Asianet Suvarna News Asianet Suvarna News

ಬಳ್ಳಾರಿ: ಮರೆಯಾದ ಗಡಿನಾಡ ಕನ್ನಡದ ಜ್ಯೋತಿ, ಶ್ರೀಧರಗಡ್ಡೆ ಸಿದ್ಧಬಸಪ್ಪ ವಿಧಿವಶ

ಮರೆಯಾಯ್ತು ನೈಜ ಕನ್ನಡದ ಕಾಳಜಿ| ದುಡಿದ ಹಣದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ಕೊಡಿಸಿ ತಾಯಿ ಪ್ರೀತಿ ಮೆರೆದ ಜೀವ| ಮಾತೃಭಾಷಾ ಪ್ರೇಮ ಕರ್ನಾಟಕಕ್ಕಷ್ಟೇ ಸೀಮಿತಗೊಂಡಿಲ್ಲ| ಆಂಧ್ರ ಗಡಿ ಭಾಗದ ಗ್ರಾಮಗಳಲ್ಲೂ ಕನ್ನಡದ ಕೈಂಕರ್ಯವನ್ನು ಸದ್ದಿಲ್ಲದೆ ನಡೆಸಿಕೊಂಡಿಕೊಂಡು ಬಂದಿದ್ದರು|

Kannada Language Lover Sridharagadde Siddabasappa Passed Away in Ballari
Author
Bengaluru, First Published Dec 27, 2019, 8:15 AM IST
  • Facebook
  • Twitter
  • Whatsapp

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಡಿ.27): ಗಡಿನಾಡ ಕನ್ನಡದ ಜ್ಯೋತಿ ಮರೆಯಾಗಿದೆ. ನೈಜ ಕನ್ನಡಪ್ರೇಮಿ. ಕನ್ನಡಮ್ಮನ ನೆಚ್ಚಿನ ಕಂದ ಇನ್ನಿಲ್ಲ ಎಂಬ ನೋವನ್ನಷ್ಟೇ ಉಳಿಸಿ ಆತ ಭುವನೇಶ್ವರಿ ಮಡಿಲು ಸೇರಿದ್ದಾನೆ.
ಕನ್ನಡದ ಕಾಯಕಕ್ಕೆ ಎಂದೂ ಅನ್ಯರ ಬಳಿ ಈತ ಕೈಯೊಡ್ಡದೆ, ಕನ್ನಡಮ್ಮನ ಸೇವೆಯಲ್ಲಿಯೇ ಬದುಕು ಲೀನಗೊಳ್ಳಬೇಕು ಎಂಬ ಉತ್ಕಟ ಹಂಬಲ ಹೊತ್ತು ಬದುಕಿನುದ್ದಕ್ಕೂ ಕನ್ನಡ ಶಾಲೆಗಳಿಗಾಗಿ ದಣಿದ ಶ್ರೀಧರಗಡ್ಡೆ ಸಿದ್ಧಬಸಪ್ಪ ಎಂಬ ಜೀವ ಇನ್ನಿಲ್ಲವಾಗಿದೆ !

‘ಕನ್ನಡ ಎಂಬ ಮೂರು ಅಕ್ಷರದ ಅಮೂರ್ತ ಶಕ್ತಿಯೇ ತಾಯಿ ಭುವನೇಶ್ವರಿಯ ಕೈಲಾದ ಸೇವೆ ಮಾಡಲು ನನ್ನನ್ನು ಪ್ರೇರೇಪಿಸಿದೆ’ ಎಂದು ಸದಾ ಹೇಳುತ್ತಿದ್ದ ಸಿದ್ಧಬಸಪ್ಪ ಅವರು ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿನ ಅನೇಕ ಶಾಲೆಗಳ ಕದ ತಟ್ಟಿ, ಅಲ್ಲಿಗೆ ಬೇಕಾದ ಸೌಲಭ್ಯಗಳನ್ನು ನೀಡಿ ಸಂತೃಪ್ತಗೊಂಡವರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಷ್ಟೇ ಅಲ್ಲ, ಶುಲ್ಕಕಟ್ಟಲು ಶಾಲೆ ಬಿಡಲು ಸಿದ್ಧವಾಗಿದ್ದ ಅನೇಕ ಮಕ್ಕಳಿಗೆ ದುಡಿದ ಹಣದಲ್ಲಿ ಶುಲ್ಕ, ಪಸ್ತಕ, ಸಮವಸ್ತ್ರಗಳನ್ನು ಕೊಡಿಸಿ ತಾಯಿಪ್ರೀತಿ ಮೆರೆದವರು.ಇದು ಅಚ್ಚರಿಯಾದರೂ ಸತ್ಯ. ಸಿದ್ಧಬಸಪ್ಪ ಅವರು ಈವರೆಗೆ ಕನ್ನಡ ಶಾಲೆಗಳಿಗೆ 40 ಲಕ್ಷ ರು.ಗಳಷ್ಟು ಮೊತ್ತ ದೇಣಿಗೆ ನೀಡಿದ್ದಾರೆ ! ಆದರೆ, ಎಲ್ಲೂ ತನ್ನ ಸೇವೆಯ ಬಗ್ಗೆ ಹೇಳಿಕೊಳ್ಳದ ಈತ, ‘ನಾನು ನನ್ನಮ್ಮ ಕನ್ನಡ ತಾಯಿಯ ಸೇವೆ ಮಾಡುತ್ತಿದ್ದೇನಷ್ಟೇ. ಇದರಲ್ಲಿ ದೊಡ್ಡದೇನೂ ಇಲ್ಲ’ ಎನ್ನುತ್ತಿದ್ದರು.

