ಆನಂದ್ ಎಂ. ಸೌದಿ 

ಯಾದಗಿರಿ(ಜ.11): ಜಿಲ್ಲೆಯಲ್ಲಿನ ಭೀಮಾ ಹಾಗೂ ಕೃಷ್ಣಾ ನದಿಗಳ ಕೊಳ್ಳದಲ್ಲಿ ಅವ್ಯಾಹತ ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಬಳ್ಳಾರಿ ಜಿಲ್ಲೆಯ ಅಕ್ರಮ ಅದಿರು ಗಣಿಗಾರಿಕೆಯನ್ನೂ ಮೀರಿಸುವಂತಹ (ಕು)ಖ್ಯಾತಿಗೆ ಪಾತ್ರವಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಇದಕ್ಕೆ ಕಡಿವಾಣ ಹಾಕೋದು ಅಷ್ಟು ಸಲೀಸಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ. 

ಅಕ್ರಮ ಗಣಿಗಾರಿಕೆಯಲ್ಲಿ ಆಡಳಿತದ ಪಾಲೂ ಇದೆಯೆಂಬ ಆರೋಪಗಳ ಮಧ್ಯೆ, ಸುರಪುರ ಭಾಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಲ್ಲಿ ‘ರಾಜ’ಕಾರಣವೂ ಒಂದು ಅನ್ನೋದು ಎಲ್ಲರ ಬಾಯಲ್ಲಾಡುತ್ತಿದೆ. ತಾಲೂಕಿನ ಕೃಷ್ಣಾ ನದಿ ಪಾತ್ರಗಳನ್ನು ಹಗಲಿರುಳೂ ಕೊಳ್ಳೆ ಹೊಡೆಯಲಾಗುತ್ತಿದೆ ಅನ್ನೋ ಸತ್ಯ ಜಿಲ್ಲಾಡಳಿತಕ್ಕೆ ಗೊತ್ತಿದ್ದರೂ, ಅಲ್ಲಿನ ರಾಜಕೀಯ ‘ನಾಯಕ’ರುಗಳ ಪ್ರಭಾವದಿಂದಾಗಿ ಕೈ ಕೈ ಹಿಸುಕಿಕೊಂಡು ಸುಮ್ಮನಾಗಬೇಕಾಗಿದೆ. 

‘ಬಳ್ಳಾರಿ ಮೈನಿಂಗ್ ಮಾಫಿಯಾ ಮೀರಿಸಿದ ಯಾದಗಿರಿಯ ಅಕ್ರಮ ಕಲ್ಲು ಗಣಿಗಾರಿಕೆ’

ಉಸುಕು ದಂಧೆಯಲ್ಲಿ ರಾಜಕೀಯ ‘ನಾಯಕ’ರುಗಳ ಮುಸುಕಿನ ಗುದ್ದಾಟ ಕೆಲವೊಮ್ಮೆ ಬೆಂಬಲಿಗರ ಮಧ್ಯೆ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದರೆ, ನಾಯಕರ ಆರೋಪ ಪ್ರತ್ಯಾರೋಪ ಗಳು ಅಕ್ರಮಕ್ಕೆ ಸಾಕಷ್ಟು ಪುರಾವೆ ಗಳನ್ನು ಒದಗಿ ಸಿದಂತಿತ್ತು. ಜಿಲ್ಲೆಯಲ್ಲಿ ಅಕ್ರಮ ತಡೆಗಟ್ಟುವ ಬಗ್ಗೆ, ಅದರಲ್ಲೂ ಸುರಪುರ ಭಾಗದಲ್ಲಿ ಇದನ್ನು ತಡೆಯಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿರುವುದು ಅಲ್ಲಿ ನಡೆದ ಹಿಂದಿನ ಕಹಿ ಘಟನೆಗಳು ಕೈ ಕಟ್ಟಿ ಹಾಕಿದಂತಿವೆ.

