ಮಂಗಳೂರು : ಗಾರೆ, ಕೂಲಿ, ಬೀಡಿ ಕೆಲಸಕ್ಕಿಳಿದ ಖಾಸಗಿ ಶಿಕ್ಷಕರು!
ಕೊರೋನಾ ಜನರನ್ನು ಅತ್ಯಂತ ದುಸ್ಥಿತಿಗೆ ತಳ್ಳಿದೆ. ಅನೇಕರು ಉದ್ಯೋಗ ರಹಿತರಾಗಿದ್ದು, ಅನೇಕ ಶಾಲಾ ಶಿಕ್ಷಕರು ಕೂಲಿ ಕಾರ್ಮಿಕರಾಗಿದ್ದಾರೆ.
ವರದಿ : ಸಂದೀಪ್ ವಾಗ್ಲೆ
ಮಂಗಳೂರು (ಆ.28): ಇವರೆಲ್ಲ ಬಿಎ, ಬಿಎಸ್ಸಿ, ಎಂಎ, ಎಂಎಸ್ಸಿ, ಬಿಎಡ್, ಡಿಎಡ್ ಕಲಿತವರು. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಈ ಶಿಕ್ಷಕರು, ಉಪನ್ಯಾಸಕರು ಈಗ ತಮ್ಮದೇ ಜೀವನದ ಬಂಡಿ ಸಾಗಿಸಲು ಸಾಧ್ಯವಾಗದೆ ಕೂಲಿ ಕೆಲಸಕ್ಕೆ ಇಳಿದಿದ್ದಾರೆ!
ಕೊರೋನಾ ಇವರ ಬದುಕನ್ನೇ ಬುಡಮೇಲು ಮಾಡಿ ದುರ್ಗತಿಗೆ ತಳ್ಳಿದೆ. ಕೊರೋನಾದಿಂದಾಗಿ ಶಾಲೆಗಳು ಆರಂಭವಾಗದೆ ಇರುವುದರಿಂದ ಖಾಸಗಿ ಶಾಲೆ, ಕಾಲೇಜುಗಳ ಲಕ್ಷಕ್ಕೂ ಹೆಚ್ಚು ಶಿಕ್ಷಕರು, ಅನುದಾನಿತ, ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಸಹಸ್ರಾರು ಅತಿಥಿ ಶಿಕ್ಷಕರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಅತ್ತ ಶಾಲಾರಂಭವಾಗದೆ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದ್ದರೆ, ಇತ್ತ ಈ ಶಿಕ್ಷಕರ ವರ್ತಮಾನದ ಜೀವನ ಕಾರ್ಗತ್ತಲಿನಲ್ಲಿದೆ.
ಮೇಸ್ತ್ರಿ, ಕೂಲಿ, ಬೀಡಿ ಕೆಲಸ: ಸರ್ಕಾರಿ ಶಾಲೆ ಶಿಕ್ಷಕರಿಗೆ ಆನ್‌ಲೈನ್ ತರಗತಿ, ಕೋವಿಡ್ ಡ್ಯೂಟಿ ಹಾಕಿದ್ದು ಪ್ರತಿ ತಿಂಗಳು ವೇತನ ಬರುತ್ತದೆ. ಆದರೆ ಖಾಸಗಿ ಶಿಕ್ಷಕರು, ಅತಿಥಿ ಶಿಕ್ಷಕ, ಉಪನ್ಯಾಸಕರು ಮಾತ್ರ ಕಿಸೆ ಖಾಲಿಯಾದರೂ ಶಾಲೆ ಶೀಘ್ರ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲೇ ದಿನ ಕಳೆದಿದ್ದರು. ಇದೀಗ ಮೂರು ತಿಂಗಳಾದರೂ ಶಾಲೆ ಆರಂಭವಾಗುವ ಲಕ್ಷಣ ಕಾಣಿಸದೆ ಅನಿವಾರ್ಯವಾಗಿ ಕುಟುಂಬ ನಿರ್ವಹಣೆಗೆ ಸಿಕ್ಕಿದ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲವರು ಮೇಸ್ತ್ರಿ ಕೆಲಸಕ್ಕೆ ಹೋದರೆ, ಇನ್ನೂ ಕೆಲವರು ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮಹಿಳಾ ಶಿಕ್ಷಕಿಯರನೇಕರು ಬೀಡಿ ಕಟ್ಟುತ್ತಿರುವುದು ಕಂಡುಬಂದಿದೆ.
ತಮಾಷೆಯೇ ಅಲ್ಲಾರೀ, ಜೈಪುರದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ ಪದವೀಧರರು!...
‘ಜೂನ್‌ನಿಂದ ಮೊನ್ನೆ ಮೊನ್ನೆವರೆಗೆ ಮನೆ ಮನೆಗೆ ಹೋಗಿ ಬತ್ತ ನಾಟಿಗೆ ಗದ್ದೆ ಉಳುಮೆ, ಮತ್ತಿತರ ಕೃಷಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಈಗ ಬತ್ತ ನಾಟಿ ಎಲ್ಲ ಕಡೆ ಪೂರ್ಣಗೊಂಡಿದೆ, ಕೆಲಸ ಇಲ್ಲ. ಒಂದೆರಡು ದಿನ ಗಾರೆ ಕೆಲಸಕ್ಕೂ ಹೋಗಿದ್ದೇನೆ. ಮುಂದೇನು ಮಾಡುವುದು ತೋಚುತ್ತಿಲ್ಲ. ಶಾಲೆ ಕೂಡಲೆ ಆರಂಭವಾಗದಿದ್ದರೆ ಕುಟುಂಬ ಸಾಕುವುದು ಹೇಗೆ ಎಂಬುದೇ ಚಿಂತೆಯಾಗಿದೆ. ಪರ್ಯಾಯ ದಾರಿಗಳೂ ಗೋಚರಿಸುತ್ತಿಲ್ಲ. ಉಳಿದ ಶಿಕ್ಷಕರು ಕೂಡ ಸದ್ಯಕ್ಕೆ ಕೂಲಿ ಕೆಲಸವನ್ನೇ ನೆಚ್ಚಿಕೊಂಡಿದ್ದಾರೆ’ ಎಂದು ಖಾಸಗಿ ಶಾಲೆಯ ಶಿಕ್ಷಕ ಅಶೋಕ್ ಕುಮಾರ್ ಅಳಲು ತೋಡಿಕೊಂಡರು.
