ಶಿವಮೊಗ್ಗ (ಆ.12):  ಮಳೆಯಿಲ್ಲದೆ ಜುಲೈ ಮಾಸಾಂತ್ಯದವರೆಗೂ ಬರಗಾಲದ ಛಾಯೆಯಲ್ಲಿ ತತ್ತರಿಸಿದ ಮಲೆನಾಡು ಇದೀಗ ಒಂದು ವಾರದಲ್ಲಿ ಅತಿವೃಷ್ಟಿಯತ್ತ ವಾಲಿದೆ. ಒಂದು ವಾರ ಕಾಲ ಬಿದ್ದ ಮಳೆ ಈ ವೇಳೆಯಲ್ಲಿ ಬೀಳುತ್ತಿದ್ದ ಮಳೆ ಅಂಕಿ ಅಂಶಗಳನ್ನೆಲ್ಲಾ ಏರುಪೇರು ಮಾಡಿದೆ.

ಸಾಮಾನ್ಯವಾಗಿ ಜೂನ್‌ ಮೊದಲ ವಾರದಿಂದ ಆರಂಭಗೊಳ್ಳುವ ಮಳೆ ಜುಲೈ ತಿಂಗಳಲ್ಲಿ ಸಾಕೋ ಸಾಕು ಎನ್ನುವಷ್ಟುಸುರಿದು ಮಲೆನಾಡನ್ನು ‘ಮಳೆನಾಡು’ಆಗಿ ಪರಿವರ್ತಿಸುತ್ತದೆ. ಭೂಮಿಯಲ್ಲಿ ನೀರಿನ ಒರತೆ ಮೂಡುತ್ತದೆ. ಚಿಲುಮೆಯಿಂದ ನೀರು ಹೊರ ಬರಲಾರಂಭಿಸುತ್ತದೆ. ಇಡೀ ತಿಂಗಳ ಕಾಲ ಹಂಚಿಕೊಂಡು ಬೀಳುತ್ತಿದ್ದ ಮಳೆಯಿಂದ ಪ್ರವಾಹ ಎಂಬುದು ಕಾಣುತ್ತಲೇ ಇರಲಿಲ್ಲ. ಜನ ಜೀವನ ಯಥಾ ಪ್ರಕಾರ ನಡೆಯತ್ತಿತ್ತು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಈ ಬಾರಿ ಜೂನ್‌ ತಿಂಗಳಲ್ಲಿ ಮಳೆಯೇ ಬೀಳಲಿಲ್ಲ. ಜುಲೈ ತಿಂಗಳಲ್ಲಿ ಕೂಡ ಶೇ. 35-40 ರಷ್ಟುಕೊರತೆ ಕಾಣಿಸಿತು. ಜಲಾಶಯಗಳಲ್ಲಿ ಶೇ. 35 ಕ್ಕಿಂತಲೂ ಕಡಿಮೆ ನೀರು ಸಂಗ್ರಹವಾಗಿತ್ತು. ಆದರೆ ಆಗಸ್ಟ್‌ ತಿಂಗಳಲ್ಲಿ 10 ದಿನಗಳ ಕಾಲ, ಅದರಲ್ಲಿಯೂ ಕಳೆದ 7 ದಿನಗಳ ಕಾಲ ಸುರಿದ ಮಳೆ ಇಡೀ ಚಿತ್ರಣವನ್ನೇ ಬದಲು ಮಾಡಿ ಬಿಟ್ಟಿತು. ಬರಗಾಲದ ವಿಮೆ ಸೌಲಭ್ಯ ಪಡೆಯಬೇಕೆಂದು ಲೆಕ್ಕ ಹಾಕುತ್ತಿದ್ದ ರೈತರು ಅತಿವೃಷ್ಟಿಯ ವಿಮೆ ಪಡೆಯುವಷ್ಟರ ಮಟ್ಟಿಗೆ ಚಿತ್ರಣ ಬದಲಾಗಿದೆ.

ಆಗಸ್ಟ್‌ ತಿಂಗಳ 3 ರಿಂದ 10 ರವರೆಗೆ 7 ದಿನಗಳ ಕಾಲ ಬೀಳುತ್ತಿದ್ದ ವಾಡಿಕೆಯ ಮಳೆಯ 446 ಪಟ್ಟು ಹೆಚ್ಚು ಬಿದ್ದಿದೆ.

ಒಂದೇ ವಾರದಲ್ಲಿ ತಳ ಕಾಣುತ್ತಿದ್ದ ಜಲಾಶಯ ತುಂಬುವ ಹಂತಕ್ಕೆ ಬಂದು ನಿಂತಿವೆ. ಸಾಮಾನ್ಯವಾಗಿ ಆಗಸ್ಟ್‌ ತಿಂಗಳ ಈ ಏಳು ದಿನಗಳಲ್ಲಿ ವಾಡಿಕೆಯಂತೆ 127 ಮಿ.ಮೀ. ಮಳೆಯಾಗುತ್ತಿದ್ದು, ಈ ಬಾರಿ 692 ಮಿ.ಮೀ. ಮಳೆಯಾಗಿದೆ. ಅಂದರೆ ಶೇ. 446 ರಷ್ಟುಮಳೆ ಹೆಚ್ಚಳವಾಗಿದೆ. ಕೆಲವು ತಾಲೂಕುಗಳಲ್ಲಿ ಈ ಪ್ರಮಾಣ ಶೇ. 600 ಕ್ಕೂ ಹೆಚ್ಚಿದೆ.


ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆ, ವಾಡಿಕೆಯ ಮಳೆಯ ವಿವರ ಇಲ್ಲಿದೆ.

ತಾಲೂಕು    ವಾಡಿಕೆ ಮಳೆ    ಬಿದ್ದ ಮಳೆ    ಸರಾಸರಿ ಹೆಚ್ಚಳ

ಶಿವಮೊಗ್ಗ: 42.6 ಮಿಮೀ    422 ಮಿಮೀ    ಶೇ. 891

ಭದ್ರಾವತಿ:    6.7 ಮೀಮೀ    340 ಮಿಮೀ    ಶೇ. 827

ಹೊಸನಗರ:162 ಮಿಮೀ    958.8 ಮಿಮೀ    ಶೇ. 490

ಸಾಗರ:    157 ಮಿಮೀ    897 ಮಿಮೀ    ಶೇ. 472

ಶಿಕಾರಿಪುರ: 39 ಮಿಮೀ    318 ಮಿಮೀ    ಶೇ. 722

ಸೊರಬ:    99.7 ಮಿಮೀ    529 ಮಿಮೀ    ಶೇ. 431

ತೀರ್ಥಹಳ್ಳಿ: 241.3 ಮಿಮೀ    925.6 ಮಿಮೀ    ಶೇ. 284