ಆಂಧ್ರದಲ್ಲಿದ್ದರೂ ಕನ್ನಡ ಪ್ರೀತಿ....

ಸಿದ್ಧಬಸಪ್ಪ ಅವರು ಮೂಲತಃ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದವರು. ಬಡತನಕ್ಕಾಗಿ ಆಂಧ್ರಪ್ರದೇಶದ ಕನ್ನಡ ಗಡಿಗ್ರಾಮ ಹೊಳಲಗುಂದಿಗೆ ಇವರ ತಂದೆ ವಲಸೆ ಹೋಗುತ್ತಾರೆ. ಬಡತನ ಕುಟುಂಬದಿಂದ ಬಂದಿದ್ದರೂ ಕನ್ನಡ ಕೆಲಸವನ್ನು ಮಾಡಬೇಕು ಎಂಬ ಇವರ ಭಾಷಾ ಪ್ರೇಮ ಅನೇಕ ಕನ್ನಡ ಶಾಲೆಗಳ ಬೆಳವಣಿಗೆಗೆ ಅವಕಾಶ ಒದಗಿಸಿತು ಎಂಬುದು ಗಮನಾರ್ಹ.

ಉಪ ಜೀವನಕ್ಕಾಗಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿರುವ ವಾಸವಿ ಸೈಂಟಿಫಿಕ್‌ ವಿಜ್ಞಾನ ಉಪಕರಣಗಳ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಸಿದ್ಧಬಸಪ್ಪ ಅವರು 37 ವರ್ಷಗಳಿಂದಲೂ ಇಲ್ಲಿಯೇ ಕೆಲಸ ಮಾಡುತ್ತಿದ್ದರು. ಇವರಿಗೆ ನಿತ್ಯ ದಿನಗೂಲಿಯಾಗಿ 850 ರು. ಸಿಗುತ್ತಿತ್ತು. ಈ ಹಣದ ಬಹುಭಾಗವನ್ನು ಕನ್ನಡ ಶಾಲೆಗಳಿಗೆ ಖರ್ಚು ಮಾಡುತ್ತಿದ್ದರು.

ಊರೂರು ಸುತ್ತಾಟ. ಕನ್ನಡಕ್ಕಾಗಿ ತಪನ

ರಜೆ ದಿನಗಳಲ್ಲಿ ಊರೂರು ಸುತ್ತಿ ಕನ್ನಡಶಾಲೆಗಳ ಸ್ಥಿತಿಗತಿ ತಿಳಿದುಕೊಂಡು ಬರುತ್ತಿದ್ದ ಸಿದ್ಧಬಸಪ್ಪ ಕನ್ನಡ ಶಾಲೆಗಳಿಗೆ ಅಗತ್ಯವಿರುವ ವೈಜ್ಞಾನಿಕ ಉಪಕರಣಗಳು, ಪುಸ್ತಕಗಳು ಮತ್ತಿತರ ವಸ್ತುಗಳನ್ನು ನೀಡಿ ಕನ್ನಡ ಉಳಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಇವರ ಮಾತೃಭಾಷಾ ಪ್ರೇಮ ಕರ್ನಾಟಕಕ್ಕಷ್ಟೇ ಸೀಮಿತಗೊಂಡಿಲ್ಲ. ಆಂಧ್ರ ಗಡಿ ಭಾಗದ ಗ್ರಾಮಗಳಲ್ಲೂ ಕನ್ನಡದ ಕೈಂಕರ್ಯವನ್ನು ಸದ್ದಿಲ್ಲದೆ ನಡೆಸಿಕೊಂಡಿಕೊಂಡು ಬಂದಿದ್ದರು ಎಂಬುದನ್ನು ಆಂಧ್ರದ ಕನ್ನಡ ಶಾಲೆಗಳಿಗೆ ಭೇಟಿ ನೀಡಿದಾಗ ತಿಳಿದು ಬರುತ್ತದೆ.

