ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ANPR ಕ್ಯಾಮೆರಾ ಅಳವಡಿಕೆ..!

ಈ ಮೊದಲು 118 ಕಿಲೋಮೀಟರ್ ಉದ್ದಕ್ಕೂ ಪ್ರತಿ 10 ಕಿಲೋಮೀಟರ್ ದೂರಕ್ಕೆ ಒಂದು ಕ್ಯಾಮೆರಾವನ್ನು ಅಳವಡಿಸಲು ಯೋಜಿಸಲಾಗಿತ್ತು. ಇದೀಗ ಪ್ರತಿ 2 ಕಿಮೀಗೆ ಒಂದರಂತೆ 60ಕ್ಕೂ ಹೆಚ್ಚು ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳ ಅಳವಡಿಸಲು ನಿರ್ಧರಿಸಲಾಗಿದೆ.
 

Installation of ANPR Camera on Bengaluru Mysuru Expressway grg

ಎಂ.ಅಫ್ರೋಜ್ ಖಾನ್

ರಾಮನಗರ(ಮೇ.14):  ಬೆಂಗಳೂರು– ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತದಿಂದ ಉಂಟಾಗುವ ಸಾವು-ನೋವು ಕಡಿಮೆ ಮಾಡಲು ಹಾಗೂ ಮಿತಿ ಮೀರಿ ವೇಗವಾಗಿ ಚಲಿಸುವ ವಾಹನಗಳ ಮೇಲೆ ನಿಗಾ ಇಡಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬೆಂಗಳೂರು-ನಿಡಘಟ್ಟ ಮತ್ತು ನಿಡಘಟ್ಟ-ಮೈಸೂರು ಎರಡೂ ಮಾರ್ಗಗಳ ಆಯಕಟ್ಟಿನ ಸ್ಥಳಗಳಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.

ಈ ಮೊದಲು 118 ಕಿಲೋಮೀಟರ್ ಉದ್ದಕ್ಕೂ ಪ್ರತಿ 10 ಕಿಲೋಮೀಟರ್ ದೂರಕ್ಕೆ ಒಂದು ಕ್ಯಾಮೆರಾವನ್ನು ಅಳವಡಿಸಲು ಯೋಜಿಸಲಾಗಿತ್ತು. ಇದೀಗ ಪ್ರತಿ 2 ಕಿಮೀಗೆ ಒಂದರಂತೆ 60ಕ್ಕೂ ಹೆಚ್ಚು ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳ ಅಳವಡಿಸಲು ನಿರ್ಧರಿಸಲಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಿಪಿಎಸ್‌ ಟೋಲ್‌ ಶೀಘ್ರ: ದೇಶದಲ್ಲಿ ಇದೇ ಮೊದಲು!

ರಾಷ್ಟ್ರೀಯ ಹೆದ್ದಾರಿಯು ಸಂಚಾರಕ್ಕೆ ಮುಕ್ತವಾದ ಒಂಬತ್ತು ತಿಂಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 158 ಜನ ಮೃತಪಟ್ಟಿದ್ದರು. ಆಗ ಹೆದ್ದಾರಿ ಸುರಕ್ಷತೆಗೆ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಅದರ ಬೆನ್ನಲ್ಲೇ, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಹೆದ್ದಾರಿ ಪರಿಶೀಲನೆ ನಡೆಸಿದ್ದರು. ನಿಯಮ ಉಲ್ಲಂಘನೆ ತಡೆಗಾಗಿ ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಸಂಚಾರ ಪೊಲೀಸರಿಗೆ ಸೂಚಿಸಿದ್ದರು.

ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸರೊಂದಿಗೂ ಎಡಿಜಿಪಿ ಸಭೆ ನಡೆಸಿದ್ದರು. ಆಗ ಜಿಲ್ಲಾ ಪೊಲೀಸರು ಅಪಘಾತಗಳಿಗೆ ಕಾರಣ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರಕ್ಕೆ ನೀಡಿದ್ದ ವರದಿ ಬಗ್ಗೆ ಗಮನ ಸೆಳೆದಿದ್ದರು. ಅಪಘಾತ ತಡೆಗಾಗಿ ಎಐ ಆಧಾರಿತ ಎಎನ್ ಪಿಆರ್ ಕ್ಯಾಮೆರಾ ಅಳವಡಿಕೆ ಸೇರಿದಂತೆ ವಿವಿಧ ಕ್ರಮಗಳನ್ನು ಸೂಚಿಸಿದ್ದರು.

ಈ ಹೆದ್ದಾರಿಯು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಅಡಿಯಲ್ಲಿ ಬರುವುದರಿಂದ ಅವರೇ ರಾಮನಗರ, ಮಂಡ್ಯ ಹಾಗೂ ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಕ್ಯಾಮೆರಾ ಅಳವಡಿಸಿದ್ದರು. ಜೊತೆಗೆ ಹೆದ್ದಾರಿಯುದ್ದಕ್ಕೂ ಕ್ಯಾಮೆರಾ ಅಳವಡಿಸಲು ಟೆಂಡರ್ ಕರೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಈಗ ಟೆಂಡರ್ ಪ್ರಕ್ರಿಯೆ ಮುಗಿದು ಕ್ಯಾಮೆರಾ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.

