Asianet Suvarna News Asianet Suvarna News

ಯಾದಗಿರಿ: ಅಕ್ರಮ ಮರಳು ಗಣಿಗಾರಿಕೆ, ಕೃಷ್ಣಾ ನದಿಯೊಡಲ ಬಗೆದು ಜೆಸಿಬಿಗಳ ಕಾರುಬಾರು

ಮರಳು ಗಣಿಗಾರಿಕೆ ಹಾಗೂ ಸಾಗಾಟಕ್ಕೆ ಯಾವುದೇ ಪರವಾನಗಿ ಇರದಿದ್ದರೂ, ಇಂತಹ ಅಕ್ರಮಕ್ಕೆ ಆಡಳಿತ ಮುಗುಮ್ಮಾಗಿರುವುದು ಅಚ್ಚರಿ ಮೂಡಿಸಿದೆ. ಹತ್ತಾರು ಜೆಸಿಬಿಗಳು ನದಿ ಪಾತ್ರದಲ್ಲೇ ಮರಳು ಬಗೆಯುತ್ತಿವೆ. ಟೊಣ್ಣೂರು ಭಾಗದಲ್ಲಿ ಕೃಷ್ಣಾ ನದಿಯಲ್ಲೇ ಲಕ್ಷಾಂತರ ರು.ಗಳ ಖರ್ಚು ಮಾಡಿ, ಅಕ್ರಮಕ್ಕೆ ಅನುವಾಗಲೆಂದು ಪ್ರತ್ಯೇಕ ಮಣ್ಣಿನ ರಸ್ತೆಯನ್ನೇ ನಿರ್ಮಾಣ ಮಾಡಲಾಗಿದೆ.

Illegal Sand Mining on Krishna River in Yadgir grg
Author
First Published Jan 12, 2024, 12:50 PM IST

ಆನಂದ್‌ ಎಂ. ಸೌದಿ

ಯಾದಗಿರಿ(ಜ.12):  ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಅಟ್ಟಹಾಸ ಮಿತಿಮೀರಿದೆ. ಕೃಷ್ಣಾ ನದಿಯೊಡಲನ್ನೇ ಬಗೆಯುತ್ತಿರುವ ಮರಳುಗಳ್ಳರು, ಇಡೀ ನೈಸರ್ಗಿಕ ಸಂಪತ್ತನ್ನೇ ಕೊಳ್ಳೆ ಹೊಡೆಯುತ್ತಿದ್ದಾರೆ. ಆದರೆ, ಅಕ್ರಮ ತಡೆಗಟ್ಟಬೇಕಾದ ಆಡಳಿತ ರಾಜಕೀಯ ಪ್ರಭಾವಕ್ಕೆ ಅಂಜಿ ಮುದುಡಿ ಕುಳಿತಂತಿದೆ. ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಗ್ರಾಮಗಳಾದ ಕೊಳ್ಳೂರು (ಎಂ), ಹಯ್ಯಾಳ್‌, ಟೊಣ್ಣೂರು, ಗೌಡೂರು, ಐಕೂರು ಹಾಗೂ ಗೊಂದೆನೂರು ಮುಂತಾದ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಹತ್ತಿಗೂಡೂರು ಸಮೀಪದ ಕ್ರಾಸ್‌ ಬಳಿ ಚೆಕ್ಪೋಸ್ಟ್‌ ಮೂಲಕ ಅಕ್ರಮ ಮರಳು ಹೊತ್ತ ಸಾವಿರಾರು ಟಿಪ್ಪರ್‌ಗಳು ದಿನಂಪ್ರತಿ ಸಂಚರಿಸುತ್ತವೆ.

ಮರಳು ಗಣಿಗಾರಿಕೆ ಹಾಗೂ ಸಾಗಾಟಕ್ಕೆ ಯಾವುದೇ ಪರವಾನಗಿ ಇರದಿದ್ದರೂ, ಇಂತಹ ಅಕ್ರಮಕ್ಕೆ ಆಡಳಿತ ಮುಗುಮ್ಮಾಗಿರುವುದು ಅಚ್ಚರಿ ಮೂಡಿಸಿದೆ. ಹತ್ತಾರು ಜೆಸಿಬಿಗಳು ನದಿ ಪಾತ್ರದಲ್ಲೇ ಮರಳು ಬಗೆಯುತ್ತಿವೆ. ಟೊಣ್ಣೂರು ಭಾಗದಲ್ಲಿ ಕೃಷ್ಣಾ ನದಿಯಲ್ಲೇ ಲಕ್ಷಾಂತರ ರು.ಗಳ ಖರ್ಚು ಮಾಡಿ, ಅಕ್ರಮಕ್ಕೆ ಅನುವಾಗಲೆಂದು ಪ್ರತ್ಯೇಕ ಮಣ್ಣಿನ ರಸ್ತೆಯನ್ನೇ ನಿರ್ಮಾಣ ಮಾಡಲಾಗಿದೆ.

ಯಾದಗಿರಿ: ಕೋಹಿನೂರ್‌ ಸಿಕ್ಕ ಕೊಳ್ಳೂರಿಗೆ ಮರಳು ಗಣಿಗಾರಿಕೆ ಕಂಟಕ..!