ಕನ್ನಡ ಮೇಲಿನ ಮಮತೆಗೆ ಕಾರಣವಿಷ್ಟು

ಮೂಲತಃ ಆಂಧ್ರದಲ್ಲಿದ್ದೂ ಕನ್ನಡದ ಮೇಲೇಕಿಷ್ಟು ಮಮತೆ ಎಂಬ ಪ್ರಶ್ನೆಗೂ ರೋಚಕ ಇತಿಹಾಸವಿದೆ. ಕರ್ನಾಟಕ ಏಕೀಕರಣ ಮುಂಚೆ ಆಂಧ್ರದ ಕರ್ನೂಲ್‌ ಜಿಲ್ಲೆಯ ಹೊಳಲಗುಂದಿ ಗ್ರಾಮ ಬಳ್ಳಾರಿ ಜಿಲ್ಲೆಯಲ್ಲಿತ್ತು. ಮನೆಯಲ್ಲಿ ಕನ್ನಡ ಭಾಷಾ ಪ್ರೇಮದ ವಾತಾವರಣ ಹಾಗೂ ತಂದೆ ಕಲ್ಯಾಣಪ್ಪರ ಮಾತೃಭಾಷೆಯ ಮಮತೆ ಚಿಕ್ಕಂದಿನಿಂದಲೂ ಸಿದ್ಧ ಬಸಪ್ಪರ ಮೇಲೆ ಪ್ರಭಾವ ಬೀರಿದೆ. ಹೊಳಲಗುಂದಿ ಗ್ರಾಮ ಏಕೀಕರಣದ ಬಳಿಕ ಆಂಧ್ರಕ್ಕೆ ಸೇರಿದರೂ ಈ ಊರ ಜನರ ಮನಸ್ಸುಗಳು ಕನ್ನಡನೆಲ, ಜಲದ ಜೊತೆ ಅಮೂರ್ತವಾಗಿ ಬೆಸೆದುಕೊಂಡಿತ್ತು. ಇದು ಸಿದ್ಧಬಸಪ್ಪರ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿತ್ತು. ದುಡಿದ ಬಹುಭಾಗವನ್ನು ಕನ್ನಡದ ಕಾಯಕ್ಕಾಗಿ ಖರ್ಚು ಮಾಡುವ ಸಂಕಲ್ಪಕ್ಕೆ ಗಟ್ಟಿಬಲ ನೀಡಿತ್ತು.

ನಮ್ಮ ತಂದೆ ಕಲ್ಯಾಣಪ್ಪ ಅವರು ಅಪ್ಪಟ ಕನ್ನಡ ಪ್ರೇಮಿ. ತಾನು ದುಡಿದ ದಿನಗೂಲಿಯಲ್ಲಿಯೇ ಎಷ್ಟೋ ಜನರಿಗೆ ಶಿಕ್ಷಣಕ್ಕಾಗಿ ನೆರವು ನೀಡಿದ್ದರು. ಕನ್ನಡ ಎಂದು ಯಾರೇ ಬಂದರೂ ಹಣ ನೀಡುತ್ತಿದ್ದರು. ನನ್ನ ತಂದೆಯೇ ಕನ್ನಡ ನಿಷ್ಠೆಯೇ ನನಗೆ ಪ್ರೇರಣೆ ಎಂದು ಸಿದ್ಧಬಸಪ್ಪ ಆಗಾಗ್ಗೆ ಹೇಳುತ್ತಿದ್ದರು.

ಶ್ರೀಧರಗಡ್ಡೆ ಸಿದ್ಧಬಸಪ್ಪ ಅವರು ಇನ್ನಿಲ್ಲ ಎಂಬ ಸುದ್ದಿ ನಿಜಕ್ಕೂ ಆಘಾತ ನೀಡಿದೆ. ಕನ್ನಡಕ್ಕಾಗಿ ಇಡೀ ಜೀವನ ಮುಡುಪಾಗಿಟ್ಟಿದ್ದ ಆತನ ಸೇವೆ ಮಾತಿನಲ್ಲಿ ಹೇಳಲು ಪದಗಳು ಸಾಲವು. ಸಿದ್ಧಬಸಪ್ಪ ಕನ್ನಡಮ್ಮನ ಶ್ರೇಷ್ಠ ಪುತ್ರ ಎಂದು ಲೋಹಿಯಾ ಪ್ರಕಾಶನದ ಮುಖ್ಯಸ್ಥ ಹಾಗೂ ಚಿಂತಕ ಚೆನ್ನಬಸಪ್ಪ ಅವರು ಹೇಳಿದ್ದಾರೆ. 