ಜಪ್ತಿಯಾದ ಅಕ್ರಮ ಮರಳು ಸಕ್ರಮಕ್ಕೆ ಚಿಂತನೆ

ಜಿಲ್ಲಾಡಳಿತದ ಟಾಸ್ಕ್‌ಫೋರ್ಸ್ ಸಮಿತಿ ಸುರಪುರ ತಾಲೂಕಿನಲ್ಲಿ ವಾರದ ಹಿಂದೆ ನಡೆಸಿದ ದಾಳಿಯಲ್ಲಿ ಎರಡ್ಮೂರು ಕೋಟಿ ರುಪಾಯಿಗಳಷ್ಟು ಅಕ್ರಮ ಮರಳು ದಾಸ್ತಾನು ಜಪ್ತಿಯಾಗಿದೆ. ಆದರೆ, ಈ ದಾಸ್ತಾನನ್ನು ಹೇಗೆ ವಿಲೇವಾರಿ ಮಾಡಬೇಕೆಂಬುದರ ಬಗ್ಗೆ ಜಿಲ್ಲಾಡಳಿತ ಇನ್ನೂ ಗೊಂದಲದಲ್ಲಿದ್ದಂತಿದೆ. ಕೋಟ್ಯಂತರ ರುಪಾಯಿಗಳ ರಾಜಧನವೂ ಕೈಬಿಟ್ಟ ಈ ಸಂದರ್ಭದಲ್ಲಿ, ಇದನ್ನು ಹೇಗೆ ನಿಭಾಯಿಸಬೇಕೆಂದು ತಂಡ ರಚನೆ ಮಾಡಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತಿದೆ. 

ಕೋಟ್ಯಂತರ ರುಪಾಯಿಗಳ ಈ ಮರಳು ದಾಸ್ತಾನು ಈಗ ಪೊಲೀಸ್ ಕಾವಲಿನಲ್ಲಿದೆ. ಮೂಲಗಳ ಪ್ರಕಾರ, ಜಪ್ತಿಯಾದ ಅಕ್ರಮ ಮರಳನ್ನು ಪಿಡಬ್ಲೂಡಿ ಇಲಾಖೆಯ ಮೂಲಕ ರಾಜಧನದ ಅನುಮತಿ ನೀಡಿ, ಅದನ್ನು ವಿಲೇವಾರಿ ಮಾಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. 

ಹೆಮ್ಮಡಗಿ ಸ್ಥಳದಲ್ಲಿನ ಅಕ್ರಮ ಮರಳು ದಾಸ್ತಾನನ್ನು ಜಿಲ್ಲಾಡಳಿತ ಕೆಲವೊಂದು ಸೂಕ್ತ ಸ್ಥಳಕ್ಕೆ ಸಾಗಾಣಿಕೆ ಮಾಡಿ, ಅಲ್ಲಿ ಸರ್ಕಾರಿ ದರದಲ್ಲಿ ಸಾಮಾನ್ಯ ನಾಗರಿಕರೂ ಒಯ್ಯಬಹುದಾದ ವ್ಯವಸ್ಥೆ ಮಾಡಬಹುದೇ ಅನ್ನೋ ಲೆಕ್ಕಾಚಾರ ನಡೆಸಿದೆ. ಇನ್ನೊಂದೆಡೆ, ಕೇವಲ ದಂಡ ಕಟ್ಟಿಸಿಕೊಂಡು ಅಕ್ರಮ ಮರಳ ನ್ನು ಸಕ್ರಮ ಮಾಡಿಸಿ ಬಿಟ್ಟು ಬಿಡುವಲ್ಲಿ ಕೆಲವು ಅಧಿಕಾರಿಗಳು ಒಪ್ಪಂದ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಅಕ್ರಮ ಸಕ್ರಮಗೊಳಿಸಲು ಕೆಲವರು ಉದ್ದೇಶಪೂರ್ವಕವಾಗಿ ಇಂತಹ ಸಮಯಕ್ಕಾಗಿ ಕಾದು ಕುಳಿತಿದ್ದು, ಸಾವಿರಾರು ರುಪಾಯಿಗಳ ದಂಡ ತುಂಬಿ, ಕೋಟ್ಯಂತರ ರುಪಾಯಿಗಳ ಲಾಭದ ಹುನ್ನಾರವೂ ನಡೆದಿದೆ ಎನ್ನಲಾಗಿದೆ.