ಪುಡಿಗಾಸಿನ ಸಂಬಳ: ಖಾಸಗಿ ಶಾಲೆಗಳಲ್ಲಿ ಈಗ ಆನ್‌ಲೈನ್ ಕಲಿಕೆ ಆರಂಭವಾಗಿದೆ. ಆದರೆ ಅರ್ಧಕ್ಕರ್ಧ ಶಿಕ್ಷಕರಿಗೆ ಕೆಲಸವೂ ಇಲ್ಲ, ಸಂಬಳವೂ ಇಲ್ಲ. ಹಲವರನ್ನು ಆಡಳಿತ ಮಂಡಳಿಗಳು ನಿರ್ದಾಕ್ಷಿಣ್ಯವಾಗಿ ಕಿತ್ತೆಸೆದಿವೆ. ಆನ್‌ಲೈನ್ ತರಗತಿ ಮಾಡಲು ಕೆಲವೇ ಕೆಲವರನ್ನು ನೇಮಿಸಿದ್ದು, ಅವರಿಗೆ ನಾಲ್ಕೈದು ಸಾವಿರ ರು. ಪುಡಿಗಾಸಿನ ಸಂಬಳ ನೀಡಲಾಗುತ್ತಿದೆ ಎಂದವರು ಹೇಳಿದರು.
ಅತಿಥಿ ಶಿಕ್ಷಕರ ಗೋಳು: ಇನ್ನು ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳ 22,500ಕ್ಕೂ ಅಧಿಕ ಅತಿಥಿ ಶಿಕ್ಷಕರ ಗೋಳಂತೂ ಹೇಳತೀರದು. ಸಾಮಾನ್ಯವಾಗಿ ಜೂನ್ ಅಂತ್ಯಕ್ಕೆ ಆಯ್ಕೆಯಾಗಿ ಜುಲೈನಿಂದ ಕೆಲಸಕ್ಕೆ ಹಾಜರಾಗಬೇಕಿತ್ತು. ಈ ಬಾರಿ ಇನ್ನೂ ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಕರೆದಿಲ್ಲ. ಅತಿಥಿ ಶಿಕ್ಷಕರಲ್ಲಿ ಬಹುತೇಕರು ಎಲ್ಲರೂ ಬಡ ವರ್ಗದವರೇ ಆಗಿದ್ದು, ಕೆಲವರಂತೂ ಬ್ಯಾಂಕ್ ಸಾಲ ಮಾಡಿ ಕಲಿತವರೂ ಇದ್ದಾರೆ. ಅವರೆಲ್ಲ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ದ.ಕ. ಜಿಲ್ಲೆಯೊಂದರಲ್ಲೇ 550ರಷ್ಟುಅತಿಥಿ ಶಿಕ್ಷಕರಿದ್ದು, ಪುರುಷ ಶಿಕ್ಷಕರು ಕೂಲಿ ಕೆಲಸ ಮಾತ್ರವಲ್ಲದೆ, ರಸ್ತೆ ಬದಿ ತರಕಾರಿ ಹಣ್ಣುಗಳನ್ನಿಟ್ಟು ಮಾರಾಟಕ್ಕೆ ಇಳಿದಿದ್ದಾರೆ. ಸರ್ಕಾರ ಕೂಡಲೆ ಅತಿಥಿ ಶಿಕ್ಷಕರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ದ.ಕ. ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಕಾರ್ಯದರ್ಶಿ ಚಿತ್ರಲೇಖಾ ಹೇಳುತ್ತಾರೆ.
ಅಂಡಮಾನ್ ದ್ವೀಪದ ಬುಡಕಟ್ಟು ಜನರಿಗೂ ಕೊರೋನಾ ಸೋಂಕು...
ಹೇಳದೆ ಕೇಳದೆ ಕಿತ್ತೆಸೆದರು: ನಾನು ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ಉಪನ್ಯಾಸಕ. ಮಾಚ್‌ರ್ ತಿಂಗಳವರೆಗೆ ವೇತನ ಕೊಟ್ಟು ಕೇವಲ ಒಂದು ಎಸ್‌ಎಂಎಸ್ ಕಳಿಸುವ ಮೂಲಕ ಕೆಲಸದಿಂದಲೇ ಕಿತ್ತೆಸೆದಿದ್ದಾರೆ. ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಮನೆಯಲ್ಲಿ ನಾನೊಬ್ಬನೇ ದುಡಿದು ಏನು ಮಾಡಬೇಕು ಹೇಳಿ ಎಂದು ಉಪನ್ಯಾಸಕರೊಬ್ಬರು ಕಣ್ಣೀರು ಸುರಿಸಿದರು.