ಅಸಮಾನ್ಯ ಕನ್ನಡಿಗ ಶ್ರೀಧರಗಡ್ಡೆ ಸಿದ್ಧಬಸಪ್ಪ ವಿಧಿವಶ

ಗಡಿನಾಡ ಕನ್ನಡ ಶಾಲೆಗಳ ಪಾಲಿನ ಆಪ್ತ ಬಂಧು. ನೈಜ ಕನ್ನಡಪ್ರೇಮಿ. ಸುವರ್ಣನ್ಯೂಸ್‌-ಕನ್ನಡಪ್ರಭದ ‘ಅಸಮಾನ್ಯ ಕನ್ನಡಿಗ’ ಪ್ರಶಸ್ತಿ ಪುರಸ್ಕೃತ ಶ್ರೀಧರಗಡ್ಡೆ ಸಿದ್ಧಬಸಪ್ಪ (68) ಅವರು ಕರ್ನಾಟಕ- ಆಂಧ್ರ ಗಡಿಗ್ರಾಮ ಹೊಳಲಗುಂದಿಯಲ್ಲಿ ಗುರುವಾರ ನಿಧನರಾದರು. 

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ಧಬಸಪ್ಪ ಅವರು ಪಾರ್ಶ್ವವಾಯು ಸಮಸ್ಯೆಯಿಂದ ತೀವ್ರ ಅಸ್ವಸ್ಥರಾಗಿದ್ದರು. ಗುರುವಾರ ಬೆಳಗಿನ ಜಾವ ಅವರ ಆರೋಗ್ಯ ತೀವ್ರ ಏರುಪೇರಾಗಿದ್ದರಿಂದ ಚಿಕಿತ್ಸೆಗೆಂದು ಬಳ್ಳಾರಿಯತ್ತ ಕರೆತರುವಾಗ ದಾರಿ ಮಧ್ಯೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿ, ಒಬ್ಬ ಪುತ್ರ ಇದ್ದಾರೆ. ಹೊಳಲಗುಂದಿಯಲ್ಲಿ ಗುರುವಾರ ಅಂತಿಮ ಸಂಸ್ಕಾರ ಜರುಗಿತು.

ಬಳ್ಳಾರಿಯ ವಾಸವಿ ಸೈಂಟಿಫಿಕ್‌ ಕಂಪನಿಯಲ್ಲಿ ಸುಮಾರು ಮೂರುವರೆ ದಶಕಗಳಿಂದಲೂ ಕೆಲಸದಲ್ಲಿದ್ದ ಸಿದ್ಧಬಸಪ್ಪ ಅವರು ತಮ್ಮ ದುಡಿಮೆಯ ಅರ್ಧ ಭಾಗವನ್ನು ಪ್ರತಿ ತಿಂಗಳು ಕರ್ನಾಟಕ ಹಾಗೂ ಆಂಧ್ರಪ್ರದೇಶದ ಶಾಲೆಗಳ ಅಭಿವೃದ್ಧಿಗಾಗಿ ನೀಡಿದ್ದರು. 

ಬಡತನವಿದ್ದರೂ ಕುಟುಂಬ ನಿರ್ವಹಣೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಉಳಿಸಿಕೊಂಡು ಉಳಿದ ಹಣವನ್ನು ಕನ್ನಡ ಶಾಲೆಗೆ ನೀಡಿ ಕನ್ನಡ ಕಾಳಜಿ ಮೆರೆದಿದ್ದರು. ಕನ್ನಡಪ್ರಭ-ಸುವರ್ಣ ನ್ಯೂಸ್‌ನಿಂದ ಕೊಡಮಾಡುವ ಅಸಮಾನ್ಯ ಕನ್ನಡಿಗ ಪ್ರಶಸ್ತಿಗೆ ಕಳೆದ ವರ್ಷ ಭಾಜನರಾಗಿದ್ದರು. ಸನ್ಮಾನ ವೇಳೆ ನೀಡಿದ್ದ 25 ಸಾವಿರ ಚೆಕ್‌ನ ಮೊತ್ತದ ಜೊತೆಗೆ ಐದು ಸಾವಿರ ರು. ಸೇರಿಸಿ ಒಟ್ಟು 30 ಸಾವಿರ ಮೌಲ್ಯದ ವಿವಿಧ ವಿಜ್ಞಾನ ಪರಿಕರಗಳನ್ನು ಅವರು ಬಡೇನಹಳ್ಳಿ ಸರ್ಕಾರಿ ಕನ್ನಡ ಶಾಲೆಗೆ ದೇಣಿ ನೀಡಿದ್ದು ವಿಶೇಷ. ಇತ್ತೀಚೆಗಷ್ಟೇ ಆಂಧ್ರ ಪ್ರದೇಶದ ಹೊಳಲಗುಂದಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಸಿ, ಎಲ್ಲ ಖರ್ಚು ವೆಚ್ಚಗಳನ್ನು ತಾವೇ ಭರಿಸಿ, ಕನ್ನಡಪ್ರೇಮ ಮೆರೆದಿದ್ದರು.
 

Follow Us:
Download App:
  • android
  • ios