ಯಾದಗಿರಿಯಿಂದ ಬೀದರ್‌ವರೆಗೆ 4 ಲಕ್ಷ ರು.ಗಳ ಹಫ್ತಾ!

ಲಂಗು ಲಗಾಮಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟ ತಡೆಯಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದಕ್ಕೆ ರಾಜಕೀಯ ಪ್ರಭಾವ ಅಡ್ಡಿ ಅನ್ನೋ ಮಾತುಗಳಿವೆ. ಜೊತೆಗೆ, ಆಯಾ ಸ್ಟೇಷನ್‌ ವ್ಯಾಪ್ತಿ ಇಂತಿಂಥ ಅಧಿಕಾರಿಗಳಿಗೆ ಇಂತಿಷ್ಟು ಹಣ ಹಫ್ತಾ (ಲಂಚ) ಎಂದು ಮೊದಲೇ ಮರಳುಗಳ್ಳರು ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಶಹಾಪುರ ಹಾಗೂ ಭೀಮರಾಯ ಗುಡಿ ಭಾಗದಲ್ಲಿ ಲಂಚದ ಪಾಲು ಹೆಚ್ಚು ಹೋಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಭಂಗಿ ಆರೋಪಿಸುತ್ತಾರೆ.

ಯಾದಗಿರಿ‌: ಅನ್ನಭಾಗ್ಯ ಅಕ್ಕಿ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಎಲ್ಲ ಚೆಕ್ಪೋಸ್ಟ್‌ಗಳನ್ನು ದಾಟಿ, ಇಲ್ಲಿಂದ ಬೀದರ್‌ವರೆಗೆ ಇದು ತಲುಪಲು 4 ರಿಂದ 5 ಲಕ್ಷ ರು.ಗಳ ಖರ್ಚು ಬರುತ್ತದೆ. ಒಂದೇ ಪರ್ಮಿಟ್‌ನಲ್ಲಿ ಇಷ್ಟೊಂದು ನಿರ್ವಹಣೆ ಆಗುವುದಿಲ್ಲವಾದ್ದರಿಂದ, ಎರಡ್ಮೂರು ಟ್ರಿಪ್‌ಗಳು ಅನಿವಾರ್ಯ ಎಂದೆನ್ನುವ ಟಿಪ್ಪರ್‌ ಮಾಲೀಕರೊಬ್ಬರು, ಹಫ್ತಾ (ಲಂಚ) ನೀಡದೇ ಇದ್ದರೆ ಟಿಪ್ಪರ್‌ ಸೀಜ್‌ ಮಾಡಿ ಅಧಿಕಾರಿಗಳು ಸತಾಯಿಸುತ್ತಾರೆ ಅಂತಾರೆ. ಟೊಣ್ಣೂರು, ಹಯ್ಯಾಳ್‌, ಕೊಳ್ಳೂರು (ಎಂ) ನ ಕೃಷ್ಣಾ ನದಿಯಿಂದ ದಿನಂಪ್ರತಿ 200-300 ಟಿಪ್ಪರ್‌ ಮರಳು ಬಗೆಯಲಾಗುತ್ತದೆ. 40-50 ಸಾವಿರ ರು.ಗಳಿಗೆ ಟಿಪ್ಪರ್‌ ಮರಳು ಮಾರಾಟವಾಗುತ್ತದೆ.

ಕೋಹಿನೂರ್ ಕೊಳ್ಳೂರಿನಲ್ಲಿ 60% ಗುತ್ತಿಗೆದಾರಗೆ, 40% ಬೆಂಬಲಿಸಿದವರಿಗೆ!

ವಿಶ್ವ ವಿಖ್ಯಾತ ಕೋಹಿನೂರ್‌ ವಜ್ರ ಸಿಕ್ಕ ಸ್ಥಳದಿಂದಾಗಿ ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಕೃಷ್ಣಾ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗೆ ಸರ್ಕಾರವೇ ನಿಷೇಧಿಸಿದೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ಇದಕ್ಕಂಟಿಗೊಂಡೇ ಮರಳು ಗಣಿಗಾರಿಕೆ ಶುರುವಾಗಿದೆ. ಹತ್ತಾರು ಟಿಪ್ಪರ್‌ಗಳು ನದಿಯಲ್ಲೇ ಇಳಿದು, ಮರಳು ಬಗೆಯುತ್ತಿವೆ. ಪ್ರತಿ ಟಿಪ್ಪರ್‌ಗೆ ಬಂದ ಹಣದಲ್ಲಿ ಗುತ್ತಿಗೆದಾರನಿಗೆ ಶೇ.60, ಬೆಂಬಲಿಸಿದವರಿಗೆ ಶೇ.40 ರಷ್ಟು ಹಣದ ಒಪ್ಪಂದ ಆಗಿದೆಯಂತೆ.ಇದು ಗೊತ್ತಿದ್ದೂ ಸಹ, ಆಡಳಿತ ಮಾತ್ರ ಮಲಗಿದಂತೆ ನಟಿಸುತ್ತಿದೆ.

Follow Us:
Download App:
  • android
  • ios