ನಾಮ್ ಕೆ ವಾಸ್ತೆ ಚೆಕ್‌ಪೋಸ್ಟ್‌ಗಳು: ತಲೆ ಮುರಿದುಕೊಂಡು ಬಿದ್ದ ಸಿಸಿಟಿವಿ ಕ್ಯಾಮೆರಾಗಳು

ಕಳೆದ ವರ್ಷ (17 ಸೆಪ್ಟೆಂಬ್ 2019)ರಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ನೇತೃತ್ವದಲ್ಲಿ ಮರಳು ಸಮಿತಿ ಆದೇಶವೊಂದನ್ನು ಹೊರಿಡಿಸಿತ್ತು. ಅಕ್ರಮ ಸಾಗಾಣಿಕೆ ತಡೆಗಟ್ಟಲು ವಾರದ ಏಳೂ ದಿನಗಳಲ್ಲಿ ಮೂರು ಪ್ರತ್ಯೇಕ ಅವಧಿಗಳ ಹಂಚಿಕೆ (ಶಿಫ್ಟ್‌ವೈಸ್) ಮಾಡಿ (ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆ, ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಹಾಗೂ ರಾತ್ರಿ 8 ಗಂಟೆಯಿಂದ ಮರುದಿನ ಬೆಳಿಗ್ಗೆ 8 ರವರೆಗೆ) ಗ್ರಾಮ ಲೆಕ್ಕಿಗರು ಹಾಗೂ ಪಿಡಿಓಗಳನ್ನು ನೇಮಿಸಿ, ಚೆಕ್‌ಪೋಸ್ಟ್‌ಗಳಲ್ಲಿ ಕಾವಲಿಗೆ ಸೂಚಿಸಿತ್ತು. ಆದರೆ, ಕೆಲಸದ ಒತ್ತಡಗಳ ಮಧ್ಯೆ ಇಲ್ಲಿ ಕಾರ್ಯನಿರ್ವಹಿಸಲು ಆಗಲಿಲ್ಲ ಎಂದು ಪ್ರತಿಕ್ರಿಯಿಸಿದ ಸಿಬ್ಬಂದಿಯೊಬ್ಬರು, ಕಳೆದ ವಾರ ಕಾರ್ಯಾಚರಣೆ ನಡೆದಿದ್ದರಿಂದ ಇದೇ ಆದೇಶವನ್ನು ಮುಂದುವರೆಸಲು ಸೂಚಿಸಲಾಗಿದ್ದು, ಸೋಮವಾರದಿಂದ (ಜ.13) ರಿಂದ ಮತ್ತೇ ಎಲ್ಲರೂ ತೆರಳುತ್ತೇವೆ ಎಂದು ಹೇಳಿದರು. 

ಅಭದ್ರತೆಯ ನೋವು ಅವರ ಮಾತಿನಲ್ಲಿ ವ್ಯಕ್ತವಾಗಿತ್ತು. ‘ಕನ್ನಡಪ್ರಭ'  ಹಾಗೂ ಸುವರ್ಣ ನ್ಯೂಸ್ ಪರಿಶೀಲನೆ ಸಂದರ್ಭದಲ್ಲಿ ಮರಳು ತಪಾಸಣಾ ಕೇಂದ್ರಗಳು ನಾಮ್ ಕೆ ವಾಸ್ತೆಯಂತೆ ಕಂಡರೆ, ಸಿಸಿಟಿವಿ ಕ್ಯಾಮೆರಾಗಳು ಕೆಲವೆಡೆ ತಲೆಮುರಿದು ಕೊಂಡು ಬಿದ್ದರೆ, ಕೆಲವನ್ನು ಕಳವು ಮಾಡಲಾಗಿದೆ ಎಂಬ ಅಚ್ಚರಿಯ ಬೆಳಕಿಗೆ ಬಂತು.

* ಉಸುಕು ದಂಧೆಯಲ್ಲಿ ಜಿಲ್ಲೆಯಲ್ಲಿ ರಾಜಕೀಯ ‘ನಾಯಕ’ರುಗಳ ಮುಸುಕಿನ ಗುದ್ದಾಟ 
* ಅಕ್ರಮ ಮರಳು ಗಣಿಗಾರಿಕೆಯಲ್ಲಿ ‘ರಾಜ’ಕಾರಣವೂ ಇದೆ ಎಂದು ಎಲ್ಲರಿಗೂ ಅನುಮಾನ 
* ಈ ವಿಷಯ ಜಿಲ್ಲಾಡಳಿತಕ್ಕೆ ಗೊತ್ತಿದ್ದರೂ, ಅಲ್ಲಿನ ರಾಜಕೀಯ ‘ನಾಯಕ’ರುಗಳ ಪ್ರಭಾವದಿಂದಾಗಿ ಕಣ್ಮುಚ್ಚಿ ಕುಳಿತಿದೆ 
* ಅಕ್ರಮ ಮರಳು ಗಣಿಗಾರಿಕೆ ತಡೆಯಲು ಮುನ್ನುಗ್ಗಬೇಕಾದ ಜಿಲ್ಲಾಡಳಿತ ಹಿಂದೇಟು 
* ಕೋಟ್ಯಂತರ ರುಪಾಯಿಗಳ ಈ ಮರಳು ದಾಸ್ತಾನು ಈಗ ಪೊಲೀಸ್ ಕಾವಲಿನಲ್ಲಿದೆ 
* ನಾಮ್ ಕೆ ವಾಸ್ತೆ ಚೆಕ್‌ಪೋಸ್ಟ್‌ಗಳು: ತಲೆ ಮುರಿದು ಕೊಂಡು ಬಿದ್ದ ಸಿಸಿಟಿವಿ ಕ್ಯಾಮೆರಾಗಳು