ಎಐ ಕ್ಯಾಮೆರಾಗಳು ಅನುಮತಿಸಲಾದ ಗರಿಷ್ಠ ವೇಗದ ಮಿತಿಯನ್ನು ದಾಟುವ ವಾಹನಗಳನ್ನು ಗುರುತಿಸುವುದಲ್ಲದೆ, ನಿರ್ಬಂಧಿತ ವಾಹನಗಳು-ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಪ್ರವೇಶವನ್ನೂ ಗುರುತಿಸುತ್ತದೆ. ಇದಲ್ಲದೆ, ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡುವುದು, ಸೀಟ್ ಬೆಲ್ಟ್ ಧರಿಸದಿರುವುದು, ಒನ್ ವೇ ಅಲ್ಲಿ ಬರುವ ವಾಹನಗಳನ್ನು ಗುರುತಿಸಿ, ರೆಕಾರ್ಡ್ ಮಾಡಿಕೊಳ್ಳುತ್ತದೆ.

ಬಳಿಕ ಸಂಚಾರ ನಿರ್ವಹಣಾ ಕೇಂದ್ರಗಳೊಂದಿಗೆ ಡೇಟಾವನ್ನು ಹಂಚಿಕೊಳ್ಳುತ್ತವೆ. ಬಳಿಕ ನಿಯಮ ಉಲ್ಲಂಘಿಸಿದವರ ವಿರುದ್ಧ ಮೋಟಾರು ವಾಹನ ಕಾಯ್ದೆ 1988ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಚಾಲಕರಿಗೆ ಇ-ಚಲನ್‍ಗಳನ್ನೂ ಕೂಡ ನೀಡಲಾಗುತ್ತದೆ. ವಾಹನ ಮಾಲೀಕರು ದಂಡವನ್ನು ಪಾವತಿಸಬೇಕಾಗುತ್ತದೆ. ಹೆದ್ದಾರಿಯಲ್ಲಿ ಪ್ರತಿ 2 ಕಿಲೋ ಮೀಟರ್ ಗೆ 4 ಕ್ಯಾಮೆರಾ ಜೊತೆಗೆ ವೇಗ ಮಿತಿ ಸೂಚನ ಫಲಕ ಅಳವಡಿಸಲಾಗಿದ್ದು, ಸೌರ ವಿದ್ಯುತ್ ಸರಬರಾಜಿನ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿ: ಎರಡೇ ದಿನದಲ್ಲಿ 1.50 ಲಕ್ಷ ರು. ದಂಡ ವಸೂಲಿ

ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಉಂಟಾಗುತ್ತಿರುವ ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡುವ ಸಲುವಾಗಿ ಎಡಿಜಿಪಿ ಅಲೋಕ್‌ ಕುಮಾರ್‌ ವರ್ಷದ ಹಿಂದೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ಕೆಲವು ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದರು. ಇದಾದ ನಂತರ ಪೊಲೀಸರು, ವೇಗ ಮಿತಿ, ಲೇನ್‌ ಡಿಸಿಪ್ಲೀನ್‌, ಹೆದ್ದಾರಿ ಗಸ್ತು, ಟೋಲ್‌ ಬಳಿ ಕಡಿಮೆ ವೇಗದಲ್ಲಿ ಸಂಚರಿಸುವಂತೆ ವಾಹನ ಸವಾರರಿಗೆ ತಿಳಿ ಹೇಳುವ ಕಾರ್ಯ ಸೇರಿದಂತೆ ಕೆಲವು ಉಪಕ್ರಮಗಳನ್ನು ಕೈಗೊಂಡಿದ್ದರು. ವೇಗ ಮಿತಿಗಿಂತ ವೇಗವಾಗಿ ಸಂಚರಿಸುವ ಸವಾರರಿಗೆ ಗುರುತಿಸುವ ಸಂಬಂಧ ರಡಾರ್‌ ಅಳವಡಿಕೆ ಮಾಡಿ, ಸಂಚಾರ ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡ ವಿಧಿಸಿದ್ದರು. ಇದಾದ ನಂತರ ಮತ್ತಷ್ಟು ಅಪರಾಧ ಪ್ರಕರಣ ಕಡಿಮೆ ಮಾಡುವ ಸಂಬಂಧ ಎಐ ಆಧಾರಿತ ಎಎನ್ ಪಿಆರ್ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಇದನ್ನು ಅಳವಡಿಕೆ ಮಾಡುವುದರಿಂದ ಅಪಘಾತ ಮತ್ತು ಸಾವು-ನೋವು ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ಭಾವಿಸುತ್ತೇನೆ ಎಂದು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios