ತಿಳಿಸಿದರು.

"ಕಾರ್ಖಾನೆಗಳ ಬಳಿಯೇ ಜನವಸತಿ ಪ್ರದೇಶಗಳಿಗೆ ಉಪನಗರಗಳನ್ನು ನಿರ್ಮಿಸಲು ಸರ್ಕಾರ ಅನುಕೂಲ ಕಲ್ಪಿಸಿಕೊಡುತ್ತಿದೆ. ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಶೇ.85ರಷ್ಟನ್ನು ಕೈಗಾರಿಕೆಗಳಿಗೆ, ಉಳಿದ ಪ್ರದೇಶದಲ್ಲಿ ಜನ ವಸತಿ ನಿರ್ಮಿಸಿ ವಾಕ್ ಟು ವರ್ಕ್ ಕಲ್ಪನೆಯನ್ನು ಜಾರಿಗೆ ತರಲಾಗುವುದು ಎಂದರು.

ಬಿಡ್ ಆಹ್ವಾನಿಸಲಾಗಿತ್ತು: ಕರ್ನಾಟಕದ ಕೆಜಿಎಫ್‌ನಲ್ಲಿ 1964ರಲ್ಲಿ ಸ್ಥಾಪನೆಯಾದ ಹಾಗೂ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮೆಲ್‌ (ಭಾರತ್‌ ಅಥ್‌ರ್‍ ಮೂವ​ರ್‍ಸ್) ಕಂಪನಿಯ ಸಂಪೂರ್ಣ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿತ್ತು. ಈ ಕಂಪನಿಯಲ್ಲಿನ ಶೇ.26ರಷ್ಟುಷೇರುಗಳನ್ನು ಮಾರಾಟ ಮಾಡಲು ಹಾಗೂ ಕಂಪನಿಯ ಆಡಳಿತಾತ್ಮಕ ನಿಯಂತ್ರಣವನ್ನೂ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಪ್ರಾಥಮಿಕ ಬಿಡ್‌ಗಳನ್ನು ಆಹ್ವಾನಿಸಿತ್ತು.

ಬೆಮೆಲ್‌ನಲ್ಲಿ ಸದ್ಯ ಸರ್ಕಾರದ ಶೇ.54.03ರಷ್ಟುಷೇರುಗಳಿದ್ದು, ಸರ್ಕಾರವೇ ಮಾಲೀಕತ್ವ ಗಳಿಸಿದೆ. ಇದೀಗ ಶೇ.26ರಷ್ಟುಷೇರು ಮಾರಾಟವಾದರೆ ಸರ್ಕಾರದ ಪಾಲು ಶೇ.50ಕ್ಕಿಂತ ಕೆಳಕ್ಕೆ ಇಳಿಯಲಿದೆ. ಈ ಷೇರು ವಿಕ್ರಯದಿಂದ ಸರ್ಕಾರದ ಬೊಕ್ಕಸಕ್ಕೆ 1000 ಕೋಟಿ ರು. ಆದಾಯ ಹರಿದು ಬರುವ ನಿರೀಕ್ಷೆ ಇದೆ. ಶುಕ್ರವಾರ ಷೇರುಪೇಟೆಯಲ್ಲಿ ಬೆಮೆಲ್‌ ಕಂಪನಿಯ ಪ್ರತಿ ಷೇರು 974.25 ರು.ಗೆ ವಹಿವಾಟು ಮುಕ್ತಾಯಗೊಳಿಸಿದೆ.

ಷೇರು ವಿಕ್ರಯ ಎರಡು ಹಂತಗಳಲ್ಲಿ ನಡೆಯಲಿದೆ. ಮಾ.1ರೊಳಗೆ ಕಂಪನಿಯ ಷೇರು ಖರೀದಿಸಲು ಬಯಸುವವರು ಆಸಕ್ತಿ ವ್ಯಕ್ತಪಡಿಸುವಿಕೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್‌ ಕಾಂತಾ ಪಾಂಡೆ ಅವರು ಟ್ವೀಟ್‌ ಮಾಡಿದ್ದಾರೆ. ಷೇರು ವಿಕ್ರಯಕ್ಕಾಗಿ ಕೇಂದ್ರ ಸರ್ಕಾರ ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್‌ ಸಂಸ್ಥೆಯನ್ನು ಸಲಹೆಗಾರ ಸಂಸ್ಥೆಯನ್ನಾಗಿ ನೇಮಕ ಮಾಡಿತ್ತು. ರಕ್ಷಣೆ, ರೈಲು, ವಿದ್ಯುತ್‌, ಗಣಿಗಾರಿಕೆ ಹಾಗೂ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ ಬೆಮೆಲ್‌ ಕಂಪನಿ ತೊಡಗಿಸಿಕೊಂಡಿತ